ಎಸ್‌ಐಆರ್ ಗೊಂದಲ: ಬೂತ್ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲುನಾಗರಿಕ ಸಮಿತಿ  ಆಗ್ರಹ
x

ಎಸ್‌ಐಆರ್ ಗೊಂದಲ: ಬೂತ್ ಮಟ್ಟದಲ್ಲಿ ಸಹಾಯವಾಣಿ ಆರಂಭಿಸಲುನಾಗರಿಕ ಸಮಿತಿ ಆಗ್ರಹ

2002ರ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು, ನಿಗದಿತ ಗಣತಿ ನಮೂನೆ ಭರ್ತಿ ಮಾಡುವುದು, ಅಗತ್ಯ ದಾಖಲೆಗಳನ್ನು ಒದಗಿಸುವುದು ಸೇರಿದಂತೆ ಪ್ರತಿ ಹಂತವೂ ನಾಗರಿಕರಿಗೆ ಸವಾಲಾಗಿ ಪರಿಣಮಿಸಿದೆ.


Click the Play button to hear this message in audio format

ಎಸ್‌ಐಆರ್ ಪ್ರಕ್ರಿಯೆಯು ಮತದಾರರಲ್ಲಿ ತೀವ್ರ ಗೊಂದಲ ಮತ್ತು ಆತಂಕವನ್ನು ಸೃಷ್ಟಿಸಿದೆ. ಈ ಪ್ರಕ್ರಿಯೆಯ ಸಂಕೀರ್ಣತೆ ಮತ್ತು ದಾಖಲೆಗಳ ಸಂಗ್ರಹಣೆಯ ಒತ್ತಡದಿಂದಾಗಿ ನಾಗರಿಕರು ಹೈರಾಣಾಗಿದ್ದಾರೆ. ಈ ಹಿನ್ನೆಲೆಯಲ್ಲಿ, ರಾಜ್ಯ ಸರ್ಕಾರವು ಭರವಸೆ ನೀಡಿದ್ದಂತೆ ಕೂಡಲೇ ಬೂತ್ ಮಟ್ಟದಲ್ಲಿ ಸಹಾಯವಾಣಿ ಕೇಂದ್ರಗಳನ್ನು ತೆರೆಯಬೇಕೆಂದು ನಾಗರಿಕ ಮತಕಾವಲು ಸಮಿತಿ ಸರ್ಕಾರವನ್ನು ಒತ್ತಾಯಿಸಿವೆ.

ಎಸ್‌ಐಆರ್ ಪ್ರಕ್ರಿಯೆಯು ಪ್ರತಿಯೊಬ್ಬ ನಾಗರಿಕನ ಜೀವನದ ಮೇಲೆ ನೇರ ಪರಿಣಾಮ ಬೀರುವ ವಿಷಯವಾಗಿದೆ. 2002ರ ಮತದಾರರ ಪಟ್ಟಿಯಲ್ಲಿ ಹೆಸರು ಹುಡುಕುವುದು, ನಿಗದಿತ ಗಣತಿ ನಮೂನೆಗಳನ್ನು ತುಂಬುವುದು, ಅಗತ್ಯ ದಾಖಲೆಗಳನ್ನು ಒದಗಿಸುವುದು ಸೇರಿದಂತೆ ಒಂದೊಂದು ಹಂತವೂ ನಾಗರಿಕರಿಗೆ ಸವಾಲಾಗಿ ಪರಿಣಮಿಸಿದೆ. ಈ ಪ್ರಕ್ರಿಯೆಯಲ್ಲಿನ ಮಾಹಿತಿ ಕೊರತೆಯಿಂದಾಗಿ ಹಿರಿಯ ನಾಗರಿಕರು, ಅನಕ್ಷರಸ್ಥರು ಮತ್ತು ಗ್ರಾಮೀಣ ಭಾಗದ ಜನರು ಪರದಾಡುತ್ತಿದ್ದಾರೆ. ಸಮಯ ಕಳೆದಂತೆ ದಾಖಲೆಗಳ ಸಂಗ್ರಹವು ಕ್ಲಿಷ್ಟಕರವಾಗುತ್ತಿದ್ದು, ಮತದಾರರ ಪಟ್ಟಿಯಿಂದ ಹೆಸರು ಕೈಬಿಟ್ಟುಹೋಗುವ ಭೀತಿ ಆವರಿಸಿದೆ. ಮಾಜಿ ಸಚಿವೆ ಬಿ.ಟಿ. ಲಲಿತಾ ನಾಯಕ್, ರೈತ ಸಂಘದ ಜೆ.ಎಂ. ವೀರಸಂಗಯ್ಯ, 'ಎದ್ದೇಳು ಕರ್ನಾಟಕ'ದ ಅಮ್ಜದ್ ಪಾಷಾ, ಮತ್ತು ವಿಚಾರವಾದಿಗಳ ವೇದಿಕೆಯ ನಾಗೇಶ್ ಅರಳಕುಪ್ಪೆ ಅವರು ಸರ್ಕಾರದ ನಿರ್ಲಕ್ಷ್ಯದ ವಿರುದ್ಧ ಹರಿಹಾಯ್ದಿದ್ದಾರೆ. ರಾಜ್ಯ ಸರ್ಕಾರವು ನಾಗರಿಕ ಸಂಘಟನೆಗಳ ಒತ್ತಾಯದ ಮೇರೆಗೆ ಬೂತ್ ಮಟ್ಟದಲ್ಲಿ ಹೆಲ್ಪ್ ಡೆಸ್ಕ್ ಸ್ಥಾಪಿಸುವ ತೀರ್ಮಾನ ಕೈಗೊಂಡಿತ್ತು, ಆದರೆ ಅದು ಇನ್ನೂ ಸಂಪೂರ್ಣವಾಗಿ ಕಾರ್ಯಗತವಾಗಿಲ್ಲ ಎಂದು ಆರೋಪಿಸಿದ್ದಾರೆ.

ಸಮಿತಿಯ ಪ್ರಮುಖ ಬೇಡಿಕೆಗಳು

ರಾಜ್ಯಾದ್ಯಂತ ಪ್ರತಿ ಬೂತ್ ಮಟ್ಟದಲ್ಲಿ ವಿಶೇಷ ಶಿಬಿರಗಳನ್ನು ಆಯೋಜಿಸಿ, ಜನರಿಗೆ ಗಣತಿ ನಮೂನೆ ಭರ್ತಿ ಮಾಡಲು ಮತ್ತು ಅಗತ್ಯ ದಾಖಲೆಗಳನ್ನು ಪಡೆಯಲು ನೆರವಾಗಬೇಕು. ಈ ಪ್ರಮಾಣಪತ್ರವನ್ನು ಪಡೆಯಲು ಜನರಿಗೆ ಆಗುತ್ತಿರುವ ಕಿರುಕುಳ ತಪ್ಪಿಸಿ, ಆಡಳಿತಾತ್ಮಕವಾಗಿ ಸರಳೀಕೃತ ವ್ಯವಸ್ಥೆಯನ್ನು ಕಲ್ಪಿಸಬೇಕು. ಯಾವುದೇ ನಾಗರಿಕರು ದಾಖಲೆಗಳ ಕೊರತೆಯಿಂದಾಗಿ ಸರ್ಕಾರದ ಯೋಜನೆಗಳಿಂದ ಅಥವಾ ಮತದಾರರ ಪಟ್ಟಿಯಿಂದ ವಂಚಿತರಾಗದಂತೆ ನೋಡಿಕೊಳ್ಳಬೇಕು. ಈ ಸೂಕ್ಷ್ಮ ಸಮಯದಲ್ಲಿ, ಜನರ ಸಮಸ್ಯೆಗಳಿಗೆ ಪರಿಹಾರ ಕಂಡುಕೊಳ್ಳುವ ಬದಲು ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ ಅವರು ಕೇಂದ್ರ ಗೃಹ ಸಚಿವ ಅಮಿತ್ ಶಾ ಅವರಿಗೆ ಪತ್ರ ಬರೆದಿರುವ ಕ್ರಮವನ್ನು ಖಂಡನೀಯ. ಜನರು ದಾಖಲೆಗಳಿಗಾಗಿ ಅಲೆದಾಡುತ್ತಿರುವಾಗ, ಆಡಳಿತ ಪಕ್ಷದ ನಾಯಕರು ಪಕ್ಷ ರಾಜಕೀಯದ ದೃಷ್ಟಿಕೋನದಿಂದ ಪತ್ರ ಬರೆಯುವುದು ವಿಷಾದನೀಯ ಎಂದು ಸಮಿತಿ ಸದಸ್ಯರು ಕಿಡಿಕಾರಿದ್ದಾರೆ. ಇದೇ ವೇಳೆ ನಾಗರಿಕರ ಸಂಕಷ್ಟವನ್ನೂ ರಾಜಕೀಯ ದಾಳವಾಗಿ ಬಳಸಿಕೊಳ್ಳುವ ಇಂತಹ ಜನವಿರೋಧಿ ಪ್ರಯತ್ನಗಳನ್ನು ನಿಲ್ಲಿಸಬೇಕೆಂದು ಆಗ್ರಹಿಸಿದ್ದಾರೆ.

ಸಾರ್ವಜನಿಕರ ಸಮಸ್ಯೆಗಳನ್ನು ಬದಿಗೊತ್ತಿ, ಚುನಾವಣಾ ಆಯೋಗ ಅಥವಾ ಸರ್ಕಾರದ ನಿಯಮಗಳ ನೆಪದಲ್ಲಿ ಜನರನ್ನು ಸಂಕಷ್ಟಕ್ಕೆ ನೂಕುವುದು ಸರಿಯಲ್ಲ. ಸರ್ಕಾರವು ತನ್ನ ಜವಾಬ್ದಾರಿಯನ್ನು ಮರೆತು ರಾಜಕೀಯ ಲಾಭ-ನಷ್ಟದ ಲೆಕ್ಕಾಚಾರದಲ್ಲಿ ತೊಡಗಿದರೆ, ಅದು ಪ್ರಜಾಪ್ರಭುತ್ವದ ಅಡಿಪಾಯವನ್ನೇ ಅಲುಗಾಡಿಸುತ್ತದೆ. ಯಾವುದೇ ಪಕ್ಷ ರಾಜಕಾರಣ ಮಾಡದೇ, ಜನರಿಗೆ ಪಾರದರ್ಶಕವಾಗಿ ಮತ್ತು ತ್ವರಿತವಾಗಿ ಸೇವೆ ಒದಗಿಸುವುದು ಪ್ರಸ್ತುತದ ಅಗತ್ಯವಾಗಿದೆ ಎಂದಿದ್ದಾರೆ.

Read More
Next Story