
ಸಂವಿಧಾನದ ಆಶಯ ಈಡೇರಿಸಲು ಮಾಧ್ಯಮಗಳ ಪಾತ್ರ ಮಹತ್ವದ್ದು- ಮಾಜಿ ಸಿಎಂ ಸಿದ್ದರಾಮಯ್ಯ
ಪತ್ರಿಕಾರಂಗದಲ್ಲಿ ಅಂತಹ ಯಾವುದೇ ಮೀಸಲಾತಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಪತ್ರಿಕಾ ಮಾಧ್ಯಮವು ಮೇಲ್ವರ್ಗಗಳ ಹಿಡಿತದಲ್ಲೇ ಉಳಿಯುವಂತಾಗಿದೆ ಎಂದು ಸಿದ್ದರಾಮಯ್ಯ ಹೇಳಿದ್ದಾರೆ.
ಪತ್ರಿಕಾರಂಗವು ಪ್ರಜಾಪ್ರಭುತ್ವದ ನಾಲ್ಕನೇ ಸ್ತಂಭ. ಈ ಸ್ತಂಭದಲ್ಲಿ ದಲಿತರು, ಹಿಂದುಳಿದ ವರ್ಗಗಳು ಮತ್ತು ಅಲ್ಪಸಂಖ್ಯಾತರ ಪ್ರಾತಿನಿಧ್ಯ ತೀರಾ ಕಡಿಮೆಯಾಗಿದೆ. ಈ ಸಮುದಾಯಗಳಲ್ಲಿ ಪ್ರತಿಭೆಗೇನೂ ಕೊರತೆಯಿಲ್ಲ, ಆದರೆ ಐತಿಹಾಸಿಕವಾಗಿ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತರಾದ ಕಾರಣಕ್ಕೆ ಅವರು ಈ ಕ್ಷೇತ್ರಕ್ಕೆ ಪ್ರವೇಶಿಸಲು ಸಾಧ್ಯವಾಗಲಿಲ್ಲ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅಭಿಪ್ರಾಯಪಟ್ಟಿದ್ದಾರೆ.
ಕರ್ನಾಟಕ ರಾಜ್ಯ ಎಸ್‌ಸಿ/ಎಸ್‌ಟಿ ಪತ್ರಿಕಾ ಸಂಪಾದಕರ ಸಂಘದ ವತಿಯಿಂದ ಆಯೋಜಿಸಲಾಗಿದ್ದ ಪ್ರಶಸ್ತಿ ಪ್ರದಾನ ಹಾಗೂ ಸನ್ಮಾನ ಕಾರ್ಯಕ್ರಮದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಪತ್ರಿಕಾರಂಗದಲ್ಲಿ ಸಮಾನ ಅವಕಾಶಗಳ ಕುರಿತು ಗಂಭೀರ ಚಿಂತನೆಯನ್ನು ತೆರೆದಿಟ್ಟರು. ಅಂಬೇಡ್ಕರ್ ಅವರು ಸಂವಿಧಾನದ ಮೂಲಕ ಶಿಕ್ಷಣ, ಉದ್ಯೋಗ ಮತ್ತು ರಾಜಕೀಯದಲ್ಲಿ ಮೀಸಲಾತಿ ಕಲ್ಪಿಸಿದ್ದಾರೆ. ಆದರೆ ಪತ್ರಿಕಾರಂಗದಲ್ಲಿ ಅಂತಹ ಯಾವುದೇ ಮೀಸಲಾತಿ ವ್ಯವಸ್ಥೆ ಇಲ್ಲ. ಇದರಿಂದಾಗಿ ಪತ್ರಿಕಾ ಮಾಧ್ಯಮವು ಮೇಲ್ವರ್ಗಗಳ ಹಿಡಿತದಲ್ಲೇ ಉಳಿಯುವಂತಾಗಿದೆ. ಪತ್ರಿಕಾರಂಗದಲ್ಲಿ ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರಿಗೆ ಸಮಾನ ಅವಕಾಶ ದೊರೆತಿದ್ದರೆ, ಇಂದು ಸಾವಿರಾರು ಸಬಲ ಪತ್ರಕರ್ತರು ಈ ಕ್ಷೇತ್ರದಲ್ಲಿ ಸಾಧನೆ ಮಾಡುತ್ತಿದ್ದರು. ನಾವ್ಯಾರೂ ಯಾರಿಗಿಂತಲೂ ಕಡಿಮೆ ಇಲ್ಲ, ಕೇವಲ ಅವಕಾಶಗಳ ಕೊರತೆಯಿಂದಾಗಿ ಮಾತ್ರ ಹಿಂದಿದ್ದೇವೆ ಎಂದು ಪ್ರತಿಪಾದಿಸಿದರು.
ಪತ್ರಕರ್ತರಿಗೆ ಮಾಜಿ ಸಿಎಂ ಕರೆ
ತಾವು ರಾಜಕೀಯಕ್ಕೆ ಬರುವ ಮುನ್ನ ಪತ್ರಿಕಾರಂಗದಲ್ಲಿ ಗುರುತಿಸಿಕೊಳ್ಳಬೇಕೆಂಬ ಆಸೆ ಇತ್ತು ಎಂಬುದನ್ನು ನೆನಪಿಸಿಕೊಂಡ ಮಾಜಿ ಸಿಎಂ, ಪತ್ರಕರ್ತರಲ್ಲಿ ಪ್ರಾಮಾಣಿಕತೆ ಮತ್ತು ಸತ್ಯಾಸತ್ಯತೆಯ ಹುಡುಕಾಟ ಇರಬೇಕು ಎಂದು ಕಿವಿಮಾತು ಹೇಳಿದರು. "ಸತ್ಯ ಜನರಿಗೆ ತಿಳಿಯದಿದ್ದರೆ ಅಸತ್ಯವನ್ನೇ ಸತ್ಯ ಎಂದು ನಂಬುವ ಕಾಲ ಇದು. ಊಹಾ ಮಾಧ್ಯಮಗಳಿಗೆ ಅವಕಾಶವಿರಬಾರದು. ಸಮಾಜದ ಕಟ್ಟಕಡೆಯ ಮನುಷ್ಯನ ನೋವುಗಳಿಗೆ ಮಾಧ್ಯಮ ಧ್ವನಿಯಾಗಬೇಕು. ಸಂವಿಧಾನವನ್ನು ಕೇವಲ ಓದಿದರೆ ಸಾಲದು, ಅದರ ಸಾರವನ್ನು ಅರಿಯಬೇಕು ಎಂದು ಪ್ರತಿಪಾದಿಸಿದರು. "ಸಂವಿಧಾನ ಜಾರಿಯಾಗಿ 76 ವರ್ಷಗಳಾದರೂ, ನಾವು ಅಂಬೇಡ್ಕರ್ ಕಂಡ ಸಾಮಾಜಿಕ ಸಮಾನತೆಯ ಕನಸನ್ನು ಸಂಪೂರ್ಣವಾಗಿ ನನಸಾಗಿಸಿಲ್ಲ. ಅಸಮಾನತೆ, ಜಾತಿ ವ್ಯವಸ್ಥೆ ಮತ್ತು ಮೇಲು-ಕೀಳು ಭಾವನೆ ಇನ್ನೂ ಜೀವಂತವಾಗಿವೆ. ಅಂಬೇಡ್ಕರ್ ಅವರು ಅಂದು ಎಚ್ಚರಿಸಿದಂತೆ, ಅಸಮಾನತೆ ಮುಂದುವರಿದರೆ ಪ್ರಜಾಪ್ರಭುತ್ವದ ಅಸ್ತಿತ್ವಕ್ಕೆ ಧಕ್ಕೆ ಬರುತ್ತದೆ" ಎಂದು ಆತಂಕ ವ್ಯಕ್ತಪಡಿಸಿದರು. ತಮ್ಮ ಸರ್ಕಾರವು ಶಾಲಾ-ಕಾಲೇಜುಗಳಲ್ಲಿ ಸಂವಿಧಾನದ ಪ್ರಸ್ತಾವನೆಯನ್ನು ಓದುವ ಕ್ರಮ ಜಾರಿಗೆ ತಂದಿರುವುದನ್ನು ಉಲ್ಲೇಖಿಸಿದ ಅವರು, "ಸಂವಿಧಾನವನ್ನು ವಿರೋಧಿಸುವವರು ಅಥವಾ ಅದರಲ್ಲಿ ನಂಬಿಕೆ ಇಲ್ಲದವರು ಅಧಿಕಾರದಲ್ಲಿದ್ದರೆ ಸಾಮಾಜಿಕ ಬದಲಾವಣೆ ಸಾಧ್ಯವಿಲ್ಲ" ಎಂದು ನೇರವಾಗಿ ಟೀಕಿಸಿದರು.
ಕರ್ಮ ಸಿದ್ಧಾಂತದ ವಿರುದ್ಧ ವೈಚಾರಿಕ ಸಮರ
ಬಸವಣ್ಣನವರ ಕಾಯಕ ಮತ್ತು ವೈಚಾರಿಕ ಕ್ರಾಂತಿಯನ್ನು ಸ್ಮರಿಸಿದ ಸಿದ್ದರಾಮಯ್ಯ, ಇಂದಿನ ವೈಜ್ಞಾನಿಕ ಯುಗದಲ್ಲೂ 'ಕರ್ಮ ಸಿದ್ಧಾಂತ'ವನ್ನು ನಂಬುವ ವಿದ್ಯಾವಂತರ ಬಗ್ಗೆ ಅಚ್ಚರಿ ವ್ಯಕ್ತಪಡಿಸಿದರು. "ವೈದ್ಯರು, ವಿಜ್ಞಾನಿಗಳು ಮತ್ತು ಇಂಜಿನಿಯರ್‌ಗಳೇ ಬಡತನ, ರೋಗಗಳನ್ನು ಕಳೆದ ಜನ್ಮದ ಕರ್ಮದ ಫಲವೆಂದು ನಂಬುತ್ತಾರೆಂದರೆ ಅದು ನಮ್ಮ ಶಿಕ್ಷಣ ವ್ಯವಸ್ಥೆಯ ವೈಫಲ್ಯ. ಭಯದ ಮೂಲಕ ಜನರನ್ನು ಅಜ್ಞಾನದಲ್ಲಿ ಇರಿಸಲಾಗಿದೆ. ಬಸವಣ್ಣನವರು 850 ವರ್ಷಗಳ ಹಿಂದೆಯೇ ಇಂತಹ ಮೌಢ್ಯಗಳನ್ನು ತಿರಸ್ಕರಿಸಿದ್ದರು" ಎಂದರು. ದಲಿತರು, ಹಿಂದುಳಿದವರು ಮತ್ತು ಅಲ್ಪಸಂಖ್ಯಾತರು ಆರ್ಥಿಕ, ಸಾಮಾಜಿಕ ಮತ್ತು ರಾಜಕೀಯವಾಗಿ ಸಬಲರಾದಾಗ ಮಾತ್ರ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಲು ಸಾಧ್ಯ. "ಕೇವಲ ಒಬ್ಬ ವ್ಯಕ್ತಿ ಶಾಸಕನಾದ ಮಾತ್ರಕ್ಕೆ ಅಥವಾ ಸಚಿವನಾದ ಮಾತ್ರಕ್ಕೆ ಸಾಮಾಜಿಕ ಬದಲಾವಣೆ ಬರುವುದಿಲ್ಲ. ಮೂಲಭೂತವಾದ ಜಾತಿ ವ್ಯವಸ್ಥೆಯ ವಿರುದ್ಧ ಹೋರಾಟ ನಡೆಸಬೇಕು. ಸ್ವಾರ್ಥಕ್ಕಾಗಿ ಮನುಸ್ಮೃತಿ ಮತ್ತು ಮನುವಾದದ ಪರವಾಗಿರುವವರ ಜೊತೆ ಕೈಜೋಡಿಸುವ ಕೆಲಸವನ್ನು ದಲಿತ ನಾಯಕರು ನಿಲ್ಲಿಸಬೇಕು" ಎಂದು ಎಚ್ಚರಿಸಿದರು.
ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆಯ ಸಾಧನೆ
"ಎಸ್‌ಸಿ/ಎಸ್‌ಟಿ ಸಮುದಾಯದ ಅಭಿವೃದ್ಧಿಗಾಗಿ ನಾವು ಜಾರಿಗೆ ತಂದಿರುವ ಎಸ್‌ಸಿಎಸ್‌ಪಿ/ಟಿಎಸ್‌ಪಿ ಕಾಯ್ದೆ ದೇಶಕ್ಕೆ ಮಾದರಿಯಾಗಿದೆ. ಅಂದು ಆಂಜನೇಯ ಅವರು ಸಮಾಜ ಕಲ್ಯಾಣ ಸಚಿವರಾಗಿದ್ದಾಗ ಈ ಐತಿಹಾಸಿಕ ಕಾನೂನನ್ನು ರೂಪಿಸಲಾಯಿತು. ಇಂದು 44 ಸಾವಿರ ಕೋಟಿ ರೂಪಾಯಿಗೂ ಹೆಚ್ಚು ಅನುದಾನವನ್ನು ಈ ಸಮುದಾಯಗಳ ಏಳಿಗೆಗೆ ಮೀಸಲಿಡಲಾಗುತ್ತಿದೆ. ಕರ್ನಾಟಕದಲ್ಲಿ ಮಾತ್ರ ಈ ಕಾಯ್ದೆ ಇಷ್ಟು ಪರಿಣಾಮಕಾರಿಯಾಗಿ ಜಾರಿಯಲ್ಲಿದೆ. ಸುಪ್ರೀಂಕೋರ್ಟ್ ಮುಂಬಡ್ತಿ ಮೀಸಲಾತಿಯನ್ನು ರದ್ದುಗೊಳಿಸಿದಾಗ, ರಾಜ್ಯ ಸರ್ಕಾರ ರತ್ನಪ್ರಭಾ ಸಮಿತಿಯ ವರದಿ ಆಧರಿಸಿ ಕಾನೂನು ರೂಪಿಸಿ ಮೀಸಲಾತಿಯನ್ನು ರಕ್ಷಿಸಿದೆ. ಹಕ್ಕುಗಳು ಎಂದೂ ಸ್ವಯಂಚಾಲಿತವಾಗಿ ಬರುವುದಿಲ್ಲ, ಅವಕ್ಕಾಗಿ ನಿರಂತರ ಹೋರಾಟ ಮಾಡಬೇಕಾಗುತ್ತದೆ" ಎಂದು ಸಲಹೆ ನೀಡಿದರು.
ಯಾರನ್ನೂ ದ್ವೇಷಿಸುವ ಅಗತ್ಯವಿಲ್ಲ, ಆದರೆ ಸಾಮಾಜಿಕ ನ್ಯಾಯಕ್ಕಾಗಿ ಗಟ್ಟಿಯಾದ ನಿಲುವು ಬೇಕು ಎಂದು ಪ್ರತಿಪಾದಿಸಿದ ಮುಖ್ಯಮಂತ್ರಿಗಳು, "ಪ್ರಜಾಪ್ರಭುತ್ವದ ಆಶಯಗಳನ್ನು ಉಳಿಸಿಕೊಳ್ಳುವುದು ನಮ್ಮೆಲ್ಲರ ಹೊಣೆ. ಅಂಬೇಡ್ಕರ್ ಅವರು ಬರೆದ ಸಂವಿಧಾನವೇ ನಮ್ಮ ಶಕ್ತಿ. ಎಲ್ಲರಿಗೂ ಸಮಾನ ಅವಕಾಶಗಳು ಸಿಕ್ಕಾಗ ಮಾತ್ರ ಭಾರತ ನಿಜವಾದ ಅರ್ಥದಲ್ಲಿ ಪ್ರಜಾಪ್ರಭುತ್ವವಾಗುತ್ತದೆ" ಎಂದು ಸಮಾರೋಪ ನುಡಿದರು. ಕಾರ್ಯಕ್ರಮದಲ್ಲಿ ವಿವಿಧ ಜಿಲ್ಲೆಗಳ ಪತ್ರಕರ್ತರು, ಸಂಪಾದಕರು ಮತ್ತು ಸಾಹಿತಿಗಳು ಉಪಸ್ಥಿತರಿದ್ದರು. ಸಮುದಾಯದ ಅಭಿವೃದ್ಧಿಗಾಗಿ ಪತ್ರಿಕೋದ್ಯಮದ ಮೂಲಕ ಹೋರಾಡುತ್ತಿರುವವರನ್ನು ಸಿದ್ದರಾಮಯ್ಯ ಅಭಿನಂದಿಸಿದರು.

