ದೈವದ ಭಂಡಾರ ಮೆರವಣಿಗೆ ವೇಳೆ ದಿಢೀರ್ ಕುಸಿದ ಕಾಲುಸಂಕ: 8 ಮಂದಿಗೆ ಗಾಯ, ವಿಡಿಯೋ ವೈರಲ್
x

ದೈವದ ಭಂಡಾರ ಮೆರವಣಿಗೆಯ ವೇಳೆ ಕಾಲುಸಂಕ (ಕಿರು ಸೇತುವೆ) ದಿಢೀರ್ ಕುಸಿದು ಬಿದ್ದು ಭಾರೀ ಅವಘಡ ಸಂಭವಿಸಿದೆ.  

ದೈವದ ಭಂಡಾರ ಮೆರವಣಿಗೆ ವೇಳೆ ದಿಢೀರ್ ಕುಸಿದ ಕಾಲುಸಂಕ: 8 ಮಂದಿಗೆ ಗಾಯ, ವಿಡಿಯೋ ವೈರಲ್

ಈ ಘಟನೆಯಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ. ದೈವದ ಮುಕ್ಕಾಲ್ದಿ ಸುನಿಲ್ ಶೆಟ್ಟಿ ಅವರ ಸೊಂಟ ಮತ್ತು ಕಾಲಿಗೆ ಗಾಯವಾಗಿದ್ದರೆ, ಹರೀಶ್ ಎಂಬವರ ಎರಡು ಕಾಲುಗಳು ಮುರಿದಿವೆ.


Click the Play button to hear this message in audio format

ತಾಲೂಕಿನ ಹೊಸಬೆಟ್ಟು ಗ್ರಾಮ ಪಂಚಾಯತ್ ವ್ಯಾಪ್ತಿಯ ಪುಚ್ಚೆಮೊಗರು ಗ್ರಾಮದ ಬಾವದಬೈಲು ಎಂಬಲ್ಲಿ ಭಕ್ತಿ-ಸಂಭ್ರಮದಿಂದ ಸಾಗುತ್ತಿದ್ದ ದೈವದ ಭಂಡಾರ ಮೆರವಣಿಗೆಯ ವೇಳೆ ಕಾಲುಸಂಕ (ಕಿರು ಸೇತುವೆ) ದಿಢೀರ್ ಕುಸಿದು ಬಿದ್ದು ಭಾರೀ ಅವಘಡ ಸಂಭವಿಸಿದೆ.

ಪುಚ್ಚೆಮೊಗರು ಬಾವದಬೈಲು ನಿಲಯದಿಂದ ತಾಕೋಡೆ ಬರ್ಕೆ ಧರ್ಮನೇಮೋತ್ಸವಕ್ಕಾಗಿ ದೈವದ ಭಂಡಾರವನ್ನು ಪಲ್ಲಕ್ಕಿಯಲ್ಲಿ ಹೊತ್ತು ತರಲಾಗುತ್ತಿತ್ತು. ಕೊಂಬು ಮತ್ತು ಬ್ಯಾಂಡ್ ವಾದ್ಯಗಳೊಂದಿಗೆ ಮೆರವಣಿಗೆ ಸಾಗುತ್ತಿದ್ದಾಗ ಹಳ್ಳವೊಂದರ ಮೇಲೆ ಅಡ್ಡಲಾಗಿ ನಿರ್ಮಿಸಲಾದ ಕಿರು ಸೇತುವೆಯನ್ನು ದಾಟುವಾಗ ಈ ದುರ್ಘಟನೆ ನಡೆದಿದೆ.

ಜನದಟ್ಟಣೆಯಿಂದ ಕುಸಿದ ಸೇತುವೆ

ಸೇತುವೆಯ ಮೇಲೆ ಏಕಾಏಕಿ ಜನದಟ್ಟಣೆ ಹೆಚ್ಚಾದ ಕಾರಣ ತೂಕ ತಾಳಲಾರದೆ ಕಾಲುಸಂಕವು ಮುರಿದುಬಿದ್ದಿದೆ. ಇದೇ ವೇಳೆ ಸೇತುವೆಯ ಮೇಲ್ಭಾಗದ ತೊಲೆ (ಬೀಮ್) ಪಲ್ಲಕ್ಕಿ ಹೊತ್ತವರ ಮೇಲೆಯೇ ಬಿದ್ದಿದ್ದು, ಮೆರವಣಿಗೆಯಲ್ಲಿದ್ದವರು ಸುಮಾರು 10 ಅಡಿ ಆಳದ ತೋಡಿಗೆ ಬಿದ್ದಿದ್ದಾರೆ.

ಆಸ್ಪತ್ರೆ ದಾಖಲು

ಈ ಘಟನೆಯಲ್ಲಿ ಒಟ್ಟು 8 ಮಂದಿ ಗಾಯಗೊಂಡಿದ್ದಾರೆ. ದೈವದ ಮುಕ್ಕಾಲ್ದಿ ಸುನಿಲ್ ಶೆಟ್ಟಿ ಅವರ ಸೊಂಟ ಮತ್ತು ಕಾಲಿಗೆ ಗಾಯವಾಗಿದ್ದರೆ, ಹರೀಶ್ ಎಂಬವರ ಎರಡು ಕಾಲುಗಳು ಮುರಿದಿವೆ. ಉಳಿದಂತೆ ಲೋಕೇಶ್ ಭಂಡಾರಿ, ರಾಜೇಶ್, ಯಶೋಧರ್, ಅಶೋಕ್, ದಿನೇಶ್, ಪ್ರವೀಣ್ ಶೆಟ್ಟಿ ಹಾಗೂ ಉದಯ ಎಂಬುವವರಿಗೆ ಸಣ್ಣಪುಟ್ಟ ಗಾಯಗಳಾಗಿವೆ. ಸುನಿಲ್ ಶೆಟ್ಟಿ ಸೇರಿದಂತೆ ನಾಲ್ವರನ್ನು ಮಂಗಳೂರಿನ ಖಾಸಗಿ ಆಸ್ಪತ್ರೆಗೆ ದಾಖಲಿಸಲಾಗಿದ್ದು, ಉಳಿದವರಿಗೆ ಮೂಡುಬಿದಿರೆಯ ಆಸ್ಪತ್ರೆಯಲ್ಲಿ ಚಿಕಿತ್ಸೆ ನೀಡಲಾಗುತ್ತಿದೆ.

ಧಾರ್ಮಿಕ ಪರಿಕರಗಳಿಗೆ ಹಾನಿ

ದೈವದ ಪಲ್ಲಕ್ಕಿ ಉರುಳಿ ಬಿದ್ದ ಪರಿಣಾಮ ಅದರಲ್ಲಿದ್ದ ಮೊಗಮೂರ್ತಿ ಹಾಗೂ ಇತರ ಪವಿತ್ರ ಧಾರ್ಮಿಕ ಪರಿಕರಗಳಿಗೆ ಹಾನಿಯಾಗಿದೆ ಎಂದು ತಿಳಿದುಬಂದಿದೆ. ಸೇತುವೆ ಕುಸಿಯುವ ದೃಶ್ಯದ ವಿಡಿಯೋ ಇದೀಗ ಸಾಮಾಜಿಕ ಜಾಲತಾಣಗಳಲ್ಲಿ ವ್ಯಾಪಕವಾಗಿ ವೈರಲ್ ಆಗುತ್ತಿದೆ.

Read More
Next Story