ಡಿ.31ರೊಳಗೆ ಜಿಬಿಎ ಚುನಾವಣೆ ಮುಗಿಸಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಡೆಡ್‌ಲೈನ್‌
x

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಬೆಂಗಳೂರು ನಗರದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. 

ಡಿ.31ರೊಳಗೆ ಜಿಬಿಎ ಚುನಾವಣೆ ಮುಗಿಸಿ: ರಾಜ್ಯ ಸರ್ಕಾರಕ್ಕೆ ಸುಪ್ರೀಂ ಕೋರ್ಟ್‌ ಡೆಡ್‌ಲೈನ್‌

ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗ ಸಲ್ಲಿಸಿದ್ದ ಜಂಟಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.


Click the Play button to hear this message in audio format

ಗ್ರೇಟರ್ ಬೆಂಗಳೂರು ಪ್ರಾಧಿಕಾರ (ಜಿಬಿಎ) ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು 2026ರ ಡಿಸೆಂಬರ್ 31ರೊಳಗೆ ಕಡ್ಡಾಯವಾಗಿ ಪೂರ್ಣಗೊಳಿಸಬೇಕು ಎಂದು ಸುಪ್ರೀಂ ಕೋರ್ಟ್ ರಾಜ್ಯ ಸರ್ಕಾರ ಹಾಗೂ ರಾಜ್ಯ ಚುನಾವಣಾ ಆಯೋಗಕ್ಕೆ ಮಹತ್ವದ ನಿರ್ದೇಶನ ನೀಡಿದೆ. ಈ ಹಿಂದೆ ವಿಧಿಸಲಾಗಿದ್ದ ಆಗಸ್ಟ್ 31ರ ಗಡುವನ್ನು ಪರಿಷ್ಕರಿಸಿರುವ ನ್ಯಾಯಾಲಯ, ಆಡಳಿತಾತ್ಮಕ ಕಾರಣಗಳನ್ನು ಪರಿಗಣಿಸಿ ಡಿಸೆಂಬರ್ ಅಂತ್ಯದವರೆಗೆ ಅಂತಿಮ ಕಾಲಾವಕಾಶ ವಿಸ್ತರಿಸಿದೆ.

ಮುಖ್ಯ ನ್ಯಾಯಮೂರ್ತಿ ಸೂರ್ಯಕಾಂತ್, ನ್ಯಾಯಮೂರ್ತಿಗಳಾದ ಜಾಯ್ಮಲ್ಯ ಬಾಗ್ಚಿ ಹಾಗೂ ವಿ. ಮೋಹನ್ ಅವರನ್ನೊಳಗೊಂಡ ತ್ರಿಸದಸ್ಯ ಪೀಠವು, ರಾಜ್ಯ ಸರ್ಕಾರ ಮತ್ತು ಚುನಾವಣಾ ಆಯೋಗ ಸಲ್ಲಿಸಿದ್ದ ಜಂಟಿ ಅರ್ಜಿಯ ವಿಚಾರಣೆ ನಡೆಸಿ ಈ ಆದೇಶ ಹೊರಡಿಸಿದೆ.

ಸರ್ಕಾರದ ವಾದವೇನಿತ್ತು?

ರಾಜ್ಯ ಸರ್ಕಾರದ ಪರವಾಗಿ ವಾದ ಮಂಡಿಸಿದ ಹಿರಿಯ ವಕೀಲ ಕಪಿಲ್ ಸಿಬಲ್, ಬೆಂಗಳೂರು ನಗರದಲ್ಲಿ ಸದ್ಯ ಚಾಲ್ತಿಯಲ್ಲಿರುವ ಮತದಾರರ ಪಟ್ಟಿಯ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಯನ್ನು ನ್ಯಾಯಾಲಯದ ಗಮನಕ್ಕೆ ತಂದರು. "ಬೆಂಗಳೂರು ಮಹಾನಗರದಲ್ಲಿ ಸುಮಾರು 1.03 ಕೋಟಿ ಮತದಾರರಿದ್ದು, 40 ಲಕ್ಷಕ್ಕೂ ಅಧಿಕ ಮನೆಗಳಿವೆ. ಸದ್ಯ ಅಧಿಕಾರಿಗಳು ಹಾಗೂ ಸಿಬ್ಬಂದಿ ಮನೆಮನೆಗೆ ಭೇಟಿ ನೀಡಿ ಮತದಾರರ ವಿವರಗಳನ್ನು ಪರಿಶೀಲಿಸುವ ಬೃಹತ್ ಕಾರ್ಯದಲ್ಲಿ ನಿರತರಾಗಿದ್ದಾರೆ. ಇದರ ಬೆನ್ನಲ್ಲೇ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣೆ ನಡೆಸಲು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ ಹೆಚ್ಚುವರಿಯಾಗಿ ಸುಮಾರು 60 ಸಾವಿರ ಸಿಬ್ಬಂದಿಯ ಅಗತ್ಯವಿದೆ. ಇಷ್ಟು ದೊಡ್ಡ ಮಟ್ಟದ ಸಿಬ್ಬಂದಿಯನ್ನು ಏಕಕಾಲದಲ್ಲಿ ಎರಡೂ ಪ್ರಕ್ರಿಯೆಗಳಿಗೆ ನಿಯೋಜಿಸುವುದು ತಾಂತ್ರಿಕವಾಗಿ ಮತ್ತು ಆಡಳಿತಾತ್ಮಕವಾಗಿ ಸವಾಲಿನ ಕೆಲಸವಾಗಿದೆ" ಎಂದು ಸರ್ಕಾರ ನ್ಯಾಯಪೀಠಕ್ಕೆ ಮನವರಿಕೆ ಮಾಡಿಕೊಟ್ಟಿತು.

ಪ್ರತಿಪಕ್ಷಗಳ ಆಕ್ಷೇಪ

ಇನ್ನೊಂದೆಡೆ, ಜಿಬಿಎ ವ್ಯಾಪ್ತಿಯ ಸ್ಥಳೀಯ ಸಂಸ್ಥೆಗಳ ಚುನಾವಣೆ ಪ್ರಕ್ರಿಯೆಯನ್ನು ಯಾವುದೇ ಕಾರಣಕ್ಕೂ ಮತ್ತೆ ಮುಂದೂಡಬಾರದು ಎಂದು ಪ್ರತಿಪಕ್ಷ ಬಿಜೆಪಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿ ತೀವ್ರ ಆಕ್ಷೇಪ ವ್ಯಕ್ತಪಡಿಸಿತ್ತು. ನಿಗದಿತ ಅವಧಿಯಲ್ಲೇ ಚುನಾವಣೆ ನಡೆಸಲು ಸರ್ಕಾರಕ್ಕೆ ಆದೇಶಿಸಬೇಕು ಎಂದು ಕೋರಿತ್ತು.

ಉಭಯ ಪಕ್ಷಗಳ ಸುದೀರ್ಘ ವಾದ-ಪ್ರತಿವಾದಗಳನ್ನು ಆಲಿಸಿದ ಸುಪ್ರೀಂ ಕೋರ್ಟ್ ಪೀಠವು, ಮತದಾರರ ಪಟ್ಟಿ ಪರಿಷ್ಕರಣೆ (ಎಸ್‌ಐಆರ್) ಪ್ರಕ್ರಿಯೆಯಿಂದಾಗಿ ಎದುರಾಗಿರುವ ನೈಜ ಆಡಳಿತಾತ್ಮಕ ಮತ್ತು ಸಿಬ್ಬಂದಿ ಕೊರತೆಯ ಸವಾಲುಗಳನ್ನು ಮಾನ್ಯ ಮಾಡಿತು. ಮಾನವ ಸಂಪನ್ಮೂಲದ ಸಮರ್ಪಕ ಬಳಕೆಯ ಹಿತದೃಷ್ಟಿಯಿಂದ ಚುನಾವಣಾ ಗಡುವನ್ನು ವಿಸ್ತರಿಸುವುದು ಅನಿವಾರ್ಯ ಎಂಬುದನ್ನು ಒಪ್ಪಿದ ನ್ಯಾಯಾಲಯ, 2026ರ ಡಿಸೆಂಬರ್ 31ರ ಒಳಗಾಗಿ ಜಿಬಿಎ ವ್ಯಾಪ್ತಿಯ ಐದು ನಗರ ಪಾಲಿಕೆಗಳ ಚುನಾವಣಾ ಪ್ರಕ್ರಿಯೆಯನ್ನು ಸಂಪೂರ್ಣವಾಗಿ ಮುಗಿಸಬೇಕು ಎಂದು ರಾಜ್ಯ ಸರ್ಕಾರ ಹಾಗೂ ಚುನಾವಣಾ ಆಯೋಗಕ್ಕೆ ಸ್ಪಷ್ಟ ಆದೇಶ ನೀಡಿದೆ.

Read More
Next Story