ಹೈಕಮಾಂಡ್‌ಗೆ ಮುಸ್ಲಿಂರ ಪತ್ರ; ಅಲ್ಪಸಂಖ್ಯಾತರ ಎದುರೇ ತೀರ್ಮಾನ, ಶಿಸ್ತುಕ್ರಮ ಸಮರ್ಥಿಸಿಕೊಂಡ ಸಿಎಂ
x
ಸಿದ್ದರಾಮಯ್ಯ

ಹೈಕಮಾಂಡ್‌ಗೆ ಮುಸ್ಲಿಂರ ಪತ್ರ; ಅಲ್ಪಸಂಖ್ಯಾತರ ಎದುರೇ ತೀರ್ಮಾನ, ಶಿಸ್ತುಕ್ರಮ ಸಮರ್ಥಿಸಿಕೊಂಡ ಸಿಎಂ

ಮುಸ್ಲಿಮರಿಗೆ ಕಾಂಗ್ರೆಸ್‌ ಪಕ್ಷ ರಕ್ಷಣೆ ನೀಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೂ ತೀವ್ರ ಆಕ್ರೋಶ ಹೊರಹಾಕಿರುವ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಗಳಿಗೆ ಇದು ಕಾರಣವಾಗಲಿದೆ ಎನ್ನಲಾಗಿದೆ.


ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆ ನಂತರ ರಾಜ್ಯ ಕಾಂಗ್ರೆಸ್‌ನಲ್ಲಿ ದಿನಕ್ಕೊಂದು ಬೆಳವಣಿಗೆ ನಡೆಯುತ್ತಿದೆ. ಮುಸ್ಲಿಂ ಮುಖಂಡರು ಹಾಗೂ ಸಂಘಟನೆಗಳು ಹೈಕಮಾಂಡ್‌ಗೆ ಸುದೀರ್ಘ ಪತ್ರ ಬರೆದ ಬೆನ್ನಲ್ಲೇ ಚಟುವಟಿಕೆಗಳು ತೀವ್ರಗೊಂಡಿವೆ.

ಮುಸ್ಲಿಮರಿಗೆ ಕಾಂಗ್ರೆಸ್‌ ಪಕ್ಷ ರಕ್ಷಣೆ ನೀಡುತ್ತಿದೆ ಎಂಬ ಕೆಪಿಸಿಸಿ ಅಧ್ಯಕ್ಷ ಡಿ.ಕೆ. ಶಿವಕುಮಾರ್‌ ಹೇಳಿಕೆಗೂ ತೀವ್ರ ಆಕ್ರೋಶ ಹೊರಹಾಕಿರುವ ಹಿನ್ನೆಲೆಯಲ್ಲಿ ಮತ್ತೊಂದು ಸುತ್ತಿನ ರಾಜಕೀಯ ಮೇಲಾಟಗಳಿಗೆ ಇದು ಕಾರಣವಾಗಲಿದೆ ಎನ್ನಲಾಗಿದೆ. ಈ ಮಧ್ಯೆ, ಮುಸ್ಲಿಂ ನಾಯಕರ ಪತ್ರದ ಕುರಿತು ಪ್ರತಿಕ್ರಿಯಿಸಿರುವ ಸಿಎಂ ಸಿದ್ದರಾಮಯ್ಯ ಅವರು, ಅಭ್ಯರ್ಥಿ ಆಯ್ಕೆ ಸಂಬಂಧ ಹೈಕಮಾಂಡ್‌ ನಾಯಕರ ಸಮ್ಮುಖದಲ್ಲಿ ನಡೆದ ಸಭೆಯಲ್ಲಿ ಅಲ್ಪಸಂಖ್ಯಾತ ನಾಯಕರು ಭಾಗವಹಿಸಿದ್ದರು. ಸಮರ್ಥ್‌ ಮಲ್ಲಿಕಾರ್ಜುನ್‌ ಅವರಿಗೆ ಟಿಕೆಟ್‌ ನೀಡಿದ ಬಳಿಕ ವಿರೋಧಿಸಿದರು. ಪಕ್ಷದ ನಿಯಮಗಳನ್ನು ಉಲ್ಲಂಘಿಸಿದ ಕಾರಣ ಕೆಲವರ ವಿರುದ್ಧ ಶಿಸ್ತುಕ್ರಮ ಜರುಗಿಸಲಾಗಿದೆ. ಉದ್ದೇಶಪೂರ್ವಕವಾಗಿ ಯಾವುದೇ ಅಲ್ಪಸಂಖ್ಯಾತ ನಾಯಕರನ್ನು ಕಡೆಗಣಿಸಿಲ್ಲ ಎಂದು ಹೇಳಿದ್ದಾರೆ.

ನಿನ್ನೆಯಷ್ಟೇ(ಏ.20) ಕಾಂಗ್ರೆಸ್ ಪಕ್ಷವು ಅಲ್ಪಸಂಖ್ಯಾತರನ್ನು ಕೇವಲ ವೋಟ್ ಬ್ಯಾಂಕ್ ಆಗಿ ಬಳಸಿಕೊಳ್ಳುತ್ತಿದೆ ಎಂದು ಆರೋಪಿಸಿ ಮುಸ್ಲಿಂ ಸಂಘಟನೆಗಳು ಮತ್ತು ಧಾರ್ಮಿಕ ಮುಖಂಡರು ಹೈಕಮಾಂಡ್ ನಾಯಕರಿಗೆ ಪತ್ರ ಬರೆದು ಅಸಮಾಧಾನ ಹೊರಹಾಕಿದ್ದರು.

ಎಐಸಿಸಿ ಅಧ್ಯಕ್ಷ ಮಲ್ಲಿಕಾರ್ಜುನ ಖರ್ಗೆ, ಲೋಕಸಭೆ ವಿಪಕ್ಷ ನಾಯಕ ರಾಹುಲ್ ಗಾಂಧಿ, ರಾಜ್ಯ ಉಸ್ತುವಾರಿ ರಣದೀಪ್ ಸಿಂಗ್ ಸುರ್ಜೆವಾಲಾ, ಮುಖ್ಯಮಂತ್ರಿ ಸಿದ್ದರಾಮಯ್ಯ ಹಾಗೂ ಡಿಸಿಎಂ ಡಿ.ಕೆ. ಶಿವಕುಮಾರ್ ಅವರಿಗೆ ಪತ್ರ ಬರೆದ ಬಳಿಕ ಪಕ್ಷದಲ್ಲಿ ಸಂಚಲನ ಸೃಷ್ಟಿಯಾಗಿತ್ತು.

ಬೇರೆಯವರ ಮೇಲೆ ಕ್ರಮವಿಲ್ಲವೇಕೆ?

ದಶಕಗಳಿಂದ ಪಕ್ಷಕ್ಕಾಗಿ ದುಡಿದ ಹಿರಿಯ ಮುಸ್ಲಿಂ ನಾಯಕರನ್ನು ಯಾವುದೇ ಮುನ್ಸೂಚನೆ ನೀಡದೇ ಏಕಾಏಕಿ ಉಚ್ಚಾಟಿಸಿರುವುದು ಸಮುದಾಯಕ್ಕೆ ಮಾಡಿದ ಅವಮಾನ ಎಂದು ಮುಸ್ಲಿಂ ಮುಖಂಡರು ದೂರಿದ್ದಾರೆ.

"ಇತರ ಪ್ರಬಲ ಸಮುದಾಯಗಳ ನಾಯಕರು ಪಕ್ಷ ವಿರೋಧಿ ಚಟುವಟಿಕೆ ನಡೆಸಿದಾಗ ಸುಮ್ಮನಿರುವ ಪಕ್ಷ, ಮುಸ್ಲಿಂ ನಾಯಕರ ಮೇಲೆ ಮಾತ್ರ ತಕ್ಷಣದ ಕಠಿಣ ಕ್ರಮ ಕೈಗೊಳ್ಳುತ್ತಿರುವುದು ಏಕೆ?" ಎಂದು ಪ್ರಶ್ನಿಸಿದ್ದಾರೆ.

ದಾವಣಗೆರೆ ದಕ್ಷಿಣ ಕ್ಷೇತ್ರದ ಉಪಚುನಾವಣೆಯಲ್ಲಿ ಸಮುದಾಯಕ್ಕೆ ನ್ಯಾಯಯುತವಾಗಿ ಸಿಗಬೇಕಿದ್ದ ಟಿಕೆಟ್ ನಿರಾಕರಿಸಲಾಗಿದೆ. ಟಿಕೆಟ್ ಕೇಳುವುದೇ ಅಪರಾಧ ಎಂಬಂತೆ ವರಿಷ್ಠರು ವರ್ತಿಸಿದ್ದಾರೆ ಎಂದು ಪತ್ರದಲ್ಲಿ ಆರೋಪಿಸಲಾಗಿದೆ.

ಸಮುದಾಯಕ್ಕೆ ಪ್ರಾತಿನಿಧ್ಯದ ಕೊರತೆ

2023ರ ಚುನಾವಣೆಯಲ್ಲಿ ಶೇ. 90ರಷ್ಟು ಮುಸ್ಲಿಮರು ಕಾಂಗ್ರೆಸ್ ಬೆಂಬಲಿಸಿದ್ದರಿಂದಲೇ ಪಕ್ಷವು ಅಧಿಕಾರಕ್ಕೆ ಬಂದಿದೆ. ಆದರೆ, ಅಧಿಕಾರಕ್ಕೆ ಬಂದ ನಂತರ ಆಡಳಿತದಲ್ಲಿ ಸಮುದಾಯಕ್ಕೆ ಯಾವುದೇ ಪ್ರಾತಿನಿಧ್ಯ ನೀಡಿಲ್ಲ. ನಿಗಮ ಮಂಡಳಿ ಹಾಗೂ ಪ್ರಮುಖ ನಿರ್ಧಾರ ತೆಗೆದುಕೊಳ್ಳುವ ಹುದ್ದೆಗಳಲ್ಲೂ ಪ್ರಾತಿನಿಧ್ಯ ನೀಡಿಲ್ಲ ಎಂದು ಮುಸ್ಲಿಂ ಮುಖಂಡರು ದೂರಿದ್ದಾರೆ.

ಮುಸ್ಲಿಮರಿಗೆ ಕಾಂಗ್ರೆಸ್ ರಕ್ಷಣೆ ನೀಡಿದೆ ಎಂಬ ಕೆಪಿಸಿಸಿ ಅಧ್ಯಕ್ಷರ ಹೇಳಿಕೆಯನ್ನೂ ಖಂಡಿಸಿರುವ ಮುಖಂಡರು, ರಕ್ಷಣೆ ಎಂಬುದು ಸಂವಿಧಾನಬದ್ಧ ಹಕ್ಕೇ ಹೊರತು, ಪಕ್ಷ ನೀಡುವ ಭಿಕ್ಷೆಯಲ್ಲ ಎಂದು ತಿರುಗೇಟು ನೀಡಿದ್ದಾರೆ.

ಪತ್ರಕ್ಕೆ ಸಹಿ ಹಾಕಿದ ಪ್ರಮುಖರು

ಮೌಲಾನಾ ಸೈಯದ್ ತನ್ವೀರ್ ಹಾಶ್ಮಿ (ವಿಜಯಪುರ), ಅಬ್ದುಲ್ ಖದೀರ್ ಸಾಹೇಬ್ (ಶಾಹೀನ್ ಸಂಸ್ಥೆ, ಬೀದರ್), ಮೌಲಾನಾ ಶಬ್ಬೀರ್ ಅಹ್ಮದ್ ನದ್ವಿ, ಕೆ.ಎಸ್. ಮೊಹಮ್ಮದ್ ಮಸೂದ್ (ದಕ್ಷಿಣ ಕನ್ನಡ), ಮೌಲಾನಾ ಇಫ್ತಿಖಾರ್ ಅಹ್ಮದ್ ಕಾಸ್ಮಿ ಸೇರಿ ರಾಜ್ಯದ ವಿವಿಧ ಜಿಲ್ಲೆಗಳ ಸುಮಾರು 25ಕ್ಕೂ ಹೆಚ್ಚು ಸಂಘಟನೆಗಳ ಅಧ್ಯಕ್ಷರು ಮತ್ತು ಮುಖಂಡರು ಕಾಂಗ್ರೆಸ್‌ ಹೈಕಮಾಂಡ್‌ಗೆ ಬರೆದಿರುವ ಪತ್ರಕ್ಕೆ ಸಹಿ ಹಾಕಿದ್ದಾರೆ.

ಕಾಂಗ್ರೆಸ್‌ಗೆ ಸಮುದಾಯದ ಎಚ್ಚರಿಕೆ

ಕಾಂಗ್ರೆಸ್ ಪಕ್ಷವು ನಮ್ಮ ದೌರ್ಬಲ್ಯವನ್ನು ಬಳಸಿಕೊಳ್ಳುತ್ತಿದ್ದರೆ, ನಾವು ನಮ್ಮ ರಾಜಕೀಯ ಆಯ್ಕೆಗಳನ್ನು ಮುಕ್ತವಾಗಿರಿಸಿಕೊಳ್ಳಬೇಕಾಗುತ್ತದೆ ಎಂದು ಮುಖಂಡರು ವರಿಷ್ಠರಿಗೆ ಎಚ್ಚರಿಕೆ ನೀಡಿದ್ದಾರೆ. ಚುನಾವಣಾ ಪ್ರಣಾಳಿಕೆಯಲ್ಲಿ ನೀಡಿದ ಭರವಸೆಗಳನ್ನು ಈಡೇರಿಸಬೇಕು. ಸಮುದಾಯದ ಘನತೆಯನ್ನು ಎತ್ತಿ ಹಿಡಿಯಬೇಕು ಎಂದು ಆಗ್ರಹಿಸಿದ್ದಾರೆ.

ಈ ಬೆಳವಣಿಗೆಯು ರಾಜ್ಯ ಕಾಂಗ್ರೆಸ್ ಸರ್ಕಾರಕ್ಕೆ ದೊಡ್ಡ ತಲೆನೋವಾಗಿ ಪರಿಣಮಿಸುವ ಸಾಧ್ಯತೆಯಿದೆ. ಅಲ್ಪಸಂಖ್ಯಾತ ಮತಗಳ ಮೇಲೆ ಹಿಡಿತ ಹೊಂದಿರುವ ಈ ಮುಖಂಡರ ಆಕ್ರೋಶವು ಮುಂದಿನ ಚುನಾವಣೆಗಳ ಮೇಲೆ ಪರಿಣಾಮ ಬೀರುವ ಮುನ್ಸೂಚನೆ ನೀಡುತ್ತಿದೆ.

Read More
Next Story