ವಿದ್ಯಾವಂತರು ಮೌಢ್ಯ, ಜಾತಿ ವ್ಯವಸ್ಥೆ ಪಾಲಿಸುತ್ತಿರುವುದು ದುರದೃಷ್ಟಕರ: ಸಿದ್ದರಾಮಯ್ಯ
x

ವಿದ್ಯಾವಂತರು ಮೌಢ್ಯ, ಜಾತಿ ವ್ಯವಸ್ಥೆ ಪಾಲಿಸುತ್ತಿರುವುದು ದುರದೃಷ್ಟಕರ: ಸಿದ್ದರಾಮಯ್ಯ

ದೇಶದಲ್ಲಿ ಜಾತಿ ವ್ಯವಸ್ಥೆ ಕೇವಲ ಸಾಮಾಜಿಕ ಕಟ್ಟುಪಾಡಾಗಿರಲಿಲ್ಲ, ಅದು ವ್ಯವಸ್ಥಿತವಾಗಿ ಸೃಷ್ಟಿಸಲ್ಪಟ್ಟ ದಬ್ಬಾಳಿಕೆಯ ಸಾಧನವಾಗಿತ್ತು ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಹೇಳಿದ್ದಾರೆ.


Click the Play button to hear this message in audio format

ದೇಶದಲ್ಲಿ ಸಮಾನತೆಯ ಸಮಾಜ ನಿರ್ಮಾಣವಾಗಬೇಕಾದರೆ ಜಾತಿ ವ್ಯವಸ್ಥೆ ನಿರ್ಮೂಲನೆಯಾಗಬೇಕು. ಆದರೆ, ಇಂದಿನ ವಿದ್ಯಾವಂತರು ಕೂಡ ಜಾತಿ ವ್ಯವಸ್ಥೆಯನ್ನು ಮೈಗೂಡಿಸಿಕೊಳ್ಳುತ್ತಿರುವುದು ಮತ್ತು ಮೌಢ್ಯಗಳನ್ನು ಪಾಲಿಸುತ್ತಿರುವುದು ಅತ್ಯಂತ ದುರದೃಷ್ಟಕರ ಸಂಗತಿ ಎಂದು ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಆತಂಕ ವ್ಯಕ್ತಪಡಿಸಿದ್ದಾರೆ.

ಬೆಂಗಳೂರಿನ ಗಾಂಧಿ ಭವನದಲ್ಲಿ ನಡೆದ ‘ಶೂದ್ರ ಸೇವಾ ಸಂಘ’ದ ಉದ್ಘಾಟನಾ ಸಮಾರಂಭದಲ್ಲಿ ಭಾಗವಹಿಸಿ ಮಾತನಾಡಿದ ಅವರು, ಜಾತಿ ವ್ಯವಸ್ಥೆ ಮತ್ತು ಅಸಮಾನತೆಯ ವಿರುದ್ಧ ತೀವ್ರ ವಾಗ್ದಾಳಿ ನಡೆಸಿದರು. ದೇಶದಲ್ಲಿ ಜಾತಿ ವ್ಯವಸ್ಥೆಯು ಕೇವಲ ಒಂದು ಸಾಮಾಜಿಕ ಕಟ್ಟುಪಾಡಾಗಿರಲಿಲ್ಲ, ಅದು ವ್ಯವಸ್ಥಿತವಾಗಿ ಸೃಷ್ಟಿಸಲ್ಪಟ್ಟ ದಬ್ಬಾಳಿಕೆಯ ಸಾಧನವಾಗಿತ್ತು. ಚಾತುರ್ವರ್ಣ ವ್ಯವಸ್ಥೆಯನ್ನು ಮನುವಾದಿಗಳು ಈ ದೇಶದಲ್ಲಿ ಉದ್ದೇಶಪೂರ್ವಕವಾಗಿ ಸೃಷ್ಟಿ ಮಾಡಿದರು. ಇದರ ಮೂಲಕ ಶೂದ್ರರು ಮತ್ತು ಶೋಷಿತ ಸಮುದಾಯಗಳನ್ನು ಅಕ್ಷರ ಸಂಸ್ಕೃತಿಯಿಂದ ಮತ್ತು ಅಧಿಕಾರದಿಂದ ದಶಕಗಳ ಕಾಲ ದೂರವಿಡಲಾಯಿತು ಎಂದರು.

ಶೂದ್ರ ಸಮುದಾಯವು ತಲೆಮಾರುಗಳ ಕಾಲ ಶಿಕ್ಷಣ ಮತ್ತು ಅವಕಾಶಗಳಿಂದ ವಂಚಿತವಾಗಿದ್ದರಿಂದ, ಇಂದಿಗೂ ಮೇಲ್ವರ್ಗದವರೊಂದಿಗೆ ಸಮಾನವಾಗಿ ಸ್ಪರ್ಧಿಸುವುದು ಕಷ್ಟಕರವಾಗಿದೆ. ಅಕ್ಷರ ವಂಚಿತರಿಗೆ ಅಕ್ಷರ ಕಲಿತವರಿಂದ ಸೋಲಾಗುವುದು ಸಹಜ. ಆದರೆ ಈ ಸೋಲು ಶಾಶ್ವತವಲ್ಲ, ಸಮಾನ ಅವಕಾಶಗಳು ಸಿಕ್ಕಾಗ ಅಸಮಾನತೆಯನ್ನು ಹೋಗಲಾಡಿಸಬಹುದು ಎಂದು ನುಡಿದರು.

ವಿದ್ಯಾವಂತರ ಪಾತ್ರ ಮತ್ತು ಮೌಢ್ಯ

ಸಿದ್ದರಾಮಯ್ಯ ಅವರು ತಮ್ಮ ಸರ್ಕಾರದ ಸಾಧನೆಗಳನ್ನು ವಿವಿಸಿ, ಮೌಢ್ಯ ಪ್ರತಿಬಂಧಕ ಕಾಯಿದೆಯನ್ನು ಜಾರಿಗೆ ತಂದಿದ್ದನ್ನು ಉಲ್ಲೇಖಿಸಿದರು. ಆದರೆ, ಕಾಯಿದೆಗಳು ಕೇವಲ ಕಾಗದದ ಮೇಲೆ ಉಳಿದರೆ ಸಾಲದು, ಮನಸ್ಥಿತಿ ಬದಲಾಗಬೇಕು. ಮುಖ್ಯಮಂತ್ರಿಯಾಗಿದ್ದಾಗ ಮೌಢ್ಯ ಪ್ರತಿಬಂಧಕ ಕಾಯಿದೆ ಜಾರಿಗೆ ತರಲಾಯಿತು. ಆದರೆ ಅದು ಸಮರ್ಪಕವಾಗಿ ಜಾರಿಗೆ ಬಂದಿಲ್ಲ. ಇದಕ್ಕೆ ವಿದ್ಯಾವಂತ ವರ್ಗವೇ ಕಾರಣ. ಇಂದಿನ ವಿದ್ಯಾವಂತರು ಹೆಚ್ಚಿನ ಪ್ರಮಾಣದಲ್ಲಿ ಕಂದಾಚಾರ ಮತ್ತು ಮೌಢ್ಯಗಳನ್ನು ಪಾಲಿಸುತ್ತಿದ್ದಾರೆ. ವೈಜ್ಞಾನಿಕವಾಗಿ ಆಲೋಚಿಸಬೇಕಾದ ವಿದ್ಯಾವಂತರೇ ಮೌಢ್ಯಗಳನ್ನು ಮೈಗೂಡಿಸಿಕೊಂಡರೆ ಸಮಾಜ ಬದಲಾಗುವುದು ಹೇಗೆ? ಎಂದು ಪ್ರಶ್ನಿಸಿದರು.

ಸಂವಿಧಾನದ ಆಶಯ ಮತ್ತು ವೈಚಾರಿಕತೆ

ಬುದ್ಧ, ಬಸವಣ್ಣ ಮತ್ತು ಡಾ. ಬಿ.ಆರ್. ಅಂಬೇಡ್ಕರ್ ಅವರ ಸಿದ್ಧಾಂತಗಳನ್ನು ಪ್ರತಿಪಾದಿಸಿದ ಸಿದ್ದರಾಮಯ್ಯ, ಸಂವಿಧಾನದ ಮೂಲ ಆಶಯವೇ ಅಸಮಾನತೆ ತೊಲಗಿ ಸಮ ಸಮಾಜ ನಿರ್ಮಾಣವಾಗಬೇಕು ಎಂಬುದು. ಇಂದಿನ ಯುವ ಪೀಳಿಗೆ ವೈಜ್ಞಾನಿಕತೆ ಮತ್ತು ವೈಚಾರಿಕತೆಯನ್ನು ಬೆಳೆಸಿಕೊಳ್ಳಬೇಕು. ಜಾತಿ ವ್ಯವಸ್ಥೆಯು ಕೇವಲ ದ್ವೇಷದ ಸಂಕೇತವಾಗಿದೆ. ಜಾತೀಯತೆ ತೊಲಗಬೇಕಾದರೆ ಸಮಾಜದಲ್ಲಿ ಸಮಾನ ಮನಸ್ಕರು ಒಂದಾಗಬೇಕು. ಭಾರತವನ್ನು ಬ್ರಿಟಿಷರು ಸುದೀರ್ಘಕಾಲ ಆಳಲು ನಮ್ಮಲ್ಲಿನ ಜಾತಿ ಆಧಾರಿತ ಭಿನ್ನಾಭಿಪ್ರಾಯಗಳೇ ಕಾರಣ. ನಮ್ಮಲ್ಲಿನ ಒಡಕನ್ನೇ ಬ್ರಿಟಿಷರು ಬಳಸಿಕೊಂಡರು. ಪಟ್ಟಭದ್ರ ಹಿತಾಸಕ್ತಿಗಳು ನಮ್ಮನ್ನು ಒಂದಾಗಲು ಬಿಡುವುದಿಲ್ಲ, ಏಕೆಂದರೆ ಅವರು ನಮ್ಮಲ್ಲಿನ ಜಾತಿ ವೈಷಮ್ಯದಿಂದಲೇ ಲಾಭ ಪಡೆಯುತ್ತಾರೆ. ಈ ಎಲ್ಲ ಭಿನ್ನಾಭಿಪ್ರಾಯಗಳನ್ನು ಮರೆತು ಶೂದ್ರರು ಮತ್ತು ಇತರ ಶೋಷಿತ ವರ್ಗಗಳು ಒಂದಾಗಬೇಕು ಎಂದು ಹೇಳಿದರು.

Read More
Next Story