
ಕ್ಯಾನ್ಸರ್ ನಡುವೆಯೂ ಸೈನಿಕರ ನಿಧಿಗೆ ಆಸ್ತಿ ಮಾರಿ 10ಲಕ್ಷ ದೇಣಿಗೆ ನೀಡಿದ ನಿವೃತ್ತ ಶಿಕ್ಷಕಿ
ಕಾಯಿಲೆಯ ತೀವ್ರ ನೋವಿನ ನಡುವೆಯೂ ಸ್ವಾರ್ಥವಿಲ್ಲದೆ, ವೃದ್ಧಾಶ್ರಮದಲ್ಲಿದ್ದು, ಸೈನಿಕರ ನಿಧಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವ ಕರಿಬಸಮ್ಮ ಅವರ ಕಾರ್ಯಕ್ಕೆ ಮೆಚ್ಚುಗೆ ವ್ಯಕ್ತವಾಗಿದೆ.
ದೇಶ ಕಾಯುವ ಸೈನಿಕರ ಮೇಲಿನ ಗೌರವ ಮತ್ತು ದೇಶಪ್ರೇಮಕ್ಕೆ ಸಾಟಿಯಿಲ್ಲದಂತಹ ಅಪರೂಪದ ವಿದ್ಯಮಾನಕ್ಕೆ ದಾವಣಗೆರೆ ಜಿಲ್ಲೆ ಸಾಕ್ಷಿಯಾಗಿದೆ.
ದಶಕಗಳಿಂದ ದಯಾಮರಣ ಹಕ್ಕಿಗಾಗಿ ಕಾನೂನು ಹೋರಾಟ ನಡೆಸುವ ಮೂಲಕ ಚಿರಪರಿಚಿತರಾಗಿರುವ ನಿವೃತ್ತ ಶಿಕ್ಷಕಿ ಕೆ.ಬಿ. ಕರಿಬಸಮ್ಮ (86) ತಮ್ಮ ಜೀವಮಾನದಲ್ಲಿ ಸಂಪಾದಿಸಿದ ಆಸ್ತಿಯನ್ನು ಸೈನಿಕರ ಕಲ್ಯಾಣ ನಿಧಿಗೆ ನೀಡುವ ಮೂಲಕ ಮಾದರಿಯಾಗಿದ್ದಾರೆ.
ಗಡಿ ಕಾಯುವ ಯೋಧರ ಕಲ್ಯಾಣಕ್ಕಾಗಿ ಕಷ್ಟಪಟ್ಟು ಕಟ್ಟಿದ್ದ ಮನೆಯನ್ನು ಮಾರಿದ್ದಲ್ಲದೇ ತಮಗೆ ಬರುತ್ತಿದ್ದ ಪಿಂಚಣಿ ಹಣ ಒಟ್ಟುಗೂಡಿಸಿ 10 ಲಕ್ಷ ರೂ.ಗಳ ಧನಸಹಾಯದ ಚೆಕ್ ಅನ್ನು ದಾವಣಗೆರೆ ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಅವರಿಗೆ ಹಸ್ತಾಂತರಿಸಿದ್ದಾರೆ.
ಮನೆ ಮಾರಿದ ಹಣವೇ ದೇಣಿಗೆ
"ನಾನು ಶಿಕ್ಷಕಿಯಾಗಿ ಸೇವೆ ಆರಂಭಿಸಿದ ದಿನದಿಂದಲೂ ದೇಶ ಕಾಯುವ ಸೈನಿಕರ ಬಗ್ಗೆ ಅಪಾರ ಗೌರವ ಮತ್ತು ಪ್ರೀತಿ ಇತ್ತು. ಕೆಲ ವರ್ಷಗಳ ಹಿಂದೆ ಒಂದು ಪುಟ್ಟ ಮನೆ ಮಾಡಿಕೊಂಡಿದ್ದೆ. ಅದನ್ನು ಇತ್ತೀಚೆಗೆ 6 ಲಕ್ಷ ರೂ.ಗಳಿಗೆ ಮಾರಾಟ ಮಾಡಿ ಆ ಹಣವನ್ನು ಬ್ಯಾಂಕ್‌ನಲ್ಲಿ ಇಟ್ಟಿದ್ದೆ. ಅದರೊಂದಿಗೆ ನನಗೆ ಬರುತ್ತಿದ್ದ ಶಿಕ್ಷಕ ವೃತ್ತಿಯ ಪಿಂಚಣಿ ಹಣ ಒಟ್ಟುಗೂಡಿಸಿ ಒಟ್ಟು 10 ಲಕ್ಷ ರೂ.ಗಳನ್ನು ಸೈನಿಕರ ನಿಧಿಗೆ ನೀಡಿದ್ದೇನೆ. ಈ ಹಣ ಗಡಿ ಕಾಯುವ ಯೋಧರ ಕಲ್ಯಾಣಕ್ಕೆ ಬಳಕೆಯಾಗುತ್ತಿರುವುದು ನನಗೆ ಅಪಾರ ಸಂತೋಷ ತಂದಿದೆ," ಎಂದು ಕರಿಬಸಮ್ಮ ಭಾವುಕರಾಗಿ ಹೇಳಿದ್ದಾರೆ.
ಕ್ಯಾನ್ಸರ್ ನಡುವೆಯೂ ದೇಶಪ್ರೇಮ
ಕರಿಬಸಮ್ಮ ಅವರಿಗೆ ಪ್ರಸ್ತುತ ವಯೋಸಹಜ ಕಾಯಿಲೆಗಳಾದ ಬಿಪಿ, ಶುಗರ್ ಮಾತ್ರವಲ್ಲದೆ ಮಾರಕ ಕ್ಯಾನ್ಸರ್ ಕಾಯಿಲೆಯೂ ಇದೆ. ದೇಹದ ತುಂಬೆಲ್ಲಾ ಕಾಯಿಲೆಯ ನೋವಿದ್ದರೂ ಅವರ ಮನಸ್ಸಿನಲ್ಲಿರುವ ದೇಶಪ್ರೇಮದ ಕಿಚ್ಚು ಕಡಿಮೆಯಾಗಿಲ್ಲ.
"ನನಗೆ ಕ್ಯಾನ್ಸರ್ ಬಂದಿದೆ, ಯಾವಾಗ ಏನಾಗುತ್ತದೆಯೋ ಗೊತ್ತಿಲ್ಲ. ಆದರೆ ನಾನು ಬದುಕಿರುವಾಗಲೇ ದೇಶಕ್ಕಾಗಿ ಪ್ರಾಣ ಮುಡುಪಾಗಿಡುವ ಸೈನಿಕರಿಗೆ ಸಣ್ಣದೊಂದು ಅಳಿಲು ಸೇವೆ ಮಾಡಬೇಕು ಎಂಬ ಆಸೆಯಿತ್ತು, ಅದು ಇಂದು ಈಡೇರಿದೆ" ಎಂದು ಹೆಮ್ಮೆಯಿಂದ ಹೇಳಿದಾಗ ಅಧಿಕಾರಿಗಳ ಕಣ್ಣಾಲಿಗಳು ತೇವವಾದವು.
ಸದ್ಯ ದಾವಣಗೆರೆಯ ವೃದ್ಧಾಶ್ರಮದಲ್ಲಿ ವಾಸವಾಗಿರುವ ಕರಿಬಸಮ್ಮ ಅವರು ದಯಾಮರಣದ ಕಾನೂನು ಜಾರಿಗಾಗಿ ಕಳೆದ 24 ವರ್ಷಗಳಿಂದ ನಿರಂತರ ಹೋರಾಟ ನಡೆಸುತ್ತಿದ್ದಾರೆ.
30 ವರ್ಷಗಳಿಂದ ಬೆನ್ನುಮೂಳೆಯ ಸಮಸ್ಯೆ ಹಾಗೂ ಕ್ಯಾನ್ಸರ್‌ನಿಂದ ನರಳುತ್ತಿರುವ ಇವರು, ತೀವ್ರ ಕಾಯಿಲೆಯಿಂದ ಬಳಲುವ ವೃದ್ಧರಿಗೆ ಗೌರವಯುತ ಸಾವಿನ ಹಕ್ಕು ಸಿಗಬೇಕೆಂದು ರಾಷ್ಟ್ರಪತಿ, ಪ್ರಧಾನಿ ಹಾಗೂ ಸುಪ್ರೀಂ ಕೋರ್ಟ್‌ಗೆ ಸಾವಿರಾರು ಸಹಿ ಸಂಗ್ರಹಿಸಿ ಪತ್ರ ಬರೆದಿದ್ದರು.
ಕಾಯಿಲೆಯ ತೀವ್ರ ನೋವಿನ ನಡುವೆಯೂ ಸ್ವಾರ್ಥವಿಲ್ಲದೆ, ವೃದ್ಧಾಶ್ರಮದಲ್ಲಿದ್ದು, ಸೈನಿಕರ ನಿಧಿಗೆ ಲಕ್ಷಾಂತರ ರೂಪಾಯಿ ದೇಣಿಗೆ ನೀಡಿರುವ ಕರಿಬಸಮ್ಮ ಅವರ ದೇಶಪ್ರೇಮವನ್ನು ಜಿಲ್ಲಾಧಿಕಾರಿ ಜಿ.ಎಂ. ಗಂಗಾಧರಸ್ವಾಮಿ ಹಾಗೂ ಸಾರ್ವಜನಿಕರು ಮುಕ್ತಕಂಠದಿಂದ ಶ್ಲಾಘಿಸಿದ್ದಾರೆ.

