
ವೀರಶೈವ ಲಿಂಗಾಯತ ಪಂಚಮಸಾಲಿ ಗುರುಪೀಠದ ಪೀಠಾಧ್ಯಕ್ಷ ವಚನಾನಂದ ಶ್ರೀಗಳನ್ನು ಮಠದಿಂದ ಉಚ್ಚಾಟನೆ ಮಾಡಲಾಗಿದೆ.
ವಚನಾನಂದ ಶ್ರೀಗಳ ವಿರುದ್ಧ ದೂರವಾಣಿ ಕರೆ ರೆಕಾರ್ಡಿಂಗ್, ದುರ್ಬಳಕೆ ಆರೋಪ
ಶ್ರೀಗಳು ಯಾರನ್ನಾದರೂ ಯಾವಾಗ ಬೇಕಾದರೂ ಇಕ್ಕಟ್ಟಿಗೆ ಸಿಲುಕಿಸಬಹುದು. ಹೀಗಾಗಿ ಯಾರೂ ಕೂಡ ಅವರೊಂದಿಗೆ ಫೋನ್ನಲ್ಲಿ ಮಾತನಾಡಬೇಡಿ ಎಂದು ನಾಗರಾಜ್ ಮನವಿ ಮಾಡಿದ್ದಾರೆ.
ಹರಿಹರದ ಪಂಚಮಸಾಲಿ ಗುರುಪೀಠದ ವಿವಾದ ದಿನಕ್ಕೊಂದು ತಿರುವು ಪಡೆಯುತ್ತಿದೆ. ವಚನಾನಂದ ಶ್ರೀಗಳು ಹಾಗೂ ಪಂಚಮಸಾಲಿ ಟ್ರಸ್ಟ್ ನಡುವಿನ ತಿಕ್ಕಾಟವು ಆರೋಪ-ಪ್ರತ್ಯಾರೋಪಗಳಿಗೆ ಕಾರಣವಾಗಿದೆ. ಶ್ರೀಗಳ ವಿರುದ್ಧ ವಂಚನೆ ಆರೋಪ ಹೊರಿಸಿದ್ದ ಟ್ರಸ್ಟ್ ಸದಸ್ಯರು ಇದೀಗ ಹೊಸ ಬಾಂಬ್ ಸಿಡಿಸಿದ್ದಾರೆ. ವಚನಾನಂದ ಶ್ರೀಗಳು ರಾಜಕಾರಣಿಗಳು ಹಾಗೂ ಪ್ರಭಾವಿಗಳ ಜೊತೆ ಮಾತನಾಡುವಾಗಿ ಗುಪ್ತವಾಗಿ ಆಡಿಯೋ ರೆಕಾರ್ಡ್ ಮಾಡಿಕೊಂಡು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಪಂಚಮಸಾಲಿ ಸಮಾಜ ಟ್ರಸ್ಟ್ ಸದಸ್ಯ ಎಚ್.ಎಸ್. ನಾಗರಾಜ್ ಗಂಭೀರ ಆರೋಪ ಮಾಡಿದ್ದಾರೆ.
ದಾವಣಗೆರೆಯ ಖಾಸಗಿ ಹೋಟೆಲ್‌ನಲ್ಲಿ ಗುರುವಾರ ಸುದ್ದಿಗೋಷ್ಠಿ ಉದ್ದೇಶಿಸಿ ಮಾತನಾಡಿದ ಅವರು, ವಚನಾನಂದ ಶ್ರೀಗಳ ವಿರುದ್ಧ ದೂರವಾಣಿ ಕರೆಗಳ ರೆಕಾರ್ಡಿಂಗ್ ಆರೋಪ ಹೊರಿಸಿದ್ದಾರೆ. ಶ್ರೀಗಳು ರಾಜ್ಯದ ಪ್ರಭಾವಿ ರಾಜಕೀಯ ನಾಯಕರು ಮತ್ತು ಹಿರಿಯ ಅಧಿಕಾರಿಗಳೊಂದಿಗೆ ನಡೆಸುವ ಫೋನ್ ಸಂಭಾಷಣೆಗಳನ್ನು ಗುಟ್ಟಾಗಿ ರೆಕಾರ್ಡ್ ಮಾಡಿಕೊಳ್ಳುತ್ತಾರೆ. ಕೇವಲ ರೆಕಾರ್ಡಿಂಗ್ ಮಾಡುವುದು ಮಾತ್ರವಲ್ಲದೆ, ಆ ಆಡಿಯೋ ತುಣುಕುಗಳನ್ನು ಇತರರ ಮುಂದೆ ಪ್ರದರ್ಶಿಸಿ ತಮಗೆ ರಾಜಕೀಯ ನಾಯಕರೊಂದಿಗೆ ಎಷ್ಟೊಂದು ನಿಕಟ ಸಂಬಂಧವಿದೆ ಎಂದು ತೋರಿಸಿಕೊಳ್ಳುವ ಚಟ ಹೊಂದಿದ್ದಾರೆ ಎಂದು ದೂರಿದ್ದಾರೆ.
ರಾಜಕೀಯ ನಾಯಕರಿಗೆ ಎಚ್ಚರಿಕೆ
ರಾಜ್ಯದ ಆಡಳಿತ ಚುಕ್ಕಾಣಿ ಹಿಡಿದಿರುವ ಮತ್ತು ಪ್ರಮುಖ ಸ್ಥಾನಗಳಲ್ಲಿರುವ ನಾಯಕರಿಗೆ ವಚನಾನಂದ ಶ್ರೀಗಳ ನಡೆ ಅತ್ಯಂತ ಅಪಾಯಕಾರಿ. ಶ್ರೀಗಳು ಯಾರನ್ನಾದರೂ ಯಾವಾಗ ಬೇಕಾದರೂ ಇಕ್ಕಟ್ಟಿಗೆ ಸಿಲುಕಿಸಬಹುದು. ಹೀಗಾಗಿ ಯಾರೂ ಕೂಡ ಅವರೊಂದಿಗೆ ಫೋನ್ನಲ್ಲಿ ಮಾತನಾಡಬೇಡಿ, ಆಗೊಮ್ಮೆ ಮಾತನಾಡಿದರೂ ಎಚ್ಚರಿಕೆಯಿಂದ ಇರಬೇಕು ಎಂದು ನಾಗರಾಜ್ ಮನವಿ ಮಾಡಿದ್ದಾರೆ.
ಶ್ರೀಗಳು ತಮ್ಮ ಹಳೆಯ ಪೀಠವಾದ ಶ್ವಾಸಪೀಠ ಬಿಟ್ಟು ಪಂಚಮಸಾಲಿ ಪೀಠಕ್ಕೆ ಪೂರ್ಣವಾಗಿ ಸಮರ್ಪಿಸಿಕೊಳ್ಳುತ್ತಿಲ್ಲ. ಅವರ ವಿದೇಶಿ ಪ್ರವಾಸ, ಚಲನಚಿತ್ರ ನಟರೊಂದಿಗಿನ ಅತಿಯಾದ ಒಡನಾಟ ಮತ್ತು ಮಠದ ಸಂಪ್ರದಾಯಗಳಿಗೆ ವಿರುದ್ಧವಾದ ಜೀವನಶೈಲಿ ರೂಪಿಸಿಕೊಂಡಿದ್ದಾರೆ ಎಂದು ನಾಗರಾಜ್ ಅಸಮಾಧಾನ ವ್ಯಕ್ತಪಡಿಸಿದ್ದಾರೆ.
ವಚನಾನಂದ ಶ್ರೀಗಳ ವಿವಾದ ಏನು?
ಕಳೆದ ಕೆಲ ದಿನಗಳಿಂದ ಹರಿಹರ ಪಂಚಮಸಾಲಿ ಮಠದಲ್ಲಿ ಟ್ರಸ್ಟಿಗಳು ಮತ್ತು ಶ್ರೀಗಳ ನಡುವೆ ಲೆಕ್ಕ ಕೊಡಿ ಅಭಿಯಾನದ ಹೆಸರಿನಲ್ಲಿ ದೊಡ್ಡ ಮಟ್ಟದ ಸಂಘರ್ಷ ನಡೆಯುತ್ತಿದೆ.
ಕಳೆದ ಸೋಮವಾರ (ಏ.13) ನಡೆದ ಟ್ರಸ್ಟಿಗಳ ಸಭೆಯಲ್ಲಿ 15 ಮಂದಿ ಸದಸ್ಯರ ಪೈಕಿ 13 ಸದಸ್ಯರು ವಚನಾನಂದ ಶ್ರೀಗಳನ್ನು ಪೀಠದಿಂದ ಉಚ್ಚಾಟಿಸುವ ನಿರ್ಧಾರ ತೆಗೆದುಕೊಂಡರು. ಈ ಸುದ್ದಿ ಹೊರಬೀಳುತ್ತಿದ್ದಂತೆ ಮಠದ ಆವರಣದಲ್ಲಿ ಪರಿಸ್ಥಿತಿ ವಿಕೋಪಕ್ಕೆ ಹೋಗಿತ್ತು. ಶ್ರೀಗಳ ಬೆಂಬಲಿಗರು ಮತ್ತು ಟ್ರಸ್ಟ್ ಪರ ಇರುವವರ ಮಧ್ಯೆ ದೊಡ್ಡ ವಾಗ್ವಾದ ನಡೆದು, ಕೆಲ ಭಕ್ತರು ಟ್ರಸ್ಟಿಗಳ ವಾಹನಗಳಿಗೆ ಚಪ್ಪಲಿ ತೋರಿಸಿ ಆಕ್ರೋಶ ವ್ಯಕ್ತಪಡಿಸಿದ್ದರು.
ಪರಿಸ್ಥಿತಿ ನಿಯಂತ್ರಿಸಲು ತಹಶೀಲ್ದಾರ್ ಅವರು ಮಠದ ಸುತ್ತ ನಿಷೇಧಾಜ್ಞೆ ಜಾರಿಗೊಳಿಸಿದ್ದರು. ನೂರಾರು ಪ್ರತಿಭಟನಾಕಾರರನ್ನು ಪೊಲೀಸರು ವಶಕ್ಕೆ ಪಡೆದಿದ್ದರು. ಒಟ್ಟಾರೆ ಟ್ರಸ್ಟ್ ಹಾಗೂ ಶ್ರೀಗಳ ನಡುವಿನ ಸಂಘರ್ಷವು ಪಂಚಮಸಾಲಿ ಸಮುದಾಯದಲ್ಲಿ ತೀವ್ರ ಸಂಚಲನ ಮೂಡಿಸಿದೆ. ಅಲ್ಲದೇ, ಮಠದ ಆಡಳಿತ ವ್ಯವಸ್ಥೆಯಲ್ಲಿ ಭಾರೀ ಗೊಂದಲಕ್ಕೆ ಕಾರಣವಾಗಿದೆ.

