ಬೆಟ್ಟದ ಮೇಲಿಂದ 50 ಅಡಿ ಪ್ರಪಾತಕ್ಕೆ ಬಿದ್ದ ಉಪನ್ಯಾಸಕ; ಆಸ್ಪತ್ರೆಯಲ್ಲಿ ಚಿಕಿತ್ಸೆ
x

ಬೆಟ್ಟದ ಮೇಲಿಂದ 50 ಅಡಿ ಪ್ರಪಾತಕ್ಕೆ ಬಿದ್ದ ಉಪನ್ಯಾಸಕ; ಆಸ್ಪತ್ರೆಯಲ್ಲಿ ಚಿಕಿತ್ಸೆ

ಅದೃಷ್ಟವಶಾತ್ ಉಪನ್ಯಾಸಕ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ.


ತುಮಕೂರಿನ ಪ್ರಸಿದ್ಧ ಪ್ರವಾಸಿ ತಾಣವಾದ ದೇವರಾಯನದುರ್ಗ ಬೆಟ್ಟದಲ್ಲಿ ಹೊರರಾಜ್ಯದ ಸಾಫ್ಟ್ವೇರ್ ಎಂಜಿನಿಯರ್‌ಗಳಿಗೆ ಸೂರ್ಯಾಸ್ತ ತೋರಿಸುವ ಭರದಲ್ಲಿ ಉಪನ್ಯಾಸಕರೊಬ್ಬರು ಕಾಲು ಜಾರಿ 50 ಅಡಿ ಆಳದ ಪ್ರಪಾತಕ್ಕೆ ಬಿದ್ದು ಗಂಭೀರ ಗಾಯಗೊಂಡಿರುವ ಘಟನೆ ತಡವಾಗಿ ಬೆಳಕಿಗೆ ಬಂದಿದೆ.

ಅದೃಷ್ಟವಶಾತ್ ಉಪನ್ಯಾಸಕ ಪ್ರಾಣಾಪಾಯದಿಂದ ಪಾರಾಗಿದ್ದು, ಸದ್ಯ ತುಮಕೂರಿನ ಖಾಸಗಿ ಆಸ್ಪತ್ರೆಯಲ್ಲಿ ಚಿಕಿತ್ಸೆ ಪಡೆಯುತ್ತಿದ್ದಾರೆ. ತುಮಕೂರು ತಾಲೂಕಿನ ಒಬಳಾಪುರ ಮೂಲದ ಪ್ರಸ್ತುತ ಅರಸೀಕೆರೆಯ ಪಿಯು ಕಾಲೇಜಿನಲ್ಲಿ ಕಾರ್ಯನಿರ್ವಹಿಸುತ್ತಿರುವ ಶಿವಪ್ರಸಾದ್ ಗಾಯಗೊಂಡ ಉಪನ್ಯಾಸಕ.

ಘಟನೆ ನಡೆದಿದ್ದು ಹೇಗೆ?

ಉಪನ್ಯಾಸಕ ಶಿವಪ್ರಸಾದ್ ಅವರು ಶನಿವಾರ ಸಂಜೆ ತಮ್ಮ ಸ್ನೇಹಿತನೊಂದಿಗೆ ದೇವರಾಯನದುರ್ಗ ಬೆಟ್ಟಕ್ಕೆ ವಿಹಾರಕ್ಕೆ ತೆರಳಿದ್ದರು. ಇದೇ ವೇಳೆ ಬೆಟ್ಟ ವೀಕ್ಷಣೆಗಾಗಿ ಹೊರರಾಜ್ಯದ ಆರು ಮಂದಿ ಸಾಫ್ಟ್ವೇರ್ ಎಂಜಿನಿಯರ್‌ಗಳು ಅಲ್ಲಿಗೆ ಬಂದಿದ್ದರು.

ಸ್ಥಳೀಯರಾಗಿದ್ದ ಶಿವಪ್ರಸಾದ್ ಅವರು ಪ್ರವಾಸಿಗರಿಗೆ ಸಹಾಯ ಮಾಡುವ ಉದ್ದೇಶದಿಂದ ಇಲ್ಲಿಂದ ಸೂರ್ಯಾಸ್ತ ಅತ್ಯಂತ ಅದ್ಭುತವಾಗಿ ಕಾಣಿಸುತ್ತದೆ ಎಂದು ಹೇಳಿ ಟೆಕ್ಕಿಗಳನ್ನು ದೇವರಾಯನದುರ್ಗ ದೇವಾಲಯದ ಹಿಂಭಾಗದ ಅಪಾಯಕಾರಿ ಬಂಡೆಯ ತುದಿಗೆ ಕರೆದೊಯ್ದಿದ್ದಾರೆ.

ಬಂಡೆಯ ತುದಿಯಲ್ಲಿ ನಿಂತು ಸೂರ್ಯಾಸ್ತ ವೀಕ್ಷಿಸುವಂತೆ ಪ್ರವಾಸಿಗರಿಗೆ ಮಾರ್ಗದರ್ಶನ ನೀಡುತ್ತಿದ್ದಾಗ ಶಿವಪ್ರಸಾದ್ ಆಯತಪ್ಪಿ ಕೆಳಕ್ಕೆ ಬಿದ್ದಿದ್ದಾರೆ. ಇದನ್ನು ಕಂಡು ಸ್ನೇಹಿತರು ಹಾಗೂ ಟೆಕ್ಕಿಗಳು ಕೂಡಲೇ ಪ್ರಪಾತಕ್ಕೆ ಇಳಿದು ಶಿವಪ್ರಸಾದ್ ಅವರನ್ನು ಮೇಲೆತ್ತಿ ರಕ್ಷಿಸಿದ್ದಾರೆ.

ಬಂಡೆಗಳ ಮಧ್ಯೆ ಬಿದ್ದ ರಭಸಕ್ಕೆ ಶಿವಪ್ರಸಾದ್ ಅವರ ಕಾಲಿಗೆ ತೀವ್ರ ಸ್ವರೂಪದ ಗಾಯಗಳಾಗಿವೆ. ತಕ್ಷಣವೇ ಅವರನ್ನು ತುಮಕೂರಿನ ಖಾಸಗಿ ಆಸ್ಪತ್ರೆಗೆ ರವಾನಿಸಲಾಗಿದ್ದು, ಸದ್ಯ ಪ್ರಾಣಾಪಾಯದಿಂದ ಪಾರಾಗಿದ್ದಾರೆ ಎಂದು ವೈದ್ಯರು ತಿಳಿಸಿದ್ದಾರೆ. ಘಟನೆಗೆ ಸಂಬಂಧಿಸಿದಂತೆ ಕ್ಯಾತಸಂದ್ರ ಪೊಲೀಸ್ ಠಾಣೆಯಲ್ಲಿ ಪ್ರಕರಣ ದಾಖಲಾಗಿದೆ.

Read More
Next Story