ಮತದಾರರ ಪಟ್ಟಿ ವಿಶೇಷ ತೀವ್ರ ಪರಿಷ್ಕರಣೆ ಪ್ರಕ್ರಿಯೆಗೆ ತೆರಳುವಾಗ ಅಪಘಾತಕ್ಕೀಡಾಗಿದ್ದ ತುಮಕೂರು ಜಿಲ್ಲೆ ಗೂಳೂರು ಹೋಬಳಿಯ ಹೊಳಕಲ್ಲು ಗ್ರಾಮ ಪಂಚಾಯಿತಿಯ ಗ್ರಾಮ ಆಡಳಿತ ಅಧಿಕಾರಿ ಆರ್. ಭುವನಾ (26) ಮೃತಪಟ್ಟಿದ್ದಾರೆ.
ಮನೆ ಮಗಳ ವಿವಾಹದ ಕನಸು ಕಂಡಿದ್ದ ಹೆತ್ತವರಿಗೆ ಈ ಘಟನೆ ಬರಸಿಡಿಲು ಬಡಿದಂತಾಗಿದೆ. ಹಿರಿಯ ಅಧಿಕಾರಿಗಳ ಒತ್ತಡದಿಂದಲೇ ಗ್ರಾಮ ಆಡಳಿತ ಅಧಿಕಾರಿ ಅಪಘಾತಕ್ಕೀಡಾಗಿ ದುರ್ಮರಣಕ್ಕೀಡಾಗಿದ್ದಾರೆ ಎಂದು ಆರೋಪಿಸಿ ಕಂದಾಯ ಇಲಾಖೆ ಸಿಬ್ಬಂದಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿ ಕುಳಿತಿದ್ದಾರೆ.
ಮಂತ್ರಾಲಯಕ್ಕೆ ಹೋಗಬೇಕಿದ್ದವಳು ಮಸಣ ಸೇರಿದಳು!
ಮೂಲತಃ ಬೆಂಗಳೂರು ಗ್ರಾಮಾಂತರ ಜಿಲ್ಲೆಯ ನೆಲಮಂಗಲ ತಾಲೂಕಿನ ವರದನಾಯಕನಹಳ್ಳಿ ಗ್ರಾಮದ ಭುವನಾ, ಕಳೆದ 8 ವರ್ಷಗಳಿಂದ ಗ್ರಾಮ ಆಡಳಿತ ಅಧಿಕಾರಿಯಾಗಿ ಸೇವೆ ಸಲ್ಲಿಸುತ್ತಿದ್ದರು. ಇತ್ತೀಚೆಗಷ್ಟೇ ಅವರ ಕುಟುಂಬಸ್ಥರು ಭುವನಾಗೆ ಮದುವೆ ಮಾಡಲು ವರನ ಹುಡುಕಾಟ ನಡೆಸುತ್ತಿದ್ದರು.
"ಸಾಕಷ್ಟು ಕನಸು ಕಟ್ಟಿಕೊಂಡಿದ್ದ ಭುವನಾ ಅವರು ಶನಿವಾರವಷ್ಟೇ ಕುಟುಂಬಸ್ಥರ ಜೊತೆ ಮಂತ್ರಾಲಯಕ್ಕೆ ಹೋಗಲು ಸಿದ್ಧತೆ ನಡೆಸಿದ್ದರು. ಆದರೆ ಅಧಿಕಾರಿಗಳ ಫೀಲ್ಡ್ ವರ್ಕ್ ಒತ್ತಡದಿಂದಾಗಿ ಮುಂಜಾನೆ 6 ಗಂಟೆಗೆ ಮನೆಯಿಂದ ಹೊರಟವಳು ಹೆಣವಾಗಿ ಮರಳಿದ್ದಾಳೆ" ಎಂದು ಭುವನಾ ಅವರ ದೊಡ್ಡಮ್ಮ ಮೀನಾಕ್ಷಮ್ಮ ಹಾಗೂ ಚಿಕ್ಕಪ್ಪ ರಮೇಶ್ ಕಣ್ಣೀರಿಟ್ಟಿದ್ದಾರೆ.
ಅಪಘಾತ ನಡೆದದ್ದು ಹೇಗೆ?
ಶನಿವಾರ ಬೆಳಿಗ್ಗೆ ಗೂಳೂರು ಹೋಬಳಿ ವ್ಯಾಪ್ತಿಯಲ್ಲಿ ಮನೆ ಮನೆಗೆ ತೆರಳಿ ಎಸ್‌ಐಆರ್ ಫಾರ್ಮ್‌ಗಳನ್ನು ವಿತರಿಸಲು ಹಾಗೂ ಬಿಎಲ್‌ಒ ಸೂಪರ್‌ವೈಸರ್ ಕರ್ತವ್ಯ ನಿರ್ವಹಿಸಲು ಭುವನಾ ಅವರು ತಮ್ಮ ದ್ವಿಚಕ್ರ ವಾಹನದಲ್ಲಿ ಹೊರಟಿದ್ದರು.
ಬೆಳಿಗ್ಗೆ ಸುಮಾರು 7 ರಿಂದ 8 ಗಂಟೆಯ ಅವಧಿಯಲ್ಲಿ ಕುಣಿಗಲ್ ರಸ್ತೆಯ ಚೋಳನಹಳ್ಳಿ ಬಳಿ ವೇಗವಾಗಿ ಬಂದ ಲಾರಿಯೊಂದು ಸ್ಕೂಟರ್‌ಗೆ ಡಿಕ್ಕಿ ಹೊಡೆದಿದೆ. ತೀವ್ರ ಗಾಯಗೊಂಡಿದ್ದ ಭುವನಾ ಅವರನ್ನು ತಕ್ಷಣವೇ ತುಮಕೂರಿನ ಸಿದ್ದಗಂಗಾ ಆಸ್ಪತ್ರೆಯ ಐಸಿಯುಗೆ ದಾಖಲಿಸಲಾಯಿತಾದರೂ ಚಿಕಿತ್ಸೆ ಫಲಿಸದೇ ಕೊನೆಯುಸಿರೆಳೆದಿದ್ದಾರೆ.
ಜಿಲ್ಲಾಧಿಕಾರಿ ವರ್ಗಾವಣೆಗೆ ಆಗ್ರಹ
ಭುವನಾ ಸಾವಿನ ಸುದ್ದಿ ತಿಳಿಯುತ್ತಿದ್ದಂತೆ ಕಂದಾಯ ಇಲಾಖೆಯ ನೌಕರರು ಸಿದ್ದಗಂಗಾ ಆಸ್ಪತ್ರೆ ಹಾಗೂ ಜಿಲ್ಲಾಧಿಕಾರಿ ಕಚೇರಿ ಮುಂದೆ ಬೃಹತ್ ಪ್ರತಿಭಟನೆ ನಡೆಸಿದ್ದಾರೆ.
ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರ ವಾಹನವನ್ನು ತಡೆದು ನೌಕರರು ಆಕ್ರೋಶ ಹೊರಹಾಕಿದ್ದಾರೆ. ಗ್ರಾಮಾಡಳಿತಾಧಿಕಾರಿಗಳ ಸಂಘದ ರಾಜ್ಯಾಧ್ಯಕ್ಷ ಯೋಗೀಶ್ ಹಾಗೂ ಪ್ರಧಾನ ಕಾರ್ಯದರ್ಶಿ ಶಿವಾನಂದ ನಾಯ್ಕ್ ನೇತೃತ್ವದಲ್ಲಿ ಜಿಲ್ಲಾಧಿಕಾರಿ ಕಚೇರಿ ಎದುರು ಅಹೋರಾತ್ರಿ ಧರಣಿಯನ್ನೂ ಆರಂಭಿಸಲಾಗಿದೆ.
ಮುಂಜಾನೆ 6.30ಕ್ಕೆ ಫೀಲ್ಡ್‌ನಿಂದ ವಿಡಿಯೋ, ಫೋಟೋ ಕಳುಹಿಸಬೇಕು ಎಂದು ಮಹಿಳಾ ನೌಕರರಿಗೂ ಮಾನಸಿಕ ಹಿಂಸೆ ನೀಡಲಾಗುತ್ತಿದೆ. ಈ ಸಾವಿಗೆ ಕಾರಣರಾದ ಮೇಲಧಿಕಾರಿಗಳನ್ನು ತಕ್ಷಣ ಅಮಾನತು ಮಾಡಬೇಕು. ಅಲ್ಲದೇ ಸರ್ವಾಧಿಕಾರಿ ಧೋರಣೆ ಅನುಸರಿಸುತ್ತಿರುವ ಜಿಲ್ಲಾಧಿಕಾರಿಯನ್ನೂ ಅವರ ವರ್ಗಾವಣೆಯಾಗಬೇಕು ಎಂದು ಆಗ್ರಹಿಸಿದ್ದಾರೆ.
ಭುವನಾ ಅವರ ಸಹೋದರನಿಗೆ ಅನುಕಂಪದ ಆಧಾರದ ಮೇಲೆ ಸರ್ಕಾರಿ ಕೆಲಸ ನೀಡಬೇಕು ಹಾಗೂ ಕುಟುಂಬಕ್ಕೆ ಸೂಕ್ತ ಪರಿಹಾರ ನೀಡಬೇಕು ಎಂದು ಕಂದಾಯ ಇಲಾಖೆ ಸಿಬ್ಬಂದಿ ಒತ್ತಾಯಿಸಿದ್ದಾರೆ.
ಪ್ರತಿಭಟನಾಕಾರರನ್ನು ಸಮಾಧಾನಪಡಿಸಲು ಸ್ಥಳಕ್ಕೆ ಆಗಮಿಸಿದ ಜಿಲ್ಲಾಧಿಕಾರಿ ಶುಭ ಕಲ್ಯಾಣ್ ಅವರು, "ನಾವು ಯಾವುದೇ ಒತ್ತಡ ಹಾಕಿಲ್ಲ. ಜಿಲ್ಲೆಯ ಜನತೆ ಹಾಗೂ ರೈತರ ಸೇವೆಯ ಉದ್ದೇಶದಿಂದಷ್ಟೇ ನಿಯಮಾನುಸಾರ ಕೆಲಸ ನಿಯೋಜಿಸಲಾಗಿತ್ತು. ಭುವನಾ ನಮಗೂ ಸಹೋದ್ಯೋಗಿ, ಅವರ ಸಾವು ಅತ್ಯಂತ ದುರದೃಷ್ಟಕರ . ಅಪಘಾತ ಸಂಭವಿಸಿದ ಸ್ಥಳವು ಬ್ಲ್ಯಾಕ್ ಸ್ಪಾಟ್ ಆಗಿದ್ದು, ಪೊಲೀಸರ ತನಿಖೆಯ ನಂತರವಷ್ಟೇ ನಿಖರ ಕಾರಣ ತಿಳಿಯಲಿದೆ" ಎಂದಿದ್ದಾರೆ.
ತುಮಕೂರು ಗ್ರಾಮಾಂತರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.