ದಕ್ಷಿಣ ಪಿನಾಕಿನಿ ನದಿ: ಕರ್ನಾಟಕ-ತಮಿಳುನಾಡು ನಡುವಿನ ಕಾನೂನು ಸಮರಕ್ಕೆ ಇಂದು ಸುಪ್ರೀಂ ತೀರ್ಪು
x
ದಕ್ಷಿಣ ಪಿನಾಕಿನಿ ನದಿ

ದಕ್ಷಿಣ ಪಿನಾಕಿನಿ ನದಿ: ಕರ್ನಾಟಕ-ತಮಿಳುನಾಡು ನಡುವಿನ ಕಾನೂನು ಸಮರಕ್ಕೆ ಇಂದು ಸುಪ್ರೀಂ ತೀರ್ಪು

ಕರ್ನಾಟಕ ಮತ್ತು ತಮಿಳುನಾಡು ನಡುವಿನ ದಕ್ಷಿಣ ಪಿನಾಕಿನಿ (ಪೆನ್ನಾರ್) ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಮಹತ್ವದ ತೀರ್ಪು ನೀಡಲಿದೆ.


ಕರ್ನಾಟಕ ಮತ್ತು ತಮಿಳುನಾಡು ನಡುವಿನ ಬಹುದಿನಗಳ ಪೆನ್ನಾರ್ (ದಕ್ಷಿಣ ಪಿನಾಕಿನಿ) ನದಿ ನೀರು ಹಂಚಿಕೆ ವಿವಾದಕ್ಕೆ ಸಂಬಂಧಿಸಿದಂತೆ ಸುಪ್ರೀಂ ಕೋರ್ಟ್ ಇಂದು ಅತ್ಯಂತ ಮಹತ್ವದ ತೀರ್ಪನ್ನು ಪ್ರಕಟಿಸಲಿದೆ. ಅಣೆಕಟ್ಟು ನಿರ್ಮಾಣ ಮತ್ತು ನೀರು ಹರಿಸುವ ಯೋಜನೆಗಳ ವಿಚಾರದಲ್ಲಿ ತಮಿಳುನಾಡು ಸರ್ಕಾರ ಸಲ್ಲಿಸಿದ್ದ ಅರ್ಜಿಯ ಭವಿಷ್ಯ ಇಂದು ನಿರ್ಧಾರವಾಗಲಿದೆ.

ವಿವಾದದ ಹಿನ್ನೆಲೆ ಏನು?

ಕರ್ನಾಟಕ ಸರ್ಕಾರವು ದಕ್ಷಿಣ ಪಿನಾಕಿನಿ ನದಿಯ ಕಣಿವೆಯಲ್ಲಿ ಮಾರ್ಕಂಡೇಯ ನದಿಗೆ ಅಡ್ಡಲಾಗಿ ಅಣೆಕಟ್ಟು ನಿರ್ಮಿಸಿರುವುದಕ್ಕೆ ತಮಿಳುನಾಡು ತೀವ್ರ ವಿರೋಧ ವ್ಯಕ್ತಪಡಿಸಿದೆ. ಇದರೊಂದಿಗೆ ಬೆಂಗಳೂರಿನ ಎಲೆ ಮಲ್ಲಪ್ಪಚೆಟ್ಟಿ ಕೆರೆಯಿಂದ ಹೊಸಕೋಟೆಯವರೆಗೆ ನೀರು ಹರಿಸುವ ಯೋಜನೆ ಮತ್ತು ಬ್ಯಾಲಹಳ್ಳಿ ಗ್ರಾಮದ ಹತ್ತಿರ ಪೆನ್ನಾರ್ ನದಿಯಿಂದ ನೀರು ಹರಿಸುವ ಕಾಮಗಾರಿಗಳು ವಿವಾದದ ಕೇಂದ್ರಬಿಂದುವಾಗಿವೆ. ತಮ್ಮ ರಾಜ್ಯದ ರೈತರ ಹಿತಾಸಕ್ತಿಗೆ ಧಕ್ಕೆಯಾಗುತ್ತದೆ ಎಂದು ವಾದಿಸಿರುವ ತಮಿಳುನಾಡು ಸರ್ಕಾರ, 2018ರ ಮೇ 18ರಂದು ಮೊದಲ ಬಾರಿಗೆ ಸುಪ್ರೀಂ ಕೋರ್ಟ್ ಮೆಟ್ಟಿಲೇರಿತ್ತು.

ನ್ಯಾಯಮಂಡಳಿ ಸ್ಥಾಪನೆಗೆ ಒತ್ತಾಯ

ಈ ವಿವಾದವನ್ನು ಬಗೆಹರಿಸಲು ಪ್ರತ್ಯೇಕ ಜಲವಿವಾದ ನ್ಯಾಯಮಂಡಳಿ ಸ್ಥಾಪಿಸಬೇಕೆಂಬುದು ತಮಿಳುನಾಡಿನ ಪ್ರಮುಖ ಬೇಡಿಕೆಯಾಗಿದೆ. ಈ ಕುರಿತು 2019ರಲ್ಲಿ ಕೇಂದ್ರ ಸರ್ಕಾರಕ್ಕೆ ಮನವಿ ಮಾಡಲಾಗಿತ್ತು. 2020ರಲ್ಲಿ ಕೇಂದ್ರ ಜಲಶಕ್ತಿ ಸಚಿವಾಲಯವು ಎರಡೂ ರಾಜ್ಯಗಳ ನಡುವೆ ಸಂಧಾನ ಸಭೆ ನಡೆಸಿದರೂ, ಯಾವುದೇ ಒಮ್ಮತ ಮೂಡಿರಲಿಲ್ಲ. ಅಂತಿಮವಾಗಿ ಸುಪ್ರೀಂ ಕೋರ್ಟ್ ಈ ಪ್ರಕರಣದ ಸುದೀರ್ಘ ವಿಚಾರಣೆ ನಡೆಸಿ ತೀರ್ಪನ್ನು ಕಾಯ್ದಿರಿಸಿತ್ತು.


ದಕ್ಷಿಣ ಪಿನಾಕಿನಿ ನದಿ ಹರಿಯುವ ನಕ್ಷೆ

ತಮಿಳುನಾಡು ತಗಾದೆ ಏನು?

ದಕ್ಷಿಣ ಪಿನಾಕಿನಿ ನದಿ ಕಣಿವೆಯಲ್ಲಿ ಕರ್ನಾಟಕವು ಮಾರ್ಕಂಡೇಯ ನದಿಗೆ ಅಡ್ಡಲಾಗಿ ಚೆಕ್ ಡ್ಯಾಂ ನಿರ್ಮಿಸಿದೆ. ಬೆಂಗಳೂರಿನ ಎಲೆಮಲ್ಲಪ್ಪ ಚೆಟ್ಟಿ ಕೆರೆಯಿಂದ ಹೊಸಕೋಟೆವರೆಗೆ ನೀರು ಹರಿಸುವ ಕಾಮಗಾರಿ, ಬ್ಯಾಲಹಳ್ಳಿ ಗ್ರಾಮದ ಸಮೀಪ ಪೊನ್ನೆಯರ್ ನದಿಯಿಂದ ನೀರು ಹರಿಸುವ ಕಾಮಗಾರಿಗೆ ತಮಿಳುನಾಡು ತೀವ್ರ ಆಕ್ಷೇಪ ವ್ಯಕ್ತಪಡಿಸಿದೆ.

ಜಲಾಶಯ ನಿರ್ಮಾಣಕ್ಕೆ ಅನುಮತಿ ನೀಡಿದ ಕೇಂದ್ರ ಸರ್ಕಾರ ಹಾಗೂ ಜಲಾಶಯ ನಿರ್ಮಿಸಿದ ರಾಜ್ಯ ಸರ್ಕಾರದ ವಿರುದ್ಧ 2018 ರಲ್ಲಿ ತಮಿಳುನಾಡು ಸುಪ್ರೀಂಕೋರ್ಟ್‌ನಲ್ಲಿ ದಾವೆ ಹೂಡಿತ್ತು. 2019 ನ.30ರಲ್ಲಿ ಮತ್ತೊಂದು ಅರ್ಜಿ ಸಲ್ಲಿಸಿ ದಕ್ಷಿಣ ಪಿನಾಕಿನಿಯು ಎರಡೂ ರಾಜ್ಯಗಳಿಗೆ ಸಂಬಂಧಿಸಿರುವ ಕಾರಣ ನದಿ ನೀರು ಹಂಚಿಕೆಗೆ ನ್ಯಾಯಾಧೀಕರಣ ಸ್ಥಾಪಿಸಬೇಕು ಎಂದು ಮನವಿ ಮಾಡಿತ್ತು. ಆಗ ಮಧ್ಯಪ್ರವೇಶಿಸಿದ್ದ ಕೇಂದ್ರ ಸರ್ಕಾರವು ಸುಪ್ರೀಂಕೋರ್ಟ್‌ಗೆ ಅಫಿಡೆವಿಟ್ ಸಲ್ಲಿಸಿ, ವಿವಾದವನ್ನು ಇತ್ಯರ್ಥಪಡಿಸಲು ಸಂಧಾನ ಸಮಿತಿ ರಚಿಸುವುದಾಗಿ ಹೇಳಿತ್ತು.

ನೀರಿನ ಬಳಕೆಯಲ್ಲಿ ತಮಿಳುನಾಡಿನದ್ದೇ ಸಿಂಹಪಾಲು

ತಮಿಳುನಾಡಿನಲ್ಲಿ ಪೊನ್ನೆಯರ್ ನದಿಯು ಕಾವೇರಿ ನಂತರದ ಎರಡನೇ ಅತಿ ಉದ್ದದ ನದಿಯಾಗಿದೆ. ಹೊಸೂರು ಸಮೀಪ ಕೆಲವರಪಲ್ಲಿ ಮತ್ತು ಕೃಷ್ಣಗಿರಿ ಎಂಬಲ್ಲಿ ಪೊನ್ನೆಯರ್ ನದಿಗೆ ಅಡ್ಡಲಾಗಿ ಸಣ್ಣ ಅಣೆಕಟ್ಟುಗಳನ್ನು ನಿರ್ಮಿಸಿದೆ. ತಿರುವಣ್ಣಾಮಲೈ ಸಮೀಪ 7.3 ಟಿಎಂಸಿ ಎಫ್‌ಟಿ ಸಾಮರ್ಥ್ಯದ ಸಾತನೂರ್ ಅಣೆಕಟ್ಟು ನಿರ್ಮಿಸಿದೆ. ಅಲ್ಲದೇ ಸುಮಾರು 20ಸಾವಿರಕ್ಕೂ ಹೆಚ್ಚು ಚ.ಕಿ.ಮೀ. ಜಲಾನಯನ ಪ್ರದೇಶ ಹೊಂದಿದೆ.

ಕಲುಷಿತಗೊಂಡಿರುವ ನದಿ ಕಣಿವೆ

ದಕ್ಷಿಣ ಪಿನಾಕಿನಿ ಜಲಾನಯನ ಪ್ರದೇಶದ ವ್ಯಾಪ್ತಿಯಲ್ಲೇ ಬೆಂಗಳೂರಿನ ಬೆಳ್ಳಂದೂರು, ವರ್ತೂರು ಕೆರೆಗಳಿದ್ದು, ಸಂಪೂರ್ಣ ಕಲುಷಿತವಾಗಿದೆ. ಕೈಗಾರಿಕೆಗಳು ಹೊರಬಿಡುವ ವಿಷಕಾರಿ ತ್ಯಾಜ್ಯ ಕೆರೆಗಳಿಗೆ ಸೇರುತ್ತಿದೆ. ಒಳ ಚರಂಡಿ ನೀರೂ ಸೇರಿ ಇಡೀ ದಕ್ಷಿಣ ಪಿನಾಕಿನಿಯ ಒಡಲು ಹಾಳಾಗಿದೆ. ಕರ್ನಾಟಕ ಮಾತ್ರವಲ್ಲದೇ ಹೊಸೂರು ಮತ್ತು ಚೆಂಗಂ ಕೈಗಾರಿಕಾ ಪ್ರದೇಶದ ತ್ಯಾಜ್ಯ ನೀರು ಕೂಡ ನದಿಯನ್ನು ಸಂಪೂರ್ಣ ಕಲುಷಿತಗೊಳಿಸಿದೆ.

ದಕ್ಷಿಣ ಪಿನಾಕಿನಿ ಹಾದಿ ಯಾವುದು?

ದಕ್ಷಿಣ ಪಿನಾಕಿನಿ ನದಿಯು ಹೊಸಕೋಟೆ, ಕಾಡುಗೋಡಿ, ಬೆಳ್ಳಂದೂರು, ವರ್ತೂರು, ಬಾಗಲೂರು ಮೂಲಕ ತಮಿಳುನಾಡಿನ ಹೊಸೂರು ಸಮೀಪ ಕೆಳವಾರಿಪಲ್ಲಿ ಜಲಾಶಯಕ್ಕೆ ಹರಿಯುತ್ತದೆ. ಅಲ್ಲಿಂದ ಕೃಷ್ಣಗಿರಿ ಡ್ಯಾಂ, ಕಾವೇರಿ ಪಟ್ಟಣಂ, ಸಾತನೂರು ಡ್ಯಾಂ, ಮುಡಿಯನೂರು ಮೂಲಕ ಕಡಲೂರು ಬೀಚ್‌ನಲ್ಲಿ ಬಂಗಾಳ ಕೊಲ್ಲಿ ಸೇರುತ್ತದೆ.
ದಕ್ಷಿಣ ಪಿನಾಕಿನಿ ನದಿಯು ಬೆಂಗಳೂರು ಗ್ರಾಮಾಂತರ, ಚಿಕ್ಕಬಳ್ಳಾಪುರ ಹಾಗೂ ಕೋಲಾರ ಜಿಲ್ಲೆಗಳಲ್ಲಿ ಸಾವಿರಾರು ಕೆರೆಗಳಿಗೆ ಜಲಮೂಲವಾಗಿದೆ. ಮಾರ್ಕಂಡೇಯ ನದಿ, ಯರಗೋಳ, ಕುಶಾವತಿ ಉಪನದಿಗಳು ಕೂಡ ಕೆರೆ ಕುಂಟೆಗಳನ್ನು ಒಳಗೊಂಡಿವೆ.

ಜಲಾಶಯ ನಿರ್ಮಾಣಕ್ಕೆ ಕೇಂದ್ರವೇ ನೀಡಿತ್ತು ಒಪ್ಪಿಗೆ

ಕೋಲಾರದ ಯರಗೋಳದಲ್ಲಿ ಚೆಕ್ ಡ್ಯಾಂ ನಿರ್ಮಿಸಲು ಕೇಂದ್ರ ಜಲಶಕ್ತಿ ಸಚಿವಾಲಯದ ಅನುಮೋದನೆ ನೀಡಿತ್ತು. ಅದರಂತೆ ಕರ್ನಾಟಕ ಸರ್ಕಾರವು 240 ಕೋಟಿ ರೂ. ವೆಚ್ಚದಲ್ಲಿ ಜಲಾಶಯ ನಿರ್ಮಿಸಿದ್ದು, ಮಳೆಗಾಲದಲ್ಲಿ ಮಾತ್ರ ಮೈ ದುಂಬಿ ಹರಿಯುತ್ತದೆ. ಯರಗೋಳ ಜಲಾಶಯವನ್ನು ಸಂಪೂರ್ಣ ಕುಡಿಯುವ ನೀರಿನ ಉದ್ದೇಶಕ್ಕಾಗಿ ಮೀಸಲಿರಿಸಲಾಗಿದೆ.

ದಕ್ಷಿಣ ಪಿನಾಕಿನಿ ನದಿ ವಿವಾದ ಏರ್ಪಟ್ಟ ನಂತರ ಸಂಧಾನ ಮಾತುಕತೆಗೆ ನೇಮಿಸಿದ್ದ ಸಮಿತಿ ತಮಿಳುನಾಡಿಗೆ ಪ್ರತಿ ವರ್ಷ 10 ಟಿಎಂಸಿ ನೀರು ಬಿಡುವಂತೆ ಕರ್ನಾಟಕಕ್ಕೆ ಸೂಚಿಸಿತ್ತು. ಆದರೆ, ಕರ್ನಾಟಕ 7.5 ಟಿಎಂಸಿ ನೀರು ಹರಿಸುವುದಾಗಿ ಹೇಳಿತ್ತು. ಕರ್ನಾಟಕದ ಮನವಿ ತಿರಸ್ಕರಿಸಿದ ತಮಿಳುನಾಡು ಸುಪ್ರೀಂಕೋರ್ಟ್‌ ನಲ್ಲಿ ದಾವೆ ಹೂಡಿ, ನ್ಯಾಯಮಂಡಳಿ ಸ್ಥಾಪಿಸುವಂತೆ ಒತ್ತಾಯಿಸಿತ್ತು.

Read More
Next Story