Supreme Court shocks Mahesh Shettys case: Court refuses to stay deportation order
x

ಸುಪ್ರೀಂ ಕೋರ್ಟ್‌ ಹಾಗೂ ಮಹೇಶ್‌ ಶೆಟ್ಟಿ ತಿಮರೋಡಿ

ಮಹೇಶ್‌ ಶೆಟ್ಟಿ ತಿಮರೋಡಿಗೆ ಸುಪ್ರೀಂನಲ್ಲಿ ಹಿನ್ನಡೆ: ಗಡಿಪಾರು ಆದೇಶಕ್ಕೆ ತಡೆ ನೀಡಲು ನಿರಾಕರಣೆ

ಇದಕ್ಕೂ ಮುನ್ನ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮಗಳ ಪ್ರಕಾರ ಗಡಿಪಾರು ಆದೇಶ ಪ್ರಶ್ನಿಸಿ ಮೊದಲಿಗೆ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಕೋರ್ಟ್‌ ಅರ್ಜಿ ವಜಾಗೊಳಿಸಿತ್ತು.


Click the Play button to hear this message in audio format

ರಾಷ್ಟ್ರೀಯ ಹಿಂದೂ ಜಾಗರಣ ವೇದಿಕೆಯ ಸಂಸ್ಥಾಪಕ ಹಾಗೂ ಸೌಜನ್ಯಾ ಪರ ಹೋರಾಟಗಾರ ಮಹೇಶ್ ಶೆಟ್ಟಿ ತಿಮರೋಡಿಗೆ ಸುಪ್ರೀಂ ಕೋರ್ಟ್‌ನಲ್ಲಿ ಭಾರಿ ಹಿನ್ನಡೆಯಾಗಿದೆ. ದಕ್ಷಿಣ ಕನ್ನಡ ಜಿಲ್ಲೆಯಿಂದ ರಾಯಚೂರು ಜಿಲ್ಲೆಯ ಮಾನ್ವಿ ತಾಲೂಕಿಗೆ ಗಡಿಪಾರು ಮಾಡಿ ಪುತ್ತೂರು ಉಪ ವಿಭಾಗಾಧಿಕಾರಿ ಹೊರಡಿಸಿದ್ದ ಆದೇಶಕ್ಕೆ ತಡೆ ನೀಡಲು ಸುಪ್ರೀಂ ಕೋರ್ಟ್ ನಿರಾಕರಿಸಿದ್ದು, ಅರ್ಜಿಯನ್ನು ವಜಾಗೊಳಿಸಿದೆ.

ಸೋಮವಾರ(ಜು.13) ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ಹಾಗೂ ನ್ಯಾಯಮೂರ್ತಿ ಸಂಜೀವ್ ಸಚ್‌ದೇವ್ ಅವರನ್ನೊಳಗೊಂಡ ಸುಪ್ರೀಂ ಕೋರ್ಟ್‌ನ ವಿಭಾಗೀಯ ಪೀಠವು, ಲಭ್ಯವಿರುವ ಶಾಸನಬದ್ಧ ಕಾನೂನು ಪರಿಹಾರಗಳನ್ನು ಬಳಸಿಕೊಳ್ಳುವ ಬದಲು ನೇರವಾಗಿ ಸುಪ್ರೀಂ ಕೋರ್ಟ್‌ಗೆ ಅರ್ಜಿ ಸಲ್ಲಿಸಿರುವುದರ ಬಗ್ಗೆ ತೀವ್ರ ಆಕ್ಷೇಪ ವ್ಯಕ್ತಪಡಿಸಿತು. ಇದೇ ವೇಳೆ ಅರ್ಜಿದಾರರ ವಕೀಲರನ್ನು ತರಾಟೆಗೆ ತೆಗೆದುಕೊಂಡ ನ್ಯಾಯಪೀಠವು, ʼಈ ನ್ಯಾಯಾಲಯದಲ್ಲಿ ಜೂಜಾಟವಾಡಬೇಡಿʼ ಎಂದು ಮೌಖಿಕವಾಗಿ ಕಟು ಎಚ್ಚರಿಕೆ ನೀಡಿದೆ.

'ಸೌಜನ್ಯ ಪ್ರಕರಣ'ದ ವಾದ ತಿರಸ್ಕರಿಸಿದ ಕೋರ್ಟ್

ವಿಚಾರಣೆ ವೇಳೆ ಮಹೇಶ್ ಶೆಟ್ಟಿ ತಿಮರೋಡಿ ಪರ ವಕೀಲರು, ಈ ಗಡಿಪಾರು ಆದೇಶವನ್ನು 'ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣ'ದ ಹೋರಾಟಕ್ಕೆ ಸಂಯೋಜಿಸಲು ಯತ್ನಿಸಿದರು. ಸ್ಥಳೀಯ ದೇವಸ್ಥಾನ ಮತ್ತು ಪ್ರಭಾವಿ ವ್ಯಕ್ತಿಗಳು ತಮ್ಮನ್ನು ಗುರಿಯಾಗಿಸಿಕೊಂಡು ಈ ಕ್ರಮ ಕೈಗೊಂಡಿದ್ದಾರೆ ಎಂದು ವಾದಿಸಿದರು. ಆದರೆ ಸುಪ್ರೀಂ ಕೋರ್ಟ್ ಈ ಊಹಾತ್ಮಕ ವಾದವನ್ನು ಸಂಪೂರ್ಣವಾಗಿ ತಿರಸ್ಕರಿಸಿತು. "ಅಸಂಬಂಧಿತ ವಿಷಯಗಳನ್ನು ಬಳಸಿ ಸಾರ್ವಜನಿಕ ಭಾವನೆಗಳನ್ನು ಕೆರಳಿಸುವುದು ಅಥವಾ ನ್ಯಾಯಾಲಯವನ್ನು ದುರ್ಬಳಕೆ ಮಾಡಿಕೊಳ್ಳುವುದು ಸರಿಯಲ್ಲ. ಒಂದು ವೇಳೆ ಗಡಿಪಾರು ಆದೇಶದ ವಿರುದ್ಧ ಆಕ್ಷೇಪಣೆಗಳಿದ್ದರೆ, ಅದಕ್ಕೆ ಸಂಬಂಧಪಟ್ಟ ಮೇಲ್ಮನವಿ ಪ್ರಾಧಿಕಾರವಾದ ಗೃಹ ಕಾರ್ಯದರ್ಶಿಗಳ ಮುಂದೆ ಹೋಗಿ. ಕಾನೂನು ಪರಿಹಾರ ಪಡೆದುಕೊಳ್ಳಲು ನೀವು ಸ್ವತಂತ್ರರು," ಎಂದು ಸ್ಪಷ್ಟಪಡಿಸಿತು.

ಗಡಿಪಾರು ಆದೇಶದ ಹಿನ್ನೆಲೆ ಏನು?

ಮಹೇಶ್ ಶೆಟ್ಟಿ ತಿಮರೋಡಿ ವಿರುದ್ಧ 1997 ರಿಂದಲೂ 32ಕ್ಕೂ ಹೆಚ್ಚು ಕ್ರಿಮಿನಲ್ ಪ್ರಕರಣಗಳು ದಾಖಲಾಗಿವೆ. "ಅರ್ಜಿದಾರರು ವಿದ್ಯಾರ್ಥಿನಿ ಸೌಜನ್ಯಾ ಸಾವಿನ ಪ್ರಕರಣಕ್ಕೆ ನ್ಯಾಯ ಕೊಡಿಸುತ್ತೇನೆ ಎಂದು ಹೇಳಿಕೊಳ್ಳುತ್ತಾ ಸ್ಥಳೀಯವಾಗಿ ಕಾನೂನು ಮತ್ತು ಸುವ್ಯವಸ್ಥೆಗೆ ಧಕ್ಕೆ ಉಂಟು ಮಾಡುತ್ತಿದ್ದಾರೆ. ಇದರಿಂದಾಗಿ ಬೆಳ್ತಂಗಡಿ ಪೊಲೀಸರು ಇತರೆ ಕರ್ತವ್ಯಗಳಿಗಿಂತ ಹೆಚ್ಚಾಗಿ ಈ ವ್ಯಕ್ತಿಯಿಂದ ಉಂಟಾಗುತ್ತಿರುವ ಸಮಸ್ಯೆಗಳ ನಿವಾರಣೆಯಲ್ಲೇ ಸಮಯ ಕಳೆಯುವಂತಾಗಿದೆ. ಸದ್ಯ 26 ಪ್ರಕರಣಗಳು ವಿಚಾರಣಾ ಹಂತದಲ್ಲಿದ್ದು, ಇತ್ತೀಚಿನ ದಿನಗಳಲ್ಲಿ ಮತ್ತೂ ಐದು ಎಫ್‌ಐಆರ್‌ಗಳು ದಾಖಲಾಗಿವೆ," ಎಂದು ಸರ್ಕಾರ ಕೋರ್ಟ್‌ಗೆ ಮಾಹಿತಿ ನೀಡಿತ್ತು.

ನಿರಂತರವಾಗಿ ಸಮಾಜದ ಸ್ವಾಸ್ಥ್ಯ ಕೆಡಿಸಿದ ಆರೋಪ ಹಾಗೂ ಕ್ರಿಮಿನಲ್ ಹಿನ್ನೆಲೆಯನ್ನು ಪರಿಗಣಿಸಿ ಸಾರ್ವಜನಿಕ ಶಾಂತಿ ಕಾಪಾಡುವ ದೃಷ್ಟಿಯಿಂದ ಪುತ್ತೂರು ಉಪ ವಿಭಾಗಾಧಿಕಾರಿಗಳು ತಿಮರೋಡಿಯನ್ನು ದಕ್ಷಿಣ ಕನ್ನಡ ಜಿಲ್ಲೆಯಿಂದ 10 ತಿಂಗಳ ಅವಧಿಗೆ ರಾಯಚೂರು ಜಿಲ್ಲೆಯ ಮಾನ್ವಿಗೆ ಗಡಿಪಾರು ಮಾಡಿ ಆದೇಶ ಹೊರಡಿಸಿದ್ದರು.

ಹೈಕೋರ್ಟ್‌ನಲ್ಲೂ ಹಿನ್ನಡೆಯಾಗಿತ್ತು

ಇದಕ್ಕೂ ಮುನ್ನ ಮಹೇಶ್ ಶೆಟ್ಟಿ ತಿಮರೋಡಿ ಅವರು ಹೈಕೋರ್ಟ್ ಮೆಟ್ಟಿಲೇರಿದ್ದರು. ನಿಯಮಗಳ ಪ್ರಕಾರ ಗಡಿಪಾರು ಆದೇಶ ಪ್ರಶ್ನಿಸಿ ಮೊದಲಿಗೆ ಸರ್ಕಾರದ ಗೃಹ ಕಾರ್ಯದರ್ಶಿಗೆ ಮೇಲ್ಮನವಿ ಸಲ್ಲಿಸಬೇಕು ಎಂದು ಹೈಕೋರ್ಟ್‌ನ ಏಕಸದಸ್ಯ ಪೀಠವು ಅರ್ಜಿ ವಜಾಗೊಳಿಸಿತ್ತು. ಇದನ್ನು ಪ್ರಶ್ನಿಸಿ ತಿಮರೋಡಿ ಅವರು ಹೈಕೋರ್ಟ್ ವಿಭಾಗೀಯ ಪೀಠಕ್ಕೆ ಮೇಲ್ಮನವಿ ಸಲ್ಲಿಸಿದ್ದರು. ಆದರೆ ಮುಖ್ಯ ನ್ಯಾಯಮೂರ್ತಿ ವಿಭು ಬಖ್ರು ಹಾಗೂ ನ್ಯಾಯಮೂರ್ತಿ ಕೆ.ಎಸ್. ಹೇಮಲೇಖಾ ಅವರಿದ್ದ ವಿಭಾಗೀಯ ನ್ಯಾಯಪೀಠವು ಏಕಸದಸ್ಯ ಪೀಠದ ಆದೇಶದಲ್ಲಿ ಮಧ್ಯಪ್ರವೇಶಿಸಲು ನಿರಾಕರಿಸಿ, ಅರ್ಜಿಯನ್ನು ವಜಾಗೊಳಿಸಿತ್ತು. ಮಧ್ಯಂತರ ತಡೆ ಕೋರಿ ಸಲ್ಲಿಸಿದ್ದ ಮನವಿಯನ್ನೂ ನ್ಯಾಯಾಲಯ ತಳ್ಳಿಹಾಕಿತ್ತು.

Read More
Next Story