
ದಕ್ಷಿಣ ಭಾರತದ ಬುಲೆಟ್ ಟ್ರೈನ್ಗಳು; ಬೆಂಗಳೂರು–ಹೈದರಾಬಾದ್, ಚೆನ್ನೈ ಜರ್ನಿ ಇನ್ನು 2 ಗಂಟೆಯಲ್ಲಿ!
ವಿಮಾನ ಏರಿ ಹೈದರಾಬಾದ್ ಅಥವಾ ಚೆನ್ನೈ ತಲುಪಲು ತೆಗೆದುಕೊಳ್ಳುವಷ್ಟೇ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ, ನಗರದ ಕೇಂದ್ರ ಭಾಗದಿಂದಲೇ ಹೈಸ್ಪೀಡ್ ರೈಲು ಹತ್ತಿ ಗಮ್ಯಸ್ಥಾನ ತಲುಪಲು ಸಾಧ್ಯ.
ಬೆಂಗಳೂರು, ಹೈದರಾಬಾದ್, ಹಾಗೂ ಚೆನ್ನೈ — ಈ ಮೂರೂ ನಗರಗಳು ದಕ್ಷಿಣ ಭಾರತದ ಆರ್ಥಿಕತೆಯ ಬೆನ್ನೆಲುಬುಗಳು. ಐಟಿ, ಫಾರ್ಮಾ, ಸ್ಟಾರ್ಟ್‌ಅಪ್ ಮತ್ತು ಉತ್ಪಾದನಾ ವಲಯದಲ್ಲಿ ಈ ನಗರಗಳದ್ದು ಸಿಂಹಪಾಲು. ಈ ನಗರಗಳ ನಡುವೆ ವಾಣಿಜ್ಯ ಮತ್ತು ಉದ್ಯೋಗದ ನಿಟ್ಟಿನಲ್ಲಿ ಪ್ರತಿನಿತ್ಯ ಲಕ್ಷಾಂತರ ಜನ ಸಂಚರಿಸುತ್ತಾರೆ. ಆದರೆ, ಪ್ರಸ್ತುತ ಇರುವ ಸಾರಿಗೆ ವ್ಯವಸ್ಥೆಯಿಂದಾಗಿ ಇವರ ಅಮೂಲ್ಯ ಸಮಯ ಪ್ರಯಾಣದಲ್ಲೇ ಕಳೆದುಹೋಗುತ್ತಿದೆ.
ಶಾಶ್ವತ ಪರಿಹಾರ ಒದಗಿಸುವ ಹಾಗೂ ಸಾರಿಗೆ ವ್ಯವಸ್ಥೆಯನ್ನೇ ಕ್ರಾಂತಿಕಾರಕವಾಗಿ ಬದಲಿಸುವ ನಿಟ್ಟಿನಲ್ಲಿ ಕೇಂದ್ರ ಸರ್ಕಾರ ದಕ್ಷಿಣ ಭಾರತಕ್ಕೆ 'ಹೈಸ್ಪೀಡ್ ರೈಲು (High-Speed Rail - HSR)' ಕಾರಿಡಾರ್‌ಗಳೆಂಬ ಬಹುದೊಡ್ಡ ಬಂಪರ್ ಗಿಫ್ಟ್ ನೀಡಿದೆ.
ಜನವರಿ 2026ರ ಕೇಂದ್ರ ಬಜೆಟ್‌ನಲ್ಲಿ ಹಣಕಾಸು ಸಚಿವೆ ನಿರ್ಮಲಾ ಸೀತಾರಾಮನ್ ಅವರು ದೇಶಾದ್ಯಂತ 7 ಹೊಸ ಹೈಸ್ಪೀಡ್ ರೈಲು ಕಾರಿಡಾರ್‌ಗಳನ್ನು ಘೋಷಿಸಿದ್ದರು. ಇದರಲ್ಲಿ ದಕ್ಷಿಣ ಭಾರತದ, ಅದರಲ್ಲೂ ವಿಶೇಷವಾಗಿ ಬೆಂಗಳೂರನ್ನು ಬೆಸೆಯುವ ಎರಡು ಪ್ರಮುಖ ಕಾರಿಡಾರ್‌ಗಳು ಸೇರಿವೆ. ಈ ಮಹತ್ವಾಕಾಂಕ್ಷಿ ಯೋಜನೆಗೆ ಏಪ್ರಿಲ್ 30ರಂದು ನಡೆದ ಮುಖ್ಯಮಂತ್ರಿ ಸಿದ್ದರಾಮಯ್ಯ ನೇತೃತ್ವದ ಕರ್ನಾಟಕ ಸಚಿವ ಸಂಪುಟ ಸಭೆಯು ಆಡಳಿತಾತ್ಮಕ ಅನುಮೋದನೆ ನೀಡಿದ್ದು, ಯೋಜನೆಯ ವೇಗ ಹೆಚ್ಚುವಂತೆ ಮಾಡಿದೆ.
ಏನಿದು ಹೈಸ್ಪೀಡ್ ರೈಲು ಯೋಜನೆ?
ಭಾರತೀಯ ರೈಲ್ವೆ ಮತ್ತು ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಜಂಟಿಯಾಗಿ ಈ ಕಾರಿಡಾರ್‌ಗಳನ್ನು ನಿರ್ಮಿಸುತ್ತಿವೆ. ಇದು ನಾವು ನೋಡುವ ಸಾಮಾನ್ಯ ರೈಲುಗಳಂತೆ ನೆಲದ ಮೇಲಿರುವ ಹಳಿಯ ಮೇಲೆ ಚಲಿಸುವುದಿಲ್ಲ. ಬದಲಾಗಿ ಜಪಾನ್ ತಂತ್ರಜ್ಞಾನದ ನೆರವಿನೊಂದಿಗೆ ಪ್ರತ್ಯೇಕವಾದ ಎಲಿವೇಟೆಡ್ (ಕಂಬಗಳ ಮೇಲಿನ ಸೇತುವೆ) ಮತ್ತು ಕೆಲವು ಕಡೆ ಭೂಗತ (ಸುರಂಗ) ಮಾರ್ಗಗಳನ್ನು ನಿರ್ಮಿಸಲಾಗುತ್ತದೆ. ಈ ರೈಲುಗಳು ಗಂಟೆಗೆ ಗರಿಷ್ಠ 350 ಕಿ.ಮೀ. ವೇಗದಲ್ಲಿ ಚಲಿಸುವ ಸಾಮರ್ಥ್ಯ ಹೊಂದಿರುತ್ತವೆ. ಭಾರತದಲ್ಲಿ ಉದ್ದೇಶಿತ ಹೈಸ್ಪೀಡ್ ರೈಲು ಮಾರ್ಗಗಳ ನಕ್ಷೆ ಇದು. ಇದು ದೇಶದ ಸಾರಿಗೆ ಜಾಲದಲ್ಲಿ ಮಹತ್ವದ ಬದಲಾವಣೆ ತರಲಿದೆ.
ಎರಡು ಮುಖ್ಯ ಮಾರ್ಗಗಳಲ್ಲಿ ಯೋಜನೆ
1. ಬೆಂಗಳೂರು – ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್
2. ಬೆಂಗಳೂರು – ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್
1. ಬೆಂಗಳೂರು-ಹೈದರಾಬಾದ್ ಕಾರಿಡಾರ್: 607 ಕಿ.ಮೀ ಮಾರ್ಗ
ಬೆಂಗಳೂರು ಮತ್ತು ಹೈದರಾಬಾದ್ ಎರಡೂ ಭಾರತದ ಅತಿದೊಡ್ಡ ಐಟಿ ಹಬ್‌ಗಳು. ಪ್ರಸ್ತುತ ಹೈದರಾಬಾದ್‌ನಿಂದ ಬೆಂಗಳೂರಿಗೆ ರೈಲಿನಲ್ಲಿ ಬರಬೇಕೆಂದರೆ ಕನಿಷ್ಠ 8.5 ಗಂಟೆಯಿಂದ 12 ಗಂಟೆ ಬೇಕು, ಬಸ್‌ನಲ್ಲಿ 9-10 ಗಂಟೆಗಳ ಪ್ರಯಾಣ ಮಾಡಬೇಕು. ಆದರೆ ಈ ಹೊಸ ರೈಲು ಬಂದ ನಂತರ ಪ್ರಯಾಣದ ಅವಧಿ ಕೇವಲ 2 ಗಂಟೆಗೆ ಇಳಿಕೆಯಾಗಲಿದೆ.
ಯಾವ ಮಾರ್ಗದಲ್ಲಿ ಸಾಗುತ್ತದೆ? ನಿಲುಗಡೆಗಳು ಎಲ್ಲೆಲ್ಲಿ?
ಬೆಂಗಳೂರು-ಹೈದರಾಬಾದ್ ಹೈಸ್ಪೀಡ್ ರೈಲು ಕಾರಿಡಾರ್ ಒಟ್ಟು ಸುಮಾರು 607 ಕಿ.ಮೀ. ಉದ್ದವನ್ನು ಹೊಂದಿರಲಿದ್ದು, 13-15 ನಿಲ್ದಾಣಗಳನ್ನು ಒಳಗೊಂಡಿರಲಿದೆ. ಈ ರೈಲು ತೆಲಂಗಾಣ, ಆಂಧ್ರಪ್ರದೇಶವನ್ನು ದಾಟಿ ಕರ್ನಾಟಕವನ್ನು ಪ್ರವೇಶಿಸುತ್ತದೆ. ಕರ್ನಾಟಕದ ವ್ಯಾಪ್ತಿಯಲ್ಲಿ ಈ ಮಾರ್ಗವು ಸುಮಾರು 100 ಕಿ.ಮೀ. ದೂರ ಸಾಗಲಿದ್ದು, ಪ್ರಮುಖವಾಗಿ 3 ನಿಲ್ದಾಣಗಳನ್ನು ಹೊಂದಿರಲಿದೆ:
ಅಲಿಪುರ (ಗೌರಿಬಿದನೂರು ತಾಲೂಕು, ಚಿಕ್ಕಬಳ್ಳಾಪುರ ಜಿಲ್ಲೆ): ಆಂಧ್ರಪ್ರದೇಶದ ಗಡಿ ಮುಗಿದ ನಂತರ, ರಾಜ್ಯ ಪ್ರವೇಶಿಸುವ ರೈಲಿಗೆ ಇದು ಮೊದಲ ನಿಲ್ದಾಣ.
ದೇವನಹಳ್ಳಿ (ಬೆಂಗಳೂರು ಗ್ರಾಮಾಂತರ): ಕೆಂಪೇಗೌಡ ಅಂತರಾಷ್ಟ್ರೀಯ ವಿಮಾನ ನಿಲ್ದಾಣದ (KIAL) ಸಂಪರ್ಕಕ್ಕೆ ಮತ್ತು ಉತ್ತರ ಬೆಂಗಳೂರಿನ ಜನರಿಗೆ ಇದು ಅತ್ಯಂತ ಪ್ರಮುಖ ನಿಲ್ದಾಣವಾಗಿದೆ.
ಕೋಡಿಹಳ್ಳಿ (ಬೆಂಗಳೂರು ಗ್ರಾಮಾಂತರ): ಇದು ಭವಿಷ್ಯದ ಮೆಗಾ ಜಂಕ್ಷನ್ ಆಗಲಿದೆ. ಉದ್ದೇಶಿತ ಬೆಂಗಳೂರು–ಚೆನ್ನೈ ಹೈಸ್ಪೀಡ್ ರೈಲು ಕಾರಿಡಾರ್ ಕೂಡ ಕೋಡಿಹಳ್ಳಿಯನ್ನು ಸಂಪರ್ಕಿಸುವುದರಿಂದ, ಎಲೆಕ್ಟ್ರಾನಿಕ್ ಸಿಟಿ ಮತ್ತು ವೈಟ್‌ಫೀಲ್ಡ್‌ನ ಐಟಿ ಉದ್ಯೋಗಿಗಳಿಗೆ ಈ ಜಂಕ್ಷನ್ ಭಾರಿ ಅನುಕೂಲ ಒದಗಿಸಲಿದೆ.
2. ಬೆಂಗಳೂರು-ಚೆನ್ನೈ ಕಾರಿಡಾರ್: 306 ಕಿ.ಮೀ ಮಾರ್ಗ, 73 ನಿಮಿಷದ ಜರ್ನಿ!
ದಕ್ಷಿಣದ ಮತ್ತೊಂದು ಪ್ರಮುಖ ಉತ್ಪಾದನಾ ಮತ್ತು ಐಟಿ ಕೇಂದ್ರವಾದ ಚೆನ್ನೈ ನಗರವನ್ನು ಬೆಂಗಳೂರಿನೊಂದಿಗೆ ಬೆಸೆಯುವ 306 ಕಿ.ಮೀ. ಉದ್ದದ ಯೋಜನೆ ಇದಾಗಿದೆ. ಕರ್ನಾಟಕ, ಆಂಧ್ರಪ್ರದೇಶ ಮತ್ತು ತಮಿಳುನಾಡು ರಾಜ್ಯಗಳ ಮೂಲಕ ಹಾದುಹೋಗುವ ಈ ಕಾರಿಡಾರ್ ಕಾರ್ಯಗತಗೊಂಡರೆ ಚೆನ್ನೈ-ಬೆಂಗಳೂರು ನಡುವಿನ ಪ್ರಯಾಣದ ಸಮಯ ಬರೋಬ್ಬರಿ 1 ಗಂಟೆ 13 ನಿಮಿಷಗಳಿಗೆ (73 ನಿಮಿಷ) ಇಳಿಯಲಿದೆ.
ಬೆಂಗಳೂರಿನಲ್ಲಿ 12 ಕಿ.ಮೀ. ಸುರಂಗ ಮಾರ್ಗ!
ಈ ಕಾರಿಡಾರ್‌ನ ಬಹುತೇಕ ಮಾರ್ಗವು ಎಲಿವೇಟೆಡ್ (ಕಂಬಗಳ ಮೇಲೆ) ಸಾಗಲಿದೆ. ಆದರೆ, ರೈಲು ಬೆಂಗಳೂರು ನಗರವನ್ನು ಪ್ರವೇಶಿಸುತ್ತಿದ್ದಂತೆಯೇ ಭೂಗತ (ಸುರಂಗ) ಮಾರ್ಗಕ್ಕೆ ಇಳಿಯಲಿದೆ. ವೈಟ್‌ಫೀಲ್ಡ್‌ನಿಂದ ಬೈಯಪ್ಪನಹಳ್ಳಿಯವರೆಗಿನ ಸುಮಾರು 12 ಕಿ.ಮೀ. ದೂರವನ್ನು ಅಂಡರ್‌ಗ್ರೌಂಡ್ ಮೂಲಕವೇ ಕ್ರಮಿಸಲು ಎನ್‌ಎಚ್‌ಎಸ್‌ಆರ್‌ಸಿಎಲ್ ಯೋಜನೆ ರೂಪಿಸಿದೆ. ಇದರೊಂದಿಗೆ ಬೈಯಪ್ಪನಹಳ್ಳಿ ಮತ್ತು ವೈಟ್‌ಫೀಲ್ಡ್‌ನಲ್ಲಿ ಎರಡು ಭೂಗತ ನಿಲ್ದಾಣಗಳು ನಿರ್ಮಾಣವಾಗುವ ಸಾಧ್ಯತೆಯಿದೆ. ಕರ್ನಾಟಕದ ಗಡಿಯೊಳಗೆ ಈ ಮಾರ್ಗವು ಕೋಲಾರ ಜಿಲ್ಲೆಯ ಮೂಲಕ ಹಾದುಹೋಗಲಿದೆ. ದಕ್ಷಿಣ ಭಾರತದ ಪ್ರಮುಖ ನಗರಗಳ ನಡುವೆ ಉದ್ದೇಶಿಸಲಾದ ಹೈಸ್ಪೀಡ್ ರೈಲು ಜಾಲವು 'ಡೈಮಂಡ್ ಕ್ವಾಡ್ರಿಲ್ಯಾಟರಲ್' ಯೋಜನೆಯ ಭಾಗವಾಗಿದೆ.
ಯೋಜನೆ ಸದ್ಯ ಯಾವ ಹಂತದಲ್ಲಿದೆ?
ನ್ಯಾಷನಲ್ ಹೈಸ್ಪೀಡ್ ರೈಲ್ ಕಾರ್ಪೊರೇಷನ್ ಲಿಮಿಟೆಡ್ ಈ ಎರಡೂ ಕಾರಿಡಾರ್‌ಗಳಿಗೆ ಸಂಬಂಧಿಸಿದಂತೆ ಪ್ರಾಥಮಿಕ ಕಾರ್ಯಗಳನ್ನು ಈಗಾಗಲೇ ಆರಂಭಿಸಿದೆ. ಬೆಂಗಳೂರು-ಹೈದರಾಬಾದ್, ಹಾಗೂ ಹೈದರಾಬಾದ್-ಚೆನ್ನೈ ಮಾರ್ಗಗಳ ಸಮಗ್ರ ಯೋಜನಾ ವರದಿ, ಸ್ಥಳ ಸಮೀಕ್ಷೆ, ಮಾರ್ಗ ಜೋಡಣೆ, ವಿನ್ಯಾಸ, ಹಾಗೂ ಎಂಜಿನಿಯರಿಂಗ್ ಡಾಕ್ಯುಮೆಂಟ್‌ಗಳನ್ನು ತಯಾರಿಸುವ ಕಾರ್ಯ ನಡೆಯುತ್ತಿದೆ. ರೈಲ್ವೆ ಸಚಿವಾಲಯವು ಡಿಪಿಆರ್ ಸಿದ್ಧಪಡಿಸುವ ಕಾರ್ಯವನ್ನು ಮಾರ್ಚ್ 2027ರ ವೇಳೆಗೆ ಪೂರ್ಣಗೊಳಿಸಲು ಗುರಿ ನಿಗದಿಪಡಿಸಿದೆ.
ಇದರ ಜೊತೆಗೆ, ಯೋಜನೆಗಾಗಿ ಕರ್ನಾಟಕದಲ್ಲಿ ಅಗತ್ಯವಿರುವ ಸುಮಾರು 176 ಹೆಕ್ಟೇರ್ ಭೂಸ್ವಾಧೀನ ಪ್ರಕ್ರಿಯೆ ಕುರಿತು ಚರ್ಚಿಸಲು ಕೇಂದ್ರ ರೈಲ್ವೆ ಅಧಿಕಾರಿಗಳ ತಂಡ ಇತ್ತೀಚೆಗಷ್ಟೇ ರಾಜ್ಯಕ್ಕೆ ಆಗಮಿಸಿ, ಮೂಲಸೌಕರ್ಯ ಅಭಿವೃದ್ಧಿ ಇಲಾಖೆ ಅಧಿಕಾರಿಗಳೊಂದಿಗೆ ಪ್ರಾಥಮಿಕ ಸುತ್ತಿನ ಸಭೆಯನ್ನೂ ನಡೆಸಿದೆ.
ಕರ್ನಾಟಕಕ್ಕೆ ಈ ಯೋಜನೆಯಿಂದ ಆಗುವ ಲಾಭಗಳೇನು?
- ದಕ್ಷಿಣದ ಮೂರು ದೊಡ್ಡ ಐಟಿ ಮತ್ತು ವಾಣಿಜ್ಯ ಮಹಾನಗರಗಳಾದ ಬೆಂಗಳೂರು, ಹೈದರಾಬಾದ್ ಮತ್ತು ಚೆನ್ನೈ ನಡುವೆ ಬೃಹತ್ 'ಆರ್ಥಿಕ ಕಾರಿಡಾರ್' ಸೃಷ್ಟಿಯಾಗಲಿದೆ. ಈ ನಗರಗಳ ನಡುವೆ ಉದ್ಯಮ, ಫಾರ್ಮಾ, ಸ್ಟಾರ್ಟ್‌ಅಪ್ ಮತ್ತು ಐಟಿ ಹೂಡಿಕೆಗಳು ಭಾರಿ ವೇಗ ಪಡೆದುಕೊಳ್ಳಲಿವೆ.
- ದೇವನಹಳ್ಳಿ, ದೊಡ್ಡಬಳ್ಳಾಪುರ, ಗೌರಿಬಿದನೂರು, ಯಲಹಂಕ ಹಾಗೂ ಕೋಲಾರ ಭಾಗದಲ್ಲಿ ರಿಯಲ್ ಎಸ್ಟೇಟ್, ಲಾಜಿಸ್ಟಿಕ್ಸ್, ಕೈಗಾರಿಕೆ ಮತ್ತು ಹೋಟೆಲ್ ಉದ್ಯಮಗಳು ಹೊಸ ವೇಗ ಪಡೆದುಕೊಳ್ಳಲಿವೆ.
-ವಿಮಾನ ನಿಲ್ದಾಣಕ್ಕೆ ಕಾರು ಅಥವಾ ಕ್ಯಾಬ್ ಮೂಲಕ ಹೋಗುವವರ ಸಂಖ್ಯೆ ಗಣನೀಯವಾಗಿ ಕಡಿಮೆಯಾಗಿ, ಹೈಸ್ಪೀಡ್ ರೈಲಿನ ಬಳಕೆ ಹೆಚ್ಚಾಗಲಿದೆ. ಇದು ಉತ್ತರ ಬೆಂಗಳೂರಿನ ರಸ್ತೆ ದಟ್ಟಣೆಯನ್ನು ಗಣನೀಯವಾಗಿ ಕಡಿಮೆ ಮಾಡುವುದರ ಜೊತೆಗೆ, ಇಂಗಾಲದ ಹೊರಸೂಸುವಿಕೆಯನ್ನೂ ನಿಯಂತ್ರಿಸಿ ಪರಿಸರ ಸಂರಕ್ಷಣೆಗೆ ನೆರವಾಗಲಿದೆ.
- ಯೋಜನಾ ನಿರ್ಮಾಣ ಕಾರ್ಯಗಳಿಂದ ಹಾಗೂ ಭವಿಷ್ಯದಲ್ಲಿ ನಿಲ್ದಾಣಗಳ ಸುತ್ತಮುತ್ತಲಿನ ವಾಣಿಜ್ಯ ಚಟುವಟಿಕೆಗಳಿಂದ ಸಾವಿರಾರು ನೇರ ಹಾಗೂ ಪರೋಕ್ಷ ಉದ್ಯೋಗಗಳು ಸೃಷ್ಟಿಯಾಗಲಿವೆ.
ವಿಮಾನ ನಿಲ್ದಾಣಕ್ಕೆ ತೆರಳಿ, ಬೋರ್ಡಿಂಗ್ ಪಾಸ್ ಪಡೆದು, ಭದ್ರತಾ ತಪಾಸಣೆ ಮುಗಿಸಿ ವಿಮಾನ ಏರಿ ಹೈದರಾಬಾದ್ ಅಥವಾ ಚೆನ್ನೈ ತಲುಪಲು ತೆಗೆದುಕೊಳ್ಳುವಷ್ಟೇ ಅಥವಾ ಅದಕ್ಕಿಂತ ಕಡಿಮೆ ಸಮಯದಲ್ಲಿ, ನಗರದ ಕೇಂದ್ರ ಭಾಗದಿಂದಲೇ ಹೈಸ್ಪೀಡ್ ರೈಲು ಹತ್ತಿ ಗಮ್ಯಸ್ಥಾನ ತಲುಪಲು ಸಾಧ್ಯ.

