
ನೈರುತ್ಯ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದಾರೆ.
Narayana Gowda | ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣನೆ: ಕರವೇ ಅಧ್ಯಕ್ಷ ನಾರಾಯಣಗೌಡ ಆಕ್ರೋಶ
ನೈರುತ್ಯ ರೈಲ್ವೆ ಪರೀಕ್ಷೆಯಲ್ಲಿ ಕನ್ನಡ ಕಡೆಗಣಿಸಿರುವುದಕ್ಕೆ ಕರವೇ ಅಧ್ಯಕ್ಷ ಟಿ.ಎ.ನಾರಾಯಣಗೌಡ ಆಕ್ರೋಶ ವ್ಯಕ್ತಪಡಿಸಿದ್ದು, ಕೂಡಲೇ ಸರಿಪಡಿಸದಿದ್ದರೆ ರೈಲು ತಡೆ ಹೋರಾಟದ ಎಚ್ಚರಿಕೆ ನೀಡಿದ್ದಾರೆ.
ನೈರುತ್ಯ ರೈಲ್ವೆಯ ಹುಬ್ಬಳ್ಳಿ ವಿಭಾಗವು ಆಫೀಸ್ ಸೂಪರಿಂಟೆಂಡೆಂಟ್, ಸೀನಿಯರ್ ಕ್ಲಾರ್ಕ್ ಮತ್ತು ಇಂಟರ್ಮೀಡಿಯಟ್ ಅಪ್ರೆಂಟಿಸ್ ಮೆಕಾನಿಕ್ಸ್ ಹುದ್ದೆಗಳ ಪದೋನ್ನತಿಗಾಗಿ ನಡೆಸುವ ಎಲ್ಡಿಸಿಇ ಪರೀಕ್ಷೆಗಳಲ್ಲಿ ಕೇವಲ ಇಂಗ್ಲಿಷ್ ಮತ್ತು ಹಿಂದಿ ಭಾಷೆಗಳಿಗೆ ಮಾತ್ರ ಅವಕಾಶ ನೀಡಿರುವುದಕ್ಕೆ ಕರ್ನಾಟಕ ರಕ್ಷಣಾ ವೇದಿಕೆಯ ರಾಜ್ಯಾಧ್ಯಕ್ಷರಾದ ಟಿ.ಎ. ನಾರಾಯಣಗೌಡ ಅವರು ತೀವ್ರ ಆಕ್ರೋಶ ವ್ಯಕ್ತಪಡಿಸಿದ್ದಾರೆ.
ಈ ಕುರಿತು ಸಾಮಾಜಿಕ ಜಾಲತಾಣಗಳಲ್ಲಿ ಅಸಮಾಧಾನ ಹೊರಹಾಕಿರುವ ಅವರು, ಕರ್ನಾಟಕದ ಮಣ್ಣಿನಲ್ಲಿ ಕನ್ನಡಕ್ಕೆ ಸ್ಥಾನ ನೀಡದಿರುವುದು ಕನ್ನಡಿಗರ ಅಸ್ಮಿತೆಯ ಮೇಲಿನ ದಾಳಿ ಮತ್ತು ಭಾಷಾ ಹಕ್ಕುಗಳ ಉಲ್ಲಂಘನೆ ಎಂದು ಬಣ್ಣಿಸಿದ್ದಾರೆ. ಹುಬ್ಬಳ್ಳಿ ವಿಭಾಗದ ಒಟ್ಟು 73 ಹುದ್ದೆಗಳಿಗೆ ನಡೆಯುತ್ತಿರುವ ಈ ಪರೀಕ್ಷೆಯ ನೋಟಿಫಿಕೇಶನ್‌ನಲ್ಲಿ ಕನ್ನಡವನ್ನು ಉಲ್ಲೇಖಿಸದಿರುವುದು ಕನ್ನಡಿಗ ಉದ್ಯೋಗಿಗಳಿಗೆ ಮಾಡುತ್ತಿರುವ ದ್ರೋಹವಾಗಿದೆ ಎಂದು ಅವರು ಕಿಡಿಕಾರಿದ್ದಾರೆ.
ಹಲವು ರೈಲ್ವೆ ಉದ್ಯೋಗಿಗಳು ಗ್ರಾಮೀಣ ಹಿನ್ನೆಲೆಯಿಂದ ಬಂದವರಾಗಿದ್ದು, ಕನ್ನಡ ಮಾಧ್ಯಮದಲ್ಲಿ ಶಿಕ್ಷಣ ಪಡೆದಿದ್ದಾರೆ. ಅಂತಹವರಿಗೆ ಇಂಗ್ಲಿಷ್ ಅಥವಾ ಹಿಂದಿಯಲ್ಲಿ ಪರೀಕ್ಷೆ ಬರೆಯುವುದು ಕಷ್ಟಕರವಾಗುತ್ತದೆ. ಇದು ಕನ್ನಡಿಗರ ಉದ್ಯೋಗಾವಕಾಶಗಳನ್ನು ತಪ್ಪಿಸಿ, ಅನ್ಯ ರಾಜ್ಯದವರಿಗೆ ಅವಕಾಶ ಮಾಡಿಕೊಡುವ ಪಿತೂರಿಯಾಗಿದೆ ಎಂದು ನಾರಾಯಣಗೌಡ ಆರೋಪಿಸಿದ್ದಾರೆ.
ರೈಲ್ವೆ ಇಲಾಖೆಯು ತಕ್ಷಣವೇ ತನ್ನ ತಪ್ಪನ್ನು ತಿದ್ದಿಕೊಂಡು ಕನ್ನಡದಲ್ಲೂ ಪರೀಕ್ಷೆ ಬರೆಯಲು ಅವಕಾಶ ನೀಡಬೇಕು. ಇಲ್ಲವಾದಲ್ಲಿ ಕರ್ನಾಟಕ ರಕ್ಷಣಾ ವೇದಿಕೆಯು ರಾಜ್ಯಾದ್ಯಂತ ರೈಲು ಸಂಚಾರ ಸ್ಥಗಿತಗೊಳಿಸುವಂತಹ ತೀವ್ರ ಸ್ವರೂಪದ ಹೋರಾಟವನ್ನು ಕೈಗೊಳ್ಳಲಿದೆ ಎಂದು ಅವರು ಎಚ್ಚರಿಸಿದ್ದಾರೆ.
ಅಲ್ಲದೆ, ಈ ವಿಚಾರದಲ್ಲಿ ರಾಜ್ಯ ಸರ್ಕಾರ ಮೌನವಾಗಿರುವುದನ್ನು ಖಂಡಿಸಿರುವ ಅವರು, ಮುಖ್ಯಮಂತ್ರಿ ಸಿದ್ದರಾಮಯ್ಯ, ಗೃಹ ಸಚಿವ ಜಿ. ಪರಮೇಶ್ವರ್ ಹಾಗೂ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ. ಸೋಮಣ್ಣ ಅವರು ಕೂಡಲೇ ಮಧ್ಯಪ್ರವೇಶಿಸಿ ಕನ್ನಡಿಗರಿಗೆ ನ್ಯಾಯ ಒದಗಿಸಬೇಕು ಎಂದು ಒತ್ತಾಯಿಸಿದ್ದಾರೆ. ಇಲಾಖೆಯು ಕನ್ನಡವನ್ನು ಒಳಗೊಂಡ ತ್ರಿಭಾಷಾ ಸೂತ್ರವನ್ನು ಪರೀಕ್ಷೆಗಳಲ್ಲಿ ಅಳವಡಿಸದಿದ್ದರೆ ನಿರ್ಣಾಯಕ ಹೋರಾಟ ಅನಿವಾರ್ಯವಾಗಲಿದೆ ಎಂದು ನಾರಾಯಣಗೌಡ ಪ್ರಕಟಣೆಯಲ್ಲಿ ತಿಳಿಸಿದ್ದಾರೆ.

