ಶಿರಾದಲ್ಲಿ 2ನೇಏರ್ಪೋರ್ಟ್?, ಬಿಡದಿ ಭೂಸ್ವಾಧೀನ, ಜೆಡಿಎಸ್ ಪಾದಯಾತ್ರೆ, ಸಂಪುಟ ವಿಸ್ತರಣೆ: ಖರ್ಗೆ ಜತೆ ಚರ್ಚೆ
ಶಿರಾದಲ್ಲಿ ಏರ್‌ಪೋರ್ಟ್; ಸೋಮಣ್ಣ ಪತ್ರ | ಜೆಡಿಎಸ್‌ನಿಂದ 38 ಕಿ.ಮೀ ಪಾದಯಾತ್ರೆ | ಸಂಪುಟ ವಿಸ್ತರಣೆ; ಖರ್ಗೆ ಭೇಟಿ ಮಾಡಿದ ಸಿಎಂ-ಡಿಸಿಎಂ
ಬೆಂಗಳೂರಿನ ಮೇಲಿನ ಜನಸಂಖ್ಯೆ ಮತ್ತು ಆರ್ಥಿಕ ಹೊರೆ ತಗ್ಗಿಸಲು, ರಾಜ್ಯದ ಇತರ ಭಾಗಗಳಲ್ಲಿ ಪರ್ಯಾಯ ಆರ್ಥಿಕ ಕೇಂದ್ರಗಳನ್ನು ಸೃಷ್ಟಿಸುವುದು ಅನಿವಾರ್ಯವಾಗಿದೆ. ಈ ನಿಟ್ಟಿನಲ್ಲಿ, ಎರಡನೇ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣ ನಿರ್ಮಾಣದ ಕುರಿತು ಚರ್ಚೆಗಳು ನಡೆಯುತ್ತಿವೆ. ಕನಕಪುರ ಬಳಿ ವಿಮಾನ ನಿಲ್ದಾಣ ಮಾಡುವ ಕುರಿತು ಒತ್ತಾಯಗಳು ಕೇಳಿಬಂದಿವೆ. ಇಲ್ಲಿ ವಿಮಾನ ನಿಲ್ದಾಣ ಸ್ಥಾಪನೆಯು ಒಂದು ರಾಜಕೀಯ ಪ್ರಸ್ತಾವನೆಯಾಗಿ ಕೇಳಿಬರುತ್ತಿದೆಯೇ ಹೊರತು, ತಾಂತ್ರಿಕವಾಗಿ ಕಷ್ಟಕರ ಎಂದು ಹೇಳಲಾಗಿದೆ. ಈ ಹಿನ್ನೆಲೆಯಲ್ಲಿ ತುಮಕೂರು ಜಿಲ್ಲೆಯ ಶಿರಾ ಬಳಿ ನೂತನ ಅಂತಾರಾಷ್ಟ್ರೀಯ ವಿಮಾನ ನಿಲ್ದಾಣವನ್ನು ನಿರ್ಮಿಸಬೇಕೆಂಬ ಕೂಗು ಕೇಳಿಬಂದಿವೆ. ಈ ಸಂಬಂಧ ಕೇಂದ್ರ ರೈಲ್ವೆ ಖಾತೆ ರಾಜ್ಯ ಸಚಿವ ವಿ.ಸೋಮಣ್ಣ ಅವರು ಕೇಂದ್ರ ನಾಗರಿಕ ವಿಮಾನಯಾನ ಸಚಿವ ಕಿಂಜರಾಪು ರಾಮಮೋಹನ್ ನಾಯ್ಡು ಅವರಿಗೆ ಬರೆದಿದ್ದಾರೆ.
ದಶಕಗಳಿಂದ ಕರ್ನಾಟಕದ ಅಭಿವೃದ್ಧಿ ಬೆಂಗಳೂರು ನಗರದ ಸುತ್ತಲೇ ಸುತ್ತುತ್ತಿರುವುದು ರಾಜ್ಯದ ಅಸಮತೋಲಿತ ಬೆಳವಣಿಗೆಗೆ ಕಾರಣವಾಗಿದೆ. ಉದ್ಯೋಗಾವಕಾಶಗಳು, ಕೈಗಾರಿಕಾ ಸ್ಥಾಪನೆಗಳು ಮತ್ತು ಮೂಲಸೌಕರ್ಯಗಳ ಅಭಿವೃದ್ಧಿ ಬೆಂಗಳೂರಿನಲ್ಲಿ ಕೇಂದ್ರೀಕೃತವಾಗಿರುವುದರಿಂದ, ಉತ್ತರ ಮತ್ತು ಮಧ್ಯ ಕರ್ನಾಟಕದ ಜಿಲ್ಲೆಗಳು ಮೂಲಸೌಕರ್ಯಗಳ ಕೊರತೆಯಿಂದ ಬಳಲುತ್ತಿವೆ. ಈ ಅಸಮತೋಲನವನ್ನು ನಿವಾರಿಸಿ, ರಾಜ್ಯದ ಸಮಗ್ರ ಅಭಿವೃದ್ಧಿಯನ್ನು ಸಾಧಿಸಲು ಬೆಂಗಳೂರಿನ ಹೊರಗೆ ಪ್ರಬಲವಾದ ವಾಯುಸಾರಿಗೆ ಸಂಪರ್ಕದ ಅಗತ್ಯವಿದೆ. ಈ ದೃಷ್ಟಿಯಿಂದ ಶಿರಾ ಸೂಕ್ತ ಆಯ್ಕೆಯಾಗಿದೆ ಎಂದು ಹೇಳಲಾಗಿದೆ.
ಜೆಡಿಎಸ್‌ನಿಂದ ಪಾದಯಾತ್ರೆ
ರಾಮನಗರ ಜಿಲ್ಲೆಯ ಬಿಡದಿ ಪ್ರದೇಶದಲ್ಲಿ ಪ್ರಸ್ತಾವಿತ ಬಿಡದಿ ಟೌನ್‌ಶಿಪ್ ಯೋಜನೆಯು ಇದೀಗ ರಾಜ್ಯ ರಾಜಕೀಯದಲ್ಲಿ ಭಾರೀ ಸಂಚಲನ ಮೂಡಿಸಿದೆ. ರೈತರ ಕೃಷಿ ಭೂಮಿಯನ್ನು ವಶಪಡಿಸಿಕೊಳ್ಳುವ ಸರ್ಕಾರದ ನಿರ್ಧಾರದ ವಿರುದ್ಧ ಸ್ಥಳೀಯ ರೈತರು ಮತ್ತು ರಾಜಕೀಯ ಪಕ್ಷಗಳು ಸಿಡಿದೆದ್ದಿವೆ. ಈ ಹೋರಾಟದ ಮುಂಚೂಣಿಯಲ್ಲಿರುವ ಜೆಡಿಎಸ್, ಬಿಜೆಪಿಗೂ ಮೊದಲೇ ತನ್ನ ಪಾದಯಾತ್ರೆಯ ದಿನಾಂಕವನ್ನು ಘೋಷಿಸುವ ಮೂಲಕ ರಾಜಕೀಯ ವೇದಿಕೆಯಲ್ಲಿ ಮೇಲುಗೈ ಸಾಧಿಸಲು ಪ್ರಯತ್ನಿಸಿದೆ.
ಜೆಡಿಎಸ್ ಪಕ್ಷದ ಕೋರ್ ಕಮಿಟಿ ಅಧ್ಯಕ್ಷ ಜೆ.ಕೆ. ಕೃಷ್ಣ ರೆಡ್ಡಿ ಮತ್ತು ಶಾಸಕಾಂಗ ಪಕ್ಷದ ನಾಯಕ ಸುರೇಶ್ ಬಾಬು ಅವರು, ಹೋರಾಟವನ್ನು ತೀವ್ರಗೊಳಿಸುವ ಬಗ್ಗೆ ಹೇಳಿಕೆ ನೀಡಿದ್ದಾರೆ. ಜುಲೈ 30, 31 ಮತ್ತು ಆಗಸ್ಟ್ 1 ರಂದು ಮೂರು ದಿನಗಳ ಕಾಲ ಸುಮಾರು 38 ಕಿಲೋಮೀಟರ್ ದೂರದ ಪಾದಯಾತ್ರೆಗೆ ಜೆಡಿಎಸ್ ಕರೆ ನೀಡಿದೆ. ಭೈರಮಂಗಲದಿಂದ ಪ್ರಾರಂಭವಾಗುವ ಈ ಪಾದಯಾತ್ರೆಯು ಆಗಸ್ಟ್ 1 ರಂದು ಬೆಂಗಳೂರಿನ ಫ್ರೀಡಂ ಪಾರ್ಕ್ ತಲುಪಲಿದೆ.
ಎಐಸಿಸಿ ಅಧ್ಯಕ್ಷರನ್ನು ಭೇಟಿ ಮಾಡಿದ ಸಿಎಂ, ಡಿಸಿಎಂ
ರಾಜ್ಯ ರಾಜಕೀಯದಲ್ಲಿ ಸದ್ಯ ಸಚಿವ ಸಂಪುಟ ವಿಸ್ತರಣೆಯ ವಿಷಯವು ಅತ್ಯಂತ ಮಹತ್ವದ ಮತ್ತು ಕುತೂಹಲಕಾರಿ ಚರ್ಚೆಯಾಗಿ ಮಾರ್ಪಟ್ಟಿದೆ. ಸಚಿವ ಸಂಪುಟ ವಿಸ್ತರಣೆ ಸಂಬಂಧ ದೆಹಲಿಯಲ್ಲಿ ಅಪೂರ್ಣಗೊಂಡ ಚರ್ಚೆ ಹಿನ್ನೆಲೆಯಲ್ಲಿ ಇವತ್ತು ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್ ಮತ್ತು ಉಪಮುಖ್ಯಮಂತ್ರಿ ಡಾ. ಜಿ. ಪರಮೇಶ್ವರ್ ಅವರು ಬೆಂಗಳೂರಿನಲ್ಲಿ ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರನ್ನು ಭೇಟಿ ಮಾಡಿ ಮಾತುಕತೆ ನಡೆಸಿದರು. ರಾಜ್ಯದ ಪ್ರಸ್ತುತ ರಾಜಕೀಯ ವಿದ್ಯಮಾನಗಳ ಜೊತೆಗೆ, ಸಚಿವ ಸಂಪುಟ ವಿಸ್ತರಣೆಯ ವಿಳಂಬದ ಬಗ್ಗೆಯೂ ಗಂಭೀರ ಚರ್ಚೆ ನಡೆದಿದೆ ಎಂದು ಮೂಲಗಳು ತಿಳಿಸಿವೆ.
ಸಚಿವ ಸಂಪುಟ ವಿಸ್ತರಣೆಯ ಪ್ರಕ್ರಿಯೆ ಕಳೆದ ಕೆಲವು ದಿನಗಳಿಂದ ದೆಹಲಿ ಮಟ್ಟದಲ್ಲಿ ಚರ್ಚೆಯಾಗುತ್ತಿತ್ತು. ಮುಖ್ಯಮಂತ್ರಿ ಡಿ.ಕೆ. ಶಿವಕುಮಾರ್, ಮಾಜಿ ಸಿಎಂ ಸಿದ್ದರಾಮಯ್ಯ ಸೇರಿದಂತೆ ರಾಜ್ಯದ ಹಿರಿಯ ನಾಯಕರು ದೆಹಲಿಗೆ ತೆರಳಿ ರಾಹುಲ್ ಗಾಂಧಿಯವರೊಂದಿಗೆ ಒಂದು ಸುತ್ತಿನ ಮಾತುಕತೆ ನಡೆಸಿದ್ದರು. ಆದರೆ, ಆ ಸಂದರ್ಭದಲ್ಲಿ ಅನಿವಾರ್ಯ ಕಾರಣಗಳು ಎದುರಾದವು. ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ತುರ್ತಾಗಿ ಬೆಂಗಳೂರಿಗೆ ಮರಳಬೇಕಾಯಿತು. ಪರಿಣಾಮವಾಗಿ, ದೆಹಲಿಯಲ್ಲಿ ನಡೆಯಬೇಕಿದ್ದ ನಿರ್ಣಾಯಕ ಸಭೆ ಅಪೂರ್ಣಗೊಂಡಿತು. ರಾಹುಲ್ ಗಾಂಧಿಯವರು, ಖರ್ಗೆ ಅವರು ದೆಹಲಿಗೆ ಬಂದ ನಂತರ ಈ ಬಗ್ಗೆ ಹೆಚ್ಚಿನ ಚರ್ಚೆ ನಡೆಸೋಣ ಎಂದು ಸೂಚಿಸಿದ್ದರಿಂದ, ಸಂಪುಟ ವಿಸ್ತರಣೆಯ ಮುಹೂರ್ತ ಮುಂದಕ್ಕೆ ಹೋಗಿತ್ತು.

