
ಸಾಮಾಜಿಕ ನ್ಯಾಯಕ್ಕಾಗಿ ಯಾವುದೇ ರಾಜಿಗೆ ಸಿದ್ದವಿಲ್ಲ: ಸಿದ್ದರಾಮಯ್ಯ ಸ್ಪಷ್ಟನೆ
ಪಟ್ಟಭದ್ರರು ಮುಂದಾಲೋಚನೆ ಮಾಡಿ ಜಾತಿ ವ್ಯವಸ್ಥೆಯನ್ನು ಮಾಡಿದ್ದಾರೆ. ಇದಕ್ಕೆ ಎಲ್ಲಾ ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ, ರಾಜಕೀಯ ಶಕ್ತಿ ತುಂಬುವುದೇ ಪರಿಹಾರವಾಗಿದೆ ಎಂದು ಮಾಜಿ ಸಿಎಂ ಸಿದ್ದರಾಮಯ್ಯ ಹೇಳಿದ್ದಾರೆ.
ಒಳ ಮೀಸಲಾತಿಯ ಪರವಾಗಿ ತಾವು ಹಿಂದೆಯೂ ಇದ್ದು, ಮುಂದೆಯೂ ಇರುತ್ತೇನೆ. ಅಧಿಕಾರವಿದ್ದರೂ, ಇಲ್ಲದಿದ್ದರೂ ತಾವು ಸಾಮಾಜಿಕ ನ್ಯಾಯದ ಪರವಾಗಿ ಬದ್ಧತೆಯಿಂದ ಹೋರಾಡುವುದಾಗಿ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಘೋಷಿಸಿದ್ದಾರೆ.
ಸಾಮಾಜಿಕ ನ್ಯಾಯಕ್ಕಾಗಿ ಒಳ ಮೀಸಲಾತಿ ಹೋರಾಟ ಸಮಿತಿ ಆಯೋಜಿಸಿದ್ದ ವಿಚಾರ ಸಂಕಿರಣದಲ್ಲಿ ಪಾಲ್ಗೊಂಡು ಮಾತನಾಡಿದ ಅವರು, ದೇಶದ ಸಮಾಜದಲ್ಲಿ ಶತಮಾನಗಳಿಂದ ಬೇರೂರಿರುವ ಜಾತಿ ವ್ಯವಸ್ಥೆಯ ಬಗ್ಗೆ ತೀವ್ರ ಬೇಸರ ವ್ಯಕ್ತಪಡಿಸಿದರು. ಬುದ್ಧನ ಕಾಲದಿಂದಲೂ ಈ ವ್ಯವಸ್ಥೆಯ ವಿರುದ್ಧ ಸುಧಾರಣಾ ಚಳವಳಿಗಳು ನಡೆಯುತ್ತಿವೆ. ಆದರೂ ಜಾತಿ ವ್ಯವಸ್ಥೆ ಇಂದಿಗೂ ಜೀವಂತವಾಗಿರುವುದು ಈ ಸಮಾಜದ ವಿಪರ್ಯಾಸ. ಶೋಷಣೆಗೆ ಒಳಗಾದವರಿಗೆ ಹಾಗೂ ಅವಕಾಶ ವಂಚಿತರಿಗೆ ಮೀಸಲಾತಿ ಎಂಬುದು ಕೇವಲ ಸೌಲಭ್ಯವಲ್ಲ, ಅದು ಅವರ ಹಕ್ಕು. ಎಲ್ಲಿಯವರೆಗೆ ಸಮಾನ ಅವಕಾಶಗಳು ಸಿಗುವುದಿಲ್ಲವೋ, ಅಲ್ಲಿಯವರೆಗೆ ಅಸಮಾನತೆ ಹೋಗುವುದಿಲ್ಲ ಎಂದು ಹೇಳಿದರು.
ಸಂವಿಧಾನದ ಆಶಯ ಮತ್ತು ಎಚ್ಚರಿಕೆ
ಪಟ್ಟಭದ್ರರು ಮುಂದಾಲೋಚನೆ ಮಾಡಿ ಈ ಜಾತಿ ವ್ಯವಸ್ಥೆಯನ್ನು ಮಾಡಿದ್ದಾರೆ. ವರ್ಣ ವ್ಯವಸ್ಥೆ ನಾಶವಾಗಬೇಕು. ಇದಕ್ಕೆ ಎಲ್ಲಾ ಶೋಷಿತ ಜಾತಿಗಳಿಗೆ ಸಾಮಾಜಿಕ, ಆರ್ಥಿಕ ಮತ್ತು ರಾಜಕೀಯ ಶಕ್ತಿಯನ್ನು ತುಂಬುವುದೇ ಪರಿಹಾರವಾಗಿದೆ. ಭಾರತೀಯ ಜಾತಿ ವ್ಯವಸ್ಥೆಗೆ ಚಲನೆ ಇಲ್ಲ ಎಂದು ಲೋಹಿಯಾ ಅವರು ಹೇಳಿದ್ದರು. ಈ ಚಲನೆ ಬರಬೇಕಾದರೆ ತಳಸಮುದಾಯಗಳ ಜನರಿಗೆ ಆರ್ಥಿಕ, ಸಾಮಾಜಿಕ, ಶೈಕ್ಷಣಿಕ ಹಾಗೂ ರಾಜಕೀಯ ಶಕ್ತಿ ಬರಬೇಕು. ಮಂಡಲ್ ಕಮಿಷನ್ ವರದಿ ಜಾರಿಗೆ ಬಂದಾಗ ಮೀಸಲಾತಿ ವಿರೋಧಿಗಳು ಅಮಾಯಕ ವಿದ್ಯಾರ್ಥಿಗಳನ್ನು ಎತ್ತಿಕಟ್ಟಿ, ಅವರು ಬೆಂಕಿಹಚ್ಚಿಕೊಂಡು ಪ್ರಾಣ ಕಳೆದುಕೊಳ್ಳುವಂತೆ ಮಾಡಿದರು. ಒಂದು ವೇಳೆ ವಿ.ಪಿ.ಸಿಂಗ್ ಅವರು ಪ್ರಧಾನಿಯಾಗಿರದೇ ಹೋಗಿದ್ದರೆ ಮಂಡಲ್ ಕಮಿಷನ್ ವರದಿ ಜಾರಿ ಆಗುವುದು ಅನುಮಾನವಿತ್ತು. ಪಿ.ವಿ.ನರಸಿಂಹ್ ರಾವ್ ಅವರ ಕಾಲದಲ್ಲಿ ವರದಿ ಜಾರಿಗೆ ಬಂತು, ಇದಕ್ಕಾಗಿ ಕಾನ್ಷಿರಾಮ್ ಅವರು ಸೇರಿದಂತೆ ಅನೇಕರು ಹೋರಾಟ ಮಾಡಿದ್ದರು ಎಂದು ಸ್ಮರಿಸಿದರು
ಮೀಸಲಾತಿಗಾಗಿ ಭಿನ್ನಾಭಿಪ್ರಾಯ ಬರಬಾರದು
ಮೀಸಲಾತಿ ಹೋರಾಟ ನಿರಂತರವಾಗಿ ನಡೆಯುತ್ತಲೇ ಇರಬೇಕು. ಸುಪ್ರೀಂ ಕೋರ್ಟ್ ಕೂಡ ಒಳಮೀಸಲಾತಿ ಬಗ್ಗೆ ಒಪ್ಪಿಕೊಂಡಿದೆ. ಕಾಂಗ್ರೆಸ್ ಪಕ್ಷ, ನಮ್ಮ ಸರ್ಕಾರ ಯಾವಾಗಲೂ ಒಳ ಮೀಸಲಾತಿ ಪರವಾಗಿದೆ. ಮೀಸಲಾತಿಗೆ ಯಾವತ್ತೂ ಕೂಡ ಭಿನ್ನಾಭಿಪ್ರಾಯಗಳು ಬರಬಾರದು. ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರುದ್ಧವಾಗಿರುವ ಜನರ ಜೊತೆಗೆ ಸೇರಿಕೊಳ್ಳುತ್ತಾರೆ, ಅದು ಆಗಬಾರದು. ಯಾವ ಪಕ್ಷ ಮೀಸಲಾತಿಗೆ ವಿರೋಧ ಇದೆಯೋ ಅವರ ಪರವಾಗಿ ನಿಲ್ಲುವುದು, ಆ ಪಕ್ಷದ ಸಿದ್ಧಾಂತಕ್ಕೆ ಜೈ ಅನ್ನುವುದು. ಇದು ಸ್ವಾರ್ಥ ಅಲ್ಲವೇ? ಯಾವುದೇ ಕಾರಣಕ್ಕೂ ಮೀಸಲಾತಿ ಹೋರಾಟಗಾರರಲ್ಲಿ ಭಿನ್ನಾಭಿಪ್ರಾಯಗಳು ಬರಬಾರದು. ಒಳ ಮೀಸಲಾತಿಗಾಗಿ 3 ದಶಕಗಳಿಂದ ಹೋರಾಟ ನಡೆಯುತ್ತಿದೆ. ಸುಪ್ರೀಂ ಕೋರ್ಟ್ ನಿರ್ಧಾರ ಬಂದ ಮೇಲೆ ಎಲ್ಲಾ ಕಡೆಯೂ ಇದಕ್ಕೆ ಚಾಲನೆ ಸಿಕ್ಕಿತು. ನಮ್ಮ ಸರ್ಕಾರ ಒಳಮೀಸಲಾತಿಯನ್ನು ಜಾರಿ ಮಾಡುತ್ತದೆ ಎಂದು ಅವತ್ತೇ ಹೇಳಿದ್ದೆ. ಅದರಂತೆ, ನಾಗಮೋಹನ್‌ದಾಸ್ ಕಮಿಟಿ ಮಾಡಿದೆವು. ಅವರು ಹಳ್ಳಿಗಳಿಗೆ ಭೇಟಿ ನೀಡಿ, ಜನರ ಜೊತೆಗೆ ಮಾತನಾಡಿ ಒಂದು ವರದಿಯನ್ನು ಕೊಟ್ಟರು. ಅದರ ಪ್ರಕಾರ, 5 ಗುಂಪುಗಳನ್ನು ಮಾಡಿ ಒಳ ಮೀಸಲಾತಿ ಹಂಚಿಕೆ ಮಾಡಿದೆವು ಎಂದು ವಿವರಿಸಿದರು.
ಸಾಮಾಜಿಕ ನ್ಯಾಯದ ಸಾಧನೆಗಳು
ತಮ್ಮ ಆಡಳಿತಾವಧಿಯಲ್ಲಿ ಕೈಗೊಂಡ ಸಾಮಾಜಿಕ ನ್ಯಾಯದ ಕಾರ್ಯಕ್ರಮಗಳನ್ನು ಜಾರಿಗೊಳಿಸಲಾಗಿದೆ. ಎಸ್‌ಸಿಎಸ್‌ಪಿ, ಟಿಎಸ್‌ಪಿ ಕಾಯ್ದೆಯನ್ನು 2013ರಲ್ಲಿ ಜಾರಿಗೆ ತಂದು, ಅನುದಾನವನ್ನು 8,000 ಕೋಟಿಯಿಂದ 44,636 ಕೋಟಿಗೆ ಹೆಚ್ಚಿಸಲಾಯಿತು. ರತ್ನಪ್ರಭಾ ಅವರ ಸಮಿತಿಯ ಮೂಲಕ ವರದಿ ಪಡೆದು ಕಾನೂನು ರೂಪಿಸಿದ್ದು ಮತ್ತು ಅದು ನ್ಯಾಯಾಲಯದಲ್ಲಿ ಸಮರ್ಥನೆಗೊಂಡಿದ್ದನ್ನು ನೆನಪಿಸಿದರು. ಸಮಾಜದ ಕಂದಾಚಾರಗಳನ್ನು ಹೋಗಲಾಡಿಸಲು ಈ ಕಾಯ್ದೆ ತರಲಾಗಿತ್ತು, ಆದರೆ ಅದರ ಅನುಷ್ಠಾನದ ಬಗ್ಗೆ ಜನರಲ್ಲಿ ಜಾಗೃತಿ ಅಗತ್ಯ ಎಂದರು.
ಕೆಲವರು ಸ್ವಾರ್ಥಕ್ಕಾಗಿ ಮೀಸಲಾತಿ ವಿರೋಧಿ ಪಕ್ಷಗಳ ಜೊತೆ ಕೈಜೋಡಿಸುತ್ತಾರೆ. ಇದು ಸರಿಯಲ್ಲ" ಎಂದು ಕಟುವಾಗಿ ನುಡಿದರು. ತಾವು ಚುನಾವಣಾ ರಾಜಕೀಯದಿಂದ ನಿವೃತ್ತರಾದರೂ, ಸಕ್ರಿಯ ರಾಜಕಾರಣದಲ್ಲಿ ಮುಂದುವರಿಯುವುದಾಗಿ ತಿಳಿಸಿದರು. ತಮ್ಮನ್ನು ವಿರೋಧಿಸುವವರ ಬಗ್ಗೆ ಜಾಗರೂಕರಾಗಿರಬೇಕು ಎಂದು ಹೋರಾಟಗಾರರಿಗೆ ಎಚ್ಚರಿಕೆ ನೀಡಿದರು.

