ಮಾ. 28ರಂದು ಮೇಲುಕೋಟೆ ವೈರಮುಡಿ ಕಿರೀಟ ಧಾರಣೆ: ಲಕ್ಷಾಂತರ ಭಕ್ತರ ಆಗಮನ
x
ಸಂಗ್ರಹ ಚಿತ್ರ

ಮಾ. 28ರಂದು ಮೇಲುಕೋಟೆ ವೈರಮುಡಿ ಕಿರೀಟ ಧಾರಣೆ: ಲಕ್ಷಾಂತರ ಭಕ್ತರ ಆಗಮನ

ಐತಿಹಾಸಿಕ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಮಾ.23 ರಿಂದ ಏ.4ರವರೆಗೆ ಜರುಗಲಿದ್ದು, ಮಾ.28ರಂದು ನಡೆಯಲಿರುವ 'ಕಿರೀಟ ಧಾರಣೆ' ಮಹೋತ್ಸವ ನಡೆಯಲಿದೆ.


Click the Play button to hear this message in audio format

ಐತಿಹಾಸಿಕ ಪ್ರಸಿದ್ಧ ಮೇಲುಕೋಟೆ ಶ್ರೀ ಚೆಲುವನಾರಾಯಣಸ್ವಾಮಿ ವೈರಮುಡಿ ಬ್ರಹ್ಮೋತ್ಸವವು ಈ ವರ್ಷ ಮಾರ್ಚ್ 23 ರಿಂದ ಏಪ್ರಿಲ್ 4 ರವರೆಗೆ ಅತ್ಯಂತ ವಿಜೃಂಭಣೆಯಿಂದ ನಡೆಯಲಿದೆ.

ಈ ಉತ್ಸವಕ್ಕೆ ಆಗಮಿಸುವ ಲಕ್ಷಾಂತರ ಭಕ್ತರಿಗೆ ಯಾವುದೇ ತೊಂದರೆಯಾಗದಂತೆ ಸಕಲ ಸಿದ್ಧತೆ ಮಾಡಿಕೊಳ್ಳುವಂತೆ ಜಿಲ್ಲಾ ಉಸ್ತುವಾರಿ ಸಚಿವ ಎನ್. ಚಲುವರಾಯಸ್ವಾಮಿ ಅಧಿಕಾರಿಗಳಿಗೆ ಕಟ್ಟುನಿಟ್ಟಿನ ಸೂಚನೆ ನೀಡಿದ್ದಾರೆ.

ಉತ್ಸವದ ಪ್ರಮುಖ ಆಕರ್ಷಣೆಯಾದ ಹಾಗೂ ಭಕ್ತಸಾಗರವೇ ಹರಿದುಬರುವ 'ವೈರಮುಡಿ ಕಿರೀಟ ಧಾರಣೆ' ಮಹೋತ್ಸವವು ಮಾರ್ಚ್ 28 ರಂದು ನಡೆಯಲಿದೆ. ಈ ಹಿನ್ನೆಲೆಯಲ್ಲಿ ಜಿಲ್ಲಾಡಳಿತ ಈಗಿನಿಂದಲೇ ಕಾರ್ಯಪ್ರವೃತ್ತವಾಗಿದ್ದು, ಅಗತ್ಯ ಮೂಲಸೌಕರ್ಯಗಳನ್ನು ಕಲ್ಪಿಸಲು ಮತ್ತು ಬಿಗಿ ಭದ್ರತೆ ಒದಗಿಸಲು ಮುಂದಾಗಿದೆ.

ಮೂಲಸೌಕರ್ಯಕ್ಕೆ ಸಚಿವರ ಒತ್ತು

ವೈರಮುಡಿ ಉತ್ಸವದಲ್ಲಿ ರಾಜ್ಯ ಹಾಗೂ ಹೊರರಾಜ್ಯಗಳಿಂದ ಲಕ್ಷಾಂತರ ಭಕ್ತರು ಪಾಲ್ಗೊಳ್ಳುವುದರಿಂದ, ಕುಡಿಯುವ ನೀರು, ಶೌಚಾಲಯ ಸೇರಿದಂತೆ ಯಾವುದೇ ಮೂಲಸೌಕರ್ಯಗಳ ಕೊರತೆಯಾಗದಂತೆ ಎಚ್ಚರವಹಿಸಬೇಕು. ಉತ್ಸವದಲ್ಲಿ ಯಾವುದೇ ಲೋಪದೋಷಗಳಾಗದಂತೆ ನೋಡಿಕೊಳ್ಳಲು ಅಧಿಕಾರಿಗಳು ಈಗಿನಿಂದಲೇ ಸಿದ್ಧತೆಗಳನ್ನು ಆರಂಭಿಸಬೇಕು ಎಂದು ಸಚಿವ ಚಲುವರಾಯಸ್ವಾಮಿ ನಿರ್ದೇಶನ ನೀಡಿದ್ದಾರೆ.

ಪೊಲೀಸ್ ಇಲಾಖೆಯು, ಕಿರೀಟಧಾರಣಾ ಮೆರವಣಿಗೆಯ ಸಂದರ್ಭದಲ್ಲಿ ಬಿಗಿ ಬಂದೋಬಸ್ತ್ ಏರ್ಪಡಿಸಬೇಕು. ಭಕ್ತರು ಶಾಂತಿಯುತವಾಗಿ ಹಾಗೂ ಸಮಾಧಾನದಿಂದ ದೇವರ ದರ್ಶನ ಪಡೆಯಲು ಅಗತ್ಯ ವ್ಯವಸ್ಥೆ ಮಾಡಬೇಕು. ಈ ಸಂಬಂಧ ದೇವಸ್ಥಾನದ ಅರ್ಚಕರೊಂದಿಗೆ ಸಭೆ ನಡೆಸಿ, ಸುಗಮ ದರ್ಶನಕ್ಕೆ ಪೂರಕವಾದ ಸಿದ್ಧತೆಗಳನ್ನು ಮಾಡಿಕೊಳ್ಳುವಂತೆ ಅವರು ಸೂಚಿಸಿದ್ದಾರೆ.

ಜಿಲ್ಲಾಧಿಕಾರಿಗಳ ನೇತೃತ್ವದಲ್ಲಿ ಸಭೆ

ಮಂಡ್ಯ ಜಿಲ್ಲಾಧಿಕಾರಿ ಡಾ. ಕುಮಾರ್ ಅವರು ಈಗಾಗಲೇ ಅಧಿಕಾರಿಗಳೊಂದಿಗೆ ಪೂರ್ವಭಾವಿ ಸಭೆ ನಡೆಸಿದ್ದು, ವಾಹನ ನಿಲುಗಡೆ (ಪಾರ್ಕಿಂಗ್) ಮತ್ತು ಸಂಚಾರ ವ್ಯವಸ್ಥೆಯನ್ನು ಅಚ್ಚುಕಟ್ಟಾಗಿ ನಿರ್ವಹಿಸುವಂತೆ ಸೂಚಿಸಿದ್ದಾರೆ. ಲಕ್ಷಾಂತರ ಭಕ್ತರು ಆಗಮಿಸುವ ನಿರೀಕ್ಷೆಯಿರುವುದರಿಂದ, ತುರ್ತು ಆರೋಗ್ಯ ಸೇವೆಗಳು, ಸುಗಮ ಪ್ರಯಾಣಕ್ಕಾಗಿ ಹೆಚ್ಚುವರಿ ಕೆ.ಎಸ್.ಆರ್.ಟಿ.ಸಿ ಬಸ್‌ಗಳ ವ್ಯವಸ್ಥೆ ಹಾಗೂ ಬಿಗಿ ಪೊಲೀಸ್ ಬಂದೋಬಸ್ತ್ ಒದಗಿಸಲು ಸಭೆಯಲ್ಲಿ ವಿಶೇಷ ಆದ್ಯತೆ ನೀಡಲಾಗಿದೆ.

Read More
Next Story