ತಂತ್ರಜ್ಞಾನ, ಎಐ ಮತ್ತು ಆಹಾರ ಸಂಸ್ಕರಣೆ: ಕರ್ನಾಟಕ-ಕೊರಿಯಾ ನಡುವೆ ಹೊಸ ಮೈತ್ರಿ
x

ತಂತ್ರಜ್ಞಾನ, ಎಐ ಮತ್ತು ಆಹಾರ ಸಂಸ್ಕರಣೆ: ಕರ್ನಾಟಕ-ಕೊರಿಯಾ ನಡುವೆ ಹೊಸ ಮೈತ್ರಿ

ಐಟಿ-ಬಿಟಿ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ದಕ್ಷಿಣ ಕೊರಿಯಾದ ಉನ್ನತ ಮಟ್ಟದ ನಿಯೋಗವು, ರಾಜ್ಯದೊಂದಿಗೆ ಕಾರ್ಯತಂತ್ರದ ಮೈತ್ರಿ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಿದೆ.


Click the Play button to hear this message in audio format

ರಾಜ್ಯದ ತಾಂತ್ರಿಕ ಸಾಮರ್ಥ್ಯ ಮತ್ತು ನವೋದ್ಯಮ ವಾತಾವರಣದಿಂದ ಪ್ರಭಾವಿತರಾಗಿರುವ ದಕ್ಷಿಣ ಕೊರಿಯಾದ ಪ್ರಮುಖ ಬಂಡವಾಳ ಹೂಡಿಕೆ ಸಂಸ್ಥೆಗಳ ಪ್ರತಿನಿಧಿಗಳು, ರಾಜ್ಯದಲ್ಲಿ ಹೂಡಿಕೆಯನ್ನು ವಿಸ್ತರಿಸಲು ಮುಂದಾಗಿದ್ದಾರೆ. ವಿಕಾಸಸೌಧದಲ್ಲಿ ಮಾಹಿತಿ ತಂತ್ರಜ್ಞಾನ ಮತ್ತು ಜೈವಿಕ ತಂತ್ರಜ್ಞಾನ ಸಚಿವ ಪ್ರಿಯಾಂಕ್ ಖರ್ಗೆ ಅವರನ್ನು ಭೇಟಿ ಮಾಡಿದ ದಕ್ಷಿಣ ಕೊರಿಯಾದ ಉನ್ನತ ಮಟ್ಟದ ನಿಯೋಗವು, ರಾಜ್ಯದೊಂದಿಗೆ ಕಾರ್ಯತಂತ್ರದ ಮೈತ್ರಿ ಮಾಡಿಕೊಳ್ಳುವ ಕುರಿತು ಸಮಾಲೋಚನೆ ನಡೆಸಿದೆ.

ಈ ನಿಯೋಗದಲ್ಲಿ ದಕ್ಷಿಣ ಕೊರಿಯಾದ ಹೆಸರಾಂತ ಬಂಡವಾಳ ಹೂಡಿಕೆ ಹಾಗೂ ಉದ್ಯಮ ವಿಸ್ತರಣಾ ಸಂಸ್ಥೆಗಳಾದ ಡಿಎಸ್‌ಸಿ ಇನ್ವೆಸ್ಟ್‌ಮೆಂಟ್, ಜಿಎಸ್ ವೆಂಚರ್ಸ್, ಸಿಜೆ ಇನ್ವೆಸ್ಟ್‌ಮೆಂಟ್, ಕ್ಯಾಪ್‌ಸ್ಟೋನ್ ಪಾರ್ಟ್ನರ್ಸ್ , ಸಿಜೆ ಚೆಲ್‌ಜೆಡಾಂಗ್ ಮತ್ತು ಗೋ ಪಿಜ್ಜಾ ಸಂಸ್ಥೆಗಳ ಹಿರಿಯ ಮುಖ್ಯಸ್ಥರು ಭಾಗವಹಿಸಿದ್ದರು. ಈ ಸಂಸ್ಥೆಗಳು ಜಾಗತಿಕ ಮಟ್ಟದಲ್ಲಿ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣಾ ವಲಯದಲ್ಲಿ ಪ್ರಭಾವಶಾಲಿಯಾಗಿವೆ.

ಚರ್ಚಿಸಲಾದ ಪ್ರಮುಖ ಕ್ಷೇತ್ರಗಳು

ರಾಜ್ಯದ ತಾಂತ್ರಿಕ ಬೆಳವಣಿಗೆಗೆ ಪೂರಕವಾಗಿರುವ ವಿವಿಧ ಉದಯೋನ್ಮುಖ ಕ್ಷೇತ್ರಗಳಲ್ಲಿ ಬಂಡವಾಳ ಹೂಡಿಕೆ ಮಾಡುವ ಕುರಿತು ಸಭೆಯಲ್ಲಿ ಸುದೀರ್ಘ ಚರ್ಚೆ ನಡೆಯಿತು. ಕೃತಕ ಬುದ್ಧಿಮತ್ತೆ ಮತ್ತು ಡೀಪ್ ಟೆಕ್ ಕ್ಷೇತ್ರಗಳಲ್ಲಿ ಕರ್ನಾಟಕದ ನವೋದ್ಯಮಗಳ ಜೊತೆ ತಂತ್ರಜ್ಞಾನ ಹಂಚಿಕೆ, ವಿಮಾನಯಾನ ಮತ್ತು ಬಾಹ್ಯಾಕಾಶ ಕ್ಷೇತ್ರಗಳಲ್ಲಿ ಸಹಭಾಗಿತ್ವ, ವಿದ್ಯುನ್ಮಾನ ಉತ್ಪಾದನೆಯಲ್ಲಿ ಕೊರಿಯಾದ ಪರಿಣತಿಯನ್ನು ಕರ್ನಾಟಕಕ್ಕೆ ತರುವ ಪ್ರಯತ್ನ, ಹವಾಮಾನ ಬದಲಾವಣೆಯನ್ನು ಎದುರಿಸಲು ಅಗತ್ಯವಿರುವ ತಂತ್ರಜ್ಞಾನ ಮತ್ತು ಆಹಾರ ಸಂಸ್ಕರಣೆಯಲ್ಲಿ ನಾವೀನ್ಯತೆ ಕ್ಷೇತ್ರಗಳಲ್ಲಿನ ಹೂಡಿಕೆ ಸಂಬಂಧ ಚರ್ಚೆ ನಡೆಸಲಾಯಿತು. ಪ್ರಮುಖವಾಗಿ ಸಿಜೆ ಚೆಲ್‌ಜೆಡಾಂಗ್ ಸಂಸ್ಥೆಯೊಂದಿಗೆ ಆಹಾರ ನಾವೀನ್ಯತೆ, ಹುದುಗಿಸುವಿಕೆ ತಂತ್ರಜ್ಞಾನ , ಪೌಷ್ಟಿಕಾಂಶ ಮತ್ತು ಕೃಷಿ ತಂತ್ರಜ್ಞಾನದ ಕುರಿತು ವಿಶೇಷ ಒತ್ತು ನೀಡಲಾಯಿತು. ಈ ಕ್ಷೇತ್ರದಲ್ಲಿ ಸಂಶೋಧನೆ ಮತ್ತು ಅಭಿವೃದ್ಧಿ ಕೇಂದ್ರಗಳನ್ನು ರಾಜ್ಯದಲ್ಲಿ ಸ್ಥಾಪಿಸುವ ಸಾಧ್ಯತೆಗಳನ್ನು ಸಚಿವರು ಪರಿಶೀಲಿಸಿದರು.

ನವೋದ್ಯಮಗಳಿಗೆ ಅಂತಾರಾಷ್ಟ್ರೀಯ ವೇದಿಕೆ

ರಾಜ್ಯದ ನವೋದ್ಯಮಗಳಿಗೆ ಕೊರಿಯಾದ ಮಾರುಕಟ್ಟೆಯಲ್ಲಿ ಅವಕಾಶ ಕಲ್ಪಿಸುವುದು ಮತ್ತು ಕೊರಿಯಾದ ಹೂಡಿಕೆದಾರರಿಗೆ ಕರ್ನಾಟಕದ ಸ್ಟಾರ್ಟ್-ಅಪ್‌ಗಳ ಜೊತೆ ನೇರ ಸಂಪರ್ಕ ಕಲ್ಪಿಸುವುದು ಈ ಸಭೆಯ ಮುಖ್ಯ ಉದ್ದೇಶವಾಗಿದೆ. ಇದು ಕೇವಲ ಬಂಡವಾಳ ಹೂಡಿಕೆಯಲ್ಲದೆ, ಉಭಯ ದೇಶಗಳ ನಡುವಿನ ತಂತ್ರಜ್ಞಾನ ವರ್ಗಾವಣೆಗೂ ದಾರಿ ಮಾಡಿಕೊಡಲಿದೆ. ಮುಂಬರುವ ಬೆಂಗಳೂರು ತಂತ್ರಜ್ಞಾನ ಶೃಂಗಸಭೆಯನ್ನು ಜಾಗತಿಕ ವೇದಿಕೆಯಾಗಿ ಬಳಸಿಕೊಳ್ಳುವ ಕುರಿತು ಸಚಿವರು ಆಹ್ವಾನ ನೀಡಿದರು. ಈ ಶೃಂಗಸಭೆಯಲ್ಲಿ ಹೆಚ್ಚಿನ ಸಂಖ್ಯೆಯಲ್ಲಿ ಕೊರಿಯಾದ ಹೂಡಿಕೆದಾರರು, ಸ್ಟಾರ್ಟ್-ಅಪ್‌ಗಳು ಭಾಗವಹಿಸುವುದು ಮತ್ತು ವಿಶೇಷ ಉದ್ಯಮ-ಉದ್ಯಮ ಸಂವಾದಗಳನ್ನು ಆಯೋಜಿಸುವ ಮೂಲಕ ತಂತ್ರಜ್ಞಾನ ಪ್ರದರ್ಶನವನ್ನು ಹೆಚ್ಚಿಸುವ ಬಗ್ಗೆ ಚರ್ಚಿಸಲಾಯಿತು.

ಸಚಿವ ಪ್ರಿಯಾಂಕ್ ಖರ್ಗೆ ಸಭೆಯ ಬಳಿಕ ಮಾತನಾಡಿ, "ಕರ್ನಾಟಕವು ಈಗಾಗಲೇ ಜಾಗತಿಕ ನಾವೀನ್ಯತಾ ಕೇಂದ್ರವಾಗಿ ಗುರುತಿಸಿಕೊಂಡಿದೆ. ದಕ್ಷಿಣ ಕೊರಿಯಾದ ಹೂಡಿಕೆದಾರರು ನಮ್ಮ ನವೋದ್ಯಮ ವಾತಾವರಣದ ಬಗ್ಗೆ ಆಸಕ್ತಿ ತೋರಿರುವುದು ರಾಜ್ಯದ ಯಶಸ್ಸಿಗೆ ಸಾಕ್ಷಿ. ಜೈವಿಕ ತಂತ್ರಜ್ಞಾನದಿಂದ ಹಿಡಿದು ಬಾಹ್ಯಾಕಾಶ ತಂತ್ರಜ್ಞಾನದವರೆಗೆ ನಾವು ಕೊರಿಯಾದೊಂದಿಗೆ ಜಂಟಿ ಮೈತ್ರಿ ಮಾಡಿಕೊಳ್ಳುವ ಮೂಲಕ ಉದ್ಯೋಗಾವಕಾಶ ಮತ್ತು ತಂತ್ರಜ್ಞಾನದ ಹೊಸ ಯುಗವನ್ನು ಆರಂಭಿಸಲಿದ್ದೇವೆ" ಎಂದು ವಿಶ್ವಾಸ ವ್ಯಕ್ತಪಡಿಸಿದರು.

ಕರ್ನಾಟಕದ ಐಟಿ ಮತ್ತು ಬಿಟಿ ಸಂಸ್ಥೆಗಳಿಗೆ ಕೊರಿಯಾದ ಮಾರುಕಟ್ಟೆ ಸುಲಭವಾಗಿ ಲಭ್ಯವಾಗಲಿದೆ. ಹೂಡಿಕೆದಾರರ ಭೇಟಿಯು ರಾಜ್ಯದ ಐಟಿ ಕಾರಿಡಾರ್‌ಗೆ ಹೆಚ್ಚಿನ ಬಂಡವಾಳವನ್ನು ಆಕರ್ಷಿಸಲಿದೆ. ಎಐ ಮತ್ತು ಸೆಮಿಕಂಡಕ್ಟರ್‌ನಂತಹ ಕ್ಷೇತ್ರಗಳಲ್ಲಿ ಕೊರಿಯಾದ ಸುಧಾರಿತ ತಂತ್ರಜ್ಞಾನವನ್ನು ರಾಜ್ಯದ ಎಂಜಿನಿಯರ್‌ಗಳು ಮತ್ತು ಸಂಶೋಧಕರು ಪಡೆಯಬಹುದು.

Read More
Next Story