ಸೋನಿಯಾ ಗಾಂಧಿ ಆತ್ಮಚರಿತ್ರೆ ಕೇವಲ ಪುಸ್ತಕವಲ್ಲ, 50 ವರ್ಷಗಳ ರಾಜಕೀಯ ಇತಿಹಾಸ: ಬ್ರಿಜೇಶ್ ಕಾಳಪ್ಪ ವಿಶ್ಲೇಷಣೆ
ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೂಡ ಸೋನಿಯಾ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದವು ಎಂದು ಉಲ್ಲೇಖಿಸಿದ್ದಾರೆ ಎಂಬುದನ್ನು ಬ್ರಿಜೇಶ್ ಕಾಳಪ್ಪ ನೆನಪಿಸಿದ್ದಾರೆ.
ಕಾಂಗ್ರೆಸ್ ಅಧಿನಾಯಕಿ ಸೋನಿಯಾ ಗಾಂಧಿ ಅವರ ಆತ್ಮಚರಿತ್ರೆ 'ಬಿಲಾಂಗಿಂಗ್: ಎ ಜರ್ನಿ ಆಫ್ ಲವ್' ಬಿಡುಗಡೆಯಾಗಿದ್ದು, ರಾಜಕೀಯ ವಲಯದಲ್ಲಿ ಭಾರೀ ಚರ್ಚೆ ಹುಟ್ಟುಹಾಕಿದೆ. ಈ ಕೃತಿಯ ಕುರಿತು 'ದ ಫೆಡರಲ್ ಕರ್ನಾಟಕ'ದ ವಿಶೇಷ ಪಾಡ್ಕಾಸ್ಟ್ನಲ್ಲಿ ಸುಪ್ರೀಂ ಕೋರ್ಟ್ ಹಿರಿಯ ವಕೀಲ ಹಾಗೂ ಕಾಂಗ್ರೆಸ್ ರಾಷ್ಟ್ರೀಯ ವಕ್ತಾರ ಬ್ರಿಜೇಶ್ ಕಾಳಪ್ಪ ಅವರು ವಿಸ್ತೃತವಾಗಿ ಮಾತನಾಡಿದ್ದಾರೆ. ಇದು ಕೇವಲ ಸೋನಿಯಾ ಗಾಂಧಿ ಅವರ ವೈಯಕ್ತಿಕ ಕಥೆಯಲ್ಲ, ಬದಲಾಗಿ ಕಳೆದ 50 ವರ್ಷಗಳ ಭಾರತದ ಇತಿಹಾಸವನ್ನು ಬಿಚ್ಚಿಡುವ ಪ್ರಮುಖ ಆಕರ ಗ್ರಂಥ ಎಂದು ಅವರು ಬಣ್ಣಿಸಿದ್ದಾರೆ.
ತ್ಯಾಗ ಮತ್ತು ನೋವಿನ ಹಾದಿ
ಸೋನಿಯಾ ಗಾಂಧಿ ಅವರು ತಮ್ಮ ದಾಂಪತ್ಯದ ಏಳನೇ ವರ್ಷದಲ್ಲೇ ಅತ್ತೆ ಇಂದಿರಾ ಗಾಂಧಿ ಅವರನ್ನು ಕಳೆದುಕೊಂಡರು. ನಂತರ ಪತಿ ರಾಜೀವ್ ಗಾಂಧಿ ಅವರ ಹತ್ಯೆಯಾಯಿತು. ಇಷ್ಟೆಲ್ಲಾ ಕಷ್ಟ ಕಾರ್ಪಣ್ಯಗಳನ್ನು ಎದುರಿಸಿದರೂ ಅವರು ಅದನ್ನು ಎಲ್ಲೂ ಪ್ರದರ್ಶಿಸಲಿಲ್ಲ. 1997ರ ಸುಮಾರಿಗೆ ಕಾಂಗ್ರೆಸ್ ಪಕ್ಷ ಸಂಕಷ್ಟದಲ್ಲಿದ್ದಾಗ ಪಕ್ಷವನ್ನು ಉಳಿಸುವ ನಿಟ್ಟಿನಲ್ಲಿ ಅವರು ರಾಜಕೀಯ ಪ್ರವೇಶ ಮಾಡಿದರು. 2004ರಲ್ಲಿ ಎನ್ ಡಿಎ ಸರ್ಕಾರವನ್ನು ಮಣಿಸಿ ಯುಪಿಎ ಸರ್ಕಾರ ಅಧಿಕಾರಕ್ಕೆ ಬಂದಾಗ ಪ್ರಧಾನಿ ಹುದ್ದೆಗೇರುವ ಎಲ್ಲಾ ಅವಕಾಶಗಳಿದ್ದರೂ ಅವರು ಅದನ್ನು ನಿರಾಕರಿಸಿದರು. ಆಗಿನ ರಾಷ್ಟ್ರಪತಿ ಎ.ಪಿ.ಜೆ. ಅಬ್ದುಲ್ ಕಲಾಂ ಅವರು ಕೂಡ ಸೋನಿಯಾ ಅವರಿಗೆ ಪ್ರಧಾನಿಯಾಗುವ ಎಲ್ಲಾ ಅರ್ಹತೆಗಳಿದ್ದವು ಎಂದು ಉಲ್ಲೇಖಿಸಿದ್ದಾರೆ ಎಂಬುದನ್ನು ಬ್ರಿಜೇಶ್ ಕಾಳಪ್ಪ ನೆನಪಿಸಿದ್ದಾರೆ.
ಟೀಕಾಕಾರರಿಗೆ ಮೌನವೇ ಉತ್ತರ
ವಿದೇಶಿ ಮೂಲ ಎಂಬಿತ್ಯಾದಿ ಆರೋಪಗಳನ್ನು ಕೆಲವು ಸಂಘಟನೆಗಳು ಹಾಗೂ ನಾಯಕರು ದಶಕಗಳಿಂದ ಮಾಡುತ್ತಾ ಬಂದಿದ್ದಾರೆ. ಆದರೆ ಸೋನಿಯಾ ಗಾಂಧಿ ಅವರು ಎಂದಿಗೂ ಕೀಳು ಮಟ್ಟದ ಹೇಳಿಕೆಗಳ ಮೂಲಕ ಪ್ರತಿಕ್ರಿಯೆ ನೀಡಲಿಲ್ಲ. ಬದಲಾಗಿ ತಮ್ಮ ಪುಸ್ತಕದಲ್ಲಿ ಅತ್ಯಂತ ತೂಕದ ಮಾತುಗಳ ಮೂಲಕ ಸ್ಪಷ್ಟನೆ ನೀಡಿದ್ದಾರೆ. ತುರ್ತು ಪರಿಸ್ಥಿತಿ ಹಾಗೂ ಸಿಖ್ ದಂಗೆಯಂತಹ ಸೂಕ್ಷ್ಮ ವಿಚಾರಗಳ ಬಗ್ಗೆಯೂ ಕೃತಿಯಲ್ಲಿ ಮುಕ್ತವಾಗಿ ಬರೆಯಲಾಗಿದೆ. ಸಿಖ್ ಸಮುದಾಯದ ಮೇಲಾದ ನೋವಿಗೆ ಮರುಗಿದ್ದ ಅವರು, ಅಲ್ಪಸಂಖ್ಯಾತ ಸಿಖ್ ಸಮುದಾಯದ ಮನಮೋಹನ್ ಸಿಂಗ್ ಅವರನ್ನು 10 ವರ್ಷಗಳ ಕಾಲ ದೇಶದ ಪ್ರಧಾನಿ ಹುದ್ದೆಯಲ್ಲಿ ಕೂರಿಸುವ ಮೂಲಕ ತಮ್ಮ ವಿಶಾಲ ಮನೋಭಾವವನ್ನು ಪ್ರದರ್ಶಿಸಿದರು ಎಂದು ಕಾಳಪ್ಪ ವಿವರಿಸಿದ್ದಾರೆ.
ಕರ್ನಾಟಕದ ನಂಟು ಮತ್ತು ಮಲ್ಲಿಕಾರ್ಜುನ ಖರ್ಗೆ
ಕರ್ನಾಟಕಕ್ಕೂ ಗಾಂಧಿ ಕುಟುಂಬಕ್ಕೂ ಅವಿನಾಭಾವ ಸಂಬಂಧವಿದೆ. ಇಂದಿರಾ ಗಾಂಧಿ ಅವರಿಗೆ ಚಿಕ್ಕಮಗಳೂರು ಮರುಹುಟ್ಟು ನೀಡಿದರೆ, ಸೋನಿಯಾ ಗಾಂಧಿ ಅವರಿಗೆ ಬಳ್ಳಾರಿ ಕ್ಷೇತ್ರ ಆಶ್ರಯ ನೀಡಿತು. ಇದಲ್ಲದೆ, ಸೋನಿಯಾ ಅವರ ತಂದೆ ಹಿಂದೆ ಕರ್ನಾಟಕಕ್ಕೆ ಭೇಟಿ ನೀಡಿದ್ದಾಗ, ಮುಂದಿನ 20 ವರ್ಷಗಳಲ್ಲಿ ಭಾರತ ದೊಡ್ಡ ಆರ್ಥಿಕ ಶಕ್ತಿಯಾಗಿ ಹೊರಹೊಮ್ಮಲಿದೆ ಎಂದು ಭವಿಷ್ಯ ನುಡಿದಿದ್ದನ್ನು ಕೃತಿಯಲ್ಲಿ ಸ್ಮರಿಸಲಾಗಿದೆ. ಇನ್ನು ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಸಿಎಂ ಮಾಡದ ವಿಚಾರದ ಕುರಿತು ಪ್ರತಿಕ್ರಿಯಿಸಿದ ಬ್ರಿಜೇಶ್ ಕಾಳಪ್ಪ, ಮುಖ್ಯಮಂತ್ರಿಗಳನ್ನು ಆಯ್ಕೆ ಮಾಡುವ ಶಕ್ತಿ ಕೇಂದ್ರವಾಗಿರುವ ಎಐಸಿಸಿ ಅಧ್ಯಕ್ಷ ಸ್ಥಾನವು ಮುಖ್ಯಮಂತ್ರಿ ಹುದ್ದೆಗಿಂತಲೂ ಉನ್ನತವಾದದ್ದು. ಖರ್ಗೆ ಅವರು ಆ ಹಂತವನ್ನು ದಾಟಿ ಬೆಳೆದಿದ್ದಾರೆ. ಹಾಗಾಗಿ ಅವರು ಮತ್ತೆ ಸಿಎಂ ಸ್ಥಾನಕ್ಕೆ ಬರುವುದು ರಿವರ್ಸ್ ಗೇರ್ ಹಾಕಿದಂತೆ ಎಂದು ಸ್ಪಷ್ಟಪಡಿಸಿದ್ದಾರೆ.
ರಾಹುಲ್ ಶ್ರಮ ಹಾಗೂ ಕ್ಷಮಾಗುಣ
ಪತಿ ರಾಜೀವ್ ಗಾಂಧಿ ಅವರನ್ನು ಹತ್ಯೆ ಮಾಡಿದವರನ್ನು ಕ್ಷಮಿಸುವ ಬಗ್ಗೆ ಒಮ್ಮೆ ದಲೈಲಾಮಾ ಅವರು ಪ್ರಶ್ನಿಸಿದಾಗ, ಸೋನಿಯಾ ಗಾಂಧಿ ಅವರು ಕಣ್ಣೀರು ಹಾಕುತ್ತಲೇ 'ಹೌದು, ನಾನು ಅವರನ್ನು ಕ್ಷಮಿಸುತ್ತೇನೆ' ಎಂದು ಪ್ರತಿಕ್ರಿಯಿಸಿದ್ದ ಅತ್ಯಂತ ಭಾವುಕ ಸನ್ನಿವೇಶ ಕೃತಿಯಲ್ಲಿದೆ. ಇನ್ನು ರಾಹುಲ್ ಗಾಂಧಿ ಅವರಿಗೂ 2004ರಲ್ಲಿ ರಾಜಕೀಯದ ಒಲವಿರಲಿಲ್ಲ. ಆದರೆ ಭಾರತ್ ಜೋಡೋ ಯಾತ್ರೆಯಲ್ಲಿ ಕಾಲು ನೋವಿದ್ದರೂ ಲೆಕ್ಕಿಸದೆ ಕರ್ನಾಟಕದಲ್ಲಿ ಹೆಜ್ಜೆ ಹಾಕಿದ ಅವರ ಬದ್ಧತೆಯನ್ನು ಪುಸ್ತಕದಲ್ಲಿ ದಾಖಲಿಸಲಾಗಿದೆ. ಒಟ್ಟಾರೆಯಾಗಿ ಇದೊಂದು ಐತಿಹಾಸಿಕ ಕೃತಿಯಾಗಿದ್ದು, ಸೋನಿಯಾ ಗಾಂಧಿ ಅವರ ನೋವು, ನಗು ಹಾಗೂ ತ್ಯಾಗದ ಸಂಪೂರ್ಣ ಚಿತ್ರಣವನ್ನು ಕಟ್ಟಿಕೊಡುತ್ತದೆ ಎಂದು ಬ್ರಿಜೇಶ್ ಕಾಳಪ್ಪ ವಿಶ್ಲೇಷಿಸಿದ್ದಾರೆ.

