
ಅಂಚೆ ಮತದ ಮರು ಎಣಿಕೆಯಲ್ಲಿ ಅಕ್ರಮ? ತನಿಖೆಗೆ ಆಗ್ರಹಿಸಿ ಸಿಇಒಗೆ ರಾಜೇಗೌಡ ದೂರು
ಅಂಚೆ ಮತಗಳ ಮರು ಎಣಿಕೆಯಲ್ಲಿ ಸೋಲನುಭವಿಸಿದ ನಂತರ, ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಮತಪತ್ರಗಳ ತಿದ್ದುವಿಕೆ ನಡೆದಿದೆ ಎಂದು ರಾಜೇಗೌಡ ಗಂಭೀರ ಆರೋಪ ಮಾಡಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಚುನಾವಣಾ ಫಲಿತಾಂಶದ ವಿವಾದ ಈಗ ಚುನಾವಣಾ ಆಯೋಗದ ಅಂಗಳಕ್ಕೆ ತಲುಪಿದೆ. 2023ರ ವಿಧಾನಸಭಾ ಚುನಾವಣೆಯಲ್ಲಿ ಮೊದಲು ವಿಜಯಶಾಲಿಯಾಗಿದ್ದ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು, ಇತ್ತೀಚೆಗೆ ನಡೆದ ಅಂಚೆ ಮತಗಳ ಮರು ಎಣಿಕೆಯಲ್ಲಿ ಸೋಲನುಭವಿಸಿದ ನಂತರ, ಚುನಾವಣಾ ಪ್ರಕ್ರಿಯೆಯಲ್ಲಿ ಕ್ರಿಮಿನಲ್ ಪಿತೂರಿ ಮತ್ತು ಮತಪತ್ರಗಳ ತಿದ್ದುವಿಕೆ ನಡೆದಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. ಮಾಜಿ ಶಾಸಕ ಟಿ.ಡಿ. ರಾಜೇಗೌಡ ಅವರು ರಾಜ್ಯ ಮುಖ್ಯ ಚುನಾವಣಾಧಿಕಾರಿ ವಿ. ಅನ್ಬುಕುಮಾರ್ ಅವರನ್ನು ಭೇಟಿ ಮಾಡಿ ದೂರು ಸಲ್ಲಿಸಿದರು. ಈ ವೇಳೆ ಚುನಾವಣಾ ಫಲಿತಾಂಶದಲ್ಲಿ ಅಕ್ರಮಗಳು ನಡೆದಿದ್ದು, ಈ ಬಗ್ಗೆ ಸೂಕ್ತ ಕ್ರಮ ಜರುಗಿಸಬೇಕು ಎಂದು ದೂರಿನಲ್ಲಿ ಆಗ್ರಹಿಸಿದ್ದಾರೆ.
2023ರಲ್ಲಿ ನಡೆದ ಮೂಲ ಮತ ಎಣಿಕೆಯ ವೇಳೆ ಬಿಜೆಪಿ, ಜೆಡಿಎಸ್ ಮತ್ತು ಕಾಂಗ್ರೆಸ್ ಸೇರಿದಂತೆ ಎಲ್ಲಾ ಅಭ್ಯರ್ಥಿಗಳ ಏಜೆಂಟ್ ಪಾರದರ್ಶಕವಾಗಿ ಕೆಲಸ ಮಾಡಿದ್ದರು. ಅಂದು ಮಾನ್ಯವಾಗಿದ್ದ ಮತಗಳು ಈಗ ಮರು ಎಣಿಕೆಯ ವೇಳೆ ಅಮಾನ್ಯವಾಗಿರುವುದು ಹೇಗೆ? ಎಂದು ಅವರು ಪ್ರಶ್ನಿಸಿದ್ದಾರೆ. ಅಂಚೆ ಮತಪತ್ರಗಳಿದ್ದ ಟ್ರಂಕ್ ಮತ್ತು ಸೀಲ್‌ಗಳನ್ನು ಮೊದಲೇ ತೆರೆಯಲಾಗಿತ್ತು ಎಂಬುದು ಅವರ ಪ್ರಮುಖ ಆರೋಪವಾಗಿದೆ. ಮರು ಎಣಿಕೆಯ ಸಂದರ್ಭದಲ್ಲಿ ಅಂಚೆ ಮತಪತ್ರಗಳನ್ನು ವ್ಯವಸ್ಥಿತವಾಗಿ ಟ್ಯಾಂಪರ್ ಮಾಡಲಾಗಿದೆ ಎಂದು ದೂರಿದ್ದಾರೆ.
2023ರ ಚುನಾವಣೆಯಲ್ಲಿ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ ಅಲ್ಪ ಮತಗಳ ಅಂತರದಿಂದ ಜಯಗಳಿಸಿದ್ದರು. ಈ ಫಲಿತಾಂಶವನ್ನು ಪ್ರಶ್ನಿಸಿ ಡಿ.ಎನ್. ಜೀವರಾಜ್ ಹೈಕೋರ್ಟ್ ಮೆಟ್ಟಿಲೇರಿದ್ದರು. ಅಮಾನ್ಯಗೊಂಡಿದ್ದ 279 ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ಅವರು ವಾದಿಸಿದ್ದರು. ಈ ಅರ್ಜಿಯನ್ನು ಪುರಸ್ಕರಿಸಿದ ಹೈಕೋರ್ಟ್, ಅಂಚೆ ಮತಗಳ ಮರು ಎಣಿಕೆಗೆ ಆದೇಶಿಸಿತ್ತು. ಈ ಮರು ಎಣಿಕೆಯಲ್ಲಿ ಜೀವರಾಜ್ ಅವರು ಮುನ್ನಡೆ ಸಾಧಿಸಿ ವಿಜಯಶಾಲಿಯಾದರು. ಈ ಬದಲಾದ ಫಲಿತಾಂಶವೇ ಈಗಿನ ಎಲ್ಲಾ ವಿವಾದಗಳಿಗೆ ಮೂಲಕಾರಣವಾಗಿದೆ.
ವಿಧಿವಿಜ್ಞಾನ ಪ್ರಯೋಗಾಲಯ ಪರೀಕ್ಷೆಗೆ ಆಗ್ರಹ
ಟಿ.ಡಿ. ರಾಜೇಗೌಡ ಅವರು ಕೇವಲ ದೂರು ನೀಡುವುದಕ್ಕೆ ಸೀಮಿತವಾಗದೆ, ವಿವಾದಿತ ಅಂಚೆ ಮತಪತ್ರಗಳನ್ನು ವಿಧಿವಿಜ್ಞಾನ ಪ್ರಯೋಗಾಲಯದಲ್ಲಿ ಪರೀಕ್ಷೆಗೆ ಒಳಪಡಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಂಕ್‌ನ ಕಾಲಾವಧಿ ಮತ್ತು ಗುರುತುಗಳನ್ನು ತಿದ್ದಲಾಗಿದೆಯೇ ಎಂಬುದನ್ನು ವೈಜ್ಞಾನಿಕವಾಗಿ ಪತ್ತೆಹಚ್ಚಿದರೆ ಸತ್ಯಾಂಶ ಹೊರಬರಲಿದೆ ಎಂದು ಆಗ್ರಹಿಸಿದರು. ರಾಜ್ಯ ಮುಖ್ಯ ಚುನಾವಣಾಧಿಕಾರಿಗಳು ಈ ದೂರನ್ನು ಕೇಂದ್ರ ಚುನಾವಣಾ ಆಯೋಗಕ್ಕೆ ರವಾನಿಸಲಾಗುವುದು ಎಂದಿದ್ದಾರೆ. ನನಗೆ ಆಯೋಗದ ಮೇಲೆ ನಂಬಿಕೆಯಿದೆ. ಆದರೆ ತನಿಖೆಯಾಗದ ಹೊರತು ನ್ಯಾಯ ಸಿಗುವುದಿಲ್ಲ ಎಂದು ರಾಜೇಗೌಡ ತಿಳಿಸಿದರು.
ರಾಜೇಗೌಡರ ಪರವಾಗಿ ಚುನಾವಣಾ ಏಜೆಂಟ್ ಆಗಿ ಕಾರ್ಯನಿರ್ವಹಿಸಿದ್ದ ಕಾಂಗ್ರೆಸ್ ವಕ್ತಾರ ಸುಧೀರ್ ಕುಮಾರ್ ಮುರೊಳ್ಳಿ ಮಾತನಾಡಿ, ಮತಪತ್ರಗಳಲ್ಲಿ ಬಳಸಿರುವ ಇಂಕ್ ಬಣ್ಣ ಮತ್ತು ಮಾದರಿಯಲ್ಲಿ ವ್ಯತ್ಯಾಸವಿದೆ. ಕೆಲವು ಮತಪತ್ರಗಳಲ್ಲಿ ಉದ್ದೇಶಪೂರ್ವಕವಾಗಿ ಎರಡನೇ ಗುರುತು ಅಥವಾ ಹೆಬ್ಬೆಟ್ಟು ಒತ್ತುವ ಮೂಲಕ ಅವುಗಳನ್ನು ಅಸಿಂಧುಗೊಳಿಸಲಾಗಿದೆ. ಮತಪತ್ರಗಳಿದ್ದ ಪೆಟ್ಟಿಗೆಯ ಭದ್ರತಾ ಸೀಲ್ ತೆರೆದಿರುವುದು ಮೇಲ್ನೋಟಕ್ಕೆ ಕಂಡುಬಂದಿದೆ. ಇದು ಕೇವಲ ತಾಂತ್ರಿಕ ದೋಷವಲ್ಲ, ಇದು ಪ್ರಜಾಪ್ರಭುತ್ವದ ಮೇಲಿನ ದಾಳಿ ಮತ್ತು ಮತಗಳ ಡಕಾಯಿತಿಯಾಗಿದೆ. 201 ಮತಗಳ ಅಂತರದಿಂದ ಗೆದ್ದಿದ್ದ ರಾಜೇಗೌಡರ ಗೆಲುವನ್ನು ಅಮಾನ್ಯಗೊಳಿಸಲು ಈ ರೀತಿ ತಿದ್ದುವಿಕೆ ಮಾಡಲಾಗಿದೆ ಎಂದು ಕಿಡಿಕಾರಿದರು.

