
ಶಾಸಕ ಸ್ಥಾನದ ವಿವಾದ| ಟಿ.ಡಿ.ರಾಜೇಗೌಡಗೆ ಸುಪ್ರೀಂ ಮತ್ತೆ ಬಿಗ್ ರಿಲೀಫ್
ಶಾಸಕತ್ವ ವಿವಾದಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪ್ರತಿವಾದಿ ಹಾಗೂ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಸುಪ್ರೀಂಕೋರ್ಟ್ ಅವಕಾಶ ನೀಡಿದೆ.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಶಾಸಕ ಸ್ಥಾನಕ್ಕೆ ಸಂಬಂಧಿಸಿದ ಕಾನೂನು ಹೋರಾಟದಲ್ಲಿ ಕಾಂಗ್ರೆಸ್ ನಾಯಕ ಟಿ.ಡಿ. ರಾಜೇಗೌಡ ಅವರಿಗೆ ಸುಪ್ರೀಂಕೋರ್ಟ್‌ನಿಂದ ಬಿಗ್ ರಿಲೀಫ್ ಸಿಕ್ಕಿದೆ. ರಾಜೇಗೌಡ ಅವರನ್ನು ಶೃಂಗೇರಿ ಕ್ಷೇತ್ರದ ಶಾಸಕರನ್ನಾಗಿ ಮರುಸ್ಥಾಪಿಸಿ ನೀಡಿದ್ದ ಮಧ್ಯಂತರ ಆದೇಶದ ಅವಧಿಯನ್ನು ಸುಪ್ರೀಂಕೋರ್ಟ್ ವಿಸ್ತರಿಸಿದ್ದು, ಪ್ರಕರಣದ ಮುಂದಿನ ವಿಚಾರಣೆಯನ್ನು ಸೆ.10ಕ್ಕೆ ಮುಂದೂಡಿದೆ.
ದಾಖಲೆ ಸಲ್ಲಿಕೆಗೆ ಜೀವರಾಜ್‌ಗೆ ಅವಕಾಶ
ಪ್ರಕರಣದ ಮೇಲ್ಮನವಿ ವಿಚಾರಣೆ ನಡೆಸಿದ ಸುಪ್ರೀಂಕೋರ್ಟ್, ಮುಂದಿನ ವಿಚಾರಣೆ ನಡೆಯುವವರೆಗೂ ರಾಜೇಗೌಡ ಅವರ ಶಾಸಕತ್ವದ ಮೇಲಿರುವ ಮಧ್ಯಂತರ ತಡೆಯಾಜ್ಞೆ ಹಾಗೂ ಮರುಸ್ಥಾಪನೆ ಆದೇಶ ಮುಂದುವರಿಯಲಿದೆ ಎಂದು ಸ್ಪಷ್ಟಪಡಿಸಿದೆ. ಇದೇ ವೇಳೆ, ಪ್ರಕರಣಕ್ಕೆ ಸಂಬಂಧಿಸಿದಂತೆ ಹೆಚ್ಚುವರಿ ದಾಖಲೆಗಳನ್ನು ನ್ಯಾಯಾಲಯಕ್ಕೆ ಸಲ್ಲಿಸಲು ಪ್ರತಿವಾದಿ ಹಾಗೂ ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರಿಗೆ ಅವಕಾಶ ಕಲ್ಪಿಸಿದೆ.
ಪ್ರಕರಣದ ಹಿನ್ನೆಲೆ ಏನು?
2023ರ ವಿಧಾನಸಭಾ ಚುನಾವಣೆಯಲ್ಲಿ ಶೃಂಗೇರಿ ಕ್ಷೇತ್ರದಿಂದ ಕಾಂಗ್ರೆಸ್ನ ಟಿ.ಡಿ. ರಾಜೇಗೌಡ ಜಯ ಗಳಿಸಿದ್ದರು. ಆದರೆ, ಈ ಫಲಿತಾಂಶವನ್ನು ಪ್ರಶ್ನಿಸಿ ಬಿಜೆಪಿ ನಾಯಕ ಡಿ.ಎನ್.ಜೀವರಾಜ್ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ಹೈಕೋರ್ಟ್ ನೀಡಿದ್ದ ಆದೇಶದಂತೆ ಅಂಚೆ ಮತಗಳ ಮರುಎಣಿಕೆ ಪ್ರಕ್ರಿಯೆಯಲ್ಲಿ ಜೀವರಾಜ್ ಗೆಲುವು ದಾಖಲಿಸಿದ್ದರು. ಅದರಂತೆ ಜೀವರಾಜ್ ಅವರೇ ಶಾಸಕರಾಗಿ ಅಧಿಕಾರ ಸ್ವೀಕರಿಸಿದ್ದರು. ಆದರೆ, ಹೈಕೋರ್ಟ್ ನಿರ್ದೇಶನ ಹಾಗೂ ಮರುಎಣಿಕೆಯ ಪ್ರಕ್ರಿಯೆ ಪ್ರಶ್ನಿಸಿ ಟಿ.ಡಿ. ರಾಜೇಗೌಡ ಅವರು ಸುಪ್ರೀಂ ಕೋರ್ಟ್‌ನಲ್ಲಿ ಮೇಲ್ಮನವಿ ಅರ್ಜಿ ಸಲ್ಲಿಸಿದ್ದರು. ಮೇಲ್ಮನವಿಯ ವಿಚಾರಣೆ ನಡೆಸಿದ್ದ ಸುಪ್ರೀಂಕೋರ್ಟ್, ಮರುಎಣಿಕೆಯ ಮುಂದಿನ ನಡಾವಳಿಗಳಿಗೆ ತಡೆ ನೀಡಿ, ಟಿ.ಡಿ. ರಾಜೇಗೌಡ ಅವರನ್ನೇ ಶಾಸಕರನ್ನಾಗಿ ಮುಂದುವರಿಸಲು ಮಧ್ಯಂತರ ಆದೇಶ ಹೊರಡಿಸಿತ್ತು.
ಸುಪ್ರೀಂಕೋರ್ಟ್‌ನ ಪ್ರಸ್ತುತ ನಿರ್ಧಾರದಿಂದಾಗಿ ರಾಜೇಗೌಡ ಅವರ ಶಾಸಕ ಸ್ಥಾನಕ್ಕೆ ಯಾವುದೇ ತೊಂದರೆಯಾಗುವುದಿಲ್ಲ. ನ್ಯಾಯಾಲಯವು ಮುಂದಿನ ವಿಚಾರಣೆಯನ್ನು ಸೆ.10ಕ್ಕೆ ನಿಗದಿಪಡಿಸಿದ್ದು, ಅಲ್ಲಿಯವರೆಗೆ ರಾಜೇಗೌಡ ಅವರೇ ಶೃಂಗೇರಿ ಶಾಸಕರಾಗಿ ಅಧಿಕೃತ ಕರ್ತವ್ಯ ನಿರ್ವಹಿಸಲಿದ್ದಾರೆ.

