ಹಾಸ್ಟೆಲ್ ಊಟದ ಗುಣಮಟ್ಟದಲ್ಲಿ ರಾಜಿಯಿಲ್ಲ: ಅಧಿಕಾರಿಗಳಿಗೆ ಸಚಿವ ತಂಗಡಗಿ ಸೂಚನೆ
x

ಹಾಸ್ಟೆಲ್ ಊಟದ ಗುಣಮಟ್ಟದಲ್ಲಿ ರಾಜಿಯಿಲ್ಲ: ಅಧಿಕಾರಿಗಳಿಗೆ ಸಚಿವ ತಂಗಡಗಿ ಸೂಚನೆ

ಹಾಸ್ಟೆಲ್‌ನ ಅಡುಗೆಮನೆ, ಶೌಚಾಲಯಗಳ ಸ್ವಚ್ಛತೆ, ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಸಚಿವರು ತಪಾಸಣೆ ನಡೆಸಿದರು. ಗ್ರಂಥಾಲಯಕ್ಕೆ ತೆರಳಿ ಶೈಕ್ಷಣಿಕ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದರು.


Click the Play button to hear this message in audio format

ಹಿಂದುಳಿದ ವರ್ಗಗಳ ಕಲ್ಯಾಣ ಇಲಾಖೆಯಡಿ ಕಾರ್ಯನಿರ್ವಹಿಸುತ್ತಿರುವ ವಿದ್ಯಾರ್ಥಿ ನಿಲಯಗಳು ಕೇವಲ ಸರ್ಕಾರಿ ಕಟ್ಟಡಗಳಾಗಬಾರದು, ಅವು ವಿದ್ಯಾರ್ಥಿಗಳ ಪಾಲಿನ ಪೋಷಕರ ಆಸರೆಯಾಗಬೇಕು. ವಾರ್ಡನ್‌ಗಳು ಕರ್ತವ್ಯದಲ್ಲಿ ನಿರ್ಲಕ್ಷ್ಯ ತೋರಿದರೆ ಅಥವಾ ಹಾಸ್ಟೆಲ್‌ಗಳಿಗೆ ಭೇಟಿ ನೀಡಿ ವಿದ್ಯಾರ್ಥಿಗಳ ಸಮಸ್ಯೆ ಆಲಿಸದಿದ್ದರೆ ಅಂತಹ ಅಧಿಕಾರಿಗಳನ್ನು ಅಮಾನತು ಮಾಡುವುದಾಗಿ ಹಿಂದುಳಿದ ವರ್ಗಗಳ ಕಲ್ಯಾಣ ಸಚಿವ ಶಿವರಾಜ್ ತಂಗಡಗಿ ಎಚ್ಚರಿಕೆ ನೀಡಿದ್ದಾರೆ.

ಮೈಸೂರಿನ ಕುವೆಂಪು ನಗರದಲ್ಲಿರುವ ಹಿಂದುಳಿದ ವರ್ಗಗಳ ಬಾಲಕ ಮತ್ತು ಬಾಲಕಿಯರ ವಿದ್ಯಾರ್ಥಿ ನಿಲಯಕ್ಕೆ ದಿಢೀರ್ ಭೇಟಿ ನೀಡಿ, ಅಲ್ಲಿನ ವ್ಯವಸ್ಥೆಗಳನ್ನು ಖುದ್ದಾಗಿ ಪರಿಶೀಲಿಸಿ ಅಧಿಕಾರಿಗಳಿಗೆ ಚಾಟಿ ಬೀಸಿದರು. ಪೂರ್ವನಿಗದಿತ ಕಾರ್ಯಕ್ರಮಗಳ ನಡುವೆಯೂ ಸಚಿವರು ಹಾಸ್ಟೆಲ್‌ಗೆ ಅನಿರೀಕ್ಷಿತ ಭೇಟಿ ನೀಡುವ ಮೂಲಕ ಅಧಿಕಾರಿಗಳಲ್ಲಿ ನಡುಕ ಹುಟ್ಟಿಸಿದರು. ಹಾಸ್ಟೆಲ್‌ನ ಅಡುಗೆಮನೆ, ಊಟದ ವ್ಯವಸ್ಥೆ, ಕೊಠಡಿಗಳು, ಶೌಚಾಲಯಗಳ ಸ್ವಚ್ಛತೆ ಮತ್ತು ಕುಡಿಯುವ ನೀರಿನ ಸೌಲಭ್ಯಗಳ ಬಗ್ಗೆ ಸಚಿವರು ತೀವ್ರ ತಪಾಸಣೆ ನಡೆಸಿದರು. ಅಷ್ಟೇ ಅಲ್ಲದೆ, ಗ್ರಂಥಾಲಯಕ್ಕೆ ತೆರಳಿ ವಿದ್ಯಾರ್ಥಿಗಳಿಗೆ ಸಿಗುತ್ತಿರುವ ಶೈಕ್ಷಣಿಕ ಸೌಲಭ್ಯಗಳ ಬಗ್ಗೆಯೂ ಮಾಹಿತಿ ಪಡೆದರು.

ವಾರ್ಡನ್‌ಗಳಿಗೆ ಕಠಿಣ ಸೂಚನೆ ನೀಡಿದ ಸಚಿವರು, ತಿಂಗಳುಗಟ್ಟಲೆ ಪೋಷಕರನ್ನು ಬಿಟ್ಟು ಶಿಕ್ಷಣಕ್ಕಾಗಿ ಬಂದಿರುವ ಮಕ್ಕಳಿಗೆ ನೀವು ಪೋಷಕರಿದ್ದಂತೆ. ವಾರ್ಡನ್‌ಗಳು ಮಕ್ಕಳೊಂದಿಗೆ ಕುಳಿತು ಊಟ ಮಾಡಬೇಕು. ಆಗ ಮಾತ್ರ ಅವರಿಗೆ ನೀಡಲಾಗುತ್ತಿರುವ ಆಹಾರದ ಗುಣಮಟ್ಟದ ಅರಿವಾಗುತ್ತದೆ. ಮಕ್ಕಳೊಂದಿಗೆ ಮಕ್ಕಳಾಗಿ ಬೆರೆತು ಅವರ ಸಮಸ್ಯೆಗಳನ್ನು ಆಲಿಸುವುದು ನಿಮ್ಮ ಆದ್ಯ ಕರ್ತವ್ಯ. ಹಾಸ್ಟೆಲ್ ನಿರ್ವಹಣೆಯಲ್ಲಿ ಯಾವುದೇ ರಾಜಿ ಇಲ್ಲ, ನಿರ್ಲಕ್ಷ್ಯ ವಹಿಸಿದರೆ ಕಠಿಣ ಕ್ರಮ ಜರುಗಿಸಲಾಗುವುದು ಎಂದು ಎಚ್ಚರಿಸಿದರು.

ಆಹಾರದ ಗುಣಮಟ್ಟದಲ್ಲಿ ರಾಜಿಯಿಲ್ಲ

ವಿದ್ಯಾರ್ಥಿಗಳಿಗೆ ಪ್ರತಿನಿತ್ಯ ಪೌಷ್ಟಿಕ ಮತ್ತು ಗುಣಮಟ್ಟದ ಆಹಾರ ಸಿಗಬೇಕು. ಇದರಲ್ಲಿ ಯಾವುದೇ ಕಾರಣಕ್ಕೂ ರಾಜಿ ಮಾಡಿಕೊಳ್ಳಬಾರದು. ಆಹಾರದ ಗುಣಮಟ್ಟದ ಬಗ್ಗೆ ಸಾರ್ವಜನಿಕರು ಅಥವಾ ವಿದ್ಯಾರ್ಥಿಗಳಿಂದ ದೂರು ಬಂದರೆ ಗಂಭೀರವಾಗಿ ಪರಿಗಣಿಸಲಾಗುವುದು ಎಂದರು. ಹಾಸ್ಟೆಲ್‌ನ ವಾರ್ಡನ್‌ಗಳನ್ನು ಹೊರಗೆ ಕಳುಹಿಸಿ, ವಿದ್ಯಾರ್ಥಿಗಳೊಂದಿಗೆ ಸಂವಾದ ನಡೆಸಿದರು. ವಿದ್ಯಾರ್ಥಿಗಳ ಬಳಿ ಊಟದ ವ್ಯವಸ್ಥೆ, ಶುಚಿತ್ವ ಮತ್ತು ಇತರ ಸೌಲಭ್ಯಗಳ ಬಗ್ಗೆ ನೇರ ಪ್ರಶ್ನೆಗಳನ್ನು ಕೇಳಿ ಮಾಹಿತಿ ಸಂಗ್ರಹಿಸಿದರು. ವಾರ್ಡನ್‌ಗಳ ಉಪಸ್ಥಿತಿ ಇಲ್ಲದ ಕಾರಣ, ವಿದ್ಯಾರ್ಥಿಗಳು ಯಾವುದೇ ಮುಚ್ಚುಮರೆಯಿಲ್ಲದೆ ತಮ್ಮ ಸಮಸ್ಯೆಗಳನ್ನು ಸಚಿವರ ಮುಂದಿಟ್ಟರು.

'ವಿದ್ಯಾ ವಾಹಿನಿ' – ಶೈಕ್ಷಣಿಕ ಕ್ರಾಂತಿಯತ್ತ ಚಿಂತನೆ

ಹಾಸ್ಟೆಲ್‌ನ ಶೈಕ್ಷಣಿಕ ಚಟುವಟಿಕೆಗಳ ಬಗ್ಗೆ ಮಾಹಿತಿ ನೀಡಿದ ಅಧಿಕಾರಿಗಳು, 'ವಿದ್ಯಾ ವಾಹಿನಿ' ಕಾರ್ಯಕ್ರಮದ ಕುರಿತು ಸಚಿವರಿಗೆ ವಿವರಣೆ ನೀಡಿದರು. ಈ ಕಾರ್ಯಕ್ರಮದಡಿ ಹಿರಿಯ ವಿದ್ಯಾರ್ಥಿಗಳು ಪಿಯುಸಿ ವ್ಯಾಸಂಗ ಮಾಡುತ್ತಿರುವ ವಿದ್ಯಾರ್ಥಿಗಳಿಗೆ ಅಗತ್ಯ ವಿಷಯಗಳಲ್ಲಿ ಟ್ಯೂಷನ್ ನೀಡುವ ವ್ಯವಸ್ಥೆ ಮಾಡಲಾಗುತ್ತಿದೆ. ಇದು ವಿದ್ಯಾರ್ಥಿಗಳ ಶೈಕ್ಷಣಿಕ ಪ್ರಗತಿಗೆ ಭಾರಿ ಸಹಾಯವಾಗಲಿದೆ ಎಂದು ಸಚಿವರ ಗಮನಕ್ಕೆ ತಂದರು.

ವಿದ್ಯಾರ್ಥಿಗಳ ರಕ್ಷಣೆಗೆ ಹೆಚ್ಚಿನ ಆದ್ಯತೆ ನೀಡುವಂತೆ ಸೂಚನೆ ನೀಡಿದ ಸಚಿವರು, "ವಿದ್ಯಾರ್ಥಿಗಳಿಗೆ ಕಾಲಕಾಲಕ್ಕೆ ವೈದ್ಯಕೀಯ ತಪಾಸಣೆ ಮಾಡಿಸುವುದು ಕಡ್ಡಾಯ. ಪ್ರತಿಯೊಬ್ಬ ವಿದ್ಯಾರ್ಥಿಗೂ ಶುಚಿತ್ವ ಕಿಟ್‌ಗಳನ್ನು ಸರಿಯಾದ ಸಮಯಕ್ಕೆ ತಲುಪಿಸಬೇಕು. ಈ ಕಿಟ್‌ಗಳ ವಿತರಣೆಯಲ್ಲಿ ಯಾವುದೇ ಲೋಪವಾದರೂ ಸಂಬಂಧಪಟ್ಟ ಅಧಿಕಾರಿಗಳನ್ನೇ ಹೊಣೆಗಾರರನ್ನಾಗಿ ಮಾಡಲಾಗುವುದು" ಎಂದು ಎಚ್ಚರಿಸಿದರು. ವಿದ್ಯಾರ್ಥಿಗಳ ಶಿಕ್ಷಣ ಮತ್ತು ಅವರ ಭವಿಷ್ಯ ರೂಪಿಸುವುದು ಸರ್ಕಾರದ ಮುಖ್ಯ ಆದ್ಯತೆ. ಸರ್ಕಾರ ಒದಗಿಸುತ್ತಿರುವ ಸೌಲಭ್ಯಗಳು ವಿದ್ಯಾರ್ಥಿಗಳಿಗೆ ಸಮರ್ಪಕವಾಗಿ ತಲುಪಬೇಕು. ಅಧಿಕಾರಿಗಳು ಕಚೇರಿಯಲ್ಲಿ ಕುಳಿತು ಕೇವಲ ಕಡತ ವಿಲೇವಾರಿ ಮಾಡಿದರೆ ಸಾಲದು, ಕ್ಷೇತ್ರ ಮಟ್ಟಕ್ಕೆ ಬಂದು ಪರಿಶೀಲನೆ ನಡೆಸಬೇಕು. ವ್ಯವಸ್ಥೆಯಲ್ಲಿ ಯಾವುದೇ ರೀತಿಯ ಅವ್ಯವಸ್ಥೆ ಅಥವಾ ಗುಣಮಟ್ಟದ ಕೊರತೆಯನ್ನು ಸಹಿಸಲು ಸರ್ಕಾರ ಸಿದ್ಧವಿಲ್ಲ ಎಂದು ಹೇಳಿದರು.

Read More
Next Story