
Sringeri Re-Counting| ಅಧಿಕಾರಿಗಳ ವಿರುದ್ಧ ಮತ ತಿದ್ದಿದ ಆರೋಪ; ಕೋಲಾಹಲ ಸೃಷ್ಟಿಸಿದ ಮರು ಎಣಿಕೆ
2023ರ ಚುನಾವಣೆಯಲ್ಲಿ ಒಟ್ಟು 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಇವುಗಳ ಪೈಕಿ ಮರು ಎಣಿಕೆ ಟಿ.ಡಿ. ರಾಜೇಗೌಡ ಅವರು 569 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 692 ಮತಗಳನ್ನು ಪಡೆದಿದ್ದರು.
ಚಿಕ್ಕಮಗಳೂರು ಜಿಲ್ಲೆಯ ಶೃಂಗೇರಿ ವಿಧಾನಸಭಾ ಕ್ಷೇತ್ರದ ಅಂಚೆ ಮತಗಳ ಎಣಿಕೆ ವಿಚಾರ ಇದೀಗ ಬಿಜೆಪಿ ಹಾಗೂ ಕಾಂಗ್ರೆಸ್ ನಡುವೆ ಜಿದ್ದಾಜಿದ್ದಿಗೆ ಕಾರಣವಾಗಿದೆ.
ಅಂಚೆ ಮತಗಳ ಮರು ಎಣಿಕೆಯಲ್ಲಿ ಉಂಟಾಗ ಗೊಂದಲಗಳ ನಡುವೆ ಬಿಜೆಪಿ ಅಭ್ಯರ್ಥಿ ಡಿ.ಎನ್.ಜೀವರಾಜ್ ಮುನ್ನಡೆ ಕಾಯ್ದುಕೊಂಡಿರುವ ಬಗ್ಗೆ ಚುನಾವಣಾಧಿಕಾರಿಗಳು ಆಯೋಗಕ್ಕೆ ವರದಿ ನೀಡಿರುವುದು ಕಾಂಗ್ರೆಸ್ ಶಾಸಕರನ್ನುಆತಂಕಕ್ಕೆ ದೂಡಿದೆ. ಅಂಚೆ ಮತಗಳನ್ನು ಅಧಿಕಾರಿಗಳೇ ತಿದ್ದಿದ್ದಾರೆಂದು ಆರೋಪಿಸಿರುವ ಕೆಪಿಸಿಸಿ ಅಧ್ಯಕ್ಷ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರು ಈ ಸಂಬಂಧ ನ್ಯಾಯಾಲಯದ ಮೊರೆ ಹೋಗಲು ನಿರ್ಧರಿಸಿದ್ದಾರೆ.
2023 ರ ವಿಧಾನಸಭೆ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ.ರಾಜೇಗೌಡ ಅವರು ಕೇವಲ 201 ಮತಗಳಿಂದ ಗೆಲುವು ಸಾಧಿಸಿದ್ದರು. ಅಂಚೆ ಮತಗಳ ಎಣಿಕೆಯಲ್ಲಿ ಲೋಪವಾಗಿದೆ ಎಂದು ದೂರಿ ಪರಾಜಿತ ಅಭ್ಯರ್ಥಿಯಾದ ಬಿಜೆಪಿ ಡಿ.ಎನ್.ಜೀವರಾಜ್ ಸಲ್ಲಿಸಿದ್ದ ಮನವಿಯನ್ನು ಅಂದಿನ ಚುನಾವಣಾಧಿಕಾರಿ ವಜಾಗೊಳಿಸಿದ್ದರು. ಈ ಸಂಬಂಧ ಜಿವರಾಜ್ ಅವರು ನ್ಯಾಯಾಲಯದ ಮೆಟ್ಟಿಲೇರಿದ್ದರು. ಈಗ ಹೈಕೋರ್ಟ್ ನಿರ್ದೇಶನದ ಮೇರೆಗೆ ಅಂಚೆ ಮತಗಳ ಮರು ಎಣಿಕೆ ನಡೆದಿದೆ.
ಅಂಚೆ ಮತಗಳ ಗೊಂದಲ ಏನು?
2023ರ ಚುನಾವಣೆಯಲ್ಲಿ ಒಟ್ಟು 1,822 ಅಂಚೆ ಮತಗಳು ಚಲಾವಣೆಯಾಗಿದ್ದವು. ಇವುಗಳ ಪೈಕಿ ಮರು ಎಣಿಕೆ ಟಿ.ಡಿ. ರಾಜೇಗೌಡ ಅವರು 569 ಮತಗಳನ್ನು ಪಡೆದರೆ, ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ಅವರು 692 ಮತಗಳನ್ನು ಪಡೆದಿದ್ದರು. 279 ಮತಗಳನ್ನು ಚುನಾವಣಾಧಿಕಾರಿಗಳು ತಿರಸ್ಕರಿಸಿದ್ದರು.
ಈಗ ಮರು ಎಣಿಕೆಯಲ್ಲಿ ಟಿ.ಡಿ. ರಾಜೇಗೌಡ ಅವರಿಗೆ ಈ ಹಿಂದೆ ಸಿಕ್ಕಿದ್ದ ಮತಗಳಲ್ಲಿ ಸುಮಾರು 255 ಮತಗಳು ಅಮಾನ್ಯಗೊಂಡಿವೆ. ಡಿ.ಎನ್. ಜೀವರಾಜ್ ಅವರಿಗೆ ಬಂದಿದ್ದ 692 ಅಂಚೆ ಮತಗಳಲ್ಲಿ ಕೇವಲ 2 ಮತಗಳು ಮಾತ್ರ ತಿರಸ್ಕೃತಗೊಂಡಿವೆ. ಮರು ಎಣಿಕೆಯಲ್ಲಿ ರಾಜೇಗೌಡರ 255 ಅಂಚೆ ಮತಗಳು ಕಡಿತಗೊಂಡಿರುವುದರಿಂದ ಚುನಾವಣಾ ಫಲಿತಾಂಶದ ಚಿತ್ರಣವೇ ಬದಲಾಗಿದೆ.
“ಸ್ಟ್ರ್ಯಾಂಗ್ರೂಮ್ನಲ್ಲಿ ಜೋಪಾನವಾಗಿಟ್ಟಿದ್ದ ಬಾಕ್ಸ್ ಗಳನ್ನು ಪರಿಶೀಲಿಸಿದ ವೇಳೆ ಬೀಗ ಒಡೆದಿರುವುದು, ಟ್ರಂಕ್ಗಳನ್ನೇ ಮುರಿದಿರುವುದು ಕಂಡು ಬಂದಿದೆ. ನನಗೆ ಇದ್ದ ಅಂಚೆ ಮತಗಳಲ್ಲಿ ಕೆಲವುಗಳಿಗೆ ಮತ್ತೊಂದು ಗೆರೆ ಎಳೆಯಲಾಗಿದೆ. ಉದ್ದೇಶಪೂರ್ವಕವಾಗಿ ನನಗೆ ಬಂದಿರುವ ಮತಗಳನ್ನು ಅಮಾನ್ಯಗೊಳಿಸುವ ಸಂಚು ನಡೆದಿದೆ. ಮತಪತ್ರದಲ್ಲಿ ಮತದಾರರು ಬಳಸಿದ ಪೆನ್ನುಗಿಂತಲೂ ಭಿನ್ನವಾದ ಒಂದೇ ಇಂಕ್ ಪೆನ್ ಬಳಸಿ ಗೆರೆ ಎಳೆಯಲಾಗಿದೆ” ಎಂದು ಶಾಸಕ ಟಿ.ಡಿ. ರಾಜೇಗೌಡ ಪ್ರತಿಕ್ರಿಯಿಸಿದ್ದಾರೆ.
ಅಧಿಕಾರಿಗಳೇ ಮತ ತಿದ್ದಿರುವ ಆರೋಪ
ಅಂಚೆ ಮತಗಳ ಮರು ಎಣಿಕೆಯಲ್ಲಿ ದೊಡ್ಡ ಅಪರಾಧ ನಡೆದಿದೆ. 200ಕ್ಕೂ ಅಧಿಕ ಮತಗಳನ್ನು ಅಧಿಕಾರಿಗಳೇ ತಿದ್ದಿದ್ದಾರೆ. ಇದು ಪ್ರಜಾಪ್ರಭುತ್ವ ವ್ಯವಸ್ಥೆಗೆ ದೊಡ್ಡ ಕಳಂಕ. ಇದನ್ನು ನ್ಯಾಯಾಲಯದಲ್ಲಿ ಪ್ರಶ್ನಿಸುತ್ತೇವೆ ಎಂದು ಡಿಸಿಎಂ ಡಿ.ಕೆ.ಶಿವಕುಮಾರ್ ಹೇಳಿದ್ದಾರೆ.
ಭಾನುವಾರ ತುಂಗಭದ್ರಾ ಅಣೆಕಟ್ಟೆಗೆ ಭೇಟಿ ನೀಡಿದ್ದ ವೇಳೆ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಶೃಂಗೇರಿ ಕ್ಷೇತ್ರದ ಮರು ಮತ ಎಣಿಕೆ ವೇಳೆ ನಡೆದಿರುವ ಅಕ್ರಮಗಳ ವಿರುದ್ಧ ಆಕ್ರೋಶ ಹೊರಹಾಕಿದ್ದಾರೆ.
ಅಧಿಕಾರಿಗಳನ್ನು ಬಳಸಿಕೊಂಡು ಅಂಚೆ ಮತಪತ್ರಗಳಲ್ಲಿ ದೊಡ್ಡ ಮಟ್ಟದ ಹಸ್ತಕ್ಷೇಪ ನಡೆಸಲಾಗಿದೆ. ಹಾಲಿ ಕಾಂಗ್ರೆಸ್ ಶಾಸಕರಿಗೆ ಬಂದಿರುವ ಮತಗಳನ್ನು ಉದ್ದೇಶಪೂರ್ವಕವಾಗಿ ತಿದ್ದಲಾಗಿದೆ. ಇದರ ಹಿಂದೆ ಯಾರಿದ್ದಾರೆ ಎಂಬ ಬಗ್ಗೆ ದೊಡ್ಡ ಮಟ್ಟದ ತನಿಖೆ ಆಗಲೇಬೇಕು. ರಾಜ್ಯ ಸರ್ಕಾರ ಈ ಬಗ್ಗೆ ತನಿಖೆ ನಡೆಸಲಿದೆ. ನ್ಯಾಯಾಲಯದ ಮೇಲೆ ನಮಗೆ ಸಂಪೂರ್ಣ ನಂಬಿಕೆ ಇದೆ. ಈ ಹಿಂದೆಯೂ ಜಯನಗರ ಕ್ಷೇತ್ರದಲ್ಲೂ ಇಂತಹದೇ ಘಟನೆ ನಡೆದಿತ್ತು ಎಂದು ಹೇಳಿದ್ದಾರೆ.
ಶಾಸಕ ಟಿ.ಡಿ. ರಾಜೇಗೌಡ ಮತ್ತು ಮಾಜಿ ಶಾಸಕ ಡಿ.ಎನ್. ಜೀವರಾಜ್ ಇಬ್ಬರ ಕಡೆಯವರೂ ಸರಿಯಾಗಿ ಸಹಿ ಹಾಕಿಲ್ಲ ಎಂಬ ಗೃಹ ಸಚಿವರ ಹೇಳಿಕೆಗೆ ಪ್ರತಿಕ್ರಿಯಿಸಿದ ಅವರು, ಎಲ್ಲರೂ ಸಹಿ ಮಾಡಿರುವ ಬಗ್ಗೆ ಸ್ಪಷ್ಟ ದಾಖಲೆಗಳಿವೆ. ಈ ಬಗ್ಗೆ ನಾನೂ ಕೂಡ ಸಂಪೂರ್ಣ ವರದಿ ತರಿಸಿಕೊಂಡಿದ್ದೇನೆ ಎಂದು ಸ್ಪಷ್ಟಪಡಿಸಿದ್ದಾರೆ.
ಮಾಲೂರಿನಲ್ಲೂ ಮರು ಎಣಿಕೆ ನಡೆದಿತ್ತು!
2023ರ ವಿಧಾನಸಭಾ ಚುನಾವಣೆಯಲ್ಲಿ ಮಾಲೂರು ಕ್ಷೇತ್ರದಿಂದ ಗೆದ್ದು, ಶಾಸಕರಾಗಿದ್ದ ಕಾಂಗ್ರೆಸ್ನ ಕೆ.ವೈ.ನಂಜೇಗೌಡ ಆಯ್ಕೆ ಅಸಿಂಧುಗೊಳಿಸಿ ಮರು ಮತ ಎಣಿಕೆಗೆ ನ್ಯಾಯಾಲಯ ಆದೇಶಿಸಿತ್ತು. ಆದರೆ, ಮರುಮತದಾನದಲ್ಲಿ ನಂಜೇಗೌಡ ಅವರೇ ಗೆಲುವು ಸಾಧಿಸಿದ್ದರು. ಈ ಪ್ರಕರಣ ಸುಖಾಂತ್ಯವಾದ ಬೆನ್ನಲ್ಲೇ ಈಗ ಶೃಂಗೇರಿ ಕ್ಷೇತ್ರದ ಅಂಚೆ ಮತಗಳ ಮರು ಎಣಿಕೆ ನಡೆದು, ಅಚ್ಚರಿಯ ವಿದ್ಯಾಮಾನ ನಡೆದಿರುವುದು ರಾಜಕೀಯ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

