ಸೌಜನ್ಯ ಪ್ರಕರಣ ಮರುತನಿಖೆ; ವಿಶೇಷ ಅಧಿವೇಶನ ಗದ್ದಲ; ನಕಲಿ ಔಷಧ ಜಾಲಕ್ಕೆ ಮೊದಲ ಕ್ರಮ
ಸೌಜನ್ಯ ಪ್ರಕರಣಕ್ಕೆ ಮರುತನಿಖೆ, ವಿಶೇಷ ಅಧಿವೇಶನದಲ್ಲಿ ಗದ್ದಲ, ಬೆಂಗಳೂರಿನ ನಕಲಿ ಔಷಧ ಜಾಲಕ್ಕೆ ಸರ್ಕಾರದ ಮೊದಲ ಕ್ರಮದ ಸಂಪೂರ್ಣ ಮಾಹಿತಿ ಇಂದಿನ ಕರುನಾಡ ಕನ್ನಡಿ ಕಾರ್ಯಕ್ರಮದಲ್ಲಿ ಪ್ರಮುಖ ಮೂರು ಸುದ್ದಿಗಳ ವಿಶ್ಲೇಷಣೆ
14 ವರ್ಷಗಳಿಂದ ಬಗೆಹರಿಯದೆ ಉಳಿದಿದ್ದ ಧರ್ಮಸ್ಥಳದ ಸೌಜನ್ಯ ಪ್ರಕರಣಕ್ಕೆ ಸುಪ್ರೀಂ ಕೋರ್ಟ್ ಮರುತನಿಖೆಗೆ ಆದೇಶಿಸಿದೆ. ಹೊಸ ವಿಶೇಷ ತನಿಖಾ ತಂಡ ರಚಿಸಿ ತನಿಖೆ ನಡೆಸಬೇಕು. ಈ ಹಿಂದೆ ತನಿಖೆ ನಡೆಸಿದ್ದ ಪೊಲೀಸ್, ಸಿಐಡಿ ಹಾಗೂ ಸಿಬಿಐ ಅಧಿಕಾರಿಗಳನ್ನು ಹೊಸ ತಂಡದಲ್ಲಿ ಸೇರಿಸಬಾರದು ಎಂದು ನ್ಯಾಯಾಲಯ ಸೂಚಿಸಿದೆ. ಮೂರು ತಿಂಗಳೊಳಗೆ ತನಿಖೆ ಪೂರ್ಣಗೊಳಿಸಿ ವರದಿ ಸಲ್ಲಿಸುವಂತೆಯೂ ನಿರ್ದೇಶಿಸಿದೆ. 2012ರಲ್ಲಿ ನಾಪತ್ತೆಯಾಗಿದ್ದ 17 ವರ್ಷದ ಸೌಜನ್ಯ ಅವರ ಮೃತದೇಹ ಧರ್ಮಸ್ಥಳದ ಮಣ್ಣಸಂಕ ಪ್ರದೇಶದಲ್ಲಿ ಪತ್ತೆಯಾಗಿತ್ತು. ಬಳಿಕ ಸಿಐಡಿ ಮತ್ತು ಸಿಬಿಐ ತನಿಖೆ ನಡೆದಿದ್ದು, 2023ರಲ್ಲಿ ಸಂತೋಷ್ ರಾವ್ ಸಾಕ್ಷ್ಯಾಧಾರಗಳ ಕೊರತೆಯಿಂದ ಖುಲಾಸೆಯಾಗಿದ್ದರು.
ಇತ್ತ, ಬರ ಪರಿಸ್ಥಿತಿ, ರೈತರ ಸಂಕಷ್ಟ ಹಾಗೂ ಕಸ್ತೂರಿ ರಂಗನ್ ವರದಿ ಕುರಿತು ಚರ್ಚಿಸಲು ಆರಂಭವಾದ ಕರ್ನಾಟಕ ವಿಧಾನಮಂಡಲದ ಮೂರು ದಿನಗಳ ವಿಶೇಷ ಅಧಿವೇಶನದ ಮೊದಲ ದಿನವೇ ಗದ್ದಲಕ್ಕೆ ಸಾಕ್ಷಿಯಾಯಿತು. ವಂದೇ ಮಾತರಂ ಗಾಯನ, ಅಧಿವೇಶನದ ಸ್ವರೂಪ ಹಾಗೂ ಚರ್ಚೆಗೆ ಅವಕಾಶದ ವಿಚಾರದಲ್ಲಿ ಸರ್ಕಾರ ಮತ್ತು ವಿಪಕ್ಷಗಳ ನಡುವೆ ವಾಗ್ವಾದ ನಡೆಯಿತು. ಬರ ಮತ್ತು ಕಸ್ತೂರಿ ರಂಗನ್ ವರದಿ ಕುರಿತು ಮುಕ್ತ ಚರ್ಚೆ ನಡೆಯಬೇಕು ಎಂದು ಸರ್ಕಾರ ಹೇಳಿದರೆ, ಹೆಚ್ಚಿನ ಸಮಯ ನೀಡಬೇಕು ಎಂದು ವಿಪಕ್ಷ ಒತ್ತಾಯಿಸಿತು.
ಇದರ ನಡುವೆ ಬೆಂಗಳೂರಿನ ನಕಲಿ ಔಷಧ ಜಾಲ ಪ್ರಕರಣದಲ್ಲೂ ಸರ್ಕಾರ ಮೊದಲ ಕ್ರಮ ಕೈಗೊಂಡಿದೆ. ಕರ್ತವ್ಯಲೋಪದ ಆರೋಪದ ಹಿನ್ನೆಲೆಯಲ್ಲಿ ಎಫ್ಡಿಎ ಅಧಿಕಾರಿ ಹಾಗೂ ಸರ್ಕಲ್–1 ಎಡಿಸಿ ಓಂಕಾರೇಶ್ವರ ಅವರನ್ನು ಅಮಾನತುಗೊಳಿಸಲಾಗಿದೆ. ನಕಲಿ ಔಷಧ ಜಾಲದ ತನಿಖೆ ಮುಂದುವರಿದಿದ್ದು, 70ರಿಂದ 80 ಆಸ್ಪತ್ರೆಗಳು, ಚಿಕಿತ್ಸಾಲಯಗಳು ಮತ್ತು ಔಷಧ ಅಂಗಡಿಗಳಿಗೆ ಪೂರೈಕೆಯಾಗಿರುವ ಶಂಕೆ ವ್ಯಕ್ತವಾಗಿದೆ. ಕ್ಯಾನ್ಸರ್ ಔಷಧಗಳು ಹಾಗೂ ಜೀವ ರಕ್ಷಕ ಚುಚ್ಚುಮದ್ದುಗಳೂ ನಕಲಿ ಜಾಲದ ಮೂಲಕ ಪೂರೈಕೆಯಾಗಿರುವ ಆರೋಪದ ಕುರಿತು ತನಿಖೆ ನಡೆಯುತ್ತಿದೆ.

