Delivery in Train | ಚಲಿಸುವ ರೈಲಿನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ, ತಾಯಿ-ಮಗು ಕ್ಷೇಮ!
x
ರೈಲಿನಲ್ಲಿ ಹೆರಿಗೆ (ಸಂಗ್ರಹ ಚಿತ್ರ)

Delivery in Train | ಚಲಿಸುವ ರೈಲಿನಲ್ಲಿ ಗರ್ಭಿಣಿಗೆ ಯಶಸ್ವಿ ಹೆರಿಗೆ, ತಾಯಿ-ಮಗು ಕ್ಷೇಮ!

ಮಂಗಳೂರಿನಿಂದ ಮೈಸೂರಿಗೆ ತೆರಳುತ್ತಿದ್ದ ರೈಲಿನಲ್ಲಿ ತುಂಬು ಗರ್ಭಿಣಿ ಪೊನ್ನಮ್ಮ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ವೈದ್ಯಕೀಯ ನೆರವು ಸಿಗದಿದ್ದಾಗ ಸಹ-ಪ್ರಯಾಣಿಕರೇ ಹೆರಿಗೆ ಮಾಡಿಸಿದ ಮಾನವೀಯ ಘಟನೆ ಇಲ್ಲಿದೆ.


ಅನಿರೀಕ್ಷಿತ ಘಟನೆಗಳು ಸಾಂದರ್ಭಿಕವಾಗಿ ಮನುಷ್ಯನ ಸಮಯಪ್ರಜ್ಞೆಯನ್ನು ಪರೀಕ್ಷಿಸುತ್ತವೆ. ಅಂತಹದ್ದೇ ಒಂದು ರೋಚಕ ಹಾಗೂ ಮಾನವೀಯ ಘಟನೆ ಮಂಗಳೂರು-ಮೈಸೂರು ರೈಲಿನಲ್ಲಿ ನಡೆದಿದೆ. ತುಂಬು ಗರ್ಭಿಣಿಯೊಬ್ಬರಿಗೆ ರೈಲಿನಲ್ಲೇ ಹೆರಿಗೆ ನೋವು ಕಾಣಿಸಿಕೊಂಡಾಗ, ಸಹ-ಪ್ರಯಾಣಿಕರೇ ವೈದ್ಯರಾಗಿ ಯಶಸ್ವಿ ಹೆರಿಗೆ ಮಾಡಿಸಿದ ಘಟನೆ ದಕ್ಷಿಣ ಕನ್ನಡ ಜಿಲ್ಲೆಯ ಬಿ.ಸಿ ರೋಡ್ ಸಮೀಪ ಜರುಗಿದೆ.

ನಡೆದಿದ್ದೇನು?

ಮೈಸೂರು ಮೂಲದ ಪೊನ್ನಮ್ಮ ಎಂಬ ಮಹಿಳೆ ಮಂಗಳೂರಿನಿಂದ ಮೈಸೂರಿಗೆ ತೆರಳಲು ರೈಲು ಹತ್ತಿದ್ದರು. ರೈಲು ಮಂಗಳೂರು ನಿಲ್ದಾಣ ಬಿಟ್ಟು ಸ್ವಲ್ಪ ದೂರ ಸಾಗುತ್ತಿದ್ದಂತೆಯೇ ಅವರಿಗೆ ಹೆರಿಗೆ ನೋವು ಕಾಣಿಸಿಕೊಂಡಿದೆ. ಸುಮಾರು 30 ನಿಮಿಷಗಳ ಕಾಲ ಪೊನ್ನಮ್ಮ ಅವರು ಹೆರಿಗೆ ನೋವಿನಿಂದ ತೀವ್ರವಾಗಿ ಒದ್ದಾಡಿದ್ದಾರೆ. ಕೂಡಲೇ ಎಚ್ಚೆತ್ತ ಪ್ರಯಾಣಿಕರು ರೈಲ್ವೆ ಅಧಿಕಾರಿಗಳಿಗೆ ಮಾಹಿತಿ ನೀಡಿದರಾದರೂ, ತಕ್ಷಣಕ್ಕೆ ವೈದ್ಯಕೀಯ ನೆರವು ಲಭ್ಯವಾಗಲಿಲ್ಲ.

ದೇವತೆಯರಾದ ಮಹಿಳಾ ಪ್ರಯಾಣಿಕರು

ಪೊನ್ನಮ್ಮ ಅವರ ನೋವಿನ ಕಿರುಚಾಟ ಕೇಳಿ ಅದೇ ಬೋಗಿಯಲ್ಲಿದ್ದ ಇತರ ಮಹಿಳಾ ಪ್ರಯಾಣಿಕರು ನೆರವಿಗೆ ಧಾವಿಸಿದರು. ವೈದ್ಯರು ಬರುವವರೆಗೆ ಕಾಯುವುದು ಅಪಾಯಕಾರಿ ಎಂದು ಅರಿತ ಮಹಿಳೆಯರು, ರೈಲಿನಲ್ಲೇ ಬೆಡ್‌ಶೀಟ್ ಮತ್ತು ಬಟ್ಟೆಗಳ ಮೂಲಕ ಪರದೆ ಕಟ್ಟಿ ತಾತ್ಕಾಲಿಕ 'ಲೇಬರ್ ರೂಮ್' ನಿರ್ಮಿಸಿದರು.

ರೈಲು ಬಂಟ್ವಾಳ ತಾಲೂಕಿನ ಬಿ.ಸಿ ರೋಡ್ ನಿಲ್ದಾಣದ ಸಮೀಪವಿರುವಾಗಲೇ ಮಹಿಳಾ ಪ್ರಯಾಣಿಕರ ಸಾಹಸದಿಂದ ಪೊನ್ನಮ್ಮ ಅವರು ಸುಂದರ ಮಗುವಿಗೆ ಜನ್ಮ ನೀಡಿದ್ದಾರೆ. ರೈಲಿನಲ್ಲೇ ಮಗುವಿನ ಕಿಲಿಕಿಲಿ ಕೇಳಿ ಇಡೀ ಬೋಗಿಯ ಪ್ರಯಾಣಿಕರು ನಿಟ್ಟುಸಿರು ಬಿಟ್ಟರು.

ಆಸ್ಪತ್ರೆಗೆ ದಾಖಲು

ಹೆರಿಗೆಯಾದ ನಂತರ ಸ್ಥಳಕ್ಕೆ ಧಾವಿಸಿದ ರೈಲ್ವೆ ವೈದ್ಯರು ಬಾಣಂತಿ ಮತ್ತು ಮಗುವಿನ ಪ್ರಾಥಮಿಕ ತಪಾಸಣೆ ನಡೆಸಿದರು. ಪ್ರಸ್ತುತ ತಾಯಿ ಮತ್ತು ಮಗು ಇಬ್ಬರೂ ಆರೋಗ್ಯವಾಗಿದ್ದು, ಹೆಚ್ಚಿನ ಆರೈಕೆಗಾಗಿ ಅವರನ್ನು ಮಂಗಳೂರಿನ ವೆನ್ಲಾಕ್ ಆಸ್ಪತ್ರೆಗೆ ದಾಖಲಿಸಲಾಗಿದೆ.

ಅನಿರೀಕ್ಷಿತ ಸಂದರ್ಭದಲ್ಲಿ ಭಯಪಡದೆ, ಗರ್ಭಿಣಿಯ ಸಹಾಯಕ್ಕೆ ಧಾವಿಸಿ ಮಾನವೀಯತೆ ಮೆರೆದ ಮಹಿಳಾ ಪ್ರಯಾಣಿಕರ ಕಾರ್ಯಕ್ಕೆ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕ ಪ್ರಶಂಸೆ ವ್ಯಕ್ತವಾಗುತ್ತಿದೆ.

Read More
Next Story