
ನೀಟ್ ಅಕ್ರಮ ಮರೆಮಾಚಲು ಹಿಜಾಬ್ ವಿವಾದ ಎತ್ತಿದ ಬಿಜೆಪಿ; ಮಧು ಬಂಗಾರಪ್ಪ ಆಕ್ರೋಶ
ಸಮವಸ್ತ್ರ ವಿಚಾರದಲ್ಲಿ ಕೇಂದ್ರೀಯ ವಿದ್ಯಾಲಯಗಳಲ್ಲಿ ಯಾವ ನಿಯಮಗಳಿವೆಯೋ ಅದೇ ನಿಯಮಗಳು ನಮ್ಮ ರಾಜ್ಯದ ಶಾಲೆಗಳಲ್ಲೂ ಇವೆ.
ರಾಷ್ಟ್ರಮಟ್ಟದಲ್ಲಿ 'ನೀಟ್' ಪರೀಕ್ಷಾ ಅಕ್ರಮದ ಕಳಂಕದಿಂದ ನುಣುಚಿಕೊಳ್ಳಲು ಕೇಂದ್ರದ ಬಿಜೆಪಿ ಸರ್ಕಾರ ಹಾಗೂ ರಾಜ್ಯದ ಬಿಜೆಪಿ ನಾಯಕರು ಹಿಜಾಬ್ ವಿಚಾರವನ್ನು ಮುನ್ನೆಲೆಗೆ ತರುತ್ತಿದ್ದಾರೆ ಎಂದು ಶಿಕ್ಷಣ ಸಚಿವ ಮಧು ಬಂಗಾರಪ್ಪ ಆಕ್ರೋಶ ವ್ಯಕ್ತಪಡಿಸಿದರು.
ಮೈಸೂರಿನಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರ ನಿವಾಸಕ್ಕೆ ಭೇಟಿ ನೀಡಿದ ಬಳಿಕ ಮಾಧ್ಯಮದವರೊಂದಿಗೆ ಮಾತನಾಡಿದ ಅವರು, ಹಿಜಾಬ್ ವಿವಾದ, ರಾಷ್ಟ್ರೀಯ ಶಿಕ್ಷಣ ನೀತಿ, ಶಾಲೆ ಮುಚ್ಚುವ ವದಂತಿ ಹಾಗೂ ಕೇಂದ್ರ ಶಿಕ್ಷಣ ಸಚಿವರ ಕಾರ್ಯವೈಖರಿ ಕುರಿತು ಹರಿತವಾದ ಮಾತುಗಳಲ್ಲಿ ಬಿಜೆಪಿಗೆ ತಿರುಗೇಟು ನೀಡಿದರು
ಕೇಂದ್ರೀಯ ವಿದ್ಯಾಲಯದಲ್ಲಿ ಕೇಸರಿ ಶಾಲು ಹಾಕಿಸಲಿ
ಸರ್ಕಾರಿ ಶಾಲೆಗಳಲ್ಲಿ ಹಿಜಾಬ್ಗೆ ಅವಕಾಶ ನೀಡಲಾಗುತ್ತಿದೆ ಎಂಬ ಬಿಜೆಪಿಯ ಆರೋಪಗಳನ್ನು ತಳ್ಳಿಹಾಕಿದ ಸಚಿವರು, ಸಮವಸ್ತ್ರ ನಿಯಮಗಳ ಕುರಿತು ಸ್ಪಷ್ಟನೆ ನೀಡಿದರು.
"ಸಮವಸ್ತ್ರ ವಿಷಯದಲ್ಲಿ ಕೇಂದ್ರೀಯ ವಿದ್ಯಾಲಯ, ಮಹಾರಾಷ್ಟ್ರ ಅಥವಾ ಕರ್ನಾಟಕಕ್ಕೆ ಪ್ರತ್ಯೇಕ ನಿಯಮಗಳಿವೆಯೇ?, ಕೇಂದ್ರ ಸರ್ಕಾರದ ಅಡಿಯಲ್ಲಿ ಬರುವ ಕೇಂದ್ರೀಯ ವಿದ್ಯಾಲಯಗಳಲ್ಲಿ ಯಾವ ನಿಯಮಗಳಿವೆಯೋ ಅದೇ ನಿಯಮಗಳು ನಮ್ಮ ರಾಜ್ಯದ ಶಾಲೆಗಳಲ್ಲೂ ಇವೆ. ಬಿಜೆಪಿಯವರಿಗೆ ಅಷ್ಟೊಂದು ಹಠವಿದ್ದರೆ ಮೊದಲು ಕೇಂದ್ರೀಯ ವಿದ್ಯಾಲಯಗಳಿಗೆ ಹೋಗಿ ಕೇಸರಿ ಶಾಲು ಹಂಚಲಿ, ಆಮೇಲೆ ನಮ್ಮ ಬಳಿ ಮಾತನಾಡಲು ಬರಲಿ" ಎಂದು ಸವಾಲು ಹಾಕಿದರು.
"ರಾಜ್ಯದ ಒಟ್ಟು ವಿದ್ಯಾರ್ಥಿಗಳಲ್ಲಿ ಶೇ. 95 ರಷ್ಟು ಮಂದಿ ಹಿಂದೂ ವಿದ್ಯಾರ್ಥಿಗಳೇ ಇದ್ದಾರೆ. ಅನಗತ್ಯವಾಗಿ ಟೀಕೆ ಮಾಡುವ ರಾಜಕಾರಣಿಗಳೆಲ್ಲರೂ ಒಮ್ಮೆ ಆ ಬಡ ಮಕ್ಕಳ ಕಾಲಡಿಗೆ ಹೋಗಿ ನಿಲ್ಲಲಿ, ಆಗ ಅವರಿಗೆ ಬಡತನ ಮತ್ತು ಶಿಕ್ಷಣದ ಮಹತ್ವದ ಬುದ್ಧಿ ಬರುತ್ತದೆ. ಬಿಜೆಪಿಯವರಿಗೆ ಅದು ‘ಹಿಜಾಬ್’ ಆಗಿ ಕಾಣಿಸಬಹುದು, ಆದರೆ ನಮಗೆ ಅದು ಶಿಕ್ಷಣದಲ್ಲಿ ‘ಸಮಾನತೆ’" ಎಂದು ಸ್ಪಷ್ಟಪಡಿಸಿದರು.
ʼಧರ್ಮೇಂದ್ರ ಪ್ರಧಾನ್‌ಗೆ ಪರೀಕ್ಷೆ ನಡೆಸಲು ಬರಲ್ಲʼ
ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರ ಕಾರ್ಯವೈಖರಿ ಟೀಕಿಸಿದ ಮಧು ಬಂಗಾರಪ್ಪ, ಪರೀಕ್ಷೆಗಳನ್ನು ದೋಷಮುಕ್ತವಾಗಿ ನಡೆಸುವುದು ಹೇಗೆ ಎಂಬುದನ್ನು ತಾವೇ ಹೇಳಿಕೊಡುವುದಾಗಿ ವ್ಯಂಗ್ಯವಾಡಿದರು.
ಕರ್ನಾಟಕದಲ್ಲಿ ಯಾವುದೇ ಗೊಂದಲವಿಲ್ಲದೆ ಮೂರು ಪಿಯುಸಿ, ಎಸ್ಎಸ್ಎಲ್ಸಿ ಪರೀಕ್ಷೆಗಳನ್ನು ಯಶಸ್ವಿಯಾಗಿ ನಡೆಸಿದ್ದೇನೆ. ಎಲ್ಲೂ ಒಂದು ಪ್ರಶ್ನೆ ಪತ್ರಿಕೆಯೂ ಸೋರಿಕೆಯಾಗಿಲ್ಲ. ಕೇಂದ್ರ ಶಿಕ್ಷಣ ಸಚಿವ ಧರ್ಮೇಂದ್ರ ಪ್ರಧಾನ್ ಅವರಿಗೆ ಪರೀಕ್ಷೆಗಳನ್ನು ಅಚ್ಚುಕಟ್ಟಾಗಿ ನಡೆಸಲು ಕಲಿತಿಲ್ಲ ಎಂದರೆ, ನನ್ನ ಬಳಿಗೆ ಬರಲಿ. ಪರೀಕ್ಷೆಗಳನ್ನು ಪಾರದರ್ಶಕವಾಗಿ ಹೇಗೆ ನಡೆಸಬೇಕು ಎಂದು ನಾನೇ ಅವರಿಗೆ ಹೇಳಿಕೊಡುತ್ತೇನೆ." ಎಂದು ತಿರುಗೇಟು ನೀಡಿದರು.
ʼನಕಲು ಅಂಕಪಟ್ಟಿಯಾದರೂ ತೋರಿಸಲಿʼ
ತಮ್ಮ ವಿದ್ಯಾಭ್ಯಾಸದ ಕುರಿತು ವಿರೋಧ ಪಕ್ಷಗಳು ಮಾಡುತ್ತಿರುವ ಟೀಕೆಗಳಿಗೆ ಉತ್ತರಿಸಿದ ಸಚಿವರು, "ನಾನು ಪಿಯುಸಿ ಮುಗಿಸಿದ ಬಳಿಕ ಉದ್ಯಮ ರಂಗದಲ್ಲಿ ಆಸಕ್ತಿ ಇದ್ದ ಕಾರಣ ಶಿಕ್ಷಣವನ್ನು ಅಲ್ಲಿಗೆ ನಿಲ್ಲಿಸಿ ಬಿಸಿನೆಸ್ಗೆ ಮುನ್ನಡೆದೆ. ನನ್ನ ವಿದ್ಯಾಭ್ಯಾಸದ ಬಗ್ಗೆ ಮಾತನಾಡುವವರು, ಮೊದಲು ಪ್ರಧಾನಿ ನರೇಂದ್ರ ಮೋದಿ ಅವರ ನಕಲು ಅಂಕಪಟ್ಟಿಯನ್ನಾದರೂ ತಂದು ತೋರಿಸಲಿ" ಎಂದು ಸವಾಲು ಎಸೆದರು.
ಜೂನ್‌ನಲ್ಲಿ ರಾಜ್ಯ ಶಿಕ್ಷಣ ನೀತಿ ಮಂಡನೆ
ರಾಜ್ಯದ ಸ್ವಂತ ಶಿಕ್ಷಣ ನೀತಿ ಜಾರಿ ಕುರಿತು ಮಹತ್ವದ ಮಾಹಿತಿ ನೀಡಿದ ಸಚಿವರು, "ಬರುವ ಜೂನ್ ತಿಂಗಳಿನಲ್ಲಿ ನಡೆಯಲಿರುವ ಸಚಿವ ಸಂಪುಟ ಸಭೆಯಲ್ಲಿ ರಾಜ್ಯ ಶಿಕ್ಷಣ ನೀತಿಯನ್ನು ಮಂಡಿಸಲಾಗುವುದು. ಕ್ಯಾಬಿನೆಟ್ ಉಪಸಮಿತಿಯ ಶಿಫಾರಸು ಮತ್ತು ಸಲಹೆಗಳ ಆಧಾರದ ಮೇಲೆ ಮುಂದಿನ ನಿರ್ಧಾರ ಕೈಗೊಳ್ಳಲಾಗುವುದು" ಎಂದರು.
ಕಲಿಕೆಯ ವಿಷಯದಲ್ಲಿ ರಾಜಿಯಾಗುವ ಪ್ರಶ್ನೆಯೇ ಇಲ್ಲ ಎಂದ ಅವರು, "ಮಕ್ಕಳಿಗೆ ಕಲಿಕೆ ಎನ್ನುವುದು ಎಲ್ಲೂ ಒಂದೇ ಆಗಿರುತ್ತದೆ. ಆದರೆ, ಬಿಜೆಪಿ ತನ್ನ ಹಿಂದುತ್ವದ ಸಿದ್ಧಾಂತಗಳನ್ನು ಶಾಲಾ ಪಠ್ಯಪುಸ್ತಕಗಳಲ್ಲಿ ತುರುಕಲು ನಾವು ಯಾವುದೇ ಕಾರಣಕ್ಕೂ ಬಿಡುವುದಿಲ್ಲ. ಇದೇ ಕಾರಣಕ್ಕಾಗಿ ನಾವು ಅಧಿಕಾರಕ್ಕೆ ಬಂದ ತಕ್ಷಣ ಪಠ್ಯಪುಸ್ತಕಗಳ ಪರಿಷ್ಕರಣೆ ಮಾಡಿದೆವು" ಎಂದು ಸಮರ್ಥಿಸಿಕೊಂಡರು.
40 ಸಾವಿರ ಶಾಲೆ ಮುಚ್ಚುವ ವದಂತಿ ಸುಳ್ಳು
ರಾಜ್ಯದಲ್ಲಿ ಸರ್ಕಾರಿ ಶಾಲೆಗಳನ್ನು ಮುಚ್ಚಲಾಗುತ್ತಿದೆ ಎಂಬ ಸಾರ್ವಜನಿಕ ವಲಯದ ಗೊಂದಲಗಳಿಗೆ ಸಚಿವರು ತೆರೆ ಎಳೆದರು. "ರಾಜ್ಯದಲ್ಲಿ ಒಟ್ಟು ಇರುವುದೇ 46 ಸಾವಿರ ಸರ್ಕಾರಿ ಶಾಲೆಗಳು. ಹಾಗಿರುವಾಗ 40 ಸಾವಿರ ಶಾಲೆಗಳನ್ನು ಮುಚ್ಚಲು ಹೇಗೆ ಸಾಧ್ಯ? ಇಂತಹ ವ್ಯವಸ್ಥಿತ ತಪ್ಪು ಕಲ್ಪನೆಗಳನ್ನು ಮತ್ತು ವದಂತಿಗಳನ್ನು ಸಾರ್ವಜನಿಕರು ಹಾಗೂ ಪೋಷಕರು ನಂಬಬಾರದು. ಎಲ್ಲಾ ಶಾಲೆಗಳೂ ಯಥಾಸ್ಥಿತಿಯಲ್ಲಿ ಮುಂದುವರಿಯಲಿವೆ" ಎಂದು ಸಚಿವರು ಭರವಸೆ ನೀಡಿದರು.

