
ಶಾಸಕ ಪ್ರದೀಪ್ ಈಶ್ವರ್ ಮೇಲೆ ಚಪ್ಪಲಿ ಎಸೆತ ಪ್ರಕರಣ; ನಾಲ್ವರ ಬಂಧನ
ಘಟನೆ ನಡೆದ ಸ್ಥಳದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಹಾಗೂ ಮಹೇಂದ್ರ ಎಂಬುವರನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರದಲ್ಲಿ ಆಯೋಜಿಸಿದ್ದ ನಾಡಪ್ರಭು ಕೆಂಪೇಗೌಡ ಜಯಂತಿ ಮಹೋತ್ಸವದ ವೇಳೆ ಕಾಂಗ್ರೆಸ್ ಶಾಸಕ ಪ್ರದೀಪ್ ಈಶ್ವರ್ ಅವರ ಮೇಲೆ ಚಪ್ಪಲಿ ಎಸೆದ ಪ್ರಕರಣಕ್ಕೆ ಸಂಬಂಧಿಸಿದಂತೆ ಪೊಲೀಸರು ಇಡೀ ರಾತ್ರಿ ಕಾರ್ಯಾಚರಣೆ ನಡೆಸಿ ನಾಲ್ವರು ಆರೋಪಿಗಳನ್ನು ಬಂಧಿಸಿದ್ದಾರೆ.
ಚಿಕ್ಕಬಳ್ಳಾಪುರ ನಗರ ಠಾಣೆ ಪಿಎಸ್ಐ ಅಮರ್ ಅವರು ಸ್ವಯಂಪ್ರೇರಿತವಾಗಿ ದೂರು ದಾಖಲಿಸಿಕೊಂಡು ಆರೋಪಿಗಳನ್ನು ಬಂಧಿಸಿದ್ದಾರೆ. ಘಟನೆ ನಡೆದ ಸ್ಥಳದಲ್ಲಿ ದೊರೆತ ಸಿಸಿಟಿವಿ ದೃಶ್ಯಾವಳಿಗಳನ್ನು ಸೂಕ್ಷ್ಮವಾಗಿ ಪರಿಶೀಲಿಸಿದ ಪೊಲೀಸರು, ಜೆಡಿಎಸ್ ಮತ್ತು ಬಿಜೆಪಿ ಕಾರ್ಯಕರ್ತರಾದ ಅಖಿಲ್ ರೆಡ್ಡಿ, ಪ್ರಕಾಶ್, ಮೋಹನ್ ರಾಜ್ ಹಾಗೂ ಮಹೇಂದ್ರ ಎಂಬುವರನ್ನು ಬಂಧಿಸಿದ್ದಾರೆ.
ಮುನ್ನೆಚ್ಚರಿಕೆ ಕ್ರಮವಾಗಿ ನಗರ ಪೊಲೀಸ್ ಠಾಣೆ ಸುತ್ತ ಬಿಗಿ ಬಂದೋಬಸ್ತ್ ಕಲ್ಪಿಸಲಾಗಿದೆ. ಹಿರಿಯ ಪೊಲೀಸ್ ಅಧಿಕಾರಿಗಳು ಸ್ಥಳದಲ್ಲೇ ಮೊಕ್ಕಾಂ ಹೂಡಿ ಪರಿಸ್ಥಿತಿ ಮೇಲೆ ನಿಗಾ ವಹಿಸಿದ್ದಾರೆ.
ಕನ್ನಡ ಭವನದಲ್ಲಿ ನಡೆದಿದ್ದೇನು?
ನಗರದ ಕನ್ನಡ ಭವನದಲ್ಲಿ ಕೆಂಪೇಗೌಡ ಜಯಂತಿ ಕಾರ್ಯಕ್ರಮ ಶಾಂತಿಯುತವಾಗಿಯೇ ಆರಂಭವಾಗಿತ್ತು. ಆದರೆ ಇತ್ತೀಚೆಗೆ ಕೇಂದ್ರ ಸಚಿವ ಎಚ್.ಡಿ. ಕುಮಾರಸ್ವಾಮಿ ವಿರುದ್ಧ ಶಾಸಕ ಪ್ರದೀಪ್ ಈಶ್ವರ್ ಮಾಡಿದ್ದ ಗಡಿಯಾರ ವಿವಾದದ ಟೀಕೆಗಳಿಂದ ರೊಚ್ಚಿಗೆದ್ದಿದ್ದ ಜೆಡಿಎಸ್ ಕಾರ್ಯಕರ್ತರು ಒಮ್ಮೆಗೆ ಕಾರ್ಯಕ್ರಮದ ವೇದಿಕೆಗೆ ನುಗ್ಗಿದರು. ಶಾಸಕ ಪ್ರದೀಪ್ ಈಶ್ವರ್ ಅವರನ್ನು ವೇದಿಕೆಯಿಂದ ಕೆಳಗಿಳಿಸಬೇಕು ಎಂದು ಆಕ್ರೋಶ ಹೊರಹಾಕಿ, ಗೋ ಬ್ಯಾಕ್ ಘೋಷಣೆ ಕೂಗಲಾರಂಭಿಸಿದರು.
ಪರಿಸ್ಥಿತಿ ವಿಕೋಪಕ್ಕೆ ತಿರುಗಿದಾಗ ಸ್ಥಳದಲ್ಲಿದ್ದ ಆದಿಚುಂಚನಗಿರಿ ಶಾಖಾ ಮಠದ ಮಂಗಳನಾಥ ಸ್ವಾಮೀಜಿ ಅವರು ಮಧ್ಯಪ್ರವೇಶಿಸಿ, ಗಲಾಟೆ ಮಾಡುತ್ತಿದ್ದವರನ್ನು ಸಮಾಧಾನಪಡಿಸಿದರು. ತದನಂತರ ಶಾಸಕರು ತಮ್ಮ ಭಾಷಣವನ್ನು ಸಂಕ್ಷಿಪ್ತವಾಗಿ ಮುಗಿಸಿ ಅಲ್ಲಿಂದ ಹೊರನಡೆದರು.
ಮೀಸೆ ತಿರುವಿ ಸವಾಲು; ಕೆರಳಿದ ಕಾರ್ಯಕರ್ತರು
ಕಾರ್ಯಕ್ರಮ ಮುಗಿದು ಹೊರಬಂದ ಬಳಿಕ ಅಸಲಿ ಹೈಡ್ರಾಮಾ ಶುರುವಾಯಿತು. ಶಾಸಕ ಪ್ರದೀಪ್ ಈಶ್ವರ್ ಅವರು ತಮ್ಮ ಕಾರಿನ ಸನ್ರೂಫ್ ಮೂಲಕ ಹೊರಬಂದು ಸಾಗುತ್ತಿದ್ದಾಗ, ಹೊರಗೆ ಜಮಾಯಿಸಿದ್ದ ಪ್ರತಿಭಟನಾಕಾರರು ತೀವ್ರ ಘೋಷಣೆ ಕೂಗಿದರು. ಇದಕ್ಕೆ ತಿರುಗೇಟು ನೀಡುವ ಭರದಲ್ಲಿ ಶಾಸಕರು ಮೀಸೆ ತಿರುವಿ, ತೋಳು ತಟ್ಟಿ ನೇರ ಸವಾಲು ಹಾಕಿದ್ದರಿಂದ ಬಿಜೆಪಿ ಹಾಗೂ ಜೆಡಿಎಸ್ ಕಾರ್ಯಕರ್ತರು ಕೆರಳಿದರು. ಆಗ ಶಾಸಕರ ಕಾರಿನತ್ತ ಚಪ್ಪಲಿ ಎಸೆದಿದ್ದಾರೆ. ಆ ಚಪ್ಪಲಿಯು ಪೊಲೀಸ್ ಅಧಿಕಾರಿಯೊಬ್ಬರಿಗೆ ತಗುಲಿದೆ ಎನ್ನಲಾಗಿದೆ. ತಕ್ಷಣವೇ ಅಲರ್ಟ್ ಆದ ಪೊಲೀಸರು ಲಾಠಿ ಬೀಸಿ ಜನರನ್ನು ಚದುರಿಸಿ, ಸ್ಥಳದಲ್ಲೇ ಕೆಲವರನ್ನು ವಶಕ್ಕೆ ಪಡೆದಿದ್ದಾರೆ.
ಈ ನಡುವೆ, ಮಾಧ್ಯಮದವರೊಂದಿಗೆ ಮಾತನಾಡಿದ ಶಾಸಕ ಪ್ರದೀಪ್ ಈಶ್ವರ್ ಅವರು, ನಾನು ಜಿಲ್ಲೆಯ ಏಕೈಕ ಒಬಿಸಿ ಶಾಸಕ ಎಂಬ ಕಾರಣಕ್ಕೆ ನನ್ನನ್ನು ಟಾರ್ಗೆಟ್ ಮಾಡಲಾಗುತ್ತಿದೆ, ಕುಮಾರಣ್ಣನ ಚೇಲಾಗಳಿಗೆ ನಾನು ಹೆದರುವುದಿಲ್ಲ" ಎಂದು ಆಕ್ರೋಶ ಹೊರಹಾಕಿದ್ದಾರೆ.
ಚಿಕ್ಕಬಳ್ಳಾಪುರ ಘಟನೆ ಕುರಿತಂತೆ ಬೆಂಗಳೂರಿನಲ್ಲಿ ಪ್ರತಿಕ್ರಿಯಿಸಿರುವ ಗೃಹ ಸಚಿವ ಪ್ರಿಯಾಂಕ್ ಖರ್ಗೆ ಅವರು, "ಜನಪ್ರತಿನಿಧಿಗಳ ಮೇಲೆ ಚಪ್ಪಲಿ ಎಸೆಯುವ ಸಂಸ್ಕೃತಿ ಸರಿಯಲ್ಲ. ಯಾರೇ ಆಗಲಿ ಪ್ರಚೋದನೆ ನೀಡುವುದು ತಪ್ಪು, ಎಲ್ಲರೂ ಕಾನೂನಿನ ಇತಿಮಿತಿಯಲ್ಲಿದ್ದರೆ ರಾಜ್ಯಕ್ಕೆ ಒಳ್ಳೆಯ ಹೆಸರು" ಎಂದು ಹೇಳುತ್ತಲೇ ವಿರೋಧ ಪಕ್ಷಗಳ ವಿರುದ್ಧ ವಾಗ್ದಾಳಿ ನಡೆಸಿದ್ದಾರೆ.
"ಜೆಡಿಎಸ್ಗೆ ಈಗ ಅಸ್ತಿತ್ವದ ಭೀತಿ ಎದುರಾಗಿದೆ. ಇತ್ತೀಚಿನ ಚುನಾವಣೆಯಲ್ಲಿ ಬಿಜೆಪಿ-ಜೆಡಿಎಸ್ನ 12 ಶಾಸಕರು ಅಡ್ಡಮತದಾನ ಮಾಡಿರುವುದು ಅವರಲ್ಲಿನ ನಾಯಕತ್ವದ ಕೊರತೆ ತೋರಿಸುತ್ತದೆ. ಇದರ ಜವಾಬ್ದಾರಿ ಹೊತ್ತು ಆರ್. ಅಶೋಕ್ ಮತ್ತು ವಿಜಯೇಂದ್ರ ತಕ್ಷಣವೇ ರಾಜೀನಾಮೆ ನೀಡಬೇಕು" ಎಂದು ಒತ್ತಾಯಿಸಿದರು.

