
ಸೌಜನ್ಯ ಅತ್ಯಾಚಾರ, ಕೊಲೆ ಪ್ರಕರಣ| ಮರು ತನಿಖೆಯ ಆದೇಶ ಕಾಯ್ದಿರಿಸಿದ ಸುಪ್ರೀಂಕೋರ್ಟ್
ಘಟನೆ ನಡೆದು 14 ವರ್ಷಗಳೇ ಗತಿಸಿವೆ. ಆದರೂ ತೃಪ್ತಿಕರ ತನಿಖೆ ನಡೆದಿಲ್ಲ. ಮೂಲ ತನಿಖಾಧಿಕಾರಿ ಘಟನಾ ಸ್ಥಳಕ್ಕೇ ಭೇಟಿ ನೀಡಿಲ್ಲ ಎಂದರೆ ಏನರ್ಥ?" ಎಂದು ಸುಪ್ರೀಂಕೋರ್ಟ್ ನ್ಯಾಯಪೀಠ ಆಕ್ರೋಶ ವ್ಯಕ್ತಪಡಿಸಿತು.
ರಾಜ್ಯದಲ್ಲಿ ಸುದೀರ್ಘ ಹೋರಾಟ ಹಾಗೂ ಸಾರ್ವಜನಿಕರ ಆಕ್ರೋಶಕ್ಕೆ ಕಾರಣವಾಗಿದ್ದ ಸೌಜನ್ಯ ಅತ್ಯಾಚಾರ ಮತ್ತು ಕೊಲೆ ಪ್ರಕರಣದ ಮರು ತನಿಖೆಗೆ ಕೋರಿದ ಅರ್ಜಿಯ ಆದೇಶವನ್ನು ಸುಪ್ರೀಂಕೋರ್ಟ್ ಬುಧವಾರ ಕಾಯ್ದಿರಿಸಿದೆ. ಸೌಜನ್ಯ ತಾಯಿ ಕುಸುಮಾವತಿ ಗೌಡ ಅವರು ಸಲ್ಲಿಸಿದ್ದ ಅರ್ಜಿ ವಿಚಾರಣೆ ನಡೆಸಿದ ನ್ಯಾಯಮೂರ್ತಿ ಸಂಜಯ್ ಕುಮಾರ್ ನೇತೃತ್ವದ ದ್ವಿಸದಸ್ಯ ಪೀಠವು, ಕೇಂದ್ರೀಯ ತನಿಖಾ ದಳದ ಕರ್ತವ್ಯ ಲೋಪ ಹಾಗೂ ತನಿಖಾ ವೈಖರಿಯನ್ನು ತರಾಟೆಗೆ ತೆಗೆದುಕೊಂಡಿತು ಎಂದು ಮೂಲಗಳು ತಿಳಿಸಿವೆ.
ಸಿಬಿಐ ತನಿಖಾ ವೈಖರಿಗೆ ಅಸಮಾಧಾನ?
ವಿಚಾರಣೆ ವೇಳೆ ತನಿಖಾ ಸಂಸ್ಥೆಯ ನಡೆಗೆ ಕಠಿಣ ಶಬ್ದಗಳಲ್ಲಿ ಆಕ್ಷೇಪ ವ್ಯಕ್ತಪಡಿಸಿದ ನ್ಯಾಯಪೀಠವು, ಹಲವು ನೇರ ಪ್ರಶ್ನೆಗಳನ್ನು ಕೇಳಿತು. "ಘಟನೆ ನಡೆದು 14 ವರ್ಷಗಳೇ ಗತಿಸಿವೆ. ಆದರೂ ತೃಪ್ತಿಕರ ತನಿಖೆ ನಡೆದಿಲ್ಲ. ಮೂಲ ತನಿಖಾಧಿಕಾರಿ ಘಟನಾ ಸ್ಥಳಕ್ಕೇ ಭೇಟಿ ನೀಡಿಲ್ಲ ಎಂದರೆ ಏನರ್ಥ?" ಎಂದು ಪೀಠ ಆಕ್ರೋಶ ವ್ಯಕ್ತಪಡಿಸಿತು.
ಕೆಳ ಹಂತದ ನ್ಯಾಯಾಲಯದಲ್ಲಿ ಇನ್ನೂ ಕೆಲವರ ವಿರುದ್ಧ ತನಿಖೆ ನಡೆಸಬೇಕಿದೆ ಎಂದು ಈ ಹಿಂದೆ ಹೇಳಿದ್ದ ಸಿಬಿಐ, ಈಗ ಸಿಬ್ಬಂದಿ ಹಾಗೂ ಹಣಕಾಸಿನ ಕೊರತೆಯ ನೆಪಗಳನ್ನು ಮುಂದೆ ತರುತ್ತಿರುವುದೇಕೆ?, ರಾಜ್ಯ ಪೊಲೀಸ್ ಹಾಗೂ ಸಿಐಡಿ ಸಲ್ಲಿಸಿದ್ದ ವರದಿಯನ್ನೇ ಸಿಬಿಐ ಭಾಷಾಂತರಿಸಿ ಕೋರ್ಟ್‌ಗೆ ಸಲ್ಲಿಸಿದೆಯೇ ವಿನಃ ಸ್ವತಂತ್ರ ಹಾಗೂ ಆಳವಾದ ತನಿಖೆ ನಡೆಸಿಲ್ಲ ಎಂದು ಕಿಡಿಕಾರಿದೆ.
ಸೌಜನ್ಯ ಅವರ ತಾಯಿ ಕುಸುಮಾವತಿ ಗೌಡ ಪರ ವಕೀಲರು, ನಿವೃತ್ತ ನ್ಯಾಯಾಧೀಶರ ನೇತೃತ್ವದಲ್ಲಿ ಅಥವಾ ಸ್ವತಂತ್ರ ತನಿಖಾ ಸಂಸ್ಥೆಯಿಂದ ತನಿಖೆ ನಡೆಸಬೇಕೆಂದು ಕೋರಿದರು. ಇದಕ್ಕೆ ಸ್ಪಂದಿಸಿದ ಕರ್ನಾಟಕ ರಾಜ್ಯ ಸರ್ಕಾರದ ಪರ ವಕೀಲರು, "ಪ್ರಕರಣದ ನೈಜ ಸತ್ಯಾಸತ್ಯತೆ ಹೊರಬರಲು ರಾಜ್ಯ ಸರ್ಕಾರ ಬದ್ಧವಾಗಿದೆ. ಸುಪ್ರೀಂಕೋರ್ಟ್ ನಿರ್ದೇಶಿಸಿದರೆ ವಿಶೇಷ ತನಿಖಾ ತಂಡ ರಚನೆ ಮಾಡಿ ತನಿಖೆಗೆ ಪೂರ್ಣ ಸಹಕಾರ ನೀಡಲು ಸರ್ಕಾರ ಸಿದ್ಧವಿದೆ" ಎಂದು ಸ್ಪಷ್ಟಪಡಿಸಿದರು.
ಸಾಕ್ಷಿಗಳಿಗೆ ಭದ್ರತೆ ನೀಡಲು ಸೂಚನೆ
ಪ್ರಕರಣದ ಸಾಕ್ಷಿಗಳಿಗೆ ಹಾಗೂ ಸಂತ್ರಸ್ತ ಕುಟುಂಬಕ್ಕೆ ಸೂಕ್ತ ಭದ್ರತೆ ಮುಂದುವರಿಸುವಂತೆ ಸುಪ್ರೀಂ ಕೋರ್ಟ್ ನಿರ್ದೇಶನ ನೀಡಿದೆ. ಮಧ್ಯಂತರ ವರದಿ ಪಡೆದು ಮುಂದಿನ ತನಿಖಾ ಮಾದರಿಯನ್ನು ನಿರ್ಧರಿಸುವುದಾಗಿ ಕೋರ್ಟ್ ತಿಳಿಸಿದೆ. ಉಜಿರೆಯ ಎಸ್‌ಡಿಎಂ ಕಾಲೇಜಿನ ದ್ವಿತೀಯ ಪಿಯುಸಿ ವಿದ್ಯಾರ್ಥಿನಿ ಸೌಜನ್ಯ ಅವರು ಧರ್ಮಸ್ಥಳದ ಸಮೀಪ ನಾಪತ್ತೆಯಾಗಿದ್ದರು. ಮರುದಿನ ಅವರ ಮೃತದೇಹ ಬರ್ಬರ ಸ್ಥಿತಿಯಲ್ಲಿ ಪತ್ತೆಯಾಗಿತ್ತು. ಸ್ಥಳೀಯ ಪೊಲೀಸರು ಹಾಗೂ ಸಿಐಡಿ ಅಧಿಕಾರಿಗಳು ಈ ಬಗ್ಗೆ ತನಿಖೆ ನಡೆಸಿದ್ದವು. ತೀವ್ರ ಸಾರ್ವಜನಿಕ ಒತ್ತಡದ ಬಳಿಕ ಪ್ರಕರಣವನ್ನು ಸಿಬಿಐ ತನಿಖೆಗೆ ಹಸ್ತಾಂತರಿಸಲಾಗಿತ್ತು. ತೀವ್ರ ವಿಚಾರಣೆ ಬಳಿಕ ಪ್ರಕರಣದ ಆರೋಪಿ ಸಂತೋಷ್ ರಾವ್ನನ್ನು ಸಾಕ್ಷ್ಯಾಧಾರಗಳ ಕೊರತೆಯಿಂದ ಸಿಬಿಐ ವಿಶೇಷ ನ್ಯಾಯಾಲಯ ಖುಲಾಸೆಗೊಳಿಸಿತ್ತು.

