
Saujanya Case | ಸೌಜನ್ಯ ಪ್ರಕರಣದಲ್ಲಿ ಸಾಕ್ಷಿಗಳಿಗೆ ತಕ್ಷಣದ ರಕ್ಷಣೆ ನೀಡಲು ಸುಪ್ರೀಂ ಕೋರ್ಟ್ ಆದೇಶ!
ಸೌಜನ್ಯ ಪ್ರಕರಣದ ವಿಚಾರಣೆ ವೇಳೆ ಸುಪ್ರೀಂ ಕೋರ್ಟ್ ಮಹತ್ವದ ಆದೇಶ ನೀಡಿದೆ. ಸಾಕ್ಷಿಗಳಿಗೆ ತಕ್ಷಣದ ರಕ್ಷಣೆ ಒದಗಿಸಲು ನ್ಯಾಯಾಲಯ ಸೂಚನೆ ನೀಡಿದೆ.
ಕಳೆದ 13 ವರ್ಷಗಳಿಂದ ಇಡೀ ಕರ್ನಾಟಕವೇ ಕಾತರದಿಂದ ಕಾಯುತ್ತಿದ್ದ 'ಸೌಜನ್ಯ ಹೋರಾಟ'ಕ್ಕೆ ಈಗ ದೇಶದ ಸರ್ವೋಚ್ಚ ನ್ಯಾಯಾಲಯದಲ್ಲಿ ಅತಿದೊಡ್ಡ ಮನ್ನಣೆ ಸಿಕ್ಕಿದೆ. ಬುಧವಾರ ನಡೆದ ಮಹತ್ವದ ವಿಚಾರಣೆಯಲ್ಲಿ ಸುಪ್ರೀಂ ಕೋರ್ಟ್, ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದಲೇ ಬಿಗಿ ರಕ್ಷಣೆ ನೀಡುವಂತೆ ಐತಿಹಾಸಿಕ ಆದೇಶ ಹೊರಡಿಸಿದೆ. ರಾಜ್ಯ ಸರ್ಕಾರ ಮತ್ತು ಸಿಬಿಐನ ನಿರಾಸಕ್ತಿಗೆ ತರಾಟೆ ತೆಗೆದುಕೊಂಡಿರುವ ನ್ಯಾಯಾಲಯ, ಮರುತನಿಖೆಯ ನಿಟ್ಟಿನಲ್ಲಿ ಮಹತ್ವದ ಹೆಜ್ಜೆಯನ್ನಿಟ್ಟಿದೆ.
ವಿಚಾರಣೆಯ ಪ್ರಮುಖ ಮುಖ್ಯಾಂಶಗಳು:
ಸಾಕ್ಷಿಗಳಿಗೆ ತಕ್ಷಣದ ರಕ್ಷಣೆ: ಈ ಹಿಂದೆ ಪ್ರಕರಣಕ್ಕೆ ಸಂಬಂಧಿಸಿದ ಕೆಲವು ಪ್ರಮುಖ ಸಾಕ್ಷಿಗಳು ನಿಗೂಢವಾಗಿ ಸಾವನ್ನಪ್ಪಿರುವ ಹಿನ್ನೆಲೆಯಲ್ಲಿ, ನ್ಯಾಯಾಲಯವು ಇದನ್ನು ಗಂಭೀರವಾಗಿ ಪರಿಗಣಿಸಿದೆ. ಪ್ರಕರಣದ ಎಲ್ಲಾ ಪ್ರಮುಖ ಸಾಕ್ಷಿಗಳಿಗೆ ತಕ್ಷಣದಿಂದಲೇ ಬಿಗಿ ರಕ್ಷಣೆ ಒದಗಿಸಬೇಕು ಎಂದು ನ್ಯಾಯಾಲಯ ಕಟ್ಟುನಿಟ್ಟಿನ ಆದೇಶ ನೀಡಿದೆ.
ಮರುತನಿಖೆ ಕುರಿತು ವರದಿ ಕೇಳಿದ ಕೋರ್ಟ್: ಮರುತನಿಖೆ ನಡೆಸುವ ಬಗ್ಗೆ ಸಿಬಿಐ (CBI) ಮತ್ತು ರಾಜ್ಯ ಸರ್ಕಾರವು ತನ್ನ ನಿಲುವನ್ನು ಎರಡು ವಾರಗಳಲ್ಲಿ ಲಿಖಿತ ರೂಪದಲ್ಲಿ ಸಲ್ಲಿಸಬೇಕು. ಒಂದು ವೇಳೆ ಮರುತನಿಖೆ ನಡೆಸುವುದಾದರೆ ಅದನ್ನು ಯಾವ ತನಿಖಾ ಸಂಸ್ಥೆ ನಡೆಸಬಹುದು ಎಂಬ ವಿವರವನ್ನೂ ತಿಳಿಸಲು ಸೂಚಿಸಿದೆ.
ರಾಜ್ಯ ಸರ್ಕಾರಕ್ಕೆ ತರಾಟೆ: ಇಂತಹ ಗಂಭೀರ ಪ್ರಕರಣದಲ್ಲಿ ನಿರಾಸಕ್ತಿ ತೋರುತ್ತಿರುವುದಕ್ಕೆ ರಾಜ್ಯ ಸರ್ಕಾರದ ವಕೀಲರನ್ನು ಸುಪ್ರೀಂ ಕೋರ್ಟ್ ತರಾಟೆಗೆ ತೆಗೆದುಕೊಂಡಿತು. ಅರ್ಜಿದಾರರ ಪರ ಹಿರಿಯ ನ್ಯಾಯವಾದಿಗಳು ಕೆಲವು ಪ್ರಮುಖ ಸಾಕ್ಷಿ ಮತ್ತು ದಾಖಲೆಗಳನ್ನು ಮುಚ್ಚಿದ ಲಕೋಟೆಯಲ್ಲಿ (Sealed Cover) ನ್ಯಾಯಾಲಯದ ಗಮನಕ್ಕೆ ತಂದಿದ್ದಾರೆ. ಈ ಅಂಶಗಳನ್ನು ಮಾನ್ಯ ಮಾಡಿದ ಕೋರ್ಟ್, ಮರುತನಿಖೆಯ ಭರವಸೆಯನ್ನು ಮೂಡಿಸಿದೆ.
ಹೋರಾಟಕ್ಕೆ ಸಂದ ಜಯ
ಕಳೆದ 13 ವರ್ಷಗಳಿಂದ ಸೌಜನ್ಯ ಪರವಾಗಿ ನಡೆಯುತ್ತಿರುವ ಸಾಮಾಜಿಕ ಚಳವಳಿಗೆ ಈ ಬೆಳವಣಿಗೆಯು ದೊಡ್ಡ ಬಲ ನೀಡಿದೆ. ಹೋರಾಟಗಾರರಾದ ಮಹೇಶ್ ಶೆಟ್ಟಿ ತಿಮರೋಡಿ, ಸೌಜನ್ಯ ತಾಯಿ ಕುಸುಮಾವತಿ ಹಾಗೂ ನ್ಯಾಯಕ್ಕಾಗಿ ಧ್ವನಿ ಎತ್ತಿದ ಸಮಸ್ತ ಜನತೆಯ ನೈತಿಕ ಹೋರಾಟಕ್ಕೆ ಸುಪ್ರೀಂ ಕೋರ್ಟ್‌ನ ಈ ಆದೇಶವು ಮನ್ನಣೆ ನೀಡಿದಂತಾಗಿದೆ.
ಅರ್ಜಿದಾರರ ಪರವಾಗಿ ಹಿರಿಯ ನ್ಯಾಯವಾದಿಗಳಾದ ಶ್ರೀಮತಿ ಶೋಭಾ ಗುಪ್ತ, ಶ್ರೀ ಶೇಖರ್ ದೇವಸ, ಶ್ರೀ ನೂಲವಿ, ಶ್ರೀ ಮತ್ತು ಶ್ರೀಮತಿ ಅಶುತೋಷ್ ದುಬೆ ಅವರು ವಾದ ಮಂಡಿಸಿದರು. ಸಂತೋಷ್ ರಾವ್ ಪರವಾಗಿ ಹಿರಿಯ ನ್ಯಾಯವಾದಿ ಶ್ರೀ ಗುರುರಾಜ್ ಹಾಜರಿದ್ದರು. ಪ್ರಕರಣದ ಮುಂದಿನ ವಿಚಾರಣೆಯನ್ನು ಜುಲೈ 14 ಕ್ಕೆ ಮುಂದೂಡಲಾಗಿದೆ.

