ಸೌಜನ್ಯ ಕೊಲೆ ಪ್ರಕರಣ: 'ಜೀವಂತ ಸಾಕ್ಷಿಗಳಿವೆ, ನೂರಕ್ಕೆ ನೂರು ಆರೋಪಿಗಳು ಸಿಗುತ್ತಾರೆ: ಮಹೇಶ್ ಶೆಟ್ಟಿ ತಿಮರೋಡಿ
ಸೌಜನ್ಯ ಪ್ರಕರಣದಲ್ಲಿ ನೂರಕ್ಕೆ ನೂರು ಆರೋಪಿಗಳು ಸಿಗುತ್ತಾರೆ ಎಂದು ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು ದ "ಫೆಡರಲ್ ಕರ್ನಾಟಕ' ಸಂದರ್ಶನದಲ್ಲಿ ಹೇಳೀದ್ದಾರೆ.
ಧರ್ಮಸ್ಥಳದ ಸೌಜನ್ಯ ಕೊಲೆ ಪ್ರಕರಣದ ಮರು ತನಿಖೆಯನ್ನು ಸುಪ್ರೀಂ ಕೋರ್ಟ್ ಆದೇಶದ ಮೇರೆಗೆ ವಿಶೇಷ ತನಿಖಾ ತಂಡ (SIT) ಮುಂದುವರಿಸಿದ್ದು, ಈ ಕುರಿತು ಸೌಜನ್ಯಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿ ಅವರು 'ದಿ ಫೆಡರಲ್ ಕರ್ನಾಟಕ'ಕ್ಕೆ ನೀಡಿದ ವಿಶೇಷ ಸಂದರ್ಶನದಲ್ಲಿ ಹಲವು ಮಹತ್ವದ ಮಾಹಿತಿಗಳನ್ನು ಹಂಚಿಕೊಂಡಿದ್ದಾರೆ. ಪ್ರಕರಣದ ಸಾಕ್ಷಿಗಳನ್ನು ನಾಶಪಡಿಸುವ ಯತ್ನಗಳು ನಡೆದಿದ್ದರೂ, ಈಗಲೂ 'ಜೀವಂತ ಸಾಕ್ಷಿ'ಗಳು ಲಭ್ಯವಿದ್ದು, ಅಸಲಿ ಆರೋಪಿಗಳು ನೂರಕ್ಕೆ ನೂರು ಸಿಕ್ಕೇ ಸಿಗುತ್ತಾರೆ ಎಂದು ಅವರು ದೃಢ ವಿಶ್ವಾಸ ವ್ಯಕ್ತಪಡಿಸಿದ್ದಾರೆ.
14 ವರ್ಷದ ಹೋರಾಟಕ್ಕೆ ಜಯ: ಸುಪ್ರೀಂ ಕೋರ್ಟ್ ಮೇಲೆ ಭರವಸೆ
ಕಳೆದ 14 ವರ್ಷಗಳ ಸುದೀರ್ಘ ಹೋರಾಟದ ಬಳಿಕ ಸುಪ್ರೀಂ ಕೋರ್ಟ್ ಮರು ತನಿಖೆಗೆ ಆದೇಶಿಸಿರುವುದು ನ್ಯಾಯದ ಪರವಾದ ದೊಡ್ಡ ಬೆಳವಣಿಗೆಯಾಗಿದೆ. ಪ್ರಕರಣದಲ್ಲಿ ಯಾವುದೇ ಹುರುಳಿಲ್ಲದೇ ಇದ್ದಿದ್ದರೆ ಸರ್ವೋಚ್ಚ ನ್ಯಾಯಾಲಯ ಈ ಆದೇಶ ನೀಡುತ್ತಿರಲಿಲ್ಲ. ನಮ್ಮ ಹೋರಾಟದಲ್ಲಿ ಸತ್ಯ ಮತ್ತು ಧರ್ಮವಿದ್ದ ಕಾರಣ ಇಂದಲ್ಲ ನಾಳೆ ನ್ಯಾಯ ಸಿಗುವ ವಿಶ್ವಾಸವಿತ್ತು. ಹಿಂದಿನ ತನಿಖೆಗಳ ಸಂದರ್ಭದಲ್ಲಿ ಅತ್ಯಾಚಾರಿಗಳು ಪ್ರಭಾವಿಗಳಾಗಿದ್ದರಿಂದ ಹಾಗೂ ಅವರೊಂದಿಗೆ ರಾಜಕೀಯ ನಾಯಕರು ಶಾಮೀಲಾಗಿದ್ದರಿಂದ ನ್ಯಾಯ ಸಿಗಲಿಲ್ಲ. ಇದೀಗ ನೇರವಾಗಿ ಸುಪ್ರೀಂ ಕೋರ್ಟ್ ಸುಪರ್ದಿಯಲ್ಲಿ ಎಸ್ಐಟಿ ತನಿಖೆ ನಡೆಯುತ್ತಿರುವುದರಿಂದ ಪಾರದರ್ಶಕ ತನಿಖೆಯಾಗಿ, ಸೌಜನ್ಯಳಿಗೆ ನ್ಯಾಯ ಸಿಗಲಿದೆ ಎಂದು ತಿಮರೋಡಿ ಅಭಿಪ್ರಾಯಪಟ್ಟಿದ್ದಾರೆ.
ಸಾಕ್ಷ್ಯ ನಾಶಕ್ಕೆ ವಿಫಲ ಯತ್ನ: ತನಿಖಾ ತಂಡದ ಮುಂದೆ 'ಜೀವಂತ ಸಾಕ್ಷಿ'ಗಳು
ಸೌಜನ್ಯ ಕೊಲೆಯಾದಾಗ ಸಾಕ್ಷ್ಯಗಳನ್ನು ನಾಶಪಡಿಸಲು ರಾಜಕೀಯ ನಾಯಕರು ಹಾಗೂ ಪೊಲೀಸರು ತೀವ್ರ ಪ್ರಯತ್ನ ನಡೆಸಿದ್ದರು. ಆದರೆ, ಸತ್ಯವನ್ನು ಸಂಪೂರ್ಣವಾಗಿ ಅಳಿಸಿಹಾಕಲು ಯಾರಿಂದಲೂ ಸಾಧ್ಯವಾಗಿಲ್ಲ. ಪ್ರಸ್ತುತ ಎಸ್ಐಟಿ ತಂಡಕ್ಕೆ ಹಳೆಯ ಸಾಕ್ಷಿಗಳನ್ನು ಹೊರತುಪಡಿಸಿ ಹೊಸ ಸಾಕ್ಷ್ಯಗಳು ಲಭ್ಯವಾಗಿವೆ. ವಿಶೇಷವಾಗಿ 2012ರ ಅಕ್ಟೋಬರ್ 9ರಂದು ಘಟನಾ ಸ್ಥಳದಲ್ಲಿದ್ದ ಪ್ರತ್ಯಕ್ಷದರ್ಶಿಗಳೇ ಈಗ ಮುಂದೆ ಬಂದಿದ್ದಾರೆ. ಅಗತ್ಯ ಬಿದ್ದಾಗ ಈ ಎಲ್ಲ ಜೀವಂತ ಸಾಕ್ಷಿಗಳನ್ನು ಹಾಜರುಪಡಿಸುತ್ತೇವೆ ಎಂದು ಅವರು ಸ್ಫೋಟಕ ಮಾಹಿತಿ ನೀಡಿದರು. ಇದೇ ವೇಳೆ, ಅಸಹಜ ಸಾವುಗಳ ಬಗ್ಗೆ ಸರ್ಕಾರಗಳು ಸರಿಯಾಗಿ ತನಿಖೆ ನಡೆಸುತ್ತಿಲ್ಲ ಎಂದು ಅಸಮಾಧಾನ ವ್ಯಕ್ತಪಡಿಸಿದ ಅವರು, ಬುರುಡೆ ಪತ್ತೆ ಪ್ರಕರಣಕ್ಕೆ ಸಂಬಂಧಿಸಿದಂತೆ ಎಸ್ಐಟಿ ನೀಡಿದ ವರದಿಯನ್ನು ಸರ್ಕಾರ ಈವರೆಗೂ ಏಕೆ ಬಹಿರಂಗಪಡಿಸಿಲ್ಲ ಎಂದು ಪ್ರಶ್ನಿಸಿದ್ದಾರೆ. ಸರ್ಕಾರ ಅತ್ಯಾಚಾರಿಗಳ ಪರವಾಗಿ ನಿಲ್ಲದೆ, ವರದಿಯನ್ನು ಬಹಿರಂಗಪಡಿಸಿ ಮುಂದಿನ ತನಿಖೆಗೆ ಅವಕಾಶ ಮಾಡಿಕೊಡಬೇಕು ಎಂದು ಒತ್ತಾಯಿಸಿದರು.
ತನಿಖೆಯಲ್ಲಿ ದೋಷವಿದ್ದರೆ ಕೋರ್ಟ್ ಮೆಟ್ಟಿಲೇರುತ್ತೇವೆ: ಡಿ.ಕೆ. ಶಿವಕುಮಾರ್ಗೆ ಸವಾಲು
ಹಾಲಿ ನಡೆಯುತ್ತಿರುವ ಎಸ್ಐಟಿ ತನಿಖೆ ಸರಿಯಾದ ದಿಕ್ಕಿನಲ್ಲಿ ಸಾಗುವ ಭರವಸೆಯಿದೆ. ಒಂದು ವೇಳೆ ತನಿಖಾ ಪ್ರಕ್ರಿಯೆಯಲ್ಲಿ ದೋಷ ಕಂಡುಬಂದರೆ ತಕ್ಷಣವೇ ನ್ಯಾಯಾಲಯದ ಗಮನಕ್ಕೆ ತರಲಾಗುವುದು. ಈಗಾಗಲೇ ಎಸ್ಐಟಿ ಮುಖ್ಯಸ್ಥರು ಮುಖ್ಯಮಂತ್ರಿಯವರನ್ನು ಭೇಟಿಯಾಗಿರುವ ವಿಚಾರವನ್ನು ಕೋರ್ಟ್ ಗಮನಕ್ಕೆ ತರಲಾಗಿದೆ ಎಂದು ಎಚ್ಚರಿಸಿದರು. 'ನನ್ನಂತಹ ನೂರಾರು ಶಿವಕುಮಾರ್ಗಳು ಒಬ್ಬರ ಹಿಂದೆ ಇದ್ದಾರೆ' ಎಂದು ಉಪಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಇತ್ತೀಚೆಗೆ ಹೇಳಿಕೆ ನೀಡಿದ್ದರು. ಹಾಗಿದ್ದರೆ, ಅದೇ ಇಚ್ಛಾಶಕ್ತಿಯನ್ನು ಪ್ರದರ್ಶಿಸಿ ಸೌಜನ್ಯ ಸಾವಿಗೂ ಅವರು ನ್ಯಾಯ ಒದಗಿಸಬೇಕು ಎಂದು ತಿಮರೋಡಿ ಸವಾಲು ಹಾಕಿದರು. ಸೌಜನ್ಯ ಪ್ರಕರಣವನ್ನು ಕೇವಲ ರಾಜ್ಯವಲ್ಲ, ಬದಲಾಗಿ ದೇಶ-ವಿದೇಶಗಳ ಕೋಟ್ಯಂತರ ಜನ ಗಮನಿಸುತ್ತಿದ್ದಾರೆ. ನಾವು ಸುಮ್ಮನೆ ಕುಳಿತಿದ್ದರೆ ನ್ಯಾಯ ಸಿಗುತ್ತಿರಲಿಲ್ಲ. ಸತ್ಯವನ್ನು ಜಗತ್ತಿಗೆ ತಿಳಿಸಲು ಮುಂದಿನ ದಿನಗಳಲ್ಲಿ ಜಾಗತಿಕ ಮಟ್ಟದ ಬೃಹತ್ ಹೋರಾಟ ರೂಪಿಸಲಾಗುವುದು ಎಂದು ಅವರು ಎಚ್ಚರಿಕೆ ನೀಡಿದ್ದಾರೆ.

