x

ಅಮಿತ್‌ ಶಾ ಮುಂದೆ ಡಿಕೆಶಿ ಮೇಕೆದಾಟು ಹಕ್ಕೊತ್ತಾಯ; ಬರ ಘೋಷಣೆಗೆ ಒತ್ತಾಯ-ತೊಗರಿನಾಡು ಬಂದ್

ದ.ವಲಯ ಮಂಡಳಿ ಸಭೆಯಲ್ಲಿ ಅಮಿತ್‌ ಶಾ ಮುಂದೆ ಸಿಎಂ ಡಿ.ಕೆ.ಶಿವಕುಮಾರ್‌ ರಾಜ್ಯದ ಹಿತಾಸಕ್ತಿ ವಾದ ಮಂಡಿಸಿದರು. ಬರ ಘೋಷಣೆಗೆ ಒತ್ತಾಯಿಸಿ ಕಲಬುರಗಿ ಬಂದ್‌ಗೆ ಜನರಿಂದ ಬೆಂಬಲ ವ್ಯಕ್ತವಾಯಿತು.


Click the Play button to hear this message in audio format

ತಮಿಳುನಾಡಿನ ಮಹಾಬಲಿಪುರಂನಲ್ಲಿ ಕೇಂದ್ರ ಗೃಹ ಸಚಿವ ಅಮಿತ್ ಶಾ ಅಧ್ಯಕ್ಷತೆಯಲ್ಲಿ 31ನೇ ದಕ್ಷಿಣ ವಲಯ ಮಂಡಳಿ ಸಭೆ ನಡೆಯಿತು. ಸಭೆಯಲ್ಲಿ ದಕ್ಷಿಣ ಭಾರತದ ರಾಜ್ಯಗಳು ಆರ್ಥಿಕ, ರಾಜಕೀಯ ಹಕ್ಕುಗಳನ್ನು ಪ್ರತಿಪಾದಿಸಿದವು. ಸಭೆಯಲ್ಲಿ ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮೇಕೆದಾಟು ಯೋಜನೆಯ ಅನಿವಾರ್ಯತೆ, ಹಣಕಾಸು ಹಂಚಿಕೆಯಲ್ಲಿನ ಅನ್ಯಾಯ, ಕ್ಷೇತ್ರ ಪುನರ್ವಿಂಗಡಣೆ ಮತ್ತು ಮಹಿಳಾ ಮೀಸಲಾತಿಯಂತಹ ಸೂಕ್ಷ್ಮ ಹಾಗೂ ಪ್ರಮುಖ ವಿಚಾರಗಳನ್ನು ಪ್ರಸ್ತಾಪಿಸಿದರು.

ಕಾವೇರಿ ಕೊಳ್ಳದ ರಾಜ್ಯಗಳ ನಡುವಿನ ಜಲ ವಿವಾದವನ್ನು ಬಗೆಹರಿಸಲು ಇದೊಂದು ಪರಿಹಾರ ಮಾರ್ಗ ಎಂದು ಡಿ.ಕೆ.ಶಿವಕುಮಾರ್ ಪ್ರತಿಪಾದಿಸಿದರು. ಮೇಕೆದಾಟು ಯೋಜನೆ ಕೇವಲ ಕರ್ನಾಟಕಕ್ಕೆ ಮಾತ್ರವಲ್ಲ, ತಮಿಳುನಾಡು ಮತ್ತು ಪುದುಚೇರಿಗೂ ವರದಾನವಾಗಲಿದೆ ಎಂದರು. ಆಂಧ್ರಪ್ರದೇಶದ ಮುಖ್ಯಮಂತ್ರಿ ಚಂದ್ರಬಾಬು ನಾಯ್ಡು ಅವರೊಂದಿಗಿನ ಸಂವಾದವನ್ನು ಈ ವೇಳೆ ಉಲ್ಲೇಖಿಸಿದರು. ಸಭೆಗೆ ಬರುವ ಮುನ್ನ ಚಂದ್ರಬಾಬು ನಾಯ್ಡು ಅವರು ಕಾವೇರಿ ಸಮಸ್ಯೆಯನ್ನು ಬಗೆಹರಿಸಿಕೊಳ್ಳಲು ಸಲಹೆ ನೀಡಿದರು. ಮೇಕೆದಾಟಿನಿಂದ ಹರಿಯುವ ಪ್ರತಿಯೊಂದು ಹನಿಯೂ ತಮಿಳುನಾಡು ಮತ್ತು ಪುದುಚೇರಿಯ ರೈತರ ದಾಹ ತಣಿಸಲಿದೆ ಎಂಬುದಾಗಿ ತಿಳಿಸಲಾಗಿದೆ ಎಂದರು. ನೀರು ವಿಭಜನೆಯ ವಿಷಯವಾಗಿರದೆ, ಸಹಕಾರದ ವಿಷಯವಾಗಬೇಕು ಎಂಬ ನಿಲುವನ್ನು ಡಿ.ಕೆ.ಶಿವಕುಮಾರ್‌ವ್ಯಕ್ತಪಡಿಸಿದರು. ಕರ್ನಾಟಕವು ಸದಾ ನೆರೆ ರಾಜ್ಯಗಳ ಹಕ್ಕುಗಳನ್ನು ಗೌರವಿಸಿದೆ, ಅದೇ ರೀತಿಯಲ್ಲಿ ತಮಗೂ ನ್ಯಾಯಯುತ ಪಾಲು ಸಿಗಬೇಕು ಎಂದು ಒತ್ತಾಯಿಸಿದರು.

ಕರ್ನಾಟಕ ಸರ್ಕಾರವು ಮೇಕೆದಾಟು ಯೋಜನೆ ಸಂಬಂಧ ಪರಿಷ್ಕೃತ ಡಿಪಿಆರ್‌ಅನ್ನು ಕೇಂದ್ರಕ್ಕೆ ಸಲ್ಲಿಕೆ ಮಾಡಿದರು. ಮೇಕೆದಾಟು ಯೋಜನೆಯಿಂದ ಕರ್ನಾಟಕ ಮಾತ್ರವಲ್ಲದೇ, ನೆರೆ ರಾಜ್ಯಗಳಿಗೂ ಅನುಕೂಲವಾಗಲಿದೆ ಎಂಬುದನ್ನು ಮನದಟ್ಟು ಮಾಡಿಕೊಡುವ ಪ್ರಯತ್ನ ಮಾಡಿದರು.

ಖಾಸಗಿ ವಲಯದ ಕಂಪನಿಗಳು ಹಾಗೂ ಸರ್ಕಾರಿ ಸ್ವಾಮ್ಯದ ಸಂಸ್ಥೆಗಳು ತಮ್ಮ ಕಾರ್ಪೊರೇಟ್ ಸಾಮಾಜಿಕ ಹೊಣೆಗಾರಿಕೆ - ಸಿಎಸ್‌ಆರ್‌ನಿಧಿಯನ್ನು ಬಳಸುತ್ತಿರುವ ರೀತಿಯ ಬಗ್ಗೆಯೂ ಡಿ.ಕೆ.ಶಿವಕುಮಾರ್ ಕಳವಳ ವ್ಯಕ್ತಪಡಿಸಿದರು. ರಾಜ್ಯದ ಸ್ಥಳೀಯ ಆದ್ಯತೆಗಳಿಗೆ ಅನುಗುಣವಾಗಿ CSR ನಿಧಿಯನ್ನು ಎಲ್ಲಿ ಬಳಸಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸುವಂತಾಗಲು ಸೂಕ್ತ ನೀತಿ ಅಥವಾ ನಿಯಮ ರೂಪಿಸಬೇಕು ಎಂದು ಸಲಹೆ ನೀಡಿದರು. ಸಂಸ್ಥೆಯವರು ಒಂದು ರಾಜ್ಯದಲ್ಲಿ ವ್ಯವಹಾರ ಮಾಡುತ್ತಾರೆ, ಆದರೆ ಬೇರೆಡೆ ಹೂಡಿಕೆ ಮಾಡುತ್ತಾರೆ. ನಮಗೆ ಶಿಕ್ಷಣ ಮತ್ತು ಆರೋಗ್ಯ ಕ್ಷೇತ್ರಗಳಿಗೆ ಆದ್ಯತೆ ಇದೆ. ಹೀಗಾಗಿ CSR ನಿಧಿಯನ್ನು ಎಲ್ಲಿ ಮತ್ತು ಹೇಗೆ ಖರ್ಚು ಮಾಡಬೇಕು ಎಂಬುದನ್ನು ರಾಜ್ಯ ಸರ್ಕಾರ ನಿರ್ಧರಿಸುವಂತಾಗಬೇಕು ಎಂದು ಹೇಳಿದರು. ಇದಕ್ಕೆ ಪ್ರತಿಕ್ರಿಯಿಸಿದ ಅಮಿತ್ ಶಾ ಅವರು ಶಿವಕುಮಾರ್ ಅವರ ಸಲಹೆಯನ್ನು ಭಾಗಶಃ ಒಪ್ಪಿಕೊಂಡರು. ಸರ್ಕಾರಿ ಸ್ವಾಮ್ಯದ ಸಂಸ್ಥೆಗಳ ಮುಖ್ಯಸ್ಥರಾಗಿರುವ ಅಧಿಕಾರಿಗಳೊಂದಿಗೆ ಈ ಕುರಿತು ಚರ್ಚಿಸುವಂತೆ ಸೂಚಿಸಿದರು.

ಬರ ಘೋಷಣೆಗೆ ಒತ್ತಾಯಿಸಿ ಕಲಬುರಗಿ ಬಂದ್‌

ದಕ್ಷಿಣ ಭಾರತದ ತೊಗರಿ ನಾಡು ಎಂದೇ ಖ್ಯಾತಿ ಪಡೆದಿರುವ ಕಲಬುರಗಿ ಜಿಲ್ಲೆಯಲ್ಲಿ ಮುಂಗಾರು ಮಳೆ ಕೈಕೊಟ್ಟ ಪರಿಣಾಮ ಜಿಲ್ಲೆಯ ರೈತರು ಅತಂತ್ರರಾಗಿದ್ದು, ಸರ್ಕಾರದ ನಿರ್ಲಕ್ಷ್ಯವನ್ನು ವಿರೋಧಿಸಿ ವಿವಿಧ ರೈತ ಸಂಘಟನೆಗಳು ಕಲಬುರಗಿ ಬಂದ್‌ಗೆ ಕರೆ ನೀಡಿದ್ದವು. ಈ ಬಂದ್ ಕರೆಗೆ ನಗರದಲ್ಲಿ ಅಭೂತಪೂರ್ವ ಬೆಂಬಲ ವ್ಯಕ್ತವಾಗಿದ್ದು, ಜನಜೀವನ ಸಂಪೂರ್ಣವಾಗಿ ಅಸ್ತವ್ಯಸ್ತಗೊಂಡಿತು.

ಪ್ರಸಕ್ತ ಮುಂಗಾರು ಮಳೆಗಾಲ ಪ್ರಾರಂಭವಾಗಿ ಮೂರು ತಿಂಗಳು ಕಳೆದಿದ್ದರೂ, ಜಿಲ್ಲೆಯಲ್ಲಿ ಮಳೆಯ ಸುಳಿವೇ ಇಲ್ಲದಂತಾಗಿದೆ. ಸೂಪರ್ ಎಲ್‌ನಿನೋ ಪರಿಣಾಮದಿಂದಾಗಿ ಮುಂಗಾರು ಬೆಳೆಗಳು ಸಂಪೂರ್ಣವಾಗಿ ಒಣಗಿಹೋಗಿದ್ದು, ರೈತರು ಬೀಜ-ಗೊಬ್ಬರಕ್ಕಾಗಿ ಮಾಡಿದ ಖರ್ಚು ಕೂಡ ವಾಪಸ್ ಬಾರದ ಪರಿಸ್ಥಿತಿ ನಿರ್ಮಾಣವಾಗಿದೆ. ಕೃಷಿ ಕೂಲಿ ಕಾರ್ಮಿಕರು ಉದ್ಯೋಗವಿಲ್ಲದೆ ವಲಸೆ ಹೋಗುವ ಅನಿವಾರ್ಯತೆಗೆ ಸಿಲುಕಿದ್ದಾರೆ. ಕಳೆದ ವರ್ಷದ ಬೆಳೆ ವಿಮೆ ಪರಿಹಾರ ವಿತರಣೆಯಲ್ಲಿನ ಅನ್ಯಾಯ ಮತ್ತು ಬೆಳೆ ನಾಶದ ಸಂಕಷ್ಟದಿಂದ ತತ್ತರಿಸಿರುವ ರೈತರು, ಸರ್ಕಾರಗಳ ಮೌನವನ್ನು ಖಂಡಿಸಿ ರಸ್ತೆಗಿಳಿದಿದ್ದಾರೆ.

ಕಲಬುರಗಿ ಕೇಂದ್ರ ಬಸ್ ನಿಲ್ದಾಣದ ಎದುರು ಬೃಹತ್ ಪ್ರತಿಭಟನೆ ನಡೆದಿದ್ದರಿಂದ ಸಾರಿಗೆ ಸಂಸ್ಥೆಯ ಬಸ್ ಸಂಚಾರ ಸಂಪೂರ್ಣ ಸ್ಥಗಿತಗೊಂಡಿತು. ಅನಿವಾರ್ಯವಾಗಿ ಸರ್ಕಾರಿ ಬಸ್‌ಗಳು ಡಿಪೋಗಳಲ್ಲಿಯೇ ಉಳಿದುಕೊಂಡವು. ಬೆಂಗಳೂರು, ಹೈದರಾಬಾದ್ ಸೇರಿದಂತೆ ದೂರದ ಊರುಗಳಿಗೆ ಪ್ರಯಾಣಿಸಬೇಕಿದ್ದ ಪ್ರಯಾಣಿಕರು, ಬಂದ್ ಬಗ್ಗೆ ಮಾಹಿತಿ ಇಲ್ಲದೆ ಬಸ್ ನಿಲ್ದಾಣದಲ್ಲಿ ಗಂಟೆಗಟ್ಟಲೆ ಪರದಾಡಿದರು. ಶಾಲಾ-ಕಾಲೇಜುಗಳ ವಾಹನಗಳು ರಸ್ತೆಗಿಳಿಯಲಿಲ್ಲ, ಮಾರುಕಟ್ಟೆಗಳು ಹಾಗೂ ಬಹುತೇಕ ಅಂಗಡಿ-ಮುಂಗಟ್ಟುಗಳು ಮುಚ್ಚಿ ಬಂದ್‌ಗೆ ಬೆಂಬಲ ಸೂಚಿಸಿದವು.

ರೈಲ್ವೆ ನಿಲ್ದಾಣಗಳ ಆಹಾರ ಘಟಕಗಳ ಮೇಲೆ ದಾಳಿ

ರಾಜ್ಯದ ಹೋಟೆಲ್‌ಗಳು, ರೆಸ್ಟೋರೆಂಟ್‌ಗಳು ಮತ್ತು ಪಂಚತಾರಾ ಹೊಟೇಲ್‌ಗಳಲ್ಲಿ ಹಾಗೂ ಬಿಡದಿಯಲ್ಲಿ ನಕಲಿ ಔಷಧಿಗಳ ಸಂಸ್ಥೆಯ ಮೇಲೆ ನಡೆಸಿದ ದಿಢೀರ್ ದಾಳಿಗಳ ನಂತರ, ಇದೀಗ ಆರೋಗ್ಯ ಮತ್ತು ಕುಟುಂಬ ಕಲ್ಯಾಣ ಇಲಾಖೆಯು ರೈಲ್ವೆ ನಿಲ್ದಾಣಗಳಲ್ಲಿನ ಆಹಾರ ಘಟಕಗಳತ್ತ ತನ್ನ ಗಮನ ಹರಿಸಿದೆ. ಆರೋಗ್ಯ ಸಚಿವ ಯು.ಟಿ. ಖಾದರ್ ಮಾರ್ಗದರ್ಶನದಲ್ಲಿ, ಆಹಾರ ಸುರಕ್ಷತೆ ಮತ್ತು ಔಷಧ ಆಡಳಿತ ಇಲಾಖೆಯು ರಾಜ್ಯದ ರೈಲ್ವೆ ಜಾಲದಲ್ಲಿ ಸಾರ್ವಜನಿಕ ಆರೋಗ್ಯದ ರಕ್ಷಣೆಗಾಗಿ ವಿಶೇಷ ತಪಾಸಣಾ ಕಾರ್ಯಾಚರಣೆಯನ್ನು ಕೈಗೊಂಡಿದೆ. ಪ್ರಯಾಣಿಕರ ಆರೋಗ್ಯದ ದೃಷ್ಟಿಯಿಂದ ಈ ಕಾರ್ಯಾಚರಣೆಯು ಅತ್ಯಂತ ಮಹತ್ವ ಪಡೆದಿದೆ.

ಪ್ರತಿದಿನ ಲಕ್ಷಾಂತರ ಪ್ರಯಾಣಿಕರು ಅವಲಂಬಿಸಿರುವ ರೈಲ್ವೆ ನಿಲ್ದಾಣದ ಕ್ಯಾಂಟೀನ್‌ಗಳು, ಪ್ಯಾಂಟ್ರಿ ಕಾರ್‌ಗಳು ಮತ್ತು ಹೋಟೆಲ್‌ಗಳನ್ನು ಪರಿಶೀಲಿಸಲು ಬೃಹತ್ ತಪಾಸಣಾ ಅಭಿಯಾನ ಹಮ್ಮಿಕೊಳ್ಳಲಾಯಿತು. ರಾಜ್ಯಾದ್ಯಂತ ಒಟ್ಟು 36 ಪ್ರಮುಖ ರೈಲ್ವೆ ನಿಲ್ದಾಣಗಳನ್ನು ಗುರಿಯಾಗಿಟ್ಟುಕೊಂಡು, ಸುಮಾರು 112 ಆಹಾರ ಉದ್ದಿಮೆಗಳನ್ನು ತಪಾಸಣೆಗೊಳಪಡಿಸಲಾಯಿತು. ಇದರಲ್ಲಿ ಬೆಂಗಳೂರಿನ ಕೆಎಸ್‌ಆರ್, ಯಶವಂತಪುರ, ಕೆ.ಆರ್. ಪುರಂ, ಮೈಸೂರು, ಹುಬ್ಬಳ್ಳಿ, ಮಂಗಳೂರು, ಹಾವೇರಿ, ಬಳ್ಳಾರಿ, ದಾವಣಗೆರೆ, ಬಾಗಲಕೋಟೆ, ಕಾರವಾರ, ಯಾದಗಿರಿ, ಗದಗ ಸೇರಿದಂತೆ ಹಲವು ಪ್ರಮುಖ ಜಂಕ್ಷನ್‌ಗಳು ಸೇರಿವೆ.

ಮಂಗಳೂರು-ಕೇರಳ ಮತ್ತು ಹುಬ್ಬಳ್ಳಿ-ಬೆಂಗಳೂರು ನಡುವಿನ 'ವಂದೇ ಭಾರತ್' ರೈಲುಗಳ ಪ್ಯಾಂಟ್ರಿ ಕಾರ್‌ಗಳನ್ನು ತಪಾಸಣೆ ನಡೆಸಿದಾಗ, ಅಲ್ಲಿ ಸ್ವಚ್ಛತೆ ಮತ್ತು ನೈರ್ಮಲ್ಯವನ್ನು ಹೆಚ್ಚಿನ ಮಟ್ಟದಲ್ಲಿ ಕಾಯ್ದುಕೊಳ್ಳಲಾಗಿದೆ ಎಂಬ ಸಮಾಧಾನಕರ ವಿಷಯವೂ ಬೆಳಕಿಗೆ ಬಂದಿದೆ. ಇದು ರೈಲ್ವೆ ಇಲಾಖೆಯು ಇತರೆ ಸಾಮಾನ್ಯ ರೈಲುಗಳಿಗೂ ಮಾದರಿಯಾಗಬೇಕಾದ ಅಗತ್ಯವನ್ನು ತೋರಿಸಿಕೊಟ್ಟಿದೆ. ತಪಾಸಣೆಯ ಸಂದರ್ಭದಲ್ಲಿ ಕಂಡುಬಂದ ದೃಶ್ಯಗಳು ಪ್ರಯಾಣಿಕರ ಆರೋಗ್ಯದ ಕುರಿತು ಗಂಭೀರ ಆತಂಕವನ್ನು ಹುಟ್ಟುಹಾಕಿವೆ. ಕೆ.ಆರ್. ಪುರಂ ರೈಲ್ವೆ ನಿಲ್ದಾಣದ ಹೋಟೆಲ್‌ಗಳಲ್ಲಿ ಅತ್ಯಂತ ಅನೈರ್ಮಲ್ಯ ಪರಿಸ್ಥಿತಿ ಕಂಡುಬಂದಿದೆ. ಚಟ್ನಿಯನ್ನು ಆಹಾರ ಸಂಗ್ರಹಣೆಗೆ ಸೂಕ್ತವಲ್ಲದ ಪ್ಲಾಸ್ಟಿಕ್ ಬಕೆಟ್‌ಗಳಲ್ಲಿ ಸಂಗ್ರಹಿಸಲಾಗಿತ್ತು. ಸಮೋಸಾಗಳನ್ನು ಕಾರ್ಡ್‌ಬೋರ್ಡ್ ಬಾಕ್ಸ್‌ಗಳಲ್ಲಿ ಇಟ್ಟಿದ್ದರೆ, ಬಿಸಿ ಬಿಸಿ ವಡೆಗಳನ್ನು ನೇರವಾಗಿ ವಾರ್ತಾಪತ್ರಿಕೆಗಳ ಮೇಲೆ ಇಟ್ಟು ಮಾರಾಟ ಮಾಡುತ್ತಿರುವುದು ಕಂಡುಬಂದಿದೆ.

Read More
Next Story