
ಅರಣ್ಯ ಭೂಮಿಯಲ್ಲಿ ಅಕ್ರಮ ರಸ್ತೆ, ನೂರಾರು ಮರಗಳ ಲೂಟಿ- ಅರಣ್ಯಾಧಿಕಾರಿಗಳು ಸಸ್ಪೆಂಡ್
ಶಿವಮೊಗ್ಗ ಜಿಲ್ಲೆ ಸಾಗರದ ಮಾಲ್ವಿ ಅರಣ್ಯ ಪ್ರದೇಶದಲ್ಲಿ ಜೆಸಿಬಿ ಬಳಸಿ ಅಕ್ರಮ ರಸ್ತೆ ನಿರ್ಮಾಣ ಹಾಗೂ ನೂರಾರು ಮರಗಳ ಕಳ್ಳಸಾಗಾಣಿಕೆಗೆ ಸಹಕರಿಸಿದ ಆರೋಪದ ಮೇಲೆ ಉಪ ವಲಯ ಅರಣ್ಯಾಧಿಕಾರಿ ವಿಜಯಕುಮಾರ್ ಹಾಗೂ ಅರಣ್ಯ ಪಾಲಕ ಶಿವನಗೌಡ ಅವರನ್ನು ಅಮಾನತುಗೊಳಿಸಲಾಗಿದೆ.
ಅರಣ್ಯ ರಕ್ಷಣೆ ಮಾಡಬೇಕಾದ ಕೈಗಳೇ ಮರಗಳ ಮಾರಣಹೋಮಕ್ಕೆ ಪರೋಕ್ಷವಾಗಿ ಬೆಂಬಲ ನೀಡಿದ ಆಘಾತಕಾರಿ ಘಟನೆ ಶಿವಮೊಗ್ಗದಲ್ಲಿ ನಡೆದಿದೆ. ಸಾಗರ ತಾಲೂಕಿನ ಮಾಲ್ವಿ ಅರಣ್ಯ ಪ್ರದೇಶದಲ್ಲಿ ಹಗಲು-ರಾತ್ರಿ ಜೆಸಿಬಿ ಸದ್ದು ಕೇಳುತ್ತಿದ್ದರೂ ಕಣ್ಮುಚ್ಚಿ ಕುಳಿತ ಅಧಿಕಾರಿಗಳು, ಮರಗಳ ಕಳ್ಳಸಾಗಾಣಿಕೆಗೆ ರತ್ನಗಂಬಳಿ ಹಾಸಿಕೊಟ್ಟಿದ್ದಾರೆ. ಸಂರಕ್ಷಿತ ಅರಣ್ಯವನ್ನೇ ನುಂಗಲು ಹೊಂಚು ಹಾಕಿದ್ದ ಕಿಡಿಗೇಡಿಗಳಿಗೆ ಸಾಥ್ ನೀಡಿದ ಇಬ್ಬರು ಅರಣ್ಯ ಅಧಿಕಾರಿಗಳಿಗೆ ಈಗ ಕಾನೂನಿನ ಬಿಸಿ ಮುಟ್ಟಿದೆ.
ಸಾಗರದ ಮಾಲ್ವಿ ಗ್ರಾಮದ ಅರಣ್ಯ ಭೂಮಿಯಲ್ಲಿ ಜೆಸಿಬಿ ಬಳಸಿ ಅಕ್ರಮ ರಸ್ತೆ ನಿರ್ಮಿಸಿ, ನೂರಾರು ಅಕೇಶಿಯಾ ಮರಗಳನ್ನು ಸದ್ದಿಲ್ಲದೆ ಸಾಗಾಟ ಮಾಡಿದ ಬೃಹತ್ ಹಗರಣ ಬಯಲಿಗೆ ಬಂದಿದೆ. ಈ ಪ್ರಕರಣದಲ್ಲಿ ಕರ್ತವ್ಯ ಲೋಪ ಎಸಗಿದ ಹಾಗೂ ದೋಷಪೂರಿತ ಎಫ್.ಐ.ಆರ್ ದಾಖಲಿಸಿ ಅಪರಾಧಿಗಳನ್ನು ರಕ್ಷಿಸಲು ಯತ್ನಿಸಿದ ಇಬ್ಬರು ಅಧಿಕಾರಿಗಳನ್ನು ಸಸ್ಪೆಂಡ್ ಮಾಡುವ ಮೂಲಕ ಸರ್ಕಾರ ಬಿಸಿ ಮುಟ್ಟಿಸಿದೆ.
ಅಕ್ರಮ ರಸ್ತೆ ನಿರ್ಮಾಣ
ಶಿವಮೊಗ್ಗ ಜಿಲ್ಲೆ ಸಾಗರ ತಾಲ್ಲೂಕಿನ ಮಾಲ್ವಿ ಗ್ರಾಮದ ಸರ್ವೆ ನಂ. 43ಕ್ಕೆ ಸೇರಿದ ಅರಣ್ಯ ಭೂಮಿಯಲ್ಲಿ ಈ ಅಕ್ರಮ ನಡೆದಿದೆ. ಇದು ಅರಣ್ಯ ಇಲಾಖೆಯ ಪರಿಹಾರಾತ್ಮಕ ಅರಣ್ಯ ಪ್ರದೇಶ (Compensatory Afforestation area), ಸೊಪ್ಪಿನಬೆಟ್ಟ ಹಾಗೂ ಸೆಕ್ಷನ್ 4ರ ಅಡಿಯಲ್ಲಿ ಅಧಿಸೂಚಿತಗೊಂಡಿರುವ ಸರ್ಕಾರಿ ಭೂಮಿಯಾಗಿದೆ. ಈ ಸಂರಕ್ಷಿತ ಪ್ರದೇಶದೊಳಗೆ ಯಾವುದೇ ಅನುಮತಿಯಿಲ್ಲದೆ ಜೆ.ಸಿ.ಬಿ (JCB) ಯಂತ್ರಗಳನ್ನು ಬಳಸಿ ನಿಯಮಬಾಹಿರವಾಗಿ ರಸ್ತೆಯನ್ನು ನಿರ್ಮಿಸಲಾಗಿದೆ.
ಅರಣ್ಯ ಸಂಪತ್ತಿನ ಲೂಟಿ
ರಸ್ತೆ ನಿರ್ಮಾಣ ಮಾಡುವ ಭರದಲ್ಲಿ ಅರಣ್ಯ ಇಲಾಖೆಯೇ ಜಾಗರೂಕತೆಯಿಂದ ಬೆಳೆಸಿದ್ದ ನೂರಾರು ಅಕೇಶಿಯಾ (Acacia) ಮತ್ತು ಇತರೆ ಕಾಡು ಮರಗಳನ್ನು ಅಕ್ರಮವಾಗಿ ಕಡಿಯಲಾಗಿದೆ. ಕೇವಲ ಮರ ಕಡಿಯುವುದು ಮಾತ್ರವಲ್ಲದೆ, ಆ ಮರಗಳನ್ನು ಅಕ್ರಮವಾಗಿ ಸಾಗಾಟ ಕೂಡ ಮಾಡಲಾಗಿದೆ ಎಂದು ದೂರಿನಲ್ಲಿ ವಿವರಿಸಲಾಗಿದೆ.
ಅಪರಾಧಿಗಳ ರಕ್ಷಣೆಗೆ ಯತ್ನಿಸಿದ ಅಧಿಕಾರಿಗಳು?
ಈ ಅಕ್ರಮದ ಬಗ್ಗೆ ಮೇ 7ರಂದು ಎಫ್.ಐ.ಆರ್ ದಾಖಲಾಗಿದ್ದರೂ, ಅದರಲ್ಲಿ ಅಕ್ರಮ ನಡೆದ ಸ್ಥಳವು "ಅರಣ್ಯದ ಹೊರಗೆ" ಎಂದು ನಮೂದಿಸುವ ಮೂಲಕ ಅಧಿಕಾರಿಗಳು ದೋಷಪೂರಿತ ವರದಿ ನೀಡಿದ್ದರು. ಇದು ಅಪರಾಧಿಗಳಿಗೆ ಕಾನೂನಿನ ಕುಣಿಕೆಯಿಂದ ತಪ್ಪಿಸಿಕೊಳ್ಳಲು ಅನುಕೂಲ ಮಾಡಿಕೊಡುವ ಪಿತೂರಿ ಎಂಬುದು ತನಿಖೆಯಲ್ಲಿ ಬಹಿರಂಗವಾಗಿದೆ. ಕರ್ನಾಟಕ ಅರಣ್ಯ ಅಧಿನಿಯಮದ ಸೆಕ್ಷನ್ 24, 33 ರಡಿ ದೋಷಪೂರಿತ ಎಫ್.ಐ.ಆರ್ ದಾಖಲಿಸಿರುವುದು ಮೇಲ್ನೋಟಕ್ಕೆ ಸಾಬೀತಾಗಿದೆ.
ಅಧಿಕಾರಿಗಳ ಅಮಾನತು
ಅರಣ್ಯ ಸಂಚಾರಿ ದಳದ ತನಿಖಾ ವರದಿ ಹಾಗೂ ಅರಣ್ಯ ಸಚಿವರ ಕಚೇರಿಗೆ ಸಲ್ಲಿಕೆಯಾದ ಸಚಿತ್ರ ದೂರಿನ ಹಿನ್ನೆಲೆಯಲ್ಲಿ ಈ ಕ್ರಮ ಕೈಗೊಳ್ಳಲಾಗಿದೆ. ಈ ಅಧಿಕಾರಿಗಳು ಕರ್ನಾಟಕ ಅರಣ್ಯ ಸಂಹಿತೆ 1976 ಮತ್ತು ನಾಗರೀಕ ಸೇವಾ (ನಡತೆ) ನಿಯಮಾವಳಿಗಳನ್ನು ಉಲ್ಲಂಘಿಸಿರುವುದು ದೃಢಪಟ್ಟ ಕಾರಣ, ಶಿವಮೊಗ್ಗ ವೃತ್ತದ ಮುಖ್ಯ ಅರಣ್ಯ ಸಂರಕ್ಷಣಾಧಿಕಾರಿಗಳು ಇಬ್ಬರನ್ನೂ ಇಲಾಖಾ ವಿಚಾರಣೆ ಬಾಕಿ ಇರಿಸಿ ಅಮಾನತುಗೊಳಿಸಿದ್ದಾರೆ. ಕೆಳದಿ ಶಾಖೆಯ ಉಪ ವಲಯ ಅರಣ್ಯಾಧಿಕಾರಿ (DRFO) ವಿಜಯಕುಮಾರ್ ಜೆ. ಮತ್ತು ಗಸ್ತು ಅರಣ್ಯ ಪಾಲಕ ಶಿವನಗೌಡ ದೊಡ್ಡಬಸಪ್ಪನವರ್ ಅಮಾನತಾದ ಅಧಿಕಾರಿಗಳು.
ಅಮಾನತಿನ ಅವಧಿಯಲ್ಲಿ ಇಬ್ಬರೂ ನೌಕರರು ಅನುಮತಿಯಿಲ್ಲದೆ ಕೇಂದ್ರಸ್ಥಾನ ಬಿಡುವಂತಿಲ್ಲ ಎಂದು ಆದೇಶದಲ್ಲಿ ಸ್ಪಷ್ಟಪಡಿಸಲಾಗಿದೆ. ಸಾಗರ ವಿಭಾಗದ ಉಪ ಅರಣ್ಯ ಸಂರಕ್ಷಣಾಧಿಕಾರಿಗಳಿಗೆ ಇವರ ವಿರುದ್ಧ ದೋಷಾರೋಪಣಾ ಪಟ್ಟಿ ಸಿದ್ಧಪಡಿಸಲು ಸೂಚನೆ ನೀಡಲಾಗಿದೆ.

