
ಶೃಂಗೇರಿಯಲ್ಲಿ ಬಿಜೆಪಿಯಿಂದ 'ವೋಟ್ ಡಕಾಯಿತಿ' ಎಂದ ಸಿಎಂ ಸಿದ್ದರಾಮಯ್ಯ
ಮತ ಎಣಿಕೆಯಾದ ನಂತರ ಎಲ್ಲಾ ದಾಖಲೆಗಳನ್ನು ಟ್ರಂಕ್‌ನಲ್ಲಿ ಇಡಲಾಗುತ್ತದೆ. ಆಗ ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿದ್ದು, ಮತಪತ್ರಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ ಎಂದು ಸಿಎಂ ಆರೋಪಿಸಿದ್ದಾರೆ.
ಶೃಂಗೇರಿ ವಿಧಾನಸಭಾ ಕ್ಷೇತ್ರದ ಮರು ಎಣಿಕೆ ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಅಕ್ರಮದಲ್ಲಿ ಬಿಜೆಪಿಯು ಕ್ರಿಮಿನಲ್ ಸಂಚು ಮಾಡಿ ವೋಟ್ ಚೋರಿ ಮಾಡಿರುವುದು ಬಹಳ ಸ್ಪಷ್ಟವಾಗುತ್ತದೆ ಎಂಬುದು ಮುಖ್ಯಮಂತ್ರಿ ಸಿದ್ದರಾಮಯ್ಯ ಪ್ರಬಲವಾಗಿ ಆರೋಪಿಸಿದ್ದಾರೆ.
ಬೆಂಗಳೂರಿನಲ್ಲಿ ಸುದ್ದಿಗಾರರ ಜತೆ ಮಾತನಾಡಿದ ಅವರು, ಕಾಂಗ್ರೆಸ್ ಶಾಸಕ ಟಿ.ಡಿ.ರಾಜೇಗೌಡ ಅವರಿಗೆ ಲಭಿಸಿದ 250 ಮತಗಳನ್ನು ವ್ಯವಸ್ಥಿತವಾಗಿ ತಿದ್ದಲಾಗಿದೆ. ಇದು ವೋಟ್ ಡಕಾಯಿತಿಯಾಗಿದೆ. 2023ರ ಚುನಾವಣೆಯಲ್ಲಿ ಕಾಂಗ್ರೆಸ್‌ನ ಟಿ.ಡಿ. ರಾಜೇಗೌಡ ಅವರು ಬಿಜೆಪಿಯ ಡಿ.ಎನ್. ಜೀವರಾಜ್ ವಿರುದ್ಧ 201 ಮತಗಳ ಅಂತರದಿಂದ ಜಯಗಳಿಸಿದ್ದರು. ಆಗ ರಾಜೇಗೌಡರಿಗೆ 59,171 ಮತಗಳು ಹಾಗೂ ಜೀವರಾಜ್ ಅವರಿಗೆ 58,970 ಮತಗಳು ಲಭಿಸಿದ್ದವು. ಈ ಫಲಿತಾಂಶವನ್ನು ಚುನಾವಣಾಧಿಕಾರಿಗಳು ಮತ್ತು ಎಲ್ಲಾ ಪಕ್ಷಗಳ ಏಜೆಂಟ್‌ಗಳು ಒಪ್ಪಿ ಸಹಿ ಮಾಡಿದ್ದರು. ಬಿಜೆಪಿಯ ಜೀವರಾಜ್ ಅವರು ಹೈಕೋರ್ಟ್ ಮೊರೆ ಹೋದ ನಂತರ ನಡೆದ ಮರು ಎಣಿಕೆಯಲ್ಲಿ ಆಘಾತಕಾರಿ ಬದಲಾವಣೆ ಕಂಡುಬಂದಿದೆ. ಈ ಹಿಂದೆ ಅರ್ಹವೆಂದು ಪರಿಗಣಿಸಲಾಗಿದ್ದ ರಾಜೇಗೌಡರ 255 ಅಂಚೆ ಮತಗಳನ್ನು ಈಗ ಅನರ್ಹ ಎಂದು ಘೋಷಿಸಲಾಗಿದೆ. ಕೇವಲ 314 ಮತಗಳು ಮಾತ್ರ ಅವರ ಪರವಾಗಿ ಉಳಿದಿವೆ. ಮತ್ತೊಂದೆಡೆ ಜೀವರಾಜ್ ಅವರ ಮತಗಳು 690ಕ್ಕೆ ಏರಿಕೆಯಾಗಿವೆ.
ಮತ ಎಣಿಕೆಯಾದ ನಂತರ ಎಲ್ಲಾ ದಾಖಲೆಗಳನ್ನು ಟ್ರಂಕ್‌ನಲ್ಲಿ ಇಡಲಾಗುತ್ತದೆ. ಅಂದು ರಾಜ್ಯ ಮತ್ತು ಕೇಂದ್ರದಲ್ಲಿ ಬಿಜೆಪಿಯದ್ದೇ ಸರ್ಕಾರವಿತ್ತು. ಬಿಜೆಪಿಯವರು ಸರ್ಕಾರಿ ಸಿಬ್ಬಂದಿ ಮೂಲಕ ಟ್ರಂಕ್‌ನಲ್ಲಿದ್ದ ಮತಪತ್ರಗಳನ್ನು ವ್ಯವಸ್ಥಿತವಾಗಿ ತಿದ್ದಿದ್ದಾರೆ. ಇದು ಸ್ಪಷ್ಟವಾದ ವೋಟ್ ಡಕಾಯಿತಿ ಮತ್ತು ಕ್ರಿಮಿನಲ್ ಸಂಚು ಎಂದು ಆಕ್ರೋಶ ವ್ಯಕ್ತಪಡಿಸಿದರು.
ಚುನಾವಣಾಧಿಕಾರಿಗಳ ವಿರುದ್ಧ ಕಿಡಿಕಾರಿದ ಸಿಎಂ
ಮರು ಎಣಿಕೆ ಪ್ರಕ್ರಿಯೆಯಲ್ಲಿ ನಿಯಮಗಳನ್ನು ಗಾಳಿಗೆ ತೂರಲಾಗಿದೆ. ಚುನಾವಣಾ ವೀಕ್ಷಕರು ಈ ಪ್ರಕ್ರಿಯೆಯಲ್ಲಿ ಗಂಭೀರ ಸ್ವರೂಪದ ಅಕ್ರಮ ನಡೆದಿರುವುದನ್ನು ಗಮನಿಸಿ ಚುನಾವಣಾ ಆಯೋಗಕ್ಕೆ ಪತ್ರ ಬರೆದಿದ್ದಾರೆ. ಆದರೆ, ಚುನಾವಣಾಧಿಕಾರಿಗಳು ವೀಕ್ಷಕರ ಅನುಮತಿ ಪಡೆಯದೆಯೇ ಆತುರಾತುರವಾಗಿ ಫಲಿತಾಂಶ ಘೋಷಿಸಿದ್ದಾರೆ.
ಅಂಚೆ ಮತಪತ್ರಗಳನ್ನು ಫೋರೆನ್ಸಿಕ್ ಪರಿಶೀಲನೆಗೆ ಒಳಪಡಿಸಬೇಕಿತ್ತು. ಆದರೆ ಅದನ್ನು ಮಾಡದೆ ಫಲಿತಾಂಶ ಪ್ರಕಟಿಸಲಾಗಿದೆ. ತಪ್ಪು ಮಾಡಿದ ಅಧಿಕಾರಿಗಳಿಗೆ ಕಠಿಣ ಶಿಕ್ಷೆಯಾಗಬೇಕು. ಅಲ್ಲದೇ, ರಾಜೇಗೌಡ ಅವರು ನೀಡಿದ ದೂರಿನ ಮೇಲೆ ಎಫ್ಐಆರ್ ಆಗಿದೆ. ಇದು ನಿಷ್ಪಕ್ಷಪಾತವಾಗಿ ತನಿಖೆ ನಡೆಯಬೇಕು ಎಂದು ಆಗ್ರಹಿಸಿದರು.
ಬಿಜೆಪಿಯು ಈ ಹಿಂದೆಯೂ ಇಂತಹ ಅಕ್ರಮಗಳಲ್ಲಿ ಭಾಗಿಯಾಗಿದೆ. ಈ ಹಿಂದೆ ಚಿಲುಮೆ ಸಂಸ್ಥೆಯ ಮೂಲಕ ಮತದಾರರ ಪಟ್ಟಿಯನ್ನು ತಿದ್ದುಪಡಿ ಮಾಡಲು ಬಿಜೆಪಿ ಯತ್ನಿಸಿತ್ತು. ಆಳಂದದಲ್ಲಿ ನೈಜ ಮತದಾರರ ಹೆಸರುಗಳನ್ನೇ ಕೈಬಿಡಲಾಗಿತ್ತು. ಬಿಜೆಪಿಯವರಿಗೆ ಸಂವಿಧಾನ ಅಥವಾ ನಿಷ್ಪಕ್ಷಪಾತ ಚುನಾವಣೆಯ ಮೇಲೆ ನಂಬಿಕೆಯಿಲ್ಲ. ಅಧಿಕಾರಕ್ಕಾಗಿ ಅವರು ಯಾವ ಮಟ್ಟದ ಅಪರಾಧ ಎಸಗಲು ಹಿಂಜರಿಯುವುದಿಲ್ಲ ಎಂದು ಟೀಕಿಸಿದರು.
ಉಪಚುನಾವಣೆಯಲ್ಲಿ ಭರ್ಜರಿ ಜಯ
ಬಾಗಲಕೋಟೆ ಮತ್ತು ದಾವಣಗೆರೆ ದಕ್ಷಿಣ ವಿಧಾನಸಭಾ ಕ್ಷೇತ್ರಗಳಿಗೆ ನಡೆದ ಉಪಚುನಾವಣೆಯಲ್ಲಿ ಕಾಂಗ್ರೆಸ್ ಸಾಧಿಸಿದೆ. ಕಳೆದ ಮೂರು ಉಪಚುನಾವಣೆಗಳಲ್ಲಿ ಕಾಂಗ್ರೆಸ್ ಗೆದ್ದಿದೆ. ಇದು ನಮ್ಮ ಸರ್ಕಾರದ ಗ್ಯಾರಂಟಿ ಯೋಜನೆಗಳು ಮತ್ತು ಅಭಿವೃದ್ಧಿ ಕಾರ್ಯಗಳಿಗೆ ಜನರು ನೀಡಿದ ಮನ್ನಣೆಯಾಗಿದೆ. ಜನರು ನಮ್ಮ ಮೇಲೆ ಇಟ್ಟಿರುವ ವಿಶ್ವಾಸಕ್ಕೆ ಇದು ಸಾಕ್ಷಿ. ಬಿಜೆಪಿಯವರೇ ಈ ಚುನಾವಣೆಯನ್ನು 2028ರ ಚುನಾವಣೆಗೆ ದಿಕ್ಸೂಚಿ ಎಂದು ಹೇಳುತ್ತಿದ್ದರು. ಅವರ ಮಾತಿನಂತೆಯೇ ಈಗಿನ ಫಲಿತಾಂಶ ನೋಡಿದರೆ, 2028ರಲ್ಲೂ ಕಾಂಗ್ರೆಸ್ ಮತ್ತೆ ಅಧಿಕಾರಕ್ಕೆ ಬರುವುದು ಖಚಿತ ಎಂದು ಅವರೇ ಒಪ್ಪಿಕೊಂಡಂತಾಗಿದೆ ಎಂದು ಲೇವಡಿ ಮಾಡಿದರು.
ಕಾಂಗ್ರೆಸ್ ಪಕ್ಷ ನುಡಿದಂತೆ ನಡೆಯುವ ಪಕ್ಷ ಎಂಬುದನ್ನು ಜನರು ಮನಗಂಡಿದ್ದಾರೆ. ರಾಜ್ಯದ ಐದು ಗ್ಯಾರಂಟಿ ಯೋಜನೆಗಳು ಮತದಾರರ ಬದುಕಿನಲ್ಲಿ ಬದಲಾವಣೆ ತಂದಿವೆ. ಗ್ಯಾರಂಟಿಗಳು ಕೇವಲ ಘೋಷಣೆಗಳಲ್ಲ, ಅವು ಜನರ ಕೈಹಿಡಿದಿವೆ ಎಂಬುದು ಫಲಿತಾಂಶದಿಂದ ಸಾಬೀತಾಗಿದೆ. ಕೆಲವು ಕಡೆ ಎಸ್‌ಡಿಪಿಐ ಮತಗಳನ್ನು ಪಡೆದಿರುವುದು ಗಮನಕ್ಕೆ ಬಂದಿದೆ. ನಾವು ಎಲ್ಲಿ ಎಡವಿದ್ದೇವೆ ಎಂಬ ಬಗ್ಗೆ ಪಕ್ಷದ ಮಟ್ಟದಲ್ಲಿ ಪರಿಶೀಲನೆ ನಡೆಸಲಿದ್ದೇವೆ ಎಂದು ತಿಳಿಸಿದರು.

