Bullet Train|ಹೈಸ್ಪೀಡ್‌ ರೈಲು; ಬೆಂಗಳೂರು-ಚೆನ್ನೈ-ಹೈದರಾಬಾದ್‌ ಕಾರಿಡಾರ್‌ನಿಂದ ಅಭಿವೃದ್ಧಿಗೆ ವೇಗ
x

Bullet Train|ಹೈಸ್ಪೀಡ್‌ ರೈಲು; ಬೆಂಗಳೂರು-ಚೆನ್ನೈ-ಹೈದರಾಬಾದ್‌ ಕಾರಿಡಾರ್‌ನಿಂದ ಅಭಿವೃದ್ಧಿಗೆ ವೇಗ

ಎರಡೂ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಈ ಎರಡು ಯೋಜನೆಗಳಿಗಾಗಿ ಕರ್ನಾಟಕದಲ್ಲಿ ಸುಮಾರು 1,757 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ.


Click the Play button to hear this message in audio format

ಕೇಂದ್ರ ಸರ್ಕಾರದ ಮಹತ್ವಾಕಾಂಕ್ಷೆಯ ಹೈದರಾಬಾದ್-ಬೆಂಗಳೂರು ಹಾಗೂ ಬೆಂಗಳೂರು-ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಯೋಜನೆಗೆ ಕರ್ನಾಟಕ ಸರ್ಕಾರ ಆಡಳಿತಾತ್ಮಕ ಅಂಗೀಕಾರ ನೀಡಿದ ಬೆನ್ನಲ್ಲೇ ನಿರೀಕ್ಷೆಗಳು ಗರಿಗೆದರಿವೆ. ದಕ್ಷಿಣ ಭಾರತದ ಮೊದಲ ಹೈಸ್ಪೀಡ್‌ ರೈಲು ಜಾಲ ಬೆಂಗಳೂರಿನಲ್ಲಿ ನಿರ್ಮಾಣವಾಗಲಿದ್ದು, ಪ್ರತಿ ಗಂಟೆಗೆ 350 ಕಿ.ಮೀ. ವೇಗದಲ್ಲಿ ಸಂಚರಿಸುವ ಈ ರೈಲುಗಳು ಸಾರ್ವಜನಿಕ ಸಾರಿಗೆ ವ್ಯವಸ್ಥೆಯ ಗತಿಯನ್ನೇ ಬದಲಿಸಲಿವೆ. ಎರಡೂ ಹೈಸ್ಪೀಡ್‌ ರೈಲು ಕಾರಿಡಾರ್‌ಗಳ ಅನುಷ್ಟಾನದಿಂದ ರಾಜ್ಯದ ಅಭಿವೃದ್ಧಿಯೂ ನಾಗಾಲೋಟದಲ್ಲಿ ಸಾಗಲಿದೆ. ಈ ಎರಡೂ ಯೋಜನೆಗಳ ಕುರಿತ ವಿವರ ಇಲ್ಲಿದೆ.

ಹೈದರಾಬಾದ್ - ಬೆಂಗಳೂರು ಹೈಸ್ಪೀಡ್ ಕಾರಿಡಾರ್

ಇದು ಕರ್ನಾಟಕ, ಆಂಧ್ರಪ್ರದೇಶ ಮತ್ತು ತೆಲಂಗಾಣ ರಾಜ್ಯಗಳನ್ನು ಸಂಪರ್ಕಿಸಲಿದೆ. ಒಟ್ಟು 607 ಕಿ.ಮೀ. ಉದ್ದದ ರೈಲು ಮಾರ್ಗದಲ್ಲಿ ಸುಮಾರು 101 ಕಿ.ಮೀ. ತುಮಕೂರು, ಚಿಕ್ಕಬಳ್ಳಾಪುರ ಮತ್ತು ಬೆಂಗಳೂರು ಗ್ರಾಮಾಂತರ ಜಿಲ್ಲೆಗಳಲ್ಲೇ ಇರಲಿದೆ. ಪ್ರಸ್ತುತ, ನೈರುತ್ಯ ರೈಲ್ವೆ ವಿಭಾಗದಲ್ಲಿ ಸಂಚರಿಸುವ ಎಕ್ಸ್‌ಪ್ರೆಸ್‌ ರೈಲುಗಳು ಹೈದರಾಬಾದ್‌ನಿಂದ ಬೆಂಗಳೂರಿಗೆ ಸಂಚರಿಸಲು 8 ರಿಂದ 12 ಗಂಟೆ ತೆಗೆದುಕೊಳ್ಳಲಿದೆ. ಹೈಸ್ಪೀಡ್‌ ರೈಲುಗಳಿಂದ ಈ ಅವಧಿ ಕೇವಲ 2 ಗಂಟೆ 10 ನಿಮಿಷಕ್ಕೆ ಇಳಿಯಲಿದೆ.

ಹೈದರಾಬಾದ್‌- ಬೆಂಗಳೂರು ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಯಲ್ಲಿ ಚಿಕ್ಕಬಳ್ಳಾಪುರ ಜಿಲ್ಲೆಯ ಅಲಿಪುರ, ಬೆಂಗಳೂರು ಗ್ರಾಮಾಂತರ ಜಿಲ್ಲೆಯ ದೇವನಹಳ್ಳಿ ವಿಮಾನ ನಿಲ್ದಾಣದ ಹತ್ತಿರ ಮತ್ತು ಹೊಸಕೋಟೆ ತಾಲೂಕಿನ ಕೋಡಿಹಳ್ಳಿ ಬಳಿ ನಿಲ್ದಾಣಗಳು ಬರಲಿವೆ. ಈ ಕಾರಿಡಾರ್ ಸಂಪೂರ್ಣ ಎಲಿವೇಟೆಡ್ (ಮೇಲ್ಸೇತುವೆ) ಇರಲಿದ್ದು, ರೈಲುಗಳು ಗಂಟೆಗೆ 320 ರಿಂದ 350 ಕಿ.ಮೀ. ವೇಗದಲ್ಲಿ ಚಲಿಸಲಿವೆ.

ಬೆಂಗಳೂರು - ಚೆನ್ನೈ - ಮೈಸೂರು ಹೈಸ್ಪೀಡ್ ಕಾರಿಡಾರ್

ಇದು ಚೆನ್ನೈ ಮತ್ತು ಮೈಸೂರನ್ನು ಬೆಂಗಳೂರಿನ ಮೂಲಕ ಸಂಪರ್ಕಿಸುವ ಬೃಹತ್ ಯೋಜನೆಯಾಗಿದೆ. ಒಟ್ಟು 435 - 463 ಕಿ.ಮೀ. ಉದ್ದದ ಕಾರಿಡಾರ್‌ನಲ್ಲಿ ಚೆನ್ನೈ-ಬೆಂಗಳೂರು ಭಾಗದಲ್ಲೇ 306 ಕಿ.ಮೀ. ಇರಲಿದೆ. ಬೆಂಗಳೂರಿನಿಂದ ಚೆನ್ನೈ ತಲುಪಲು ಪ್ರಸ್ತುತ 5 ರಿಂದ 7 ಗಂಟೆ ತೆಗೆದುಕೊಳ್ಳಲಿದೆ. ಹೈಸ್ಪೀಡ್‌ ರೈಲಿನಿಂದ ಈ ಅವಧಿ ಕೇವಲ 1 ಗಂಟೆ 15 ನಿಮಿಷಗಳಿಗೆ ಇಳಿಯಲಿದೆ. ಈ ಕಾರಿಡಾರ್‌ನಲ್ಲಿ ಕೋಲಾರದ ಕೆ.ಜಿ.ಎಫ್, ಹೊಸಕೋಟೆಯ ಕೋಡಿಹಳ್ಳಿ, ಬೆಂಗಳೂರಿನ ವೈಟ್‌ಫೀಲ್ಡ್ ಮತ್ತು ಬೈಯಪ್ಪನಹಳ್ಳಿ ನಿಲ್ದಾಣಗಳು ಬರಲಿವೆ.

ಹೊಸಕೋಟೆಯ ಕೋಡಿಹಳ್ಳಿ ನಿಲ್ದಾಣವು ಬೆಂಗಳೂರು-ಹೈದರಾಬಾದ್ ಮತ್ತು ಬೆಂಗಳೂರು-ಚೆನ್ನೈ ಎರಡೂ ಮಾರ್ಗಗಳಿಗೆ ಜಂಕ್ಷನ್ ಆಗಲಿದೆ. ಇಲ್ಲಿ ದೊಡ್ಡ ಡಿಪೋ ಮತ್ತು ಸರ್ವಿಸ್‌ ಸ್ಟೇಷನ್‌ ನಿರ್ಮಿಸಲು ಉದ್ದೇಶಿಸಲಾಗಿದೆ.

ಭೂಸ್ವಾಧೀನಕ್ಕೆ ನೋಡೆಲ್‌ ಅಧಿಕಾರಿ ನೇಮಕ

ಎರಡೂ ಹೈಸ್ಪೀಡ್‌ ರೈಲು ಕಾರಿಡಾರ್‌ ಯೋಜನೆಗೆ ಭೂಸ್ವಾಧೀನ ಪ್ರಕ್ರಿಯೆ ಕೈಗೊಳ್ಳಲು ರಾಜ್ಯ ಸರ್ಕಾರ ನೋಡಲ್ ಅಧಿಕಾರಿಯನ್ನು ನೇಮಿಸಿದೆ. ಈ ಎರಡು ಯೋಜನೆಗಳಿಗಾಗಿ ಕರ್ನಾಟಕದಲ್ಲಿ ಸುಮಾರು 1,757 ಹೆಕ್ಟೇರ್ ಭೂಮಿ ಸ್ವಾಧೀನಪಡಿಸಿಕೊಳ್ಳಲು ಉದ್ದೇಶಿಸಲಾಗಿದೆ. ಬೈಯಪ್ಪನಹಳ್ಳಿ ನಿಲ್ದಾಣವನ್ನು ಮೆಟ್ರೋ ಮತ್ತು ಉಪನಗರ ರೈಲು (Suburban Rail) ನಿಲ್ದಾಣಗಳೊಂದಿಗೆ ಸಂಯೋಜಿಸುವ ಗುರಿ ಹೊಂದಲಾಗಿದೆ. ಇದರಿಂದ ಪ್ರಯಾಣಿಕರಿಗೆ ಸುಲಭ ಸಂಪರ್ಕ ಸಿಗಲಿದೆ.

ಹೈಸ್ಪೀಡ್‌ ರೈಲು ಯೋಜನೆ ಪೂರ್ಣಗೊಂಡರೆ ಬೆಂಗಳೂರು ನಗರವು ದಕ್ಷಿಣ ಭಾರತದ ಹೈಸ್ಪೀಡ್ ರೈಲು ವ್ಯವಸ್ಥೆಯ ಕೇಂದ್ರಬಿಂದುವಾಗಿ ಹೊರಹೊಮ್ಮಲಿದೆ.

ಹೈದರಾಬಾದ್‌ ಹೈಸ್ಪೀಡ್‌ ಯೋಜನೆ ಅನುಕೂಲ

ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು (Bullet Train) ಯೋಜನೆಯಿಂದ ತುಮಕೂರು ಜಿಲ್ಲೆಯ ಚಿತ್ರಣವೇ ಬದಲಾಗಲಿದೆ. ಸದ್ಯದ ಯೋಜನಾ ವರದಿ ಪ್ರಕಾರ, ತುಮಕೂರು ಜಿಲ್ಲೆಯ ಶಿರಾ ಭಾಗದಲ್ಲಿ ಒಂದು ನಿಲ್ದಾಣ ಬರುವ ಸಾಧ್ಯತೆಯಿದೆ. ಇದು ಜಿಲ್ಲೆಯ ಜನರಿಗೆ ನೇರವಾಗಿ ಹೈಸ್ಪೀಡ್ ರೈಲು ಸಂಪರ್ಕ ಕಲ್ಪಿಸಲಿದೆ. ತುಮಕೂರು ಈಗಾಗಲೇ 'ಚೆನ್ನೈ-ಬೆಂಗಳೂರು ಕೈಗಾರಿಕಾ ಕಾರಿಡಾರ್' ಭಾಗವಾಗಿದೆ. ಈಗ ಹೈಸ್ಪೀಡ್ ರೈಲು ಸಂಪರ್ಕ ಬಂದರೆ, ಹೈದರಾಬಾದ್ ಮತ್ತು ಬೆಂಗಳೂರಿನ ದೊಡ್ಡ ಕಂಪನಿಗಳು ತುಮಕೂರಿನಲ್ಲಿ ಹೂಡಿಕೆ ಮಾಡಲು ಹೆಚ್ಚು ಆಸಕ್ತಿ ತೋರಿಸಲಿವೆ.

ಹೈಸ್ಪೀಡ್ ರೈಲು ನಿಲ್ದಾಣ ಬರುವ ಪ್ರದೇಶಗಳ ಸುತ್ತಮುತ್ತ ಭೂಮಿಯ ಬೆಲೆ ಹೆಚ್ಚಾಗಲಿದ್ದು, ರಿಯಲ್ ಎಸ್ಟೇಟ್ ಕ್ಷೇತ್ರಕ್ಕೆ ದೊಡ್ಡ ಉತ್ತೇಜನ ಸಿಗಲಿದೆ. ತುಮಕೂರಿನಿಂದ ಹೈದರಾಬಾದ್‌ಗೆ ಕೇವಲ ಒಂದೂವರೆ ಗಂಟೆಯಿಂದ 2 ಗಂಟೆಗಳಲ್ಲಿ ಹೈದರಾಬಾದ್ ತಲುಪಬಹುದು. ಬೆಂಗಳೂರಿಗೆ ಹೋಗಲು ಕೇವಲ 20 ರಿಂದ 30 ನಿಮಿಷ ಸಾಕು. ಈ ರೈಲು ವ್ಯವಸ್ಥೆಯಿಂದ ತುಮಕೂರಿನಲ್ಲೇ ಇದ್ದುಕೊಂಡು ಬೆಂಗಳೂರು ಅಥವಾ ಹೈದರಾಬಾದ್‌ಗೆ ದಿನನಿತ್ಯ ಓಡಾಡಿ ಕೆಲಸ ಮಾಡಲು ಸಾಧ್ಯವಾಗಲಿದೆ.

ರೈಲು ನಿಲ್ದಾಣ ಸುತ್ತಮುತ್ತ ಹೋಟೆಲ್, ಸಾರಿಗೆ ಮತ್ತು ಇತರೆ ಸೇವಾ ವಲಯಗಳಲ್ಲಿ ಸ್ಥಳೀಯರಿಗೆ ಉದ್ಯೋಗ ಸಿಗಲಿದೆ. ತುಮಕೂರು ಒಂದು 'ವಿದ್ಯಾಕಾಶಿ'. ಹೈಸ್ಪೀಡ್ ರೈಲು ಸಂಪರ್ಕದಿಂದ ಹೈದರಾಬಾದ್ ಅಥವಾ ಆಂಧ್ರದ ವಿದ್ಯಾರ್ಥಿಗಳು ಇಲ್ಲಿನ ಶಿಕ್ಷಣ ಸಂಸ್ಥೆಗಳಿಗೆ ಬರಲು ಸುಲಭವಾಗಲಿದೆ. ತುಮಕೂರಿನ ಜನರಿಗೆ ಹೈದರಾಬಾದ್ ಅಥವಾ ಬೆಂಗಳೂರಿನ ಸುಧಾರಿತ ಆಸ್ಪತ್ರೆಗಳ ಸೇವೆ ಅತಿ ವೇಗವಾಗಿ ಲಭ್ಯವಾಗಲಿದೆ. ಒಟ್ಟಾರೆ ತುಮಕೂರು ಕೂಡ ಬೆಂಗಳೂರಿನಂತೆಯೇ ಪ್ರಮುಖ ಆರ್ಥಿಕ ಉಪನಗರವಾಗಿ ಬೆಳೆಯಲು ಈ ಯೋಜನೆ ಸಹಾಯ ಮಾಡಲಿದೆ.

ಇನ್ನು ಚಿಕ್ಕಬಳ್ಳಾಪುರ ಜಿಲ್ಲೆಯಲ್ಲೂ ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಹಾದು ಹೋಗುವುದರಿಂದ ತ್ವರಿತ ಸಂಪರ್ಕ ಸಾಧ್ಯವಾಗಲಿದೆ. ಅಲಿಪುರ ನಿಲ್ದಾಣದಿಂದ ಬೆಂಗಳೂರಿನ ದೇವನಹಳ್ಳಿ ಅಥವಾ ಹೊಸಕೋಟೆ ನಿಲ್ದಾಣಕ್ಕೆ ಕೇವಲ 15-20 ನಿಮಿಷಗಳಲ್ಲಿ ತಲುಪಬಹುದು.

ಪ್ರಸ್ತುತ, ಹೈದರಾಬಾದ್‌ಗೆ ರಸ್ತೆ ಮೂಲಕ ಪ್ರಯಾಣಿಸಲು 8-10 ಗಂಟೆ ಅವಧಿ ಬೇಕು. ಹೈಸ್ಪೀಡ್‌ ರೈಲಿನಲ್ಲಿ ಎರಡು ತಾಸಿಗೆ ಹೈದರಾಬಾದ್‌ ತಲುಪಬಹುದು. ಈ ಭಾಗದಲ್ಲಿ ಹಣ್ಣು, ತರಕಾರಿ ಮತ್ತು ಹೂವುಗಳ ಬೆಳೆ ಯತೇಚ್ಛವಾಗಿ ಬೆಳೆಯಲಾಗುತ್ತದೆ. ಹೈಸ್ಪೀಡ್‌ ರೈಲು ಸೇವೆಯ ಮೂಲಕ ಉತ್ಪನ್ನಗಳನ್ನು ತ್ವರಿತವಾಗಿ ಬೆಂಗಳೂರು ಅಥವಾ ಹೈದರಾಬಾದ್‌ನಂತಹ ದೊಡ್ಡ ಮಾರುಕಟ್ಟೆಗಳಿಗೆ ತಲುಪಿಸಲು ಸಾಧ್ಯವಾಗಲಿದೆ.

ಹೈಸ್ಪೀಡ್ ಕಾರಿಡಾರ್ ಉದ್ದಕ್ಕೂ ಬೆಂಗಳೂರಿನ ಐಟಿ ವಲಯ ವಿಸ್ತರಣೆಯಾಗಲಿದೆ. ಚಿಕ್ಕಬಳ್ಳಾಪುರ ಮತ್ತು ಗೌರಿಬಿದನೂರು ಭಾಗದಲ್ಲಿ ಹೊಸ ಕೈಗಾರಿಕೆಗಳು, ಟೆಕ್ ಪಾರ್ಕ್‌ಗಳು ತಲೆಯೆತ್ತಲಿವೆ. ಹೈಸ್ಪೀಡ್‌ ರೈಲು ಕಾರಿಡಾರ್ ದೇವನಹಳ್ಳಿ ವಿಮಾನ ನಿಲ್ದಾಣಕ್ಕೆ ನೇರ ಸಂಪರ್ಕ ಕಲ್ಪಿಸುವುದರಿಂದ ನೆರೆಯ ಜಿಲ್ಲೆಗಳ ಜನರಿಗೆ ವಿಮಾನ ಪ್ರಯಾಣವೂ ಸುಲಭವಾಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯು ಹೈಸ್ಪೀಡ್ ರೈಲು ಯೋಜನೆಯ "ನರಕೇಂದ್ರ"ವಾಗಿ ಹೊರಹೊಮ್ಮಲಿದೆ. ಹೈದರಾಬಾದ್ ಮತ್ತು ಚೆನ್ನೈ ಎರಡೂ ಮಾರ್ಗಗಳು ಸಂಧಿಸುವ ಹಾಗೂ ಪ್ರಮುಖ ನಿಲ್ದಾಣಗಳು ಬರುವ ಜಾಗ ಹೊಸಕೋಟೆಯ ಕೋಡಿಹಳ್ಳಿಯಲ್ಲಿ ತಲೆ ಎತ್ತಲಿದೆ. ಇಲ್ಲಿ ದೊಡ್ಡ ಮಟ್ಟದ ರೈಲ್ವೆ ಡಿಪೋ, ತರಬೇತಿ ಕೇಂದ್ರ ಮತ್ತು ನಿರ್ವಹಣಾ ಘಟಕಗಳು ಸ್ಥಾಪನೆಯಾಗಲಿದ್ದು, ಸಾವಿರಾರು ಜನರಿಗೆ ನೇರ ಉದ್ಯೋಗ ಸಿಗಲಿದೆ.

ಬೆಂಗಳೂರು ಗ್ರಾಮಾಂತರ ಜಿಲ್ಲೆಯ ಪ್ರದೇಶಗಳಾದ ಹೊಸಕೋಟೆ, ದೇವನಹಳ್ಳಿ ಮತ್ತು ದೊಡ್ಡಬಳ್ಳಾಪುರ ಕೈಗಾರಿಕಾ ವಲಯಗಳಲ್ಲಿ ಬಹುರಾಷ್ಟ್ರೀಯ ಕಂಪನಿಗಳು ಉತ್ಪಾದನಾ ಘಟಕಗಳನ್ನು ಸ್ಥಾಪಿಸಲು ಆದ್ಯತೆ ನೀಡಲಿವೆ. ಹೈಸ್ಪೀಡ್ ರೈಲು ನಿಲ್ದಾಣದ ಸುತ್ತಮುತ್ತ 'ಸ್ಮಾರ್ಟ್ ಸಿಟಿ' ಅಥವಾ ಆಧುನಿಕ ಟೌನ್ಶಿಪ್ಗಳು ನಿರ್ಮಾಣವಾಗಲಿವೆ. ಇದರಿಂದ ಭೂಮಿಯ ಬೆಲೆ ಗಗನಕ್ಕೇರಲಿದೆ.

ಚೆನ್ನೈ-ಬೆಂಗಳೂರು ಹೈಸ್ಪೀಡ್ ರೈಲು ಕಾರಿಡಾರ್ ಅನುಕೂಲ

ಪ್ರಸ್ತುತ ಬೆಂಗಳೂರಿನಿಂದ ಚೆನ್ನೈಗೆ ತಲುಪಲು ರೈಲಿನಲ್ಲಿ 5-6 ಗಂಟೆ ಮತ್ತು ರಸ್ತೆಯಲ್ಲಿ 6-7 ಗಂಟೆ ಸಮಯ ಹಿಡಿಯಲಿದೆ. ಹೈಸ್ಪೀಡ್ ರೈಲು ಈ ಸಮಯವನ್ನು ಕೇವಲ 1 ಗಂಟೆ 15 ನಿಮಿಷಕ್ಕೆ ಇಳಿಸಲಿದೆ. ಇದು ವಿಮಾನ ಪ್ರಯಾಣಕ್ಕಿಂತಲೂ ವೇಗವಾಗಿರಲಿದೆ. ಬೆಂಗಳೂರು ಮತ್ತು ಚೆನ್ನೈ ನಡುವಿನ ಅಂತರ ಕಡಿಮೆಯಾಗುವುದರಿಂದ ಇಡೀ ಮಾರ್ಗವು ಒಂದು ಸಮಗ್ರ ಆರ್ಥಿಕ ವಲಯವಾಗಿ ಬದಲಾಗಲಿದೆ. ಜನರು ಬೆಂಗಳೂರಿನಲ್ಲಿ ವಾಸಿಸುತ್ತಾ ಚೆನ್ನೈನಲ್ಲಿ ಕೆಲಸ ಮಾಡುವುದು ಅಥವಾ ಚೆನ್ನೈನಲ್ಲಿ ವಾಸಿಸುತ್ತಾ ಬೆಂಗಳೂರಿನಲ್ಲಿ ವ್ಯಾಪಾರ ಮಾಡುವುದು ಸುಲಭವಾಗಲಿದೆ.

ಕೆ.ಜಿ.ಎಫ್ (ಕೋಲಾರ), ಹೊಸಕೋಟೆ ಮತ್ತು ವೈಟ್‌ಫೀಲ್ಡ್‌ ಮೂಲಕ ಹೈಸ್ಪೀಡ್‌ ರೈಲು ಹಾದುಹೋಗುವುದರಿಂದ, ಈ ಭಾಗದಲ್ಲಿರುವ ಕೈಗಾರಿಕಾ ಪ್ರದೇಶಗಳಿಗೆ ಭಾರಿ ಬೇಡಿಕೆ ಬರಲಿದೆ. ಬೆಂಗಳೂರಿನ ಐಟಿ ಕಂಪನಿಗಳು ಮತ್ತು ಚೆನ್ನೈನ ಆಟೋಮೊಬೈಲ್ ಹಬ್‌ಗಳ ನಡುವೆ ತಾಂತ್ರಿಕ ವಿನಿಮಯ ಸುಲಭವಾಗಲಿದೆ.

ಬೆಂಗಳೂರು ನಗರದ ದಟ್ಟಣೆ ಕಡಿಮೆಯಾಗಲಿದೆ. ಜನರು ಬೆಂಗಳೂರಿನ ಹೊರವಲಯಗಳಾದ ಹೊಸಕೋಟೆ ಅಥವಾ ಕೋಲಾರದಲ್ಲಿ ನೆಲೆಸಿ, ಹೈಸ್ಪೀಡ್ ರೈಲಿನ ಮೂಲಕ ನಗರಕ್ಕೆ ಬರಲು ಇಷ್ಟಪಡುತ್ತಾರೆ. ಈ ಕಾರಿಡಾರ್ ಉದ್ದಕ್ಕೂ ಹೊಸ ಟೌನ್ಶಿಪ್ಗಳು ಮತ್ತು ಸ್ಮಾರ್ಟ್ ಸಿಟಿಗಳು ನಿರ್ಮಾಣವಾಗಲಿವೆ. ರೈಲ್ವೆ ಡಿಪೋಗಳು, ನಿಲ್ದಾಣಗಳ ನಿರ್ವಹಣೆ ಮತ್ತು ನಿಲ್ದಾಣದ ಸುತ್ತಮುತ್ತಲ ವಾಣಿಜ್ಯ ಸಂಕೀರ್ಣಗಳಿಂದ ಸ್ಥಳೀಯರಿಗೆ ಅಪಾರ ಉದ್ಯೋಗ ಅವಕಾಶಗಳು ಸೃಷ್ಟಿಯಾಗಲಿವೆ. ಹೈಸ್ಪೀಡ್ ರೈಲು ವಿದ್ಯುತ್ ಚಾಲಿತವಾಗಿರುವುದರಿಂದ ರಸ್ತೆ ಸಾರಿಗೆಗೆ ಹೋಲಿಸಿದರೆ ಕಾರ್ಬನ್ ಹೊರಸೂಸುವಿಕೆ ತೀರಾ ಕಡಿಮೆ ಆಗಲಿದೆ. ಹಿಂದುಳಿದ ಪ್ರದೇಶವೆಂಬ ಹಣೆಪಟ್ಟಿ ಕಟ್ಟಿಕೊಂಡಿರುವ ಕೆ.ಜಿ.ಎಫ್ ಭಾಗಕ್ಕೆ ಈ ರೈಲು ಸಂಜೀವಿನಿಯಾಗಲಿದೆ. ಇಲ್ಲಿ ದೊಡ್ಡ ಮಟ್ಟದ ಲಾಜಿಸ್ಟಿಕ್ ಹಬ್‌ಗಳು ನಿರ್ಮಾಣವಾಗಲಿವೆ.

Read More
Next Story