
ಮಾಜಿ ಸಿಎಂ ಸಿದ್ದರಾಮಯ್ಯ
ಖರ್ಗೆ ಭಾಷಣ ಸ್ಥಳದ ಶುದ್ಧೀಕರಣ: ʼಮಾನವ ಘನತೆಯ ಮೇಲಿನ ದಾಳಿʼ
ಶುದ್ದೀಕರಣ ಘಟನೆಗೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ತಕ್ಷಣವೇ ಎಫ್ಐಆರ್ ದಾಖಲಿಸಬೇಕು ಎಂದು ಸಿದ್ದರಾಮಯ್ಯ ಒತ್ತಾಯಿಸಿದ್ದಾರೆ.
ಉತ್ತರಾಖಂಡದ ಹಲ್ದ್ವಾನಿಯ ರಾಮಲೀಲಾ ಮೈದಾನದಲ್ಲಿ ಕಾಂಗ್ರೆಸ್ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ ಅವರು ಸಮಾವೇಶದಲ್ಲಿ ಪಾಲ್ಗೊಂಡ ಬಳಿಕ ಬಲಪಂಥೀಯ ಸಂಘಟನೆ ‘ಶುದ್ಧೀಕರಣ’ ಕೈಗೊಂಡ ಕ್ರಮಕ್ಕೆ ಮಾಜಿ ಸಿಎಂ ಸಿದ್ದರಾಮಯ್ಯ ತೀವ್ರ ಕಿಡಿಕಾರಿದ್ದಾರೆ.
ಬಲಪಂಥಿಯ ಸಂಘನೆಯ ಈ ಕೃತ್ಯ ಜಾತಿವಾದ ಮತ್ತು ಅಸ್ಪೃಶ್ಯತೆಯ ಮತ್ತೊಂದು ರೂಪವಾಗಿದೆ. ಇದು ಬಿಜೆಪಿ-ಆರ್ಎಸ್ಎಸ್ ಸಂಘ ಪರಿವಾರದ ಪರಿಸರ ವ್ಯವಸ್ಥೆಯನ್ನು ಪೋಷಿಸಿಕೊಂಡು ಬಂದಿರುವ ವಿಷಪೂರಿತ ಮನಸ್ಥಿತಿ ಎತ್ತಿ ತೋರಿಸುತ್ತದೆ. ನಮ್ಮ ಸಂವಿಧಾನದಲ್ಲಿ ಅಸ್ಪೃಶ್ಯತೆಯನ್ನು ಸಂಪೂರ್ಣ ನಿಷೇಧಿಸಲಾಗಿದ್ದು, ಇಂತಹ ಕೃತ್ಯವು ಸಮಾನತೆ ಮತ್ತು ಮಾನವ ಘನತೆಯ ಮೇಲಿನ ದಾಳಿಯಾಗಿದೆ ಎಂದು ಸಾಮಾಜಿಕ ಜಾಲತಾಣದಲ್ಲಿ ಪೋಸ್ಟ್ ಮಾಡಿದ್ದಾರೆ.
ಶುದ್ದೀಕರಣ ಘಟನೆಗೆ ಕಾರಣರಾದವರ ವಿರುದ್ಧ ಅತ್ಯಂತ ಕಠಿಣ ಕ್ರಮ ಕೈಗೊಳ್ಳಬೇಕು. ಪರಿಶಿಷ್ಟ ಜಾತಿ ಮತ್ತು ಪರಿಶಿಷ್ಟ ಪಂಗಡಗಳ (ದೌರ್ಜನ್ಯ ತಡೆ) ಕಾಯ್ದೆಯಡಿ ತಕ್ಷಣವೇ ಎಫ್ಐಆರ್ ದಾಖಲಿಸಬೇಕು. ಕಾಂಗ್ರೆಸ್ ಅಧ್ಯಕ್ಷರಿಗೆ ನ್ಯಾಯ ಸಿಗಬೇಕೆಂದು ಒತ್ತಾಯಿಸುತ್ತಿರುವ ರಾಹುಲ್ ಗಾಂಧಿ ಅವರ ನಿಲುವು ಸರಿಯಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಉತ್ತರಾಖಂಡ ಬಿಜೆಪಿ ಅಧ್ಯಕ್ಷ ಮಹೇಂದ್ರ ಭಟ್ ಅವರು ಸೋಕಾಲ್ಡ್ ಶುದ್ಧೀಕರಣವನ್ನು ಸಮರ್ಥಿಸಿಕೊಂಡಿದ್ದಾರೆ. ರಾಜ್ಯದ ಆಡಳಿತಾರೂಢ ಪಕ್ಷದ ಅಧ್ಯಕ್ಷರೇ ಇಂತಹ ಕೃತ್ಯದಲ್ಲಿ ಯಾವುದೇ ತಪ್ಪಿಲ್ಲ ಎಂದು ಹೇಳಿರುವುದನ್ನು ನೋಡಿದಾಗ, ಬಿಜೆಪಿ-ಆರ್ಎಸ್ಎಸ್ ರಾಜಕಾರಣದೊಳಗೆ ಆಳವಾಗಿ ಬೇರೂರಿರುವ ಜಾತಿಯಾಧಾರಿತ ಮನಸ್ಥಿತಿ ಬಹಿರಂಗವಾಗಿದೆ ಎಂದಿದ್ದಾರೆ.
ಇದು ಕೇವಲ ಮಲ್ಲಿಕಾರ್ಜುನ ಖರ್ಗೆ ಅವರಿಗೆ ಮಾತ್ರ ಸಂಬಂಧಿಸಿದ ವಿಷಯವಲ್ಲ. ದೇಶಾದ್ಯಂತ ದಲಿತರು ಕೇವಲ ತಮ್ಮ ಜಾತಿಯ ಕಾರಣಕ್ಕಾಗಿ ಪ್ರತಿದಿನವೂ ಇಂತಹ ಅವಮಾನ, ತಾರತಮ್ಯ ಮತ್ತು ಅಪಮಾನ ಎದುರಿಸುತ್ತಲೇ ಇದ್ದಾರೆ. ಇಂತಹ ಕೃತ್ಯಗಳು ನಡೆದಾಗ ಮತ್ತು ತಮ್ಮದೇ ನಾಯಕರು ಅದನ್ನು ಸಮರ್ಥಿಸಿಕೊಂಡಾಗ ಮೌನ ವಹಿಸುವ ಪ್ರಧಾನಿ ನರೇಂದ್ರ ಮೋದಿ ಹಾಗೂ ಬಿಜೆಪಿಯು, ಸಾಮಾಜಿಕ ನ್ಯಾಯದ ಬಗ್ಗೆ ಮಾತನಾಡಲು ಅರ್ಹರಲ್ಲ. ಅಸ್ಪೃಶ್ಯತೆಯ ಈ ಕೃತ್ಯವನ್ನು ಅವರು ಖಂಡಿಸುತ್ತಾರೆಯೇ ಅಥವಾ ಅದನ್ನು ಸಮರ್ಥಿಸುವವರ ಪರವಾಗಿ ಬಿಜೆಪಿ ನಿಲ್ಲುತ್ತದೆಯೇ ಎಂಬುದನ್ನು ಮೋದಿ ಅವರು ದೇಶಕ್ಕೆ ಸ್ಪಷ್ಟಪಡಿಸಬೇಕು ಎಂದು ಆಗ್ರಹಿಸಿದ್ದಾರೆ.

