
ತುಮಕೂರು ವಿಶ್ವವಿದ್ಯಾನಿಲಯದ 19ನೇ ಘಟಿಕೋತ್ಸವದ ವೇದಿಕೆಯಲ್ಲೇ ವಿದ್ಯಾರ್ಥಿಗಳು ಪ್ರತಿಭಟನೆ ನಡೆಸಿದರು.
ಹಣ ಬೇಡ, ಚಿನ್ನದ ಪದಕವೇ ಬೇಕು! ಘಟಿಕೋತ್ಸವದಲ್ಲಿ ರ‍್ಯಾಂಕ್ ವಿಜೇತರ ರಣಕಹಳೆ
ನಾವು ಪದಕಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಿದ್ದೇವೆ. ನಮಗೆ ನಿಮ್ಮ ನಗದು ಹಣ ಬೇಡವೇ ಬೇಡ, ನಮ್ಮ ಕಠಿಣ ಪರಿಶ್ರಮಕ್ಕೆ ಸಿಗಬೇಕಾದ ಚಿನ್ನದ ಪದಕವೇ ಬೇಕು ಎಂದು ವಿದ್ಯಾರ್ಥಿಗಳು ವಿವಿಯ ವಿರುದ್ಧ ಕಿಡಿಕಾರಿದರು.
ವರ್ಷಗಟ್ಟಲೆ ಹಗಲಿರುಳು ಕಷ್ಟಪಟ್ಟು ಓದಿ, ಇಡೀ ವಿಶ್ವವಿದ್ಯಾಲಯಕ್ಕೆ ಪ್ರಥಮ ಸ್ಥಾನ ಪಡೆದು, ವೇದಿಕೆ ಮೇಲೆ ಹೆಮ್ಮೆಯಿಂದ ಚಿನ್ನದ ಪದಕ ಮುಡಿಗೇರಿಸಿಕೊಳ್ಳಬೇಕು ಎಂಬ ನೂರಾರು ವಿದ್ಯಾರ್ಥಿಗಳ ಕನಸಿಗೆ ತುಮಕೂರು ವಿಶ್ವವಿದ್ಯಾಲಯದ 19ನೇ ಘಟಿಕೋತ್ಸವದಲ್ಲಿ ತಣ್ಣೀರೆರಚಲಾಗಿದೆ. ಸಾಧಕ ವಿದ್ಯಾರ್ಥಿಗಳಿಗೆ ಗೌರವಪೂರ್ವಕವಾಗಿ ಬಂಗಾರದ ಪದಕ ನೀಡಬೇಕಾಗಿದ್ದ ವಿವಿಯು, ಕೇವಲ ಒಂದು ಕಾಗದದ ಪ್ರಮಾಣ ಪತ್ರ ಮತ್ತು ನಗದು ಚೆಕ್ ನೀಡಿ ಕೈತೊಳೆದುಕೊಳ್ಳಲು ಮುಂದಾಗಿದ್ದು, ಸದ್ಯ ಪೋಷಕರು ಹಾಗೂ ವಿದ್ಯಾರ್ಥಿಗಳ ತೀವ್ರ ಆಕ್ರೋಶಕ್ಕೆ ಕಾರಣವಾಗಿದೆ.
ವೇದಿಕೆಯಲ್ಲೇ ವಿದ್ಯಾರ್ಥಿಗಳ ರಣಕಹಳೆ
ಬುಧವಾರ (ಜೂ.3) ವಿಶ್ವವಿದ್ಯಾಲಯದ ಆವರಣದಲ್ಲಿ ಒಂದು ಕಡೆ ಘಟಿಕೋತ್ಸವದ ಸಡಗರ ಸಾಗುತ್ತಿದ್ದರೆ, ಇನ್ನೊಂದೆಡೆ ವಿದ್ಯಾರ್ಥಿಗಳ ಆಕ್ರೋಶದ ಜ್ವಾಲೆ ಹೊತ್ತಿ ಉರಿಯುತ್ತಿತ್ತು. ತಮಗೆ ಚಿನ್ನದ ಪದಕದ ಬದಲಾಗಿ ಚೆಕ್ ನೀಡುತ್ತಿರುವುದನ್ನು ಕಂಡು ರೊಚ್ಚಿಗೆದ್ದ ರ‍್ಯಾಂಕ್ ವಿಜೇತರು, ಸಮಾರಂಭ ನಡೆಯುತ್ತಿದ್ದ ಜಾಗದಲ್ಲೇ ಕುಳಿತು ಪ್ರತಿಭಟನೆ ಆರಂಭಿಸಿದರು.
ಹಣ ಬೇಡ, ಪದಕ ನೀಡಿ
"ನಾವು ಪದಕಕ್ಕಾಗಿ ನಿಗದಿತ ಶುಲ್ಕವನ್ನು ಪಾವತಿಸಿದ್ದೇವೆ. ನಮಗೆ ನಿಮ್ಮ ನಗದು ಹಣ ಬೇಡವೇ ಬೇಡ, ನಮ್ಮ ಕಠಿಣ ಪರಿಶ್ರಮಕ್ಕೆ ಸಿಗಬೇಕಾದ ಚಿನ್ನದ ಪದಕವೇ ಬೇಕು ಎಂದು ವಿದ್ಯಾರ್ಥಿಗಳು ವಿವಿಯ ವಿರುದ್ಧ ಕಿಡಿಕಾರಿದರು". ವಿದ್ಯಾರ್ಥಿಗಳ ದಿಢೀರ್ ಪ್ರತಿಭಟನೆಯಿಂದಾಗಿ ಇಡೀ ಘಟಿಕೋತ್ಸವ ಸಮಾರಂಭವು ಕೆಲವು ನಿಮಿಷಗಳ ಕಾಲ ಸಂಪೂರ್ಣ ಸ್ಥಗಿತಗೊಳ್ಳುವಂತಾಯಿತು. ತಮ್ಮ ಮಕ್ಕಳ ಜೀವಮಾನದ ಸಾಧನೆಯ ಸಂಕೇತವಾದ ಪದಕ ಸಿಗದಿರುವುದನ್ನು ಕಂಡು ಪೋಷಕರೂ ಕಣ್ಣೀರು ಹಾಕಿದರು.
ಹಳೆಯ ಫೈಲ್‌ಗಳಲ್ಲೇ ಸರ್ಟಿಫಿಕೇಟ್ ವಿತರಣೆ ?
ವಿಶ್ವವಿದ್ಯಾಲಯದ ಬೇಜವಾಬ್ದಾರಿತನ ಇಲ್ಲಿಗೆ ನಿಂತಿಲ್ಲ. ಕಳೆದ 17 ಮತ್ತು 18ನೇ ಘಟಿಕೋತ್ಸವದ ಹಳೆಯ ಫೈಲ್‌ಗಳಲ್ಲೇ 19ನೇ ಘಟಿಕೋತ್ಸವದ ಪ್ರಮಾಣ ಪತ್ರಗಳನ್ನು ಇಟ್ಟು ವಿತರಿಸಲಾಗಿದೆ ಎಂದು ವಿದ್ಯಾರ್ಥಿಗಳು ಗಂಭೀರ ಆರೋಪ ಮಾಡಿದ್ದಾರೆ. "ಪದಕ ಕೊಡಲು ಯೋಗ್ಯತೆ ಇರಲಿಲ್ಲ ಎಂದರೆ ಘಟಿಕೋತ್ಸವವನ್ನೇ ಮುಂದೂಡಬೇಕಿತ್ತು. ಪದಕ ಸಿಗುವವರೆಗೂ ನಾವು ಇಲ್ಲಿಂದ ಕದಲುವುದಿಲ್ಲ" ಎಂದು ವಿದ್ಯಾರ್ಥಿಗಳು ಪಟ್ಟು ಹಿಡಿದಿದ್ದರು.
ಮೆಡಲ್ ಎಡವಟ್ಟಿನ ಅಸಲಿ ಕಹಾನಿ ಏನು ?
ವಿವಾದಕ್ಕೆ ಸಂಬಂಧಿಸಿದಂತೆ ತುಮಕೂರು ವಿವಿ ಕುಲಪತಿ ಪ್ರೊ. ವೆಂಕಟೇಶ್ವರಲು ಅವರು ಮಾಧ್ಯಮಗಳಿಗೆ ಸ್ಪಷ್ಟನೆ ನೀಡಿದ್ದು, "ಚಿನ್ನದ ದರ ಪ್ರಸ್ತುತ ಮಾರುಕಟ್ಟೆಯಲ್ಲಿ ವೇಗದಲ್ಲಿ ಏರುತ್ತಿದೆ. ಹೀಗಾಗಿ ನಿಗದಿತ ಬಜೆಟ್‌ನಲ್ಲಿ ಪದಕಗಳನ್ನು ಸಿದ್ಧಪಡಿಸುವುದು ವಿವಿಗೆ ದೊಡ್ಡ ಸವಾಲಾಗಿತ್ತು. ವಿದ್ಯಾರ್ಥಿಗಳ ಹಿತದೃಷ್ಟಿಯಿಂದ ಮಧ್ಯಪ್ರದೇಶದ ಇಂದೋರ್‌ನ ಚಿನ್ನದ ವ್ಯಾಪಾರಿಯೊಬ್ಬರಿಗೆ ಕಡಿಮೆ ದರದಲ್ಲಿ ಪದಕ ಮಾಡಿಕೊಡಲು ಆರ್ಡರ್ ನೀಡಲಾಗಿತ್ತು. ಆದರೆ ಆತ ಸರಿಯಾದ ಸಮಯಕ್ಕೆ ಪದಕ ನೀಡದೆ ದಿನ ದೂಡುತ್ತಾ ಮೋಸ ಮಾಡಿದ್ದಾನೆ. ಆ ವ್ಯಾಪಾರಿ, ಮಧ್ಯಾಹ್ನ 2 ಗಂಟೆಯ ಫ್ಲೈಟ್‌ನಲ್ಲಿ ಪದಕ ಬರುತ್ತೆ, ಇಲ್ಲವೇ ಸಂಜೆ 7 ಗಂಟೆಯ ಫ್ಲೈಟ್‌ನಲ್ಲಿ ತಲುಪುತ್ತೆ" ಎಂದು ನಂಬಿಸಿದ. ಆದರೆ ಕೊನೆಗೂ ಪದಕ ಕೈಸೇರಲಿಲ್ಲ. ಅನಿವಾರ್ಯವಾಗಿ ಪದಕದ ಮೌಲ್ಯದ ಚೆಕ್ ನೀಡಬೇಕಾಯಿತು ಎಂದು ತಿಳಿಸಿದ್ದಾರೆ.
ಲಿಖಿತ ಭರವಸೆ ಬಳಿಕ ಪ್ರತಿಭಟನೆ ವಾಪಸ್
ಪರಿಸ್ಥಿತಿ ಕೈಮೀರಿ ಹೋಗುತ್ತಿರುವುದನ್ನು ಅರಿತ ಕುಲಪತಿಗಳು ಹಾಗೂ ಹಿರಿಯ ಅಧಿಕಾರಿಗಳು ತಕ್ಷಣವೇ ವಿದ್ಯಾರ್ಥಿಗಳ ಮನವೊಲಿಸಲು ಮುಂದಾದರು. "ಈಗ ನೀಡಿರುವ ಚೆಕ್ ಬದಲಿಗೆ, ಅತ್ಯಂತ ಶೀಘ್ರದಲ್ಲೇ ಅಧಿಕೃತವಾಗಿ ಚಿನ್ನದ ಪದಕಗಳನ್ನೇ ಮಾಡಿಸಿ ಕೊಡಲಾಗುವುದು" ಎಂದು ವಿಶ್ವವಿದ್ಯಾಲಯದ ಅಧಿಕಾರಿಗಳು ವಿದ್ಯಾರ್ಥಿಗಳಿಗೆ ಲಿಖಿತ ಭರವಸೆ ಪತ್ರ ನೀಡಿದರು. ಅಧಿಕಾರಿಗಳ ಸಹಿ ಇರುವ ಲಿಖಿತ ಭರವಸೆ ಕೈ ಸೇರಿದ ನಂತರವೇ ವಿದ್ಯಾರ್ಥಿಗಳು ಹಾಗೂ ಪೋಷಕರು ಶಾಂತರಾಗಿ ತಮ್ಮ ಪ್ರತಿಭಟನೆಯನ್ನು ಹಿಂಪಡೆದು ಅಲ್ಲಿಂದ ನಿರ್ಗಮಿಸಿದರು. ಆದರೂ, ಇಂತಹ ಪ್ರತಿಷ್ಠಿತ ಕಾರ್ಯಕ್ರಮದಲ್ಲಿ ವಿಶ್ವವಿದ್ಯಾಲಯದ ಈ ಎಡವಟ್ಟು ಸಾರ್ವಜನಿಕ ವಲಯದಲ್ಲಿ ತೀವ್ರ ಚರ್ಚೆಗೆ ಗ್ರಾಸವಾಗಿದೆ.

