Trouble for the iPhone manufacturer in the state: Tax evasion allegations against Foxconn, protest warning!
x

ಫಾಕ್ಸ್‌ಕಾನ್  ಘಟಕ

ರಾಜ್ಯದಲ್ಲಿ ‘ಐಫೋನ್’ ತಯಾರಕ ಕಂಪನಿಗೆ ಸಂಕಷ್ಟ: ತೆರಿಗೆ ವಂಚನೆ ಆರೋಪ, ಪ್ರತಿಭಟನೆ ಎಚ್ಚರಿಕೆ!

ಇದೇ ಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇತರೆ ಕೈಗಾರಿಕಾ ಘಟಕಗಳು ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿವೆ. ಆದರೆ, ಪಾಕ್ಸ್​ಕಾನ್ ವಂಚಿಸಿದೆ.


Click the Play button to hear this message in audio format

ತೈವಾನ್ ಮೂಲದ ಚಿಪ್ ತಯಾರಕ ದಿಗ್ಗಜ ಹಾಗೂ ಆ್ಯಪಲ್ ಐಫೋನ್ ಅಸೆಂಬ್ಲಿ ಪಾಲುದಾರ ಕಂಪನಿಯಾದ ಫಾಕ್ಸ್‌ಕಾನ್ ಇದೀಗ ಕರ್ನಾಟಕದಲ್ಲಿ ವಿವಾದದ ಸುಳಿಯಲ್ಲಿ ಸಿಲುಕಿದೆ. ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಗ್ರಾಮ ಪಂಚಾಯಿತಿಯೊಂದು ಕಂಪನಿಯ ವಿರುದ್ಧ ತೆರಿಗೆ ವಂಚನೆ, ಕಟ್ಟಡ ನಿಯಮಗಳ ಉಲ್ಲಂಘನೆ ಹಾಗೂ ಸ್ಥಳೀಯರಿಗೆ ಉದ್ಯೋಗ ನಿರಾಕರಣೆಯಂತಹ ಗಂಭೀರ ಆರೋಪಗಳನ್ನು ಎದುರಿಸುತ್ತಿದೆ.

ದೊಡ್ಡಗೊಲ್ಲಹಳ್ಳಿ ಮತ್ತು ಅರುವನಹಳ್ಳಿ ಗ್ರಾಮಗಳ ವ್ಯಾಪ್ತಿಯಲ್ಲಿ ಸುಮಾರು 5.33 ಲಕ್ಷ ಚದರ ಮೀಟರ್‌ ವಿಸ್ತೀರ್ಣದಲ್ಲಿ ಫಾಕ್ಸ್‌ಕಾನ್ ಘಟಕ ತಲೆ ಎತ್ತಿದೆ. ಪಂಚಾಯತ್ ಅಧಿಕಾರಿಗಳ ಪ್ರಕಾರ, ಇಲ್ಲಿ ಈಗಾಗಲೇ ಬೃಹತ್ ಪ್ರಮಾಣದ ಕಟ್ಟಡ ನಿರ್ಮಾಣ ಕಾಮಗಾರಿ ಪೂರ್ಣಗೊಂಡಿದ್ದು, ಕಾರ್ಯಾಚರಣೆಯೂ ಆರಂಭವಾಗಿದೆ ಎಂದು ವರದಿಯಾಗಿದೆ. ಆದರೆ, ಅಧಿಕೃತ ದಾಖಲೆಗಳಲ್ಲಿ ಮಾತ್ರ ಈ ಜಮೀನನ್ನು ಇನ್ನೂ ‘ಖಾಲಿ ನಿವೇಶನ’ (Vacant Sites) ಎಂದೇ ನಮೂದಿಸಲಾಗಿದೆ.

ಈ ಹಿನ್ನೆಲೆಯಲ್ಲಿ ಗ್ರಾಮ ಪಂಚಾಯಿತಿ ಅಧಿಕಾರಿಗಳು ಫಾಕ್ಸ್‌ಕಾನ್‌ಗೆ ನೋಟಿಸ್ ಜಾರಿ ಮಾಡಿದ್ದು, ಅನುಮೋದಿತ ಕಟ್ಟಡ ನಕ್ಷೆಗಳು, ನಿರ್ಮಾಣ ಪರವಾನಗಿ, ಕಾಮಗಾರಿ ಪೂರ್ಣಗೊಂಡ ಪತ್ರ ಹಾಗೂ ಸ್ವಾಧೀನಾನುಭವ ಪತ್ರ ಸೇರಿದಂತೆ ಅಗತ್ಯ ದಾಖಲೆಗಳನ್ನು ಒದಗಿಸುವಂತೆ ಸೂಚಿಸಿದ್ದಾರೆ.

7 ದಿನಗಳ ಗಡುವು, ಕಾನೂನು ಕ್ರಮದ ಎಚ್ಚರಿಕೆ

ಇದೇ ಭಾಗದಲ್ಲಿರುವ ಕೆಂಪೇಗೌಡ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ಹಾಗೂ ಇತರೆ ಕೈಗಾರಿಕಾ ಘಟಕಗಳು ಸ್ಥಳೀಯ ಸಂಸ್ಥೆಗಳಿಗೆ ನಿಯಮಿತವಾಗಿ ತೆರಿಗೆ ಪಾವತಿಸುತ್ತಿವೆ. ಆದರೆ, ಫಾಕ್ಸ್‌ಕಾನ್ ಸ್ಥಳೀಯ ತೆರಿಗೆ ಪಾವತಿಸದೆ ಸತಾಯಿಸುತ್ತಿದೆ ಎಂದು ಪಂಚಾಯಿತಿ ಆರೋಪಿಸಿದೆ. ಕಂಪನಿಯು ತನ್ನ ಶಾಸನಬದ್ಧ ಕರ್ತವ್ಯಗಳನ್ನು ಪೂರೈಸುವಲ್ಲಿ ವಿಫಲವಾಗಿದೆ ಎಂದು ಅಸಮಾಧಾನ ವ್ಯಕ್ತಪಡಿಸಿರುವ ಅಧಿಕಾರಿಗಳು, ಮುಂದಿನ 7 ದಿನಗಳ ಒಳಗೆ ಅಗತ್ಯ ದಾಖಲೆಗಳನ್ನು ಸಲ್ಲಿಸದಿದ್ದರೆ ‘ಕರ್ನಾಟಕ ಗ್ರಾಮ ಸ್ವರಾಜ್ ಮತ್ತು ಪಂಚಾಯತ್ ರಾಜ್ ಕಾಯ್ದೆ’ ಅಡಿಯಲ್ಲಿ ಕಾನೂನು ಕ್ರಮ ಜರುಗಿಸುವುದಾಗಿ ಎಚ್ಚರಿಕೆ ನೀಡಿದ್ದಾರೆ.

ಸ್ಥಳೀಯರಿಗೆ ಕೆಲಸ ಇಲ್ಲ, ಹೊರಗಿನವರಿಗೆ ಮಣೆ

ಮತ್ತೊಂದೆಡೆ, ಸ್ಥಳೀಯರಿಗೆ ಉದ್ಯೋಗ ನೀಡುವ ವಿಚಾರದಲ್ಲೂ ಕಂಪನಿ ಮಾತು ತಪ್ಪಿದೆ ಎಂಬುದು ಗ್ರಾಮಸ್ಥರ ಆಕ್ರೋಶಕ್ಕೆ ಕಾರಣವಾಗಿದೆ. ಆರಂಭದಲ್ಲಿ ಸ್ಥಳೀಯ ಯುವಕರನ್ನು ಸಂದರ್ಶನಕ್ಕೆ ಕರೆಯಲಾಗಿತ್ತು, ಆದರೆ ಅಂತಿಮವಾಗಿ ಹೊರಗಿನವರನ್ನು ನೇಮಕ ಮಾಡಿಕೊಳ್ಳಲಾಗಿದೆ ಎಂದು ಸ್ಥಳೀಯ ಜನಪ್ರತಿನಿಧಿಗಳು ದೂರಿದ್ದಾರೆ. ಕಂಪನಿಯ ಅಧಿಕಾರಿಗಳೊಂದಿಗೆ ಹಲವು ಬಾರಿ ಸಭೆ ನಡೆಸಿದರೂ ಪ್ರಯೋಜನವಾಗಿಲ್ಲ ಎಂದು ಅವರು ಆರೋಪಿಸಿದ್ದಾರೆ.

ತಮ್ಮ ಬೇಡಿಕೆಗಳನ್ನು ಈಡೇರಿಸದಿದ್ದರೆ ಇದೇ ವಾರದಲ್ಲಿ ಬೃಹತ್ ಪ್ರತಿಭಟನೆ ನಡೆಸುವುದಾಗಿ ಸ್ಥಳೀಯರು ಎಚ್ಚರಿಕೆ ನೀಡಿದ್ದಾರೆ.

Read More
Next Story