ಖಾಲಿ ಇರುವ ಸಚಿವ ಸ್ಥಾನವನ್ನು ಮಹಿಳೆ, ಒಬಿಸಿಗೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ
x

ಖಾಲಿ ಇರುವ ಸಚಿವ ಸ್ಥಾನವನ್ನು ಮಹಿಳೆ, ಒಬಿಸಿಗೆ ನೀಡಬೇಕು: ಸಿದ್ದರಾಮಯ್ಯ ಆಗ್ರಹ

ಸರ್ಕಾರದ ಮುಖ್ಯಸ್ಥ ಡಿ.ಕೆ. ಶಿವಕುಮಾರ್ ಅವರಾಗಿದ್ದು, ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಅಂತ ಅಂದುಕೊಂಡಿದ್ದೇನೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.


Click the Play button to hear this message in audio format

ಖಾಲಿ ಉಳಿದಿರುವ ಎರಡು ಸಚಿವ ಸ್ಥಾನಗಳಲ್ಲಿ ಒಂದು ಸ್ಥಾನವನ್ನು ಮಹಿಳೆಗೆ ಹಾಗೂ ಇನ್ನೊಂದು ಸ್ಥಾನವನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆಗ್ರಹಿಸಿದ್ದಾರೆ.

ಶುಕ್ರವಾರ ಮಾತನಾಡಿದ ಅವರು, ಖಾಲಿ ಉಳಿದ ಎರಡು ಸಚಿವ ಸ್ಥಾನಗಳ ಪೈಕಿ ಒಂದನ್ನು ಮಹಿಳೆಗೆ ಮತ್ತು ಇನ್ನೊಂದನ್ನು ಹಿಂದುಳಿದ ವರ್ಗಕ್ಕೆ ನೀಡಬೇಕು ಎಂದು ಒತ್ತಾಯಿಸಿದರು. ಇದೇ ವೇಳೆ, ವಾಲ್ಮೀಕಿ ಅಭಿವೃದ್ಧಿ ನಿಗಮದ ಬಹುಕೋಟಿ ಭ್ರಷ್ಟಾಚಾರ ಪ್ರಕರಣಕ್ಕೆ ಸಂಬಂಧಿಸಿದಂತೆ ಸಿಐಡಿ ಅಧಿಕಾರಿಗಳು ಮಾಜಿ ಸಚಿವ ಬಿ. ನಾಗೇಂದ್ರ ಅವರಿಗೆ ಕ್ಲೀನ್‌ ಚಿಟ್ ನೀಡಿರುವ ವಿಚಾರದ ಕುರಿತು ಕೇಳಲಾದ ಪ್ರಶ್ನೆಗೆ ಅವರು ಉತ್ತರಿಸಿದರು. ಈ ಕುರಿತು ಪ್ರತಿಕ್ರಿಯಿಸಿದ ಸಿದ್ದರಾಮಯ್ಯ ಅವರು, "ನಾಗೇಂದ್ರ ನಿರಪರಾಧಿ ಎಂಬುದಾಗಿ ನಾನು ಮೊದಲಿಂದಲೂ ಹೇಳುತ್ತಿದ್ದೇನೆ" ಎಂದು ಹೇಳುವ ಮೂಲಕ ಬಿ. ನಾಗೇಂದ್ರ ಅವರನ್ನು ಸಮರ್ಥಿಸಿಕೊಂಡರು.

ಮೈಸೂರಿನಲ್ಲಿ ಆಪ್ತರ ಜೊತೆ ಒಗ್ಗಟ್ಟು ಪ್ರದರ್ಶನ ಮಾಡಿರುವ ವಿಚಾರವಾಗಿ ಪ್ರತಿಕ್ರಿಯೆ ನೀಡಿದ ಅವರು, ತಮ್ಮ ಮತ್ತು ಆಪ್ತರ ನಡುವೆ ಯಾವುದೇ ಭಿನ್ನಾಭಿಪ್ರಾಯವಿಲ್ಲ ಎಂಬರ್ಥದಲ್ಲಿ ಮಾತನಾಡಿದ ಅವರು, "ನಾವು ಯಾವಾಗ ಜಗಳ ಆಡಿಕೊಂಡಿದ್ದೇವೆ? ಯಾವಾಗ ಬೇರೆ ಬೇರೆಯಾಗಿದ್ದೇವೆ?" ಎಂದು ಮರುಪ್ರಶ್ನಿಸಿದರು.

ನಾನು ಮುಖ್ಯಮಂತ್ರಿಯಲ್ಲ

ಆಶಾ ಕಾರ್ಯಕರ್ತೆಯರ ಹೋರಾಟದ ಬಗ್ಗೆ ಮಾತನಾಡಿದ ಅವರು, ನಾನು ಮುಖ್ಯಮಂತ್ರಿ ಅಲ್ಲ. ಸರ್ಕಾರದ ಮುಖ್ಯಸ್ಥ ಡಿ.ಕೆ. ಶಿವಕುಮಾರ್. ಅವರು ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಬಗೆಹರಿಸುತ್ತಾರೆ ಅಂತ ಅಂದುಕೊಂಡಿದ್ದೇನೆ. ಆಶಾ ಕಾರ್ಯಕರ್ತೆಯರ ಸಮಸ್ಯೆಯನ್ನು ಬಗೆಹರಿಸುವ ಜವಾಬ್ದಾರಿ ಸರ್ಕಾರದ ಮುಖ್ಯಸ್ಥರ ಮೇಲಿದೆ ಎಂದು ಹೇಳಿದರು.

ಹೆಚ್.ಡಿ. ಕುಮಾರಸ್ವಾಮಿ ಅವರು 'ಹಸು ಭಾಗ್ಯ' ಕೊಡುವ ವಿಚಾರವಾಗಿ ಮಾತನಾಡಿ, "ನಾವು ಪಶು ಭಾಗ್ಯ ಮಾಡಿದ್ದೆವಲ್ಲ? ಕ್ಷೀರ ಭಾಗ್ಯ ಮಾಡಿದ್ದೆವು. ಕ್ಷೀರ ಧಾರೆ ಮಾಡಿದ್ದು ಯಾರ ಕಾಲದಲ್ಲಿ?" ಎಂದು ಅವರು ಪ್ರಶ್ನಿಸಿದರು. ಅಲ್ಲದೆ, ಕುಮಾರಸ್ವಾಮಿ ಅವರ ಹಿಂದಿನ ಅಧಿಕಾರಾವಧಿಯನ್ನು ಪ್ರಸ್ತಾಪಿಸಿದ ಅವರು, "ಅವರು ಮೊದಲ ಬಾರಿಗೆ ಮುಖ್ಯಮಂತ್ರಿ ಆಗುತ್ತಿಲ್ಲ. ಎರಡು ಸಲ ಆಗಿದ್ದಾರೆ. ಆಗ ಏನೇನು ಮಾಡಿದ್ದರು? ಆಗ ಹಸು ಭಾಗ್ಯ ಏಕೆ ಕೊಡಲಿಲ್ಲ?" ಎಂದು ಪ್ರಶ್ನಿಸಿದರು.

ಹೊಸ ಕಾರ್ಯಕ್ರಮ ಮಾಡಲು ಈ ವರ್ಷ ದುಡ್ಡಿಲ್ಲ. ಮುಂದಿನ ವರ್ಷ ಮಾಡಬಹುದು. ಹಾಗಂತ ಖಜಾನೆ ಖಾಲಿಯಾಗಿದೆ ಅಂತಲ್ಲ. ಹೊಸ ಯೋಜನೆ ಮಾಡಬೇಕೆಂದರೆ ಬಜೆಟ್‌ನಲ್ಲಿ ಅನುದಾನ ಇಡಬೇಕು. ಅಥವಾ ಪೂರಕ ಅಂದಾಜಿನಲ್ಲಿ ಇರಬೇಕು. ಇಲ್ಲದಿದ್ದರೆ ದುಡ್ಡು ಒದಗಿಸಬೇಕಲ್ಲ? ಈಗಾಗಲೇ ಬಜೆಟ್‌ನಲ್ಲಿ ಹೇಳಿ ಬಿಟ್ಟಿದ್ದೇವೆ. ಪೂರಕ ಅಂದಾಜಿನಲ್ಲೂ ಹೇಳಿದ್ದೇವೆ. ಪೂರಕ ಅಂದಾಜು ಬಂದರೆ ಆಗುತ್ತದೆ. ಹೊಸ ಯೋಜನೆಗಳಿಗೆ ಈ ವರ್ಷ ಅನುದಾನವಿಲ್ಲದಿದ್ದರೂ ರಾಜ್ಯದ ಖಜಾನೆ ಖಾಲಿಯಾಗಿಲ್ಲ ಎಂದು ಸ್ಪಷ್ಟನೆ ನೀಡಿದರು.

Read More
Next Story