ಸ್ಪೇನ್ ಗಡಿಯಲ್ಲಿ ದುರಂತ: ಸ್ಕೂಟ ನಗರಕ್ಕೆ ನುಗ್ಗಿದ 60 ಸಾವಿರ ವಲಸಿಗರು, 40 ಮಂದಿ ಸಾವು
x

ಸ್ಪೇನ್ ಗಡಿಯಲ್ಲಿ ದುರಂತ: ಸ್ಕೂಟ ನಗರಕ್ಕೆ ನುಗ್ಗಿದ 60 ಸಾವಿರ ವಲಸಿಗರು, 40 ಮಂದಿ ಸಾವು

ಒಂದೇ ದಿನದಲ್ಲಿ ನಗರದ ಒಟ್ಟು ಜನಸಂಖ್ಯೆಯ ಸುಮಾರು ಶೇ. 70ರಷ್ಟು ಜನರು ಗಡಿ ದಾಟಿ ಪ್ರವೇಶಿಸಿರುವುದು ಅಕ್ಷರಶಃ ಆಡಳಿತ ಯಂತ್ರವನ್ನು ಸ್ಥಬ್ಧಗೊಳಿಸಿದೆ. ಪರಿಸ್ಥಿತಿ ನಿಯಂತ್ರಣ ಮೀರಿ ಹೋಗಿದೆ.


Click the Play button to hear this message in audio format

ಆಫ್ರಿಕಾದ ಉತ್ತರ ಕರಾವಳಿಯಲ್ಲಿರುವ ಸ್ಪೇನ್‌ನ ಸ್ವಾಯತ್ತ ನಗರವಾದ ಸ್ಕೂಟದಲ್ಲಿ ಕಳೆದ 24 ಗಂಟೆಗಳಲ್ಲಿ ಅಭೂತಪೂರ್ವ ಮತ್ತು ಆತಂಕಕಾರಿ ಬೆಳವಣಿಗೆಯೊಂದು ಸಂಭವಿಸಿದೆ. ನೆರೆಯ ಮೊರಾಕ್ಕೊದಿಂದ ಸುಮಾರು 60 ಸಾವಿರಕ್ಕೂ ಹೆಚ್ಚು ವಲಸಿಗರು ಇದ್ದಕ್ಕಿದ್ದಂತೆ ಗಡಿ ದಾಟಿ ನುಗ್ಗಿ ಬಂದಿದ್ದು, ಈ ಅನಿರೀಕ್ಷಿತ ಘಟನೆಯಿಂದಾಗಿ ಸ್ಥಳೀಯ ಆಡಳಿತದ ಹಿಡಿತ ತಪ್ಪಿ ಹೋಗಿದೆ. ಈ ಭಾರಿ ಜನಸಂದಣಿಯ ನೂಕುನುಗ್ಗಲು ಮತ್ತು ಸಂಘರ್ಷದ ಪರಿಣಾಮವಾಗಿ ನದಿಯಲ್ಲಿ ಕನಿಷ್ಠ 40ಕ್ಕೂ ಹೆಚ್ಚು ಮಂದಿ ಮೃತಪಟ್ಟಿದ್ದಾರೆ ಎಂದು ವರದಿಯಾಗಿದೆ.

ಸ್ಕೂಟ ಪ್ರಾದೇಶಿಕ ಸರ್ಕಾರದ ಮುಖ್ಯಸ್ಥ ಜುವಾನ್ ಜೀಸಸ್ ವಿವಾಸ್ ಮಾತನಾಡಿ, ನಗರದ ಇತಿಹಾಸದಲ್ಲೇ ಇಂತಹ ಭೀಕರ ಸ್ಥಿತಿಯನ್ನು ನಾವು ಎಂದೂ ಕಂಡಿರಲಿಲ್ಲ. ಒಂದೇ ದಿನದಲ್ಲಿ ನಗರದ ಒಟ್ಟು ಜನಸಂಖ್ಯೆಯ ಸುಮಾರು ಶೇ. 70ರಷ್ಟು ಜನರು ಗಡಿ ದಾಟಿ ಪ್ರವೇಶಿಸಿರುವುದು ಅಕ್ಷರಶಃ ಆಡಳಿತ ಯಂತ್ರವನ್ನು ಸ್ಥಬ್ಧಗೊಳಿಸಿದೆ. ಪರಿಸ್ಥಿತಿ ನಮ್ಮ ನಿಯಂತ್ರಣ ಮೀರಿ ಹೋಗಿದೆ ಎಂದಿದ್ದಾರೆ.

ಘಟನೆಯ ಹಿನ್ನೆಲೆ ಮತ್ತು ಘರ್ಷಣೆ

ಗುರುವಾರದಿಂದಲೇ ವಲಸೆಯ ಅಲೆ ಆರಂಭವಾಗಿದ್ದು, ಮೊರಾಕ್ಕೊ ಭಾಗದ ಗಡಿಯಲ್ಲಿ ವಲಸಿಗರು ಮತ್ತು ಅಲ್ಲಿನ ಭದ್ರತಾ ಪಡೆಗಳ ನಡುವೆ ತೀವ್ರ ಘರ್ಷಣೆ ನಡೆದಿದೆ. ಉತ್ತಮ ಜೀವನದ ಆಸೆ ಮತ್ತು ಯುರೋಪಿಯನ್ ರಾಷ್ಟ್ರವನ್ನು ಪ್ರವೇಶಿಸುವ ಕನಸಿನೊಂದಿಗೆ ಸಾವಿರಾರು ಮಂದಿ ಗಡಿಯ ಬೇಲಿಗಳನ್ನು ದಾಟಲು ಯತ್ನಿಸಿದರು. ನೂರಾರು ಜನರು ಸಮುದ್ರದ ಮೂಲಕ ಈಜಿಕೊಂಡು ಸ್ಪೇನ್ ಗಡಿಯನ್ನು ತಲುಪಲು ಪ್ರಯತ್ನಿಸಿದರೆ, ಇನ್ನು ಕೆಲವರು ಗಡಿ ತಡೆಗೋಡೆಗಳನ್ನು ಹತ್ತಿ ಧುಮುಕಿದರು. ಈ ವೇಳೆ ಉಂಟಾದ ನೂಕುನುಗ್ಗಲಿನಲ್ಲಿ ತುಳಿತಕ್ಕೆ ಒಳಗಾಗಿ ಮತ್ತು ನೀರಿನಲ್ಲಿ ಮುಳುಗಿ ಕನಿಷ್ಠ 34 ಜನರು ಬಲಿಯಾಗಿದ್ದಾರೆ. ಸಾವಿನ ಸಂಖ್ಯೆ ಇನ್ನಷ್ಟು ಹೆಚ್ಚಾಗುವ ಸಾಧ್ಯತೆ ಇದೆ ಎಂದು ಮೂಲಗಳು ತಿಳಿಸಿವೆ.

ಸ್ಪೇನ್‌ಗೆ ಸೇರಿದ ಸ್ಕೂಟ ನಗರವು ಭೌಗೋಳಿಕವಾಗಿ ಆಫ್ರಿಕಾದ ಉತ್ತರ ಕರಾವಳಿಯಲ್ಲಿದೆ. ಇದು ಮೊರಾಕ್ಕೊದೊಂದಿಗೆ ದೀರ್ಘ ಗಡಿ ಹಂಚಿಕೊಂಡಿರುವ ಸ್ಪೇನ್‌ನ ಸ್ವಾಯತ್ತ ಪ್ರದೇಶವಾಗಿದೆ. ಐರೋಪ್ಯ ಒಕ್ಕೂಟದ ಭಾಗವಾಗಿರುವ ಈ ನಗರ, ಆಫ್ರಿಕಾದಿಂದ ಯುರೋಪ್ ಪ್ರವೇಶಿಸಲು ಬಯಸುವ ವಲಸಿಗರಿಗೆ ಒಂದು ಪ್ರಮುಖ ದ್ವಾರವಾಗಿದೆ. ಈ ಕಾರಣದಿಂದಲೇ ಇಲ್ಲಿ ಆಗಾಗ ವಲಸಿಗರ ಸಮಸ್ಯೆಗಳು ಭುಗಿಲೇಳುತ್ತಿರುತ್ತವೆ. ಆದರೆ, ಈ ಬಾರಿ ನಡೆದಿರುವ 60 ಸಾವಿರ ಜನರ ಒಳನುಸುಳುವಿಕೆ ಸಾಮಾನ್ಯವಲ್ಲ, ಇದು ರಾಜಕೀಯ ಮತ್ತು ರಾಜತಾಂತ್ರಿಕ ಬಿಕ್ಕಟ್ಟಿಗೆ ದಾರಿ ಮಾಡಿಕೊಟ್ಟಿದೆ. ಗಡಿ ದಾಟಲು ಪ್ರಯತ್ನಿಸುತ್ತಿರುವವರಲ್ಲಿ ಹೆಚ್ಚಿನವರು ಬಡತನ, ನಿರುದ್ಯೋಗ ಮತ್ತು ಅಸ್ಥಿರತೆಯಿಂದ ಬಳಲುತ್ತಿರುವ ಆಫ್ರಿಕನ್ ದೇಶಗಳ ನಿವಾಸಿಗಳು. ಇವರ ಪೈಕಿ ಮಹಿಳೆಯರು ಮತ್ತು ಮಕ್ಕಳ ಸಂಖ್ಯೆಯೂ ಗಮನಾರ್ಹವಾಗಿದೆ. ಭದ್ರತಾ ಪಡೆಗಳು ಅವರನ್ನು ಹಿಮ್ಮೆಟ್ಟಿಸಲು ಪ್ರಯತ್ನಿಸುತ್ತಿದ್ದರೂ, ಜನರ ಅಲೆ ಅಷ್ಟು ಬೃಹತ್ ಪ್ರಮಾಣದಲ್ಲಿರುವುದರಿಂದ ಎಲ್ಲರನ್ನೂ ತಡೆಯುವುದು ಅಸಾಧ್ಯವಾಗಿದೆ. ಕೆಲವರು ಸ್ಪೇನ್ ಪ್ರವೇಶಿಸಿದರೆ, ಕೆಲವರನ್ನು ಬಲವಂತವಾಗಿ ಮೊರಾಕ್ಕೊಗೆ ಹಿಂದಿರುಗಿಸಲಾಗುತ್ತಿದೆ.

ಈ ಘಟನೆಯು ಸ್ಪೇನ್ ಮತ್ತು ಮೊರಾಕ್ಕೊ ನಡುವಿನ ಸಂಬಂಧದಲ್ಲಿ ಬಿರುಕು ಮೂಡಿಸಿದೆ. ಸ್ಪೇನ್ ಸರ್ಕಾರವು ಗಡಿಯಲ್ಲಿ ಹೆಚ್ಚಿನ ಭದ್ರತೆಯನ್ನು ನಿಯೋಜಿಸಿದ್ದು, ಪರಿಸ್ಥಿತಿಯನ್ನು ತಿಳಿಗೊಳಿಸಲು ರಾಜತಾಂತ್ರಿಕ ಮಾತುಕತೆಗಳನ್ನು ನಡೆಸುತ್ತಿದೆ. ಮಾನವ ಹಕ್ಕುಗಳ ಸಂಘಟನೆಗಳು ಈ ಘಟನೆಯನ್ನು ತೀವ್ರವಾಗಿ ಖಂಡಿಸಿದ್ದು, ವಲಸಿಗರ ಸುರಕ್ಷತೆಗೆ ಆದ್ಯತೆ ನೀಡುವಂತೆ ಒತ್ತಾಯಿಸಿವೆ. ಸದ್ಯಕ್ಕೆ ಸ್ಕೂಟ ನಗರದಲ್ಲಿ ತುರ್ತು ಪರಿಸ್ಥಿತಿಯ ವಾತಾವರಣವಿದೆ. ಇಷ್ಟು ದೊಡ್ಡ ಸಂಖ್ಯೆಯ ಜನರಿಗೆ ವಸತಿ, ಆಹಾರ ಮತ್ತು ವೈದ್ಯಕೀಯ ಸೌಲಭ್ಯ ಒದಗಿಸುವುದು ಪ್ರಾದೇಶಿಕ ಸರ್ಕಾರಕ್ಕೆ ದೊಡ್ಡ ಸವಾಲಾಗಿದೆ. ನೂರಾರು ಜನರು ಇನ್ನೂ ಗಡಿ ಭಾಗದಲ್ಲೇ ಬೀಡುಬಿಟ್ಟಿದ್ದು, ಪರಿಸ್ಥಿತಿ ಯಾವಾಗ ಬೇಕಾದರೂ ಹದಗೆಡಬಹುದು ಎಂಬ ಭೀತಿ ಸ್ಥಳೀಯರಲ್ಲಿದೆ.

Read More
Next Story