x

SIR Protests| ದೇಶಾದ್ಯಂತ ಸುಮಾರು 13 ಕೋಟಿ ಮತಗಳನ್ನು ಅಕ್ರಮವಾಗಿ ಅಳಿಸಿ ಹಾಕಲಾಗಿದೆ - ದಿಪ್ಕೆ ಆರೋಪ

2004ರ ಲೋಕಸಭಾ ಚುನಾವಣೆಯಲ್ಲಿ ಶೇ. 2ರಷ್ಟು ಮತಗಳ ಅಂತರದಿಂದ ಫಲಿತಾಂಶ ನಿರ್ಧಾರವಾಗಿತ್ತು. ಇದೇ ಭಯದಿಂದ ಆಡಳಿತಾರೂಢ ಬಿಜೆಪಿ ಈಗ ಮತದಾರರ ಪಟ್ಟಿಯೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅಭಿಜೀತ್‌ ದಿಪ್ಕೆ ಕಿಡಿಕಾರಿದರು.


Click the Play button to hear this message in audio format

ಮತದಾರರ ಪಟ್ಟಿಯ ವಿಶೇಷ ಪರಿಷ್ಕರಣೆ (SIR) ಮತ್ತು ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್‌ ಕುಮಾರ್‌ ವಜಾ ಸೇರಿದಂತೆ ಹಲವು ಬೇಡಿಕೆಗಳನ್ನು ಮುಂದಿರಿಸಿ ನಾಗರಿಕ ಹಕ್ಕು ಸಂಘಟನೆಗಳು ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಬೃಹತ್‌ ಪ್ರತಿಭಟನೆ ಮತ್ತು ಜನತಾ ನ್ಯಾಯಾಲಯ (People's Tribunal) ಕಾರ್ಯಕ್ರಮಗಳನ್ನು ಗುರುವಾರ ಏರ್ಪಡಿಸಿದೆ.

ಮತದಾರರ ಪಟ್ಟಿಯ ಎಸ್‌ಐಆರ್ (Special Intensive Revision) ಪ್ರಕ್ರಿಯೆಯಲ್ಲಿ ನಡೆದಿದೆ ಎನ್ನಲಾದ ಗಂಭೀರ ಲೋಪದೋಷಗಳನ್ನು ಖಂಡಿಸಿ, ಕಾಕ್ರೋಚ್ ಜನತಾ ಪಾರ್ಟಿ (CJP) ನೇತೃತ್ವದಲ್ಲಿ ಸಮಾವೇಶ ನಡೆಯಲಿದೆ.

ಸಿಜೆಪಿ (CJP) ಸಂಸ್ಥಾಪಕ ಅಭೀಜಿತ್ ದೀಪ್ಕೆ (Abhijeet Dipke), ಪ್ರಸಿದ್ಧ ಯೂಟ್ಯೂಬರ್ ಧ್ರುವ್ ರಾಠಿ, ನಟ ಪ್ರಕಾಶ್ ರಾಜ್, ಸುಪ್ರೀಂ ಕೋರ್ಟ್‌ ನಿವೃತ್ತ ನ್ಯಾಯಾಧೀಶ ಜ. ಗೋಪಾಲಗೌಡ ಹಾಗೂ ಹಲವು ನಾಗರಿಕ ಹಕ್ಕುಗಳ ಹೋರಾಟಗಾರರು ಪ್ರತಿಭಟನೆಗೆ ಬೆಂಬಲ ಸೂಚಿಸಿದ್ದಾರೆ.

ರಾಜ್ಯದ ವಿವಿಧ ಭಾಗಗಳಲ್ಲಿ ಮತದಾರರ ಪಟ್ಟಿಯಿಂದ ಅನ್ಯಾಯವಾಗಿ ಹೆಸರು ಕಳೆದುಕೊಂಡ ಸಂತ್ರಸ್ತರು ಜನತಾ ನ್ಯಾಯಾಲಯದ ಮುಂದೆ ತಮ್ಮ ಕುಂದುಕೊರತೆಗಳನ್ನು ತೋಡಿಕೊಳ್ಳಲಿದ್ದಾರೆ. ಹಾಗೂ ಮುಖ್ಯ ಚುನಾವಣಾ ಆಯುಕ್ತ ಜ್ಞಾನೇಶ್ ಕುಮಾರ್ ಅವರ ರಾಜೀನಾಮೆಗೆ ಆಗ್ರಹಿಸಲಾಯಿತು ಹಾಗೂ ಎಸ್‌ಐಆರ್ ಪ್ರಕ್ರಿಯೆಯಡಿ ಕೈಗೊಂಡಿರುವ ಹೆಸರು ತಡೆ/ವಜಾ ನಿರ್ಧಾರಗಳನ್ನು ರದ್ದುಗೊಳಿಸಬೇಕೆಂದು ಒತ್ತಾಯಿಸಲು ನಿರ್ಧರಿಸಲಾಗಿದೆ.

ಜನತಾ ನ್ಯಾಯಾಲಯದ ನಂತರ ಚುನಾವಣಾ ಆಯೋಗದ ಕ್ರಮಗಳನ್ನು ಖಂಡಿಸಿ ಸಾಂಕೇತಿಕವಾಗಿ 'ಚಪ್ಪಲಿ ಪ್ರತಿಭಟನೆ' (Chappal Protest) ನಡೆಸಲೂ ನಿರ್ಧರಿಸಲಾಗಿದೆ. ಈ ಹೋರಾಟದ ಮುಂದಿನ ಭಾಗವಾಗಿ ಮುಂಬರುವ ಅಕ್ಟೋಬರ್ 10 ರಂದು ದೆಹಲಿಯ ಜಂತರ್ ಮಂತರ್‌ನಲ್ಲಿ ಬೃಹತ್ ಪ್ರತಿಭಟನೆಯನ್ನು ಆಯೋಜಿಸುವುದಾಗಿ ಸಿಜೆಪಿ ಸಂಘಟಕರು ತಿಳಿಸಿದ್ದಾರೆ.

Live Updates

  • ಜನತಾ ನ್ಯಾಯಾಲಯದಲ್ಲಿ ಏನಾಯಿತು?
    8 Oct 2026 4:45 PM IST

    ಜನತಾ ನ್ಯಾಯಾಲಯದಲ್ಲಿ ಏನಾಯಿತು?

    ನಾಗರಿಕ ಹಕ್ಕು ಸಂಘಟನೆಗಳು ಎಸ್‌ಐಆರ್‌ ಸಂಬಂಧ ನಡೆಸಿದ ಪ್ರತಿಭಟನಾ ಕಾರ್ಯಕ್ರಮ ಹಾಗೂ ಜನತಾ ನ್ಯಾಯಾಲಯ ಕಾರ್ಯಕ್ರಮವನ್ನು ದ ಫೆಡರಲ್‌ ಕರ್ನಾಟಕ  ವಿವರವಾಗಿ ವರದಿ ಮಾಡಿತು.  ಕಾರ್ಯಕ್ರಮದ ಬಳಿಕ  ಜನತಾ ನ್ಯಾಯಾಲಯದಲ್ಲಿ ಏನಾನಾಯಿತು ಎಂಬ ಬಗ್ಗೆ ವಿವರಣೆ ಇಲ್ಲಿದೆ.

  • 8 Oct 2026 2:35 PM IST

    ಹೋರಾಟಕ್ಕೆ ಬರಲು ತನಗೆ ಎಲಾನ್ ಮಸ್ಕ್ ದೇಣಿಗೆ ನೀಡಿಲ್ಲ- ಧ್ರುವ್ ರಾಠಿ

    ಬೆಂಗಳೂರಿನಲ್ಲಿ ನಡೆಯುತ್ತಿರುವ ಜನತಾ ನ್ಯಾಯಾಲಯ ಹೆಸರಿನ ಪ್ರತಿಭಟನೆಯಲ್ಲಿ ಭಾಗವಹಿಸಿದ್ದು, ತಾನು ಸರ್ಕಾರ ಬದಲಿಸಲು ಬಂದಿಲ್ಲ, ಬದಲಾಗಿ ಪ್ರಜಾಪ್ರಭುತ್ವದ ಮೌಲ್ಯಗಳ ರಕ್ಷಣೆಗಾಗಿ ಬಂದಿದ್ದೇನೆ ಎಂದು ಯೂಟ್ಯೂಬರ್ ಧ್ರುವ್ ರಾಠಿ ಸ್ಪಷ್ಟಪಡಿಸಿದರು. ಇಲ್ಲಿಗೆ ಬರಲು ತನಗೆ ಎಲಾನ್ ಮಸ್ಕ್ ದೇಣಿಗೆ ನೀಡಿಲ್ಲ. ನಾನು ಸ್ವತಃ ಖರ್ಚಿನಲ್ಲಿ ಬಂದಿದ್ದೇನೆ. ದೇಶದ ಪ್ರತಿಯೊಬ್ಬ ನಾಗರಿಕನಿಗೆ ತಮಗೆ ಇಷ್ಟವಾದ ಪಕ್ಷಕ್ಕೆ ಮತ ಹಾಕುವ ಹಕ್ಕಿದೆ ಎಂದರು.

    ಈ ವೇಳೆ ಚುನಾವಣಾ ಆಯೋಗದ ಕಾರ್ಯವೈಖರಿ ಕುರಿತು ಮೂರು ಗಂಭೀರ ಪ್ರಶ್ನೆಗಳನ್ನು ಮುಂದಿಟ್ಟರು. ಪಶ್ಚಿಮ ಬಂಗಾಳದಲ್ಲಿ ಚುನಾವಣೆ ಬಳಿಕ ಲಕ್ಷಾಂತರ ಮತಗಳನ್ನು ಸೇರಿಸಿದ್ದು ಹೇಗೆ? ಬಿಹಾರದಲ್ಲಿ ಅಳಿಸಲಾದ ಲಕ್ಷಾಂತರ ಮತಗಳ ಮಾಹಿತಿಯನ್ನು ಜ್ಞಾನೇಶ್ ಕುಮಾರ್ ಯಾಕೆ ಮುಚ್ಚಿಟ್ಟಿದ್ದರು? ಉತ್ತರ ಪ್ರದೇಶದಲ್ಲಿ ಅನಿರೀಕ್ಷಿತವಾಗಿ ಸೇರ್ಪಡೆಯಾದ ಲಕ್ಷಾಂತರ ಮತದಾರರ ಮೂಲವೇನು? ಇಂತಹ ಅಕ್ರಮಗಳ ಬಗ್ಗೆ ಆಯೋಗ ಉತ್ತರಿಸಬೇಕೆಂದು ಅವರು ಆಗ್ರಹಿಸಿದರು.

  • 8 Oct 2026 2:01 PM IST

    ಸಂವಿಧಾನದ ಮೌಲ್ಯ ರಕ್ಷಿಸಲು ಯುವಕರು ಮುಂಚೂಣಿಯಲ್ಲಿರಬೇಕು - ನಿವೃತ್ತ ನ್ಯಾ. ವಿ. ಗೋಪಾಲಗೌಡ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ 'ಜನತಾ ನ್ಯಾಯಾಲಯ' ಕಾರ್ಯಕ್ರಮದಲ್ಲಿ ಸುಪ್ರೀಂ ಕೋರ್ಟ್‌ನ ನಿವೃತ್ತ ನ್ಯಾಯಮೂರ್ತಿ ವಿ. ಗೋಪಾಲಗೌಡ ಭಾಗವಹಿಸಿ ಬೆಂಬಲ ಸೂಚಿಸಿದರು. ಈ ವೇಳೆ ದೇಶದಲ್ಲಿ ಪ್ರಜಾಪ್ರಭುತ್ವದ ಕೊಲೆ ನಡೆಯುತ್ತಿದೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

    ಸುಪ್ರೀಂ ಕೋರ್ಟ್‌ನ ಮುಖ್ಯ ನ್ಯಾಯಮೂರ್ತಿಗಳ ಇತ್ತೀಚಿನ ಬೇಜವಾಬ್ದಾರಿ ಹೇಳಿಕೆಯನ್ನು ಅವರು ಕಟುವಾಗಿ ಖಂಡಿಸಿದರು. ಇಂತಹ ದಮನಕಾರಿ ನೀತಿಯನ್ನು ಜನರು ಸಹಿಸುವುದಿಲ್ಲ, ಶೀಘ್ರವೇ ತಕ್ಕ ಪಾಠ ಕಲಿಸಲಿದ್ದಾರೆ ಎಂದರು. ದೇಶದ ಭವಿಷ್ಯ ಯುವ ಜನಾಂಗದ ಕೈಯಲ್ಲಿದ್ದು, ವಿದ್ಯಾರ್ಥಿಗಳ ಸಂಘಟಿತ ಶಕ್ತಿಯನ್ನು ಯಾವುದೇ ಶಕ್ತಿ ಹತ್ತಿಕ್ಕಲು ಸಾಧ್ಯವಿಲ್ಲ. ಸಂವಿಧಾನದ ಮೌಲ್ಯಗಳನ್ನು ರಕ್ಷಿಸಲು ಯುವಕರು ಮುಂಚೂಣಿಯಲ್ಲಿ ನಿಲ್ಲಬೇಕೆಂದು ಕರೆ ನೀಡಿದರು.

  • 8 Oct 2026 1:45 PM IST

    ಮತ ಕಳವು ಕುರಿತು ತನಿಖಾ ವರದಿ ಬಿಡುಗಡೆ ಮಾಡಿದ ಧ್ರುವ್ ರಾಠಿ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಬೃಹತ್ ಪ್ರತಿಭಟನೆಯಲ್ಲಿ ‘ಎಸ್‌ಐಆರ್‌ ವಿರೋಧಿ ಒಕ್ಕೂಟ’ವು ಸಿದ್ಧಪಡಿಸಿದ ಮಹತ್ವದ ತನಿಖಾ ವರದಿಯನ್ನು ಯೂಟ್ಯೂಬರ್ ಧ್ರುವ್ ರಾಠಿ ಅವರು ಬಿಡುಗಡೆಗೊಳಿಸಿದರು. ರಾಜ್ಯದ 100 ಮತಗಟ್ಟೆಗಳಲ್ಲಿ ನಡೆಸಲಾದ ಸಮಗ್ರ ಸಮೀಕ್ಷೆಯ ಆಧಾರದ ಮೇಲೆ ಈ ವರದಿಯನ್ನು ರೂಪಿಸಲಾಗಿದೆ.

    ಮತದಾರರ ಪಟ್ಟಿಯ ಪರಿಷ್ಕರಣೆ ಪ್ರಕ್ರಿಯೆಯಲ್ಲಿ ನಡೆದ ಅಕ್ರಮಗಳು ಮತ್ತು ಲೋಪದೋಷಗಳನ್ನು ಈ ವರದಿ ಎಳೆಎಳೆಯಾಗಿ ಬಿಚ್ಚಿಟ್ಟಿದೆ. ಪಾರದರ್ಶಕತೆ ಇಲ್ಲದ ಎಸ್‌ಐಆರ್ (SIR) ಪ್ರಕ್ರಿಯೆಯು ಪ್ರಜಾಪ್ರಭುತ್ವದ ಮೌಲ್ಯಗಳಿಗೆ ಹೇಗೆ ಧಕ್ಕೆ ತರುತ್ತಿದೆ ಎಂಬುದನ್ನು ವರದಿಯಲ್ಲಿ ದಾಖಲಿಸಲಾಗಿದೆ. ಈ ಸಂದರ್ಭದಲ್ಲಿ ಮಾತನಾಡಿದ ಧ್ರುವ್ ರಾಠಿ, ಮತದಾರರ ಪಟ್ಟಿಯಿಂದ ಹೆಸರುಗಳನ್ನು ತೆಗೆದುಹಾಕುವ ಮೂಲಕ ಜನರನ್ನು ಮತದಾನದಿಂದ ವಂಚಿತರನ್ನಾಗಿಸುವ ವ್ಯವಸ್ಥಿತ ಪಿತೂರಿಯನ್ನು ಈ ವರದಿಯು ಬಯಲು ಮಾಡಿದೆ ಎಂದು ತಿಳಿಸಿದರು. ಇದು ಪ್ರಜಾಪ್ರಭುತ್ವದ ರಕ್ಷಣೆಗೆ ಎಚ್ಚರಿಕೆಯ ಗಂಟೆಯಾಗಿದೆ.

  • 8 Oct 2026 1:38 PM IST

    13 ಕೋಟಿ ಮತಗಳನ್ನು ಅಕ್ರಮವಾಗಿ ಅಳಿಸಿ ಹಾಕಲಾಗಿದೆ - ದಿಪ್ಕೆ ಆರೋಪ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ಮಾತನಾಡಿದ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ, ದೇಶದಲ್ಲಿ 'ಮತಕಳ್ಳತನ' ನಡೆಯುತ್ತಿದೆ ಎಂದು ಗಂಭೀರ ಆರೋಪ ಮಾಡಿದ್ದಾರೆ. 2004ರ ಲೋಕಸಭಾ ಚುನಾವಣೆಯಲ್ಲಿ ಶೇ. 2ರಷ್ಟು ಮತಗಳ ಅಂತರದಿಂದ ಫಲಿತಾಂಶ ನಿರ್ಧಾರವಾಗಿತ್ತು. ಇದೇ ಭಯದಿಂದ ಆಡಳಿತಾರೂಢ ಬಿಜೆಪಿ ಈಗ ಮತದಾರರ ಪಟ್ಟಿಯೊಂದಿಗೆ ಚೆಲ್ಲಾಟವಾಡುತ್ತಿದೆ ಎಂದು ಅವರು ದೂರಿದರು. ತಮಗೆ ಮತ ನೀಡದವರನ್ನು ಗುರುತಿಸಿ, ಅವರ ಮತಗಳನ್ನೇ ಪಟ್ಟಿಯಿಂದ ವ್ಯವಸ್ಥಿತವಾಗಿ ತೆಗೆದುಹಾಕುವ ಕುತಂತ್ರ ನಡೆಯುತ್ತಿದೆ. ಈ ರೀತಿಯಾಗಿ ದೇಶಾದ್ಯಂತ ಸುಮಾರು 13 ಕೋಟಿ ಮತಗಳನ್ನು ಅಕ್ರಮವಾಗಿ ಅಳಿಸಿ ಹಾಕಲಾಗಿದೆ ಎಂದು ದಿಪ್ಕೆ ಆರೋಪಿಸಿದರು. ಮತದಾನದ ಪ್ರಮಾಣ ಕಡಿಮೆಯಾಗುತ್ತಿರುವ ಹಿಂದೆ ಇಂತಹ ಸಂಘಟಿತ ಪಿತೂರಿಗಳಿವೆ ಎಂದು ಕಿಡಿಕಾರಿದ ಅವರು, ಇದು ಪ್ರಜಾಪ್ರಭುತ್ವದ ಅಸ್ತಿತ್ವಕ್ಕೇ ಮಾರಕ ಎಂದು ಎಚ್ಚರಿಸಿದರು.

  • ಕನ್ನಡದಲ್ಲಿ ಭಾಷಣ ಆರಂಭಿಸಿದ ಅಭಿಜೀತ್‌ ದಿಪ್ಕೆ
    8 Oct 2026 1:34 PM IST

    ಕನ್ನಡದಲ್ಲಿ ಭಾಷಣ ಆರಂಭಿಸಿದ ಅಭಿಜೀತ್‌ ದಿಪ್ಕೆ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆದ ಪ್ರತಿಭಟನೆಯಲ್ಲಿ ಸಿಜೆಪಿ ಸಂಸ್ಥಾಪಕ ಅಭಿಜೀತ್ ದಿಪ್ಕೆ ಕನ್ನಡದಲ್ಲಿ "ನಮಸ್ಕಾರ ಬೆಂಗಳೂರು, ಹೇಗಿದ್ದೀರಾ?" ಎಂದು ಭಾಷಣ ಆರಂಭಿಸಿ ಗಮನ ಸೆಳೆದರು. ಪ್ರಧಾನಿ ನರೇಂದ್ರ ಮೋದಿ ಮತ್ತು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದ ಅವರು, ಇಬ್ಬರೂ ನಾಯಕರು ದೇಶದ ಪ್ರಜಾಪ್ರಭುತ್ವದ ಮೇಲೆ ಹಲ್ಲೆ ನಡೆಸುತ್ತಿದ್ದಾರೆ ಎಂದು ಆರೋಪಿಸಿದರು.

    ಅವರ ಸೂಚನೆಯ ಮೇರೆಗೆ ಭಾರತೀಯ ಚುನಾವಣಾ ಆಯೋಗವು ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರುಗಳನ್ನು ಅಳಿಸುತ್ತಿದೆ ಎಂದು ದೂರಿದರು. ಈ ಆಡಳಿತಕ್ಕೆ ಅಂಬೇಡ್ಕರ್ ಅವರ ಸಂವಿಧಾನದ ಮೇಲೆ ನಂಬಿಕೆಯಿಲ್ಲ, ಬದಲಾಗಿ ಗಾಂಧೀಜಿಯವರ ಹಂತಕ ಗೋಡ್ಸೆಯ ಸಿದ್ಧಾಂತದ ಮೇಲೆ ಅವರಿಗೆ ನಂಬಿಕೆಯಿದೆ ಎಂದು ಕಿಡಿಕಾರಿದರು. ಈ ಮೂಲಕ ದೇಶದ ಸಾಂವಿಧಾನಿಕ ಮೌಲ್ಯಗಳಿಗೆ ಧಕ್ಕೆ ತರುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದರು.

  • ಹೋರಾಟದಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಭಾಗಿ
    8 Oct 2026 1:24 PM IST

    ಹೋರಾಟದಲ್ಲಿ ಹಿರಿಯ ಸಾಹಿತಿ ದೇವನೂರು ಮಹಾದೇವ ಭಾಗಿ

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಮತದಾರರ ಪಟ್ಟಿಯ ಅಕ್ರಮದ ವಿರುದ್ಧದ ಪ್ರತಿಭಟನೆಗೆ ಹಿರಿಯ ಸಾಹಿತಿ ದೇವನೂರು ಮಹಾದೇವ ಅವರು ಆಗಮಿಸಿ ಬೆಂಬಲ ಸೂಚಿಸಿದರು. ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಕೈಬಿಟ್ಟಿರುವುದರಿಂದ ಸಂಕಷ್ಟಕ್ಕೆ ಸಿಲುಕಿರುವ ನಾಗರಿಕರೊಂದಿಗೆ ಅವರು ನೇರವಾಗಿ ಸಂವಾದ ನಡೆಸಿದರು. ಪ್ರಜಾಪ್ರಭುತ್ವದ ಅಡಿಪಾಯವೇ ಮತದಾನದ ಹಕ್ಕು, ಅದನ್ನು ವ್ಯವಸ್ಥಿತವಾಗಿ ಕಸಿದುಕೊಳ್ಳುತ್ತಿರುವ ಕ್ರಮವು ಅತ್ಯಂತ ಅಪಾಯಕಾರಿ ಎಂದು ಅವರು ಕಳವಳ ವ್ಯಕ್ತಪಡಿಸಿದರು. ಪ್ರತಿಭಟನಾ ಸ್ಥಳದಲ್ಲಿ ನೆರೆದಿದ್ದ ಸಂತ್ರಸ್ತರೊಂದಿಗೆ ಕೈಜೋಡಿಸಿ ನಿಂತ ದೇವನೂರು ಮಹಾದೇವ ಅವರು, ಸಂವಿಧಾನಬದ್ಧ ಹಕ್ಕುಗಳಿಗಾಗಿ ನಡೆಯುತ್ತಿರುವ ಈ ಹೋರಾಟಕ್ಕೆ ತಮ್ಮ ಸಂಪೂರ್ಣ ಬೆಂಬಲ ನೀಡಿದರು. ಸಾಹಿತಿಯ ಸರಳ ಹಾಗೂ ಬದ್ಧತೆಯ ನಡೆ ಪ್ರತಿಭಟನಾಕಾರರಲ್ಲಿ ಹೊಸ ಸ್ಫೂರ್ತಿಯನ್ನು ತುಂಬಿತು. ಅವರ ಆಗಮನವು ಈ ಹೋರಾಟದ ನೈತಿಕತೆಯನ್ನು ಮತ್ತಷ್ಟು ಹೆಚ್ಚಿಸಿತು.

  • 8 Oct 2026 1:10 PM IST

    ಶಾಂತಿಯುತವಾಗಿ ರಸ್ತೆಗಿಳಿದು ಹೋರಾಟ ನಡೆಸಬೇಕು - ಪ್ರಕಾಶ್‌ ರಾಜ್‌

    ಹೋರಾಟದಲ್ಲಿ ಜಯಸಿಗಬೇಕಾದರೆ ಶಾಂತಿಯುತವಾಗಿ ರಸ್ತೆಗಿಳಿಯಬೇಕು. ಎಸ್‌ಐಆರ್‌ ರದ್ದಾಗಬೇಕು. ಜ್ಞಾನೇಶ್‌ ಕುಮಾರ್‌ ವಿರುದ್ಧ ಪ್ರಕರಣ ದಾಖಲಿಸಬೇಕು. ರಾಜ್ಯಾದ್ಯಂತ ಪ್ರವಾಸ ಕೈಗೊಂಡು ಎಸ್‌ಐಆರ್‌ನಿಂದ ಅನ್ಯಾಯಕ್ಕೊಳಗಾದವರನ್ನು ಭೇಟಿಯಾದವು. ಅವರದ್ದು ಕಣ್ಣೀರನ ಕಥೆ. ಅವರನ್ನು ಅಳಿಸಲು ಚುನಾವಣಾ ಆಯೋಗ ಹೇಗೆ ಬಂತು. ನಮ್ಮನ್ನು ತೆಗೆದುಹಾಕಲು ಬಂದಿದ್ದು, ಅದರ ವಿರುದ್ಧ ಹೋರಾಟ ನಡೆಸಲಾಗುತ್ತಿದೆ. ಬಡವರ, ಯುವಕರ ಮತ ಕಳ್ಳತನ ಮಾಡುತ್ತಿರುವುದು, ಅವರು ನಿರ್ಧರಿಸಬಾರದು ಎಂದು ಪ್ರಕಾಶ್‌ ರಾಜ್‌ ಹೇಳಿದ್ದಾರೆ. 

  • ಎಸ್‌ಐಆರ್‌ ರದ್ದಾಗಬೇಕು ಎಂದು ಪ್ರಕಾಶ್‌ ರಾಜ್‌ ಆಗ್ರಹ
    8 Oct 2026 1:08 PM IST

    ಎಸ್‌ಐಆರ್‌ ರದ್ದಾಗಬೇಕು ಎಂದು ಪ್ರಕಾಶ್‌ ರಾಜ್‌ ಆಗ್ರಹ

    ಈ ದೇಶದಲ್ಲಿ ನಾವು ತೀರ್ಮಾನ ಮಾಡಬೇಕು. ಯಾರು ಅಧಿಕಾರದಲ್ಲಿರಬೇಕು. ಆದರೆ ಅವರು ಯಾರು ಮತ ಹಾಕಬೇಕು ಎಂದು ನಿರ್ಧರಿಸುತ್ತಾರೆ. ಇವತ್ತು ಯಾರ್ಯಾರು ಮತ ತೆಗೆದು ಹಾಕಿದ್ದಾರೆ. ಆದಿವಾಸಿಗಳ ಮತ ತೆಗೆದುಹಾಕಿದ್ದಾರೆ. ಬಡವರ, ಮುಸ್ಲಿಮರ ಮತ ತೆಗೆದುಹಾಕಿದ್ದಾರೆ. ದೇಶದ ಪ್ರಜೆಗಳನ್ನು ಕೊಲ್ಲಲು ಆಗುವುದಿಲ್ಲ. ಅದಕ್ಕೆ ಮತ ತೆಗೆದುಹಾಕಿದ್ದಾರೆ. ಜ್ಞಾನೇಶ್‌ ಕುಮಾರ್‌ ರಾಜೀನಾಮೆಗಾಗಿ ಹೋರಾಟ ಅಲ್ಲ. ಜ್ಞಾನೇಶ್‌ ಕುಮಾರ್‌ ಹೋದರೆ ಮತ್ತೊಬ್ಬ ಅಜ್ಞಾನೇಶ್‌ ಕುಮಾರ್‌ ಬರುತ್ತಾನೆ. ಎಸ್‌ಐಆರ್‌ ರದ್ದಾಗಬೇಕು ಎಂದು ನಟ ಪ್ರಕಾಶ್‌ ರಾಜ್‌ ಆಗ್ರಹಿಸಿದರು.

  • 8 Oct 2026 12:56 PM IST

    ಕಹಿ ಅನುಭವ ಹಂಚಿಕೊಳ್ಳುತ್ತಿರುವ ಸಂತ್ರಸ್ತರು

    ಬೆಂಗಳೂರಿನ ಫ್ರೀಡಂ ಪಾರ್ಕ್‌ನಲ್ಲಿ ನಡೆಯುತ್ತಿರುವ ಜನತಾ ನ್ಯಾಯಾಲಯದಲ್ಲಿ ಮತದಾರರ ಪಟ್ಟಿಯಿಂದ ಅಕ್ರಮವಾಗಿ ಹೆಸರು ಕೈಬಿಟ್ಟಿರುವುದರ ವಿರುದ್ಧ ಸಂತ್ರಸ್ತರು ತಮ್ಮ ಕಹಿ ಅನುಭವಗಳನ್ನು ಹಂಚಿಕೊಳ್ಳುತ್ತಿದ್ದಾರೆ. ರಾಜ್ಯದ ವಿವಿಧೆಡೆಯಿಂದ ವಿಡಿಯೋ ಸಂವಾದದ ಮೂಲಕ ಕಾರ್ಯಕ್ರಮದಲ್ಲಿ ಭಾಗಿಯಾದ ಹಲವು ನಾಗರಿಕರು, ತಾವು ದಶಕಗಳಿಂದ ಮತದಾನ ಮಾಡುತ್ತಿದ್ದರೂ, ಈ ಬಾರಿ ಇದ್ದಕ್ಕಿದ್ದಂತೆ ಪಟ್ಟಿಯಿಂದ ಹೆಸರು ಮಾಯವಾಗಿರುವುದನ್ನು ಕಂಡು ಆಘಾತ ವ್ಯಕ್ತಪಡಿಸಿದ್ದಾರೆ. ಯಾವುದೇ ಮುನ್ಸೂಚನೆ ಇಲ್ಲದೆ ಹೆಸರುಗಳನ್ನು ತೆಗೆದುಹಾಕಿರುವುದು ಪ್ರಜಾಪ್ರಭುತ್ವದ ಹಕ್ಕಿನ ಉಲ್ಲಂಘನೆ ಎಂದು ಅವರು ದೂರಿದರು. ಈ ಅನ್ಯಾಯದ ವಿರುದ್ಧ ಹೋರಾಡಲು ತಾವು ಸಿದ್ಧರಿದ್ದು, ಸೂಕ್ತ ತನಿಖೆಯಾಗಬೇಕೆಂದು ಒತ್ತಾಯಿಸಿದರು. ಸಂತ್ರಸ್ತರ ಈ ನೋವಿನ ಕಥೆಗಳು ವೇದಿಕೆಯಲ್ಲಿದ್ದ ಗಣ್ಯರು ಮತ್ತು ಜನಸಾಮಾನ್ಯರನ್ನು ಕಲಕಿದ್ದು, ಮತದಾರರ ಪಟ್ಟಿ ಪರಿಷ್ಕರಣೆಯಲ್ಲಿನ ಲೋಪದೋಷಗಳ ಬಗ್ಗೆ ಆಕ್ರೋಶ ಹೆಚ್ಚಾಗಿದೆ.

Read More
Next Story