
ಮೋನಾಜೈಟ್ ಖನಿಜ
ಗುಂಡ್ಲುಪೇಟೆಯಲ್ಲಿ ಮೋನಾಜೈಟ್, ಹನೂರಿನಲ್ಲಿ ಚಿನ್ನದ ಗಣಿ: ಇಡೀ ದೇಶದ ಕಣ್ಣು ಈಗ ಚಾಮರಾಜನಗರದತ್ತ!
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (GSI) ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬರೋಬ್ಬರಿ 23 ಸಾವಿರ ಕೋಟಿಗೂ ಅಧಿಕ ಮೌಲ್ಯದ ಜಾಗತಿಕ ಬೇಡಿಕೆಯ ಖನಿಜ ಸಂಪತ್ತು ಪತ್ತೆಯಾಗಿದೆ.
ಇಷ್ಟು ದಿನ ಕೇವಲ ಕರ್ನಾಟಕದ ಕೊನೆಯ ಗಡಿ ಜಿಲ್ಲೆ, ದಟ್ಟ ಅರಣ್ಯ ಮತ್ತು ಹಿಂದುಳಿದ ಪ್ರದೇಶ ಎಂದೇ ಬಿಂಬಿತವಾಗಿದ್ದ ಚಾಮರಾಜನಗರ, ಇನ್ಮುಂದೆ ಇಡೀ ದೇಶದ ಆರ್ಥಿಕತೆಯ ದಿಕ್ಸೂಚಿಯಾಗಲಿದೆ! ಭಾರತದ ರಕ್ಷಣಾ ರಂಗ ಹಾಗೂ ಇಂಧನ ವಲಯದಲ್ಲಿ ಹೊಸ ಕ್ರಾಂತಿ ಸೃಷ್ಟಿಸಬಲ್ಲ ಮಹಾನಿಧಿಯೊಂದು ಈ ಜಿಲ್ಲೆಯ ಮಣ್ಣಿನಡಿಯಲ್ಲಿ ಪತ್ತೆಯಾಗಿದ್ದು, ಇಡೀ ದೇಶದ ಕಣ್ಣು ಈಗ ಚಾಮರಾಜನಗರದತ್ತ ನೆಟ್ಟಿದೆ.
ಜಿಯಾಲಜಿಕಲ್ ಸರ್ವೇ ಆಫ್ ಇಂಡಿಯಾ (GSI) ನಡೆಸಿದ ರಹಸ್ಯ ಕಾರ್ಯಾಚರಣೆಯಲ್ಲಿ ಬರೋಬ್ಬರಿ 23 ಸಾವಿರ ಕೋಟಿಗೂ ಅಧಿಕ ಮೌಲ್ಯದ ಜಾಗತಿಕ ಬೇಡಿಕೆಯ ಖನಿಜ ಸಂಪತ್ತು ಪತ್ತೆಯಾಗಿದ್ದು, ಗಡಿ ಜಿಲ್ಲೆಯ ಚಿತ್ರಣವೇ ಬದಲಾಗುವ ಮುನ್ಸೂಚನೆ ಸಿಕ್ಕಿದೆ.
ಕಣ್ಗಾವಲಿನಲ್ಲಿ 20 ಎಕರೆ 'ಕೋರ್ ಏರಿಯಾ'!
ಕಳೆದ ಕೆಲವು ತಿಂಗಳುಗಳಿಂದ ಜಿಎಸ್‌ಐ ಅಧಿಕಾರಿಗಳು ಗುಂಡ್ಲುಪೇಟೆ ತಾಲೂಕಿನ ಕೂತನೂರು ಮತ್ತು ಸುತ್ತಮುತ್ತಲಿನ ಸುಮಾರು 700 ಎಕರೆ ಪ್ರದೇಶದಲ್ಲಿ ಅತ್ಯಾಧುನಿಕ ತಂತ್ರಜ್ಞಾನ ಬಳಸಿ ಭೂಮಿಯ ಆಳವನ್ನು ಶೋಧಿಸುತ್ತಿದ್ದರು. ಈ ಶೋಧದ ಫಲವಾಗಿ ಸಿಕ್ಕಿದ್ದೇ 'ಮೋನಾಜೈಟ್'. ಇದು ಕೇವಲ ಒಂದು ಖನಿಜವಲ್ಲ, ಇಂದಿನ ಜಾಗತಿಕ ಮಾರುಕಟ್ಟೆಯಲ್ಲಿ ಚಿನ್ನಕ್ಕಿಂತಲೂ ಹೆಚ್ಚು ರೇಸ್‌ನಲ್ಲಿರುವ ಅಪರೂಪದ ಭೂಮಿಯ ಧಾತು. ಈ ನಿಧಿಯ ತೀವ್ರತೆಯನ್ನು ಅರಿತಿರುವ ಗಣಿ ಇಲಾಖೆ, ತಕ್ಷಣವೇ 20 ಎಕರೆ ಪ್ರದೇಶವನ್ನು ಅತ್ಯಂತ ಪ್ರಮುಖ ವಲಯ ಎಂದು ಘೋಷಿಸಿ ತನ್ನ ಸುಪರ್ದಿಗೆ ಪಡೆದಿದೆ.
ದೇಶದ ಅತಿದೊಡ್ಡ ಆಸ್ತಿ!
ವಿಜ್ಞಾನಿಗಳ ಜಿಎಸ್‌ಐ ಅಧಿಕೃತ ವರದಿಯ ಪ್ರಕಾರ, ಈ ಭೂಪ್ರದೇಶದಲ್ಲಿ ಅಡಗಿರುವ ನಿಧಿಯ ಮೌಲ್ಯ ಅಸಾಧಾರಣವಾದದ್ದು. ಸುಮಾರು 11.48 ಮಿಲಿಯನ್ ಟನ್ ಮೋನಾಜೈಟ್ ಮಿಶ್ರಿತ ಅದಿರು ಇಲ್ಲಿದೆ. ಈ ಅದಿರಿನಿಂದ ಸುಮಾರು 55,276 ಟನ್‌ಗಳಷ್ಟು ಅತ್ಯಂತ ಬೆಲೆಬಾಳುವ ಶುದ್ಧ ಆರ್‌ಇಇ ಲೋಹವನ್ನು ಬೇರ್ಪಡಿಸಬಹುದಾಗಿದೆ. ಅಂತಾರಾಷ್ಟ್ರೀಯ ಮಾರುಕಟ್ಟೆಯ ದರದಂತೆ ಇದರ ಮೌಲ್ಯ 4,600 ಕೋಟಿ ರೂ.ನಿಂದ ಆರಂಭವಾಗಿ ಭವಿಷ್ಯದಲ್ಲಿ 23 ಸಾವಿರ ಕೋಟಿ ರೂ. ದಾಟುವ ಸಾಧ್ಯತೆ ಇದೆ ಎಂದು ಅಧಿಕಾರಿಗಳು ಅಂದಾಜಿಸಿದ್ದಾರೆ.
ಭಾರತದ ಪರಮಾಣು ಬ್ರಹ್ಮಾಸ್ತ್ರ 'ಥೋರಿಯಂ'
ವಿಶ್ವಸಂಸ್ಥೆಯ ಮಟ್ಟದಲ್ಲಿ ಹಾಗೂ ಜಾಗತಿಕ ರಕ್ಷಣಾ ರಂಗದಲ್ಲಿ ಈ ಖನಿಜಕ್ಕೆ ವಿಪರೀತ ಬೇಡಿಕೆಯಿರಲು ಕಾರಣ ಇದರಲ್ಲಿರುವ ಥೋರಿಯಂ ಹಾಗೂ ಯುರೇನಿಯಂ ಅಂಶ. ಭಾರತವು ಇಂಧನಕ್ಕಾಗಿ ಮುಂದಿನ ದಿನಗಳಲ್ಲಿ ಬೇರೆ ದೇಶಗಳ ಮೇಲೆ ಅವಲಂಬಿತವಾಗಬೇಕಿಲ್ಲ. ಈ ಮೋನಾಜೈಟ್ ದೇಶದ ಅಣು ವಿದ್ಯುತ್ ಸ್ಥಾವರಗಳಿಗೆ ದಶಕಗಳ ಕಾಲ ನಿರಂತರ ಶಕ್ತಿ ತುಂಬಬಲ್ಲದು. ಆಕಾಶದಲ್ಲಿ ಶಬ್ದಕ್ಕಿಂತ ವೇಗವಾಗಿ ಹಾರುವ ಫೈಟರ್ ಜೆಟ್ ಎಂಜಿನ್‌ಗಳು, ಉಪಗ್ರಹಗಳ ಬಿಡಿಭಾಗಗಳು, ಏರೋಸ್ಪೇಸ್ ತಂತ್ರಜ್ಞಾನ ಮತ್ತು ಸೇನೆಯ ಅತ್ಯಾಧುನಿಕ ರೇಡಾರ್ ಹಾಗೂ ವೆಲ್ಡಿಂಗ್ ಉಪಕರಣಗಳಿಗೆ ಇದೇ ಮುಖ್ಯ ಕಚ್ಚಾವಸ್ತು.
ಶೀಘ್ರದಲ್ಲೇ ಗಣಿಗಾರಿಕೆ
ಚಾಮರಾಜನಗರ ಹಿರಿಯ ಭೂ ವಿಜ್ಞಾನಿ ರಾಜೇಶ್ ನೀಡಿರುವ ಮಾಹಿತಿಯಂತೆ, ಈ ನಿಧಿಯನ್ನು ಹೊರತೆಗೆಯಲು ಕೇಂದ್ರ ಸರ್ಕಾರ ಈಗಾಗಲೇ ಗ್ರೀನ್ ಸಿಗ್ನಲ್ ನೀಡಿದೆ. ಆಡಳಿತಾತ್ಮಕ ಮತ್ತು ಕಾನೂನಾತ್ಮಕ ಪ್ರಕ್ರಿಯೆಗಳು ಕೊನೆಯ ಹಂತದಲ್ಲಿದ್ದು, ಇನ್ನು ಕೆಲವೇ ತಿಂಗಳುಗಳಲ್ಲಿ ಕೇಂದ್ರ ಗಣಿ ಸಚಿವಾಲಯದಿಂದ ಅಧಿಕೃತ 'ಮೆಗಾ ಹರಾಜು' ಪ್ರಕ್ರಿಯೆ ಆರಂಭವಾಗಲಿದೆ. ತದನಂತರ ಹೈಟೆಕ್ ಯಂತ್ರಗಳ ಮೂಲಕ ಗಣಿಗಾರಿಕೆ ಅಧಿಕೃತವಾಗಿ ಚಾಲನೆ ಪಡೆಯಲಿದೆ.
ಹನೂರಿನಲ್ಲಿ ಚಿನ್ನದ ಬೇಟೆ!
ಚಾಮರಾಜನಗರದ ಅದೃಷ್ಟ ಇಲ್ಲಿಗೇ ಮುಗಿಯುವುದಿಲ್ಲ. ಗುಂಡ್ಲುಪೇಟೆಯಲ್ಲಿ ಪರಮಾಣು ಖನಿಜ ಸಿಕ್ಕರೆ, ಇತ್ತ ಹನೂರು ತಾಲೂಕಿನ ರಾಮಾಪುರ, ಅಜ್ಜೀಪುರ ಹಾಗೂ ದೊಡ್ಡಾಲತ್ತೂರು ಭಾಗದಲ್ಲಿ 'ಚಿನ್ನದ ಗಣಿ' ಇರುವುದು ಪ್ರಾಥಮಿಕ ಸಮೀಕ್ಷೆಯಲ್ಲಿ ದೃಢಪಟ್ಟಿದೆ. ಇದರ ಸಂಪೂರ್ಣ ವರದಿ ಸದ್ಯದಲ್ಲೇ ಕೈಸೇರಲಿದ್ದು, ಎರಡನೇ ಹಂತದ ಹೈಟೆಕ್ ವೈಜ್ಞಾನಿಕ ಕಾರ್ಯಾಚರಣೆಗೆ ಇಲಾಖೆ ಸಜ್ಜಾಗಿದೆ.

