ಜಾತಿ ಗಣತಿ, ಒಳ ಮೀಸಲಾತಿ: ಅಧಿಕಾರದಲ್ಲಿದ್ದಾಗ ನಿರ್ಲಕ್ಷ್ಯ, ಈಗ ರಾಜಕೀಯ ತಂತ್ರಗಾರಿಕೆ
ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಸಿದ್ದರಾಮಯ್ಯ ಅವರು, "ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಜನಸಂಖ್ಯೆ ಆಧಾರದ ಮೇಲೆ ಶೇ.75ರಷ್ಟು ಮೀಸಲಾತಿ ಸಿಗಬೇಕು. ಜಾತಿ ಸಮೀಕ್ಷೆ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು" ಎಂದು ಒತ್ತಾಯಿಸಿದ್ದರು.
ಸಾಮಾಜಿಕ ನ್ಯಾಯದ ಹರಿಕಾರ, 'ಅಹಿಂದ' ಸಮುದಾಯಗಳ ನಾಯಕ ಎಂದೇ ಗುರುತಿಸಿಕೊಂಡಿರುವ ಮಾಜಿ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರು, ಅಧಿಕಾರದಿಂದ ಕೆಳಗಿಳಿದ ಬಳಿಕ ಜಾತಿ ಜನಗಣತಿ ಹಾಗೂ ಒಳ ಮೀಸಲಾತಿ ಕುರಿತು ನೀಡುತ್ತಿರುವ ಹೇಳಿಕೆಗಳು ರಾಜ್ಯ ರಾಜಕೀಯದಲ್ಲಿ ತೀವ್ರ ಚರ್ಚೆ ಮತ್ತು ಟೀಕೆಗಳಿಗೆ ಗ್ರಾಸವಾಗಿವೆ.
ಇತ್ತೀಚೆಗೆ ನಡೆದ ಹಿಂದುಳಿದ ವರ್ಗಗಳ ಸಮಾವೇಶದಲ್ಲಿ ಮಾತನಾಡಿದ್ದ ಸಿದ್ದರಾಮಯ್ಯ, "ದಲಿತರು, ಹಿಂದುಳಿದವರು ಹಾಗೂ ಅಲ್ಪಸಂಖ್ಯಾತರಿಗೆ ಜನಸಂಖ್ಯೆ ಆಧಾರದ ಮೇಲೆ ಶೇ.75ರಷ್ಟು ಮೀಸಲಾತಿ ಸಿಗಬೇಕು. ಜಾತಿ ಸಮೀಕ್ಷೆ ವರದಿಯನ್ನು ಶೀಘ್ರ ಜಾರಿಗೊಳಿಸಬೇಕು" ಎಂದು ಒತ್ತಾಯಿಸಿದ್ದರು. ಆದರೆ, ಸುದೀರ್ಘ ಕಾಲ ಮುಖ್ಯಮಂತ್ರಿಯಾಗಿ ಅಧಿಕಾರದಲ್ಲಿದ್ದಾಗ ಈ ವರದಿಗಳ ಜಾರಿಗೆ ದಿಟ್ಟ ನಿರ್ಧಾರ ಕೈಗೊಳ್ಳದವರು, ಈಗ ಅಧಿಕಾರ ಕಳೆದುಕೊಂಡ ಮೇಲೆ ಧ್ವನಿ ಎತ್ತುತ್ತಿರುವುದು ರಾಜಕೀಯ ತಂತ್ರಗಾರಿಕೆಯೇ ಎಂಬ ಪ್ರಶ್ನೆಗಳು ಎದ್ದಿವೆ.
ಜಾತಿಗಣತಿಗೆ ನೂರಾರು ಕೋಟಿ ಖರ್ಚು; ಫಲಿತಾಂಶ ಶೂನ್ಯ
ಹಿಂದುಳಿದ ವರ್ಗಗಳ ಕಲ್ಯಾಣಕ್ಕಾಗಿ ಕೈಗೊಂಡ ಸಮೀಕ್ಷೆಗಳು ರಾಜಕೀಯ ಇಚ್ಛಾಶಕ್ತಿಯ ಕೊರತೆ ಹಾಗೂ ಕಾನೂನು ತೊಡಕುಗಳಿಂದಾಗಿ ಧೂಳು ಹಿಡಿಯುತ್ತಿವೆ. 2015ರಲ್ಲಿ ಕಾಂತರಾಜು ಆಯೋಗವು ಜಾತಿ ಸಮೀಕ್ಷೆಗಾಗಿ 192 ಕೋಟಿ ರೂ. ಖರ್ಚು ಮಾಡಿ ಪೂರ್ಣಗೊಳಿಸಿತ್ತು. ಆದರೆ, ಆ ಸಮೀಕ್ಷೆಗೆ ಸದಸ್ಯ ಕಾರ್ಯದರ್ಶಿ ಸಹಿ ಮಾಡದ ಹಿನ್ನೆಲೆ ಕಾನೂನು ತೊಡಕು ಎದುರಾಗಿತ್ತು. ಆ ಬಳಿಕ ಲಿಂಗಾಯತ ಮತ್ತು ಒಕ್ಕಲಿಗ ಸಮುದಾಯಗಳ ವಿರೋಧ ಹಾಗೂ 2018ರ ಚುನಾವಣೆ ಕಾರಣಕ್ಕೆ ಈ ವರದಿಯನ್ನು ಸ್ವೀಕರಿಸಲು ಸರ್ಕಾರಗಳು ಹಿಂದೇಟು ಹಾಕಿದವು.
ತದನಂತರ ಬಂದ ಹೆಚ್.ಡಿ. ಕುಮಾರಸ್ವಾಮಿ, ಬಿ.ಎಸ್. ಯಡಿಯೂರಪ್ಪ, ಬಸವರಾಜ ಬೊಮ್ಮಾಯಿ ನೇತೃತ್ವದ ಸರ್ಕಾರಗಳೂ ಪ್ರಬಲ ಸಮುದಾಯಗಳ ಅಸಮಾಧಾನಕ್ಕೆ ಹೆದರಿ ವರದಿ ಮುಟ್ಟಲಿಲ್ಲ. 2023ರಲ್ಲಿ ಮತ್ತೆ ಅಧಿಕಾರಕ್ಕೆ ಬಂದ ಸಿದ್ದರಾಮಯ್ಯ ಸರ್ಕಾರವು ಜಯಪ್ರಕಾಶ್ ಹೆಗ್ಡೆ ನೇತೃತ್ವದಲ್ಲಿ ಆಯೋಗಕ್ಕೆ ಕಾಂತರಾಜು ವರದಿ ಪರಿಷ್ಕರಣೆಯ ಜವಾಬ್ದಾರಿ ನೀಡಲಾಯಿತು. ಹೆಗ್ಡೆ ಆಯೋಗವು ವರದಿ ಸಲ್ಲಿಸಿತಾದರೂ, ಕಾಂಗ್ರೆಸ್ ಹೈಕಮಾಂಡ್ ಪ್ರಬಲ ವೋಟ್ ಬ್ಯಾಂಕ್ಗಳ ಒತ್ತಡಕ್ಕೆ ಮಣಿದು ಹೊಸ ಸಮೀಕ್ಷೆಗೆ ಸೂಚಿಸಿತು. ಇದರಿಂದ ಒಟ್ಟು 192 ಕೋಟಿ ವ್ಯರ್ಥವಾಯಿತು.
ತದನಂತರ ಸುಮಾರು ₹600 ಕೋಟಿ ವೆಚ್ಚದಲ್ಲಿ ಮಧುಸೂದನ್ ನಾಯಕ್ ನೇತೃತ್ವದಲ್ಲಿ ಆ್ಯಪ್ ಆಧಾರಿತ ಹೊಸ ಸಮೀಕ್ಷೆ ನಡೆಸಿ, ಸಿದ್ದರಾಮಯ್ಯ ಅವರು ಸಿಎಂ ಸ್ಥಾನದಿಂದ ಕೆಳಗಿಳಿಯುವ ಮುನ್ನ ವರದಿ ಸ್ವೀಕರಿಸಿದರೂ, ಅದು ಜಾರಿಯಾಗಿಲ್ಲ. ಒಟ್ಟಾರೆ ನೂರಾರು ಕೋಟಿಗೂ ಅಧಿಕ ಸಾರ್ವಜನಿಕ ತೆರಿಗೆ ಹಣ ಪೋಲಾಯಿತೇ ಹೊರತು ಶೋಷಿತ ಸಮುದಾಯಗಳಿಗೆ ಸಿಕ್ಕ ಪ್ರಯೋಜನ ಮಾತ್ರ ಶೂನ್ಯ.
ಇನ್ನು 2005ರಲ್ಲಿ ರಚನೆಯಾದ ನ್ಯಾ. ಎ.ಜೆ. ಸದಾಶಿವ ಆಯೋಗದ ವರದಿ ದಶಕಗಳ ಕಾಲ ಮೂಲೆಗುಂಪಾಗಿತ್ತು. ಸುಪ್ರೀಂಕೋರ್ಟ್ ರಾಜ್ಯಗಳಿಗೆ ಅಧಿಕಾರ ನೀಡಿದ ಬಳಿಕ, ಸಿದ್ದರಾಮಯ್ಯ ನೇತೃತ್ವದ ಸರ್ಕಾರವು ನ್ಯಾ. ನಾಗಮೋಹನ ದಾಸ್ ಸಾರಥ್ಯದಲ್ಲಿ ಸಮೀಕ್ಷೆ ನಡೆಸಿ 5 ಗುಂಪುಗಳಾಗಿ ವರ್ಗೀಕರಿಸಿತ್ತು. ಆದರೆ, ಸಂಪುಟ ಸಭೆಯಲ್ಲಿ ರಾಜಕೀಯ ಸಮತೋಲನದ ನೆಪವೊಡ್ಡಿ ಐದು ಗುಂಪುಗಳನ್ನು 3 ಗುಂಪುಗಳಿಗೆ ಇಳಿಸಿದ್ದು ಕಾನೂನು ಸಮರಕ್ಕೆ ದಾರಿ ಮಾಡಿಕೊಟ್ಟಿತು. ಜತೆಗೆ ಒಟ್ಟು ಮೀಸಲಾತಿ ಪ್ರಮಾಣವನ್ನು ಶೇ. 56ಕ್ಕೆ ಹೆಚ್ಚಿಸಿದ ಕ್ರಮವನ್ನು ನ್ಯಾಯಾಲಯದಲ್ಲಿ ಸರಿಯಾಗಿ ಸಮರ್ಥಿಸಿಕೊಳ್ಳುವಲ್ಲಿ ಸರ್ಕಾರ ಎಡವಿದ್ದರಿಂದ ವಿಷಯ ಇನ್ನೂ ನ್ಯಾಯಾಂಗ ಪರಿಶೀಲನೆಯಲ್ಲೇ ಉಳಿದಿದೆ.
ಶೇ. 50ರ ಮೀಸಲಾತಿ ಮಿತಿ ಮತ್ತು ನ್ಯಾಯಾಲಯಗಳ ಸವಾಲುಗಳ ಸ್ಪಷ್ಟ ಅರಿವಿದ್ದರೂ, ಅಧಿಕಾರದಲ್ಲಿದ್ದಾಗ ನಿರ್ಣಾಯಕ ಹೆಜ್ಜೆ ಇಡದ ನಾಯಕರು, ಅಧಿಕಾರದ ಇಳಿಜಾರಿನಲ್ಲಿ 'ಅಹಿಂದ ನಾಯಕ' ಎಂಬ ಬಿರುದು ಹಾಗೂ ವೋಟ್ ಬ್ಯಾಂಕ್ ಉಳಿಸಿಕೊಳ್ಳಲು ಈ ರೀತಿ ಪ್ರತಿಪಾದಿಸುತ್ತಿರುವುದು ಸಾಮಾಜಿಕ ಕಾಳಜಿಗಿಂತ ಚುನಾವಣಾ ತಂತ್ರಗಾರಿಕೆಯಂತೆ ಗೋಚರಿಸುತ್ತಿದೆ ಎಂಬುದು ರಾಜಕೀಯ ವಿಶ್ಲೇಷಕರ ಅಭಿಪ್ರಾಯ.

