ರಾಜ್ಯ ಭದ್ರತಾ ನೀತಿ 2027–2037: ಸುಭದ್ರ ರಾಜ್ಯ ನಿರ್ಮಾಣಕ್ಕೆ ಪ್ರಸ್ತಾವನೆ
x

ರಾಜ್ಯ ಭದ್ರತಾ ನೀತಿ 2027–2037: ಸುಭದ್ರ ರಾಜ್ಯ ನಿರ್ಮಾಣಕ್ಕೆ ಪ್ರಸ್ತಾವನೆ

ಪೊಲೀಸ್ ಪಡೆಯ ತನಿಖಾ ದಕ್ಷತೆ ಹೆಚ್ಚಿಸುವುದು, ಅತ್ಯಾಧುನಿಕ ವಿಧಿವಿಜ್ಞಾನ ತಂತ್ರಜ್ಞಾನಗಳ ಅಳವಡಿಕೆ, ಸಂಘಟಿತ ಅಪರಾಧ ನಿರ್ಮೂಲನೆ ಮತ್ತು ವಿಶ್ವಾಸಾರ್ಹ ಸಮುದಾಯ ಪೊಲೀಸಿಂಗ್ ಬಲಪಡಿಸುವುದಾಗಿದೆ.


Click the Play button to hear this message in audio format

ವೇಗವಾಗಿ ಬೆಳೆಯುತ್ತಿರುವ ನಗರೀಕರಣ, ತೀವ್ರಗತಿಯ ಕೈಗಾರಿಕಾ ಅಭಿವೃದ್ಧಿ, ಡಿಜಿಟಲ್ ತಂತ್ರಜ್ಞಾನದ ಸರ್ವವ್ಯಾಪಿ ವಿಸ್ತರಣೆ ಮತ್ತು ಬದಲಾಗುತ್ತಿರುವ ಭೌಗೋಳಿಕ-ರಾಜಕೀಯ ಸನ್ನಿವೇಶಗಳು ರಾಜ್ಯದ ಭದ್ರತಾ ವ್ಯವಸ್ಥೆಗೆ ಹೊಸ ಸವಾಲುಗಳನ್ನು ಒಡ್ಡುತ್ತಿವೆ. ಇದರೊಂದಿಗೆ ಸೈಬರ್ ದಾಳಿಗಳು, ಸಂಘಟಿತ ಅಪರಾಧ ಜಾಲಗಳು, ಹವಾಮಾನ ವೈಪರೀತ್ಯದಿಂದ ಉಂಟಾಗುವ ಪ್ರಾಕೃತಿಕ ವಿಕೋಪಗಳು ಹಾಗೂ ಮಾನವಸೃಷ್ಟಿ ವಿಪತ್ತುಗಳು ರಾಜ್ಯದ ಆರ್ಥಿಕ ಮತ್ತು ಸಾಮಾಜಿಕ ಭದ್ರತೆಗೆ ನಿರಂತರ ಬೆದರಿಕೆಯೊಡ್ಡುತ್ತಿವೆ. ಈ ಎಲ್ಲಾ ಸಂಕೀರ್ಣ ಸವಾಲುಗಳನ್ನು ಸಮರ್ಥವಾಗಿ ಎದುರಿಸಲು, ಮುಂದಿನ ಒಂದು ದಶಕದ ಅವಧಿಗೆ ದಿಕ್ಸೂಚಿಯಾಗಬಲ್ಲ ಮಹತ್ವಾಕಾಂಕ್ಷೆಯ ಕರ್ನಾಟಕ ರಾಜ್ಯ ಭದ್ರತಾ ನೀತಿ 2027–2037 ಪ್ರಸ್ತಾವನೆಯನ್ನು ರೂಪಿಸಲಾಗಿದೆ.

ಕರ್ನಾಟಕ ರಾಜ್ಯ ನೀತಿ ಮತ್ತು ಯೋಜನಾ ಆಯೋಗ ಸದಸ್ಯ ಎಸ್. ಮೋಹನದಾಸ್ ಹೆಗಡೆ ಈ ಕುರಿತು ಸರ್ಕಾರಕ್ಕೆ ಪ್ರಸ್ತಾವನೆ ಸಲ್ಲಿಕೆ ಮಾಡಿದ್ದಾರೆ. ಈ ನೀತಿಯ ಮೂಲ ಉದ್ದೇಶವು ರಾಜ್ಯದ ಭದ್ರತಾ ಯಂತ್ರಾಂಗವನ್ನು ಕೇವಲ ಘಟನೆ ಸಂಭವಿಸಿದ ನಂತರ ಪ್ರತಿಕ್ರಿಯಿಸುವ ಸಾಂಪ್ರದಾಯಿಕ ಮಾದರಿಯಿಂದ ಮುಕ್ತಗೊಳಿಸಿ, ಮುನ್ನೆಚ್ಚರಿಕೆ, ಅಪಾಯ ಗುರುತಿಸುವಿಕೆ, ಪೂರ್ವಸಿದ್ಧತೆ, ತ್ವರಿತ ಪ್ರತಿಕ್ರಿಯೆ ಮತ್ತು ದೀರ್ಘಕಾಲೀನ ಪುನಶ್ಚೇತನವನ್ನು ಒಳಗೊಂಡ ಸಮಗ್ರ, ಆಧುನಿಕ ವ್ಯವಸ್ಥೆಯಾಗಿ ಪರಿವರ್ತಿಸುವುದಾಗಿದೆ. 2037ರ ವೇಳೆಗೆ ಸುರಕ್ಷಿತ ನಾಗರಿಕರು, ಬಲಿಷ್ಠ ಸಂಸ್ಥೆಗಳು, ಸುಭದ್ರ ಡಿಜಿಟಲ್ ಮೂಲಸೌಕರ್ಯ ಮತ್ತು ವಿಪತ್ತುಗಳನ್ನು ಎದುರಿಸುವ ಸಾಮರ್ಥ್ಯವಿರುವ ಸ್ಥಿತಿಸ್ಥಾಪಕ ಕರ್ನಾಟಕವನ್ನು ನಿರ್ಮಿಸುವುದು ಈ ನೀತಿಯ ಗುರಿಯಾಗಿದೆ. ಈ ಗುರಿ ಸಾಧನೆಗಾಗಿ ಆರು ಪ್ರಮುಖ ಕಾರ್ಯತಂತ್ರದ ಸ್ತಂಭಗಳನ್ನು ಪ್ರಸ್ತಾಪಿಸಲಾಗಿದೆ.

ಆಂತರಿಕ ಭದ್ರತೆ ಮತ್ತು ಪೊಲೀಸ್ ಆಧುನೀಕರಣ

ರಾಜ್ಯ ಪೊಲೀಸ್ ಪಡೆಯ ತನಿಖಾ ದಕ್ಷತೆ ಹೆಚ್ಚಿಸುವುದು, ಅತ್ಯಾಧುನಿಕ ವಿಧಿವಿಜ್ಞಾನ ತಂತ್ರಜ್ಞಾನಗಳ ಅಳವಡಿಕೆ, ಸಂಘಟಿತ ಅಪರಾಧ ಮತ್ತು ಮಾದಕದ್ರವ್ಯ ಜಾಲಗಳ ನಿರ್ಮೂಲನೆ ಹಾಗೂ ನಾಗರಿಕರು ಮತ್ತು ಪೊಲೀಸರ ನಡುವೆ ವಿಶ್ವಾಸಾರ್ಹ ಸಮುದಾಯ ಪೊಲೀಸಿಂಗ್ ಬಲಪಡಿಸುವುದು. ಸರ್ಕಾರದ ಇ-ಆಡಳಿತ ಸೇವೆಗಳು, ನಾಗರಿಕರ ಸೂಕ್ಷ್ಮ ದತ್ತಾಂಶಗಳು ಮತ್ತು ಐಟಿ ನೆಟ್‌ವರ್ಕ್‌ಗಳಿಗೆ ಅಪಾಯ ಆಧಾರಿತ ಭದ್ರತಾ ಮಾನದಂಡಗಳನ್ನು ರೂಪಿಸುವುದು. ಬೃಹತ್ ಸೈಬರ್ ದಾಳಿಗಳನ್ನು ಸಮರ್ಥವಾಗಿ ಹಿಮ್ಮೆಟ್ಟಿಸುವ ಡಿಜಿಟಲ್ ರಕ್ಷಣಾ ಕವಚ ನಿರ್ಮಿಸುವುದು. ಮಹಿಳೆಯರು, ಮಕ್ಕಳು ಮತ್ತು ಹಿರಿಯ ನಾಗರಿಕರ ಸುರಕ್ಷತೆಗೆ ಮೊದಲ ಆದ್ಯತೆ ನೀಡುವುದು. ಜನದಟ್ಟಣೆಯ ಸಾರ್ವಜನಿಕ ಪ್ರದೇಶಗಳಲ್ಲಿ ಕಣ್ಗಾವಲು ಹೆಚ್ಚಿಸುವುದು ಹಾಗೂ ಸಮುದಾಯ ಮಟ್ಟದಲ್ಲಿ ಸ್ವಯಂಪ್ರೇರಿತ ತುರ್ತು ಸನ್ನದ್ಧತೆಯನ್ನು ಬೆಳೆಸುವುದು. ವಿದ್ಯುತ್ ಗ್ರಿಡ್‌ಗಳು, ನೀರು ಸರಬರಾಜು ಜಾಲಗಳು, ಸಾರಿಗೆ ಸಂಪರ್ಕಗಳು, ಪ್ರಮುಖ ಆಸ್ಪತ್ರೆಗಳು, ದೂರಸಂಪರ್ಕ ಮತ್ತು ಡೇಟಾ ಕೇಂದ್ರಗಳು ಯಾವುದೇ ಬಿಕ್ಕಟ್ಟಿನ ಸಮಯದಲ್ಲೂ ಅಡೆತಡೆಯಿಲ್ಲದೆ ನಿರಂತರವಾಗಿ ಕಾರ್ಯನಿರ್ವಹಿಸಲು ಅಗತ್ಯವಾದ ‘ಸೇವಾ ನಿರಂತರತಾ ಯೋಜನೆ’ಗಳನ್ನು ಜಾರಿಗೊಳಿಸುವುದು. ಪ್ರವಾಹ, ತೀವ್ರ ಬರ, ಪಶ್ಚಿಮ ಘಟ್ಟಗಳ ಭೂಕುಸಿತ, ಕರಾವಳಿ ಚಂಡಮಾರುತಗಳು, ತಾಪಮಾನದ ಅಲೆಗಳು, ಕೈಗಾರಿಕಾ ಅನಿಲ ಸೋರಿಕೆ ಹಾಗೂ ಸಾಂಕ್ರಾಮಿಕ ರೋಗಗಳಂತಹ ಸಾರ್ವಜನಿಕ ಆರೋಗ್ಯ ತುರ್ತುಸ್ಥಿತಿಗಳನ್ನು ಸ್ಥಳೀಯ ಮಟ್ಟದಲ್ಲೇ ನಿಭಾಯಿಸಲು ಪ್ರತಿ ಜಿಲ್ಲೆಯ ವಿಪತ್ತು ನಿರ್ವಹಣಾ ಪ್ರಾಧಿಕಾರಗಳನ್ನು ಬಲಪಡಿಸುವುದಾಗಿದೆ.

ಸಂಯೋಜಿತ ತುರ್ತು ಸಮನ್ವಯ

ಪೊಲೀಸ್, ಅಗ್ನಿಶಾಮಕ ಮತ್ತು ತುರ್ತು ಸೇವೆಗಳು, ಆರೋಗ್ಯ ಇಲಾಖೆ ಹಾಗೂ ವಿಪತ್ತು ನಿರ್ವಹಣಾ ಪಡೆಗಳ ನಡುವೆ ಏಕರೂಪದ, ತಡೆರಹಿತ ಸಂವಹನ ವ್ಯವಸ್ಥೆ ಕಲ್ಪಿಸಿ ತುರ್ತು ಸಂದರ್ಭಗಳಲ್ಲಿ ಗೋಲ್ಡನ್ ಅವರ್‌ನಲ್ಲಿ ತ್ವರಿತ ಕಾರ್ಯಾಚರಣೆ ನಡೆಸುವುದು. ನೀತಿಯ ಯಶಸ್ವಿ ಅನುಷ್ಠಾನಕ್ಕಾಗಿ ಆಡಳಿತಾತ್ಮಕ ಮಟ್ಟದಲ್ಲಿ ಬಲಿಷ್ಠ ಸಮನ್ವಯ ಸಮಿತಿಯನ್ನು ಪ್ರಸ್ತಾಪಿಸಲಾಗಿದೆ. ಗೃಹ ಇಲಾಖೆಯು ಈ ನೀತಿಯ ಒಟ್ಟಾರೆ ಅನುಷ್ಠಾನ, ಸಮನ್ವಯ ಮತ್ತು ಮೇಲ್ವಿಚಾರಣೆಯ ನೋಡಲ್ ಇಲಾಖೆಯಾಗಿ ಕಾರ್ಯನಿರ್ವಹಿಸಲಿದೆ. ಸರ್ಕಾರದ ಮುಖ್ಯ ಕಾರ್ಯದರ್ಶಿಗಳ ಅಧ್ಯಕ್ಷತೆಯಲ್ಲಿ ಸಂಬಂಧಪಟ್ಟ ಪ್ರಮುಖ ಇಲಾಖೆಗಳ ಮುಖ್ಯಸ್ಥರನ್ನೊಳಗೊಂಡ ಸಮಿತಿ ರಚನೆಯಾಗಲಿದೆ. ಪೊಲೀಸ್, ಸೈಬರ್ ತಜ್ಞರು, ವಿಪತ್ತು ನಿರ್ವಹಣಾ ತಜ್ಞರು, ಕಾನೂನು ಮತ್ತು ಮೂಲಸೌಕರ್ಯ ಪರಿಣಿತರನ್ನು ಒಳಗೊಂಡ ಕಾಲಮಿತಿಯ ಕಾರ್ಯಪಡೆಯು ತಾಂತ್ರಿಕ ಮಾರ್ಗದರ್ಶನ ನೀಡಲಿದೆ. ನೀತಿಯ ಅನುಷ್ಠಾನದ ಪ್ರಗತಿ ಮತ್ತು ಜಿಲ್ಲಾವಾರು ಸ್ಥಿತಿಸ್ಥಾಪಕತ್ವವನ್ನು ನೈಜ ಸಮಯದಲ್ಲಿ ಅಳೆಯಲು 'ಡಿಜಿಟಲ್ ಸೆಕ್ಯುರಿಟಿ & ರೆಸಿಲಿಯನ್ಸ್ ಡ್ಯಾಶ್‌ಬೋರ್ಡ್' ರೂಪಿಸಲು ಉದ್ದೇಶಿಸಲಾಗಿದೆ.

ನಾಲ್ಕು ಹಂತಗಳ ಅನುಷ್ಠಾನ ಕಾರ್ಯತಂತ್ರ (2027–2037)

ಈ ದಶವಾರ್ಷಿಕ ಯೋಜನೆಯನ್ನು ಯಾವುದೇ ಗೊಂದಲವಿಲ್ಲದೆ ಹಂತ-ಹಂತವಾಗಿ ಕಾರ್ಯಗತಗೊಳಿಸಲು ನಾಲ್ಕು ಸ್ಪಷ್ಟ ಘಟ್ಟಗಳನ್ನು ನಿಗದಿಪಡಿಸಲಾಗಿದೆ. ಮೂಲಮೌಲ್ಯಮಾಪನ ಮತ್ತು ಸಿದ್ಧತೆ (2027) - ರಾಜ್ಯಮಟ್ಟದ ಭದ್ರತಾ ಲೆಕ್ಕಪರಿಶೋಧನೆ, ಅಂತರಗಳ ಗುರುತಿಸುವಿಕೆ ಮತ್ತು ನಿಯಮಾವಳಿಗಳ ಅಂತಿಮಗೊಳಿಸುವಿಕೆ. ಸಾಂಸ್ಥಿಕ ಬಲವರ್ಧನೆ (2028–2029) - ತಂತ್ರಜ್ಞಾನ ಅಳವಡಿಕೆ, ಇಲಾಖಾ ಸಿಬ್ಬಂದಿಗೆ ಸುಧಾರಿತ ತರಬೇತಿ, ಮೂಲಸೌಕರ್ಯಗಳ ಮೇಲ್ದರ್ಜೆಗೇರಿಸುವಿಕೆ. ವಿಸ್ತರಣೆ ಮತ್ತು ಏಕೀಕರಣ (2030–2032) - ಎಲ್ಲಾ ಜಿಲ್ಲೆಗಳು ಮತ್ತು ತಾಲೂಕು ಮಟ್ಟಕ್ಕೆ ಸಮಗ್ರ ಭದ್ರತಾ ಜಾಲ ವಿಸ್ತರಣೆ, ಇಲಾಖೆಗಳ ನಡುವೆ ಪೂರ್ಣ ಪ್ರಮಾಣದ ಡಿಜಿಟಲ್ ಡೇಟಾ ಏಕೀಕರಣ. ಬಲವರ್ಧನೆ ಮತ್ತು ಸ್ವತಂತ್ರ ಮೌಲ್ಯಮಾಪನ (2033–2037) - ನೀತಿಯ ಪ್ರಭಾವದ ಮೌಲ್ಯಮಾಪನ, ಅಣಕು ಕಾರ್ಯಾಚರಣೆಗಳ ಮೂಲಕ ಲೋಪದೋಷ ತಿದ್ದುಪಡಿ ಹಾಗೂ ಸುಸ್ಥಿರ ಭದ್ರತಾ ಪರಿಸರ ವ್ಯವಸ್ಥೆ ನಿರ್ಮಾಣ. ಈ ಪ್ರಸ್ತಾವನೆಯು ಅಸ್ತಿತ್ವದಲ್ಲಿರುವ ಪೊಲೀಸ್ ಕಾನೂನುಗಳು, ಶಾಸನಬದ್ಧ ಅಧಿಕಾರಗಳು ಅಥವಾ ಗುಪ್ತಚರ ಸಂಸ್ಥೆಗಳ ಕರ್ತವ್ಯಗಳಿಗೆ ಯಾವುದೇ ಅಡ್ಡಿಪಡಿಸುವುದಿಲ್ಲ. ಬದಲಾಗಿ ಅವುಗಳಿಗೆ ಪೂರಕವಾಗಿ ಕಾರ್ಯನಿರ್ವಹಿಸುತ್ತದೆ. ಭಾರತದ ಸಂವಿಧಾನ, ನಾಗರಿಕರ ಮೂಲಭೂತ ಹಕ್ಕುಗಳು, ವ್ಯಕ್ತಿಗತ ಗೌಪ್ಯತೆ ಮತ್ತು ದತ್ತಾಂಶ ಸಂರಕ್ಷಣಾ ಕಾನೂನುಗಳಿಗೆ ಗರಿಷ್ಠ ಆದ್ಯತೆ ನೀಡಲಾಗಿದೆ. ಭದ್ರತೆಯ ಹೆಸರಿನಲ್ಲಿ ನಾಗರಿಕ ಸ್ವಾತಂತ್ರ್ಯಕ್ಕೆ ಧಕ್ಕೆಯಾಗದಂತೆ ಕಟ್ಟುನಿಟ್ಟಾದ 'ಮಾನವ ಮೇಲ್ವಿಚಾರಣೆ' ಇರಲಿದೆ.

Read More
Next Story