
ಕೆ.ಆರ್.ನಗರದಲ್ಲಿ ದಾರುಣ ದುರಂತ: ಕಾವೇರಿ ನದಿಯಲ್ಲಿ ಮುಳುಗಿ ಒಂದೇ ಕುಟುಂಬದ 6 ಮಂದಿ ಸಾವು
ಬೆಂಗಳೂರಿನಿಂದ ಹಜರತ್ ಸೈಯದ್ ಮೊಹಮ್ಮದ್ ಶರೀಫ್ ತಾತನವರ ಉರುಸ್ ನಿಮಿತ್ತ ಕೆ.ಆರ್.ನಗರದ ದರ್ಗಾಕ್ಕೆ ಬಂದಿದ್ದ ಈ ಪ್ರವಾಸಿಗರು ಮಧ್ಯಾಹ್ನ ಆರ್ಕೇಶ್ವರ ದೇವಸ್ಥಾನದ ಬಳಿ ನದಿಗೆ ಇಳಿದಿದ್ದಾರೆ.
ಮೈಸೂರು ಜಿಲ್ಲೆಯ ಕೆ.ಆರ್.ನಗರ ತಾಲೂಕಿನ ಅರ್ಕೇಶ್ವರ ದೇಗುಲದ ಸಮೀಪದ ಕಾವೇರಿ ನದಿಯಲ್ಲಿ ಈಜಲು ತೆರಳಿದ್ದ ಆರು ಮಂದಿ ಪ್ರವಾಸಿಗರು ಭಾನುವಾರ ನೀರಿನಲ್ಲಿ ಮುಳುಗಿ ಮೃತಪಟ್ಟ ದಾರುಣ ಘಟನೆ ನಡೆದಿದೆ.
ಬೆಂಗಳೂರು ಹಾಗೂ ಊಟಿಯಿಂದ ಹಜರತ್ ಸೈಯದ್ ಮೊಹಮ್ಮದ್ ಶರೀಫ್ ತಾತನವರ ಉರುಸ್ ನಿಮಿತ್ತ ಕೆ.ಆರ್.ನಗರದ ದರ್ಗಾಕ್ಕೆ ಬಂದಿದ್ದ ಕುಟುಂಬದವರು ಮಧ್ಯಾಹ್ನ ಅರ್ಕೇಶ್ವರ ದೇವಸ್ಥಾನದ ಬಳಿ ಕಾವೇರಿ ನದಿಗೆ ಇಳಿದಿದ್ದರು. ಬಿಸಿಲಿನ ತಾಪ ತಾಳದೆ ಒಟ್ಟು ಎಂಟು ಮಂದಿ ನದಿಯಲ್ಲಿ ಈಜಲು ಇಳಿದ ವೇಳೆ, ಏಕಾಏಕಿ ನೀರಿನ ಸೆಳೆತ ಹೆಚ್ಚಾಗಿ ಆರು ಮಂದಿ ಕೊಚ್ಚಿಹೋಗಿದ್ದಾರೆ.
ಪ್ರವಾಸಿಗರ ಕಿರುಚಾಟ ಕೇಳುತ್ತಿದ್ದಂತೆಯೇ ಸ್ಥಳೀಯರು ಧಾವಿಸಿ ನೀರಿಗೆ ಜಿಗಿದು ಇಬ್ಬರನ್ನು ಪ್ರಾಣಾಪಾಯದಿಂದ ರಕ್ಷಿಸುವಲ್ಲಿ ಯಶಸ್ವಿಯಾದರು. ಆದರೆ ಉಳಿದ ಆರು ಮಂದಿ ನೀರಿನ ಸೆಳೆತಕ್ಕೆ ಸಿಲುಕಿ ನಾಪತ್ತೆಯಾಗಿದ್ದು, ಬಳಿಕ ಅವರು ಮೃತಪಟ್ಟಿರುವುದು ದೃಢಪಟ್ಟಿದೆ ಎಂದು ಪ್ರತ್ಯಕ್ಷದರ್ಶಿಗಳು ತಿಳಿಸಿದ್ದಾರೆ.
ಮೃತರನ್ನು ಮೈಸೂರಿನ ಉದಯಗಿರಿ ಮೂಲದ ಊಟಿಯ ನಿವಾಸಿ ಫಾತಿಮಾ (42), ಬೆಂಗಳೂರಿನ ಎಚ್‌ಬಿಆರ್ ಲೇಔಟ್ ಆಟೊರಿಕ್ಷಾ ಚಾಲಕ ಮಹಮ್ಮದ್ ಯಾಸೀನ್ (23), ನೇಹಾ ಕೌಸರ್ (19), ಮೈಸೂರಿನ ಉದಯಗಿರಿಯ ಉಜೇರ್ (5), ಬೆಂಗಳೂರಿನ ಕಾಡಗೊಂಡನಹಳ್ಳಿ ಎಮ್ಮೆ ಐಮಾನ್ (13) ಹಾಗೂ ಕೆ.ಆರ್.ನಗರ ಮುಸ್ಲಿಂ ಬ್ಲಾಕ್‌ನ ಅಫೀಫ್ ಅಹಮದ್ (13) ಎಂದು ಗುರುತಿಸಲಾಗಿದೆ. ಮೃತರೆಲ್ಲರೂ ಒಂದೇ ಕುಟುಂಬದವರಾಗಿರುವುದು ಘಟನೆಗೆ ಮತ್ತಷ್ಟು ಹೃದಯವಿದ್ರಾವಕ ಸ್ವರೂಪ ನೀಡಿದೆ.
ಕುಟುಂಬದವರ ಕಣ್ಣೆದರೇ ಜಲ ಸಮಾಧಿ
ಉರುಸ್‌ನಲ್ಲಿ ಭಾಗವಹಿಸಲು ದರ್ಗಾಕ್ಕೆ ಬಂದಿದ್ದ ಕುಟುಂಬದ ಆರು ಮಂದಿ ಕಣ್ಣೆದುರೇ ಜಲಸಮಾಧಿಯಾದ ಹಿನ್ನೆಲೆಯಲ್ಲಿ ಸ್ಥಳದಲ್ಲಿ ಸಂಬಂಧಿಕರ ಆಕ್ರಂದನ ಮುಗಿಲು ಮುಟ್ಟಿತು. ವಿಷಯ ತಿಳಿಯುತ್ತಿದ್ದಂತೆಯೇ ಕೆ.ಆರ್.ನಗರ ಪೊಲೀಸರು ಹಾಗೂ ಅಗ್ನಿಶಾಮಕ ದಳದ ಸಿಬ್ಬಂದಿ ಸ್ಥಳಕ್ಕೆ ಧಾವಿಸಿ, ಸ್ಥಳೀಯ ಮೀನುಗಾರರ ಸಹಾಯದೊಂದಿಗೆ ಮೃತದೇಹಗಳನ್ನು ಹೊರತೆಗೆದುವ ಕಾರ್ಯಾಚರಣೆ ಆರಂಭಿಸಿದರು. ಈ ಸಂಬಂಧ ಪೊಲೀಸರು ಪ್ರಕರಣ ದಾಖಲಿಸಿಕೊಂಡು ತನಿಖೆ ಕೈಗೊಂಡಿದ್ದಾರೆ.
ಕಾವೇರಿ ನದಿಯಲ್ಲಿ ನೀರಿನ ಆಳ, ಸುಳಿಗಳು ಹಾಗೂ ಹರಿವಿನ ಸ್ವಭಾವದ ಅರಿವಿಲ್ಲದೆ ನದಿಗೆ ಇಳಿಯುವುದು ಅಪಾಯಕಾರಿ ಎಂದು ಸ್ಥಳೀಯರು ಎಚ್ಚರಿಸಿದ್ದಾರೆ.
ಪರಿಹಾರ ಘೋಷಣೆ ಮಾಡಿದ ಸಿಎಂ
ಈ ದುರಂತದಲ್ಲಿ ಮೃತಪಟ್ಟ ಆರು ಮಂದಿಯ ಕುಟುಂಬಗಳಿಗೆ ರಾಜ್ಯ ಸರ್ಕಾರ ತಲಾ 5 ಲಕ್ಷ ರೂ. ಪರಿಹಾರ ಘೋಷಿಸಿದೆ. ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು ಎಕ್ಸ್ ಖಾತೆಯಲ್ಲಿ ಸಂತಾಪ ಸೂಚಿಸಿ, ಮೃತರ ಆತ್ಮಕ್ಕೆ ಚಿರಶಾಂತಿ ಸಿಗಲಿ ಹಾಗೂ ಕುಟುಂಬಸ್ಥರಿಗೆ ದುಃಖ ಭರಿಸುವ ಶಕ್ತಿ ದೊರಕಲಿ ಎಂದು ಪ್ರಾರ್ಥಿಸಿದ್ದಾರೆ.

