ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರು ಎಣಿಕೆ; ಫಲಿತಾಂಶದತ್ತ ಎಲ್ಲರ ಗಮನ
x

ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನ ಮೊದಲ ಮಹಡಿಯ ಕೊಠಡಿ ಸಂಖ್ಯೆ 12ರಲ್ಲಿ ಬೆಳಿಗ್ಗೆ 9 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. 

ಶೃಂಗೇರಿ ವಿಧಾನಸಭಾ ಕ್ಷೇತ್ರದಲ್ಲಿ ಅಂಚೆ ಮತಗಳ ಮರು ಎಣಿಕೆ; ಫಲಿತಾಂಶದತ್ತ ಎಲ್ಲರ ಗಮನ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದ್ದರು.


Click the Play button to hear this message in audio format

ಶೃಂಗೇರಿ ವಿಧಾನಸಭಾ ಕ್ಷೇತ್ರದ 2023ರ ಚುನಾವಣೆಯ ಅಂಚೆ ಮತಪತ್ರಗಳ ಮರು ಎಣಿಕೆ ಪ್ರಕ್ರಿಯೆಯು ಮೇ 2ರಂದು ಚಿಕ್ಕಮಗಳೂರಿನ ಐಡಿಎಸ್ಜಿ ಕಾಲೇಜಿನಲ್ಲಿ ಆರಂಭವಾಗಿದೆ. ಹೈಕೋರ್ಟ್ ಆದೇಶದ ಅನ್ವಯ ಬಿಗಿ ಭದ್ರತೆಯ ನಡುವೆ ಅಭ್ಯರ್ಥಿಗಳ ಸಮ್ಮುಖದಲ್ಲಿ ಈ ಮತ ಎಣಿಕೆ ಕಾರ್ಯ ನಡೆಯುತ್ತಿದೆ.

ಚಿಕ್ಕಮಗಳೂರು ನಗರದ ಐಡಿಎಸ್‌ಜಿ ಕಾಲೇಜಿನ ಮೊದಲ ಮಹಡಿಯ ಕೊಠಡಿ ಸಂಖ್ಯೆ 12ರಲ್ಲಿ ಬೆಳಿಗ್ಗೆ 9 ಗಂಟೆಗೆ ಮತ ಎಣಿಕೆ ಪ್ರಕ್ರಿಯೆ ಶುರುವಾಗಿದೆ. ಚುನಾವಣಾಧಿಕಾರಿ ಗೌರವ್ ಶೆಟ್ಟಿ ಅವರ ಉಸ್ತುವಾರಿಯಲ್ಲಿ ಒಂದೇ ಟೇಬಲ್‌ನಲ್ಲಿ ನಡೆಯುವ ಈ ಪ್ರಕ್ರಿಯೆಗೆ ಆರು ಜನ ಸಹಾಯಕ ಚುನಾವಣಾಧಿಕಾರಿಗಳು ಸಾಥ್ ನೀಡಲಿದ್ದಾರೆ. ಪಾರದರ್ಶಕತೆ ಕಾಯ್ದುಕೊಳ್ಳಲು ಎಣಿಕೆ ಕೊಠಡಿಯಲ್ಲಿ ಸಿಸಿಟಿವಿ ಕ್ಯಾಮೆರಾಗಳನ್ನು ಅಳವಡಿಸಲಾಗಿದೆ ಹಾಗೂ ಅಭ್ಯರ್ಥಿಗಳು ಮತ್ತು ವೀಕ್ಷಕರಾದ ಕಿರಣ್ ಹೆಚ್. ಕುಲಕರ್ಣಿ ಅವರ ಸಮ್ಮುಖದಲ್ಲಿ ಸ್ಟ್ರಾಂಗ್ ರೂಂ ತೆರೆಯಲಾಗಿದೆ.

ಭದ್ರತಾ ವ್ಯವಸ್ಥೆ ಮತ್ತು ನಿಷೇಧಾಜ್ಞೆ

ಮತ ಎಣಿಕೆ ಹಿನ್ನೆಲೆಯಲ್ಲಿ ಯಾವುದೇ ಅಹಿತಕರ ಘಟನೆಗಳು ನಡೆಯದಂತೆ ಜಿಲ್ಲಾಡಳಿತ ಮುನ್ನೆಚ್ಚರಿಕಾ ಕ್ರಮಗಳನ್ನು ಕೈಗೊಂಡಿದೆ. ಎಣಿಕಾ ಕೇಂದ್ರದ 200 ಮೀಟರ್ ಸುತ್ತಳತೆಯಲ್ಲಿ ಶನಿವಾರ ಬೆಳಿಗ್ಗೆ 6 ಗಂಟೆಯಿಂದ ರಾತ್ರಿ 11 ಗಂಟೆಯವರೆಗೆ ನಿಷೇಧಾಜ್ಞೆ ಜಾರಿ ಮಾಡಲಾಗಿದೆ. ಐದಕ್ಕಿಂತ ಹೆಚ್ಚು ಜನರು ಗುಂಪು ಸೇರದಂತೆ ಜಿಲ್ಲಾ ಪೊಲೀಸ್‌ ವರಿಷ್ಠಾಧಿಕಾರಿ ಜಿತೇಂದ್ರ ಕುಮಾರ್ ದಯಾಮ ಆದೇಶಿಸಿದ್ದಾರೆ. ಚುನಾವಣಾ ಕಾರ್ಯಕ್ಕೆ ನಿಯೋಜನೆಗೊಂಡ ಅಧಿಕಾರಿಗಳು ಮತ್ತು ಭದ್ರತಾ ಸಿಬ್ಬಂದಿಯನ್ನು ಹೊರತುಪಡಿಸಿ, ಸಾರ್ವಜನಿಕರಿಗೆ ಎಣಿಕಾ ಕೇಂದ್ರದ ಬಳಿ ಪ್ರವೇಶವನ್ನು ಸಂಪೂರ್ಣವಾಗಿ ನಿರ್ಬಂಧಿಸಲಾಗಿದೆ. ಸುಮಾರು 500ಕ್ಕೂ ಅಧಿಕ ಪೊಲೀಸ್‌ ಸಿಬ್ಬಂದಿಯನ್ನು ಭದ್ರತೆಗಾಗಿ ನಿಯೋಜಿಸಲಾಗಿದೆ.

ಹಳೆಯ ಫಲಿತಾಂಶದ ಹಿನ್ನೆಲೆ

2023ರ ವಿಧಾನಸಭಾ ಚುನಾವಣೆಯಲ್ಲಿ ಕಾಂಗ್ರೆಸ್ ಅಭ್ಯರ್ಥಿ ಟಿ.ಡಿ. ರಾಜೇಗೌಡ ಅವರು ಬಿಜೆಪಿ ಅಭ್ಯರ್ಥಿ ಡಿ.ಎನ್. ಜೀವರಾಜ್ ವಿರುದ್ಧ ಕೇವಲ 201 ಮತಗಳ ಅಂತರದಿಂದ ರೋಚಕ ಗೆಲುವು ದಾಖಲಿಸಿದ್ದರು. ತಿರಸ್ಕೃತ ಮತಗಳ ಮೇಲೆ ಮಾಜಿ ಸಚಿವ ಜೀವರಾಜ್ ಆಕ್ಷೇಪ ವ್ಯಕ್ತಪಡಿಸಿ ನ್ಯಾಯಾಲಯದ ಮೊರೆ ಹೋದ ಹಿನ್ನೆಲೆಯಲ್ಲಿ, ಇದೀಗ ತಿರಸ್ಕೃತಗೊಂಡಿದ್ದ ಅಂಚೆ ಮತಗಳ ಮರುಪರಿಶೀಲನೆ ಹಾಗೂ ಮರು ಎಣಿಕೆಗೆ ಹೈಕೋರ್ಟ್ ಸೂಚಿಸಿದೆ. ಮರು ಎಣಿಕೆ ಕಾರ್ಯ ಮುಕ್ತಾಯವಾದ ತಕ್ಷಣವೇ ಅಂತಿಮ ಫಲಿತಾಂಶ ಹೊರಬೀಳಲಿದೆ.

Read More
Next Story