
ಬಿಜೆಪಿ ಮುಗಿಸಲು ಹೊರಟವರೇ ಈಗ ‘ರಕ್ಷಕರು’?: ಸಚಿವ ಶಿವರಾಜ್ ತಂಗಡಗಿ ಲೇವಡಿ
ಇದು ಜನರಿಗಾಗಿ ಅಥವಾ ಪಕ್ಷಕ್ಕಾಗಿ ನಡೆಯುತ್ತಿರುವ ಯಾತ್ರೆಯಲ್ಲ, ಬದಲಾಗಿ ತಮ್ಮ ಮೇಲಿರುವ ಪ್ರಕರಣಗಳಿಂದ ಪಾರಾಗಲು ನಡೆಸುತ್ತಿರುವ ರಾಜಕೀಯ ಪ್ರಾಯಶ್ಚಿತ್ತ ಯಾತ್ರೆ ಎಂಬ ಆರೋಪಗಳು ಕೇಳಿಬಂದಿವೆ.
ರಾಜ್ಯ ಬಿಜೆಪಿಯ ನಾಯಕರು ಕೈಗೊಂಡಿರುವ ಪಾದಯಾತ್ರೆಯನ್ನು ಹಿಂದುಳಿದ ವರ್ಗಗಳ ಸಚಿವ ಶಿವರಾಜ್ ತಂಗಡಗಿ ವ್ಯಂಗ್ಯ ಮಾಡಿದ್ದು, ಸ್ವತಃ ಬಿಜೆಪಿ ಕಾರ್ಯಕರ್ತರಲ್ಲಿಯೇ ಗೊಂದಲ ಮತ್ತು ಅನುಮಾನಗಳನ್ನು ಮೂಡಿಸಿದೆ ಎಂದು ಟೀಕಿಸಿದ್ದಾರೆ. ಈ ಸಂಬಂಧ ಸಾಮಾಜಿಕ ಜಾಲತಾಣ ಎಕ್ಸ್‌ನಲ್ಲಿ ಅವರು ಬಿಜೆಪಿ ಅಂತಿಮ ಸಂಹಾರಕ್ಕೆ ಹೊರಟಿದ್ದವರೇ ಇಂದು ಬಿಜೆಪಿಯ ರಕ್ಷಕರೆಂದು ನಾಟಕವಾಡುವ ಮೂಲಕ ನಡೆಸುತ್ತಿರುವ ಈ ಯಾತ್ರೆಯು ಬಿಜೆಪಿಯ “ಉಪಸಂಹಾರ ಯಾತ್ರೆ” ಎಂದು ವಾಗ್ದಾಳಿ ನಡೆಸಿದ್ದಾರೆ.
ಬಿ.ವೈ. ವಿಜಯೇಂದ್ರ, ಗಾಲಿ ಜನಾರ್ದನ ರೆಡ್ಡಿ ಮತ್ತು ಬಿ. ಶ್ರೀರಾಮುಲು – ಈ ಮೂವರು ನಾಯಕರು ಇಂದು ಬಿಜೆಪಿಯ ಮುಂಚೂಣಿಯಲ್ಲಿ ನಿಂತು ಪಾದಯಾತ್ರೆ ಮಾಡುತ್ತಿದ್ದಾರೆ. ಆದರೆ, ಇತಿಹಾಸವನ್ನು ಕೆದಕಿದರೆ ಇವರ ನಡೆಗಳು ಪಕ್ಷಕ್ಕೆ ದ್ರೋಹ ಬಗೆದಂತೆಯೇ ಕಾಣುತ್ತವೆ. ಬಿ.ವೈ. ವಿಜಯೇಂದ್ರ ಅವರ ತಂದೆ ಬಿ.ಎಸ್. ಯಡಿಯೂರಪ್ಪ ಅವರು ಕೆಜೆಪಿ (ಕರ್ನಾಟಕ ಜನತಾ ಪಕ್ಷ) ಸ್ಥಾಪಿಸಿ ಬಿಜೆಪಿಯನ್ನು ಅತಂತ್ರಗೊಳಿಸಿದ್ದರ ಹಿಂದಿನ ಸೂತ್ರಧಾರಿಗಳಲ್ಲಿ ಒಬ್ಬರು. ಇನ್ನು ಬಿ. ಶ್ರೀರಾಮುಲು ಅವರು ಬಿ.ಎಸ್.ಆರ್ ಕಾಂಗ್ರೆಸ್ ಪಕ್ಷ ಕಟ್ಟಿ ಬಿಜೆಪಿ ವಿರುದ್ಧವೇ ತೊಡೆ ತಟ್ಟಿದ್ದವರು. ಅಷ್ಟೇ ಅಲ್ಲ, ಪಕ್ಷದ ಹೆಸರಿನಲ್ಲೇ ‘ಕಾಂಗ್ರೆಸ್’ ಪದವನ್ನು ಬಳಸುವ ಮೂಲಕ ಬಿಜೆಪಿಯನ್ನು ನಿರ್ನಾಮ ಮಾಡಲು ಪ್ರಯತ್ನಿಸಿದ್ದರು. ಗಾಲಿ ಜನಾರ್ದನ ರೆಡ್ಡಿ ಅವರ ಕಲ್ಯಾಣ ರಾಜ್ಯ ಪ್ರಗತಿ ಪಕ್ಷದ ಕಥೆಯಂತೂ ಎಲ್ಲರಿಗೂ ತಿಳಿದಿದೆ. ಇವರು ಕೇವಲ ಪಕ್ಷ ಕಟ್ಟಿದ್ದಲ್ಲ, ಬಳ್ಳಾರಿಯಲ್ಲಿ ಬಿಜೆಪಿಯ ಅಭ್ಯರ್ಥಿಗಳನ್ನು ಸೋಲಿಸಲು ಸ್ವಂತ ಪತ್ನಿಯನ್ನು ಕಣಕ್ಕಿಳಿಸಿ, ಪಕ್ಷದ ನಿಷ್ಠಾವಂತರನ್ನು ಮಣ್ಣು ಮುಕ್ಕಿಸಿದ್ದ ಸಾಧಕರು ಎಂದು ವಾಗ್ದಾಳಿ ನಡೆಸಿದ್ದಾರೆ.
ಪಶ್ಚಾತ್ತಾಪ ಯಾತ್ರೆಯೋ ಅಥವಾ ಅಸ್ತಿತ್ವದ ಉಳಿವಿನ ಹೋರಾಟವೋ?
ಈ ಮೂವರು ನಾಯಕರು ಇಂದು ಪಾದಯಾತ್ರೆ ನಡೆಸುತ್ತಿರುವ ರೀತಿ ನೋಡಿದರೆ, ಇದು ಜನರಿಗಾಗಿ ಅಥವಾ ಪಕ್ಷಕ್ಕಾಗಿ ನಡೆಯುತ್ತಿರುವ ಯಾತ್ರೆಯಲ್ಲ, ಬದಲಾಗಿ ತಮ್ಮ ಮೇಲಿರುವ ಪ್ರಕರಣಗಳಿಂದ ಪಾರಾಗಲು ನಡೆಸುತ್ತಿರುವ ಒಂದು ‘ರಾಜಕೀಯ ಪ್ರಾಯಶ್ಚಿತ್ತ ಯಾತ್ರೆ’ ಎಂಬ ಮಾತುಗಳು ಕೇಳಿಬರುತ್ತಿವೆ. ಪ್ರಶ್ನೆ ಏನೆಂದರೆ, ಅಂದು ನೀವು ಸ್ಥಾಪಿಸಿದ ಆ ಮೂರು ಹೊಸ ಪಕ್ಷಗಳಿಗೆ ಜನಬೆಂಬಲ ಸಿಕ್ಕಿದ್ದರೆ, ನೀವು ಎಂದಾದರೂ ಬಿಜೆಪಿಗೆ ಮರಳುತ್ತಿದ್ದಿರಾ? ಅಂದು ಬಿಜೆಪಿ ವಿರುದ್ಧ ಸಮರ ಸಾರಿದವರು, ಇಂದು ಏಕಾಏಕಿ ಬಿಜೆಪಿಯ ನಿಷ್ಠಾವಂತರಾಗಿ ಬದಲಾಗಿದ್ದೇಕೆ? ಸಿರಗುಪ್ಪಾದಲ್ಲಿ ಸೋಮಲಿಂಗಪ್ಪನವರಂತಹ ಹಿರಿಯ ನಾಯಕರ ರಾಜಕೀಯ ಜೀವನದ ಜೊತೆ ಚೆಲ್ಲಾಟವಾಡಿದ ಜನಾರ್ದನ ರೆಡ್ಡಿ ಅವರು, ಇಂದು ಬಿಜೆಪಿ ಬಗ್ಗೆ ಮೃದು ಧೋರಣೆ ತಾಳುತ್ತಿರುವುದು ಆಶ್ಚರ್ಯಕರ. ಮೊನ್ನೆಯಷ್ಟೇ ತಮ್ಮ ರಾಜಕೀಯ ಜೀವನವನ್ನು ಮುಗಿಸಲು ಮತ್ತೊಬ್ಬರು ಪ್ರಯತ್ನಿಸುತ್ತಿದ್ದಾರೆ ಎಂದು ಬಡಿದಾಡಿಕೊಳ್ಳುತ್ತಿದ್ದವರು, ಇಂದು ಒಂದೇ ವೇದಿಕೆಯಲ್ಲಿ ಕುಳಿತು ‘ಬಿಜೆಪಿ ಉಳಿಸಿ’ ಎಂದು ಕೂಗುತ್ತಿರುವುದು ಅಪ್ಪಟ ನಾಟಕೀಯತೆ ಎಂದು ಕಿಡಿಕಾರಿದ್ದಾರೆ.
ಬಿಜೆಪಿಯೊಳಗೆ ಅಸಮಾಧಾನದ ಹೊಗೆ
ಈ ಪಾದಯಾತ್ರೆಯು ಬಿಜೆಪಿಯ ಹಿರಿಯ ನಾಯಕರನ್ನೇ ವಿಶ್ವಾಸಕ್ಕೆ ತೆಗೆದುಕೊಂಡಿಲ್ಲ ಎಂಬುದು ಸ್ಪಷ್ಟವಾಗುತ್ತಿದೆ. ವಿಧಾನಸಭೆ ಪ್ರತಿಪಕ್ಷ ನಾಯಕ ಆರ್. ಅಶೋಕ್ ಅವರಂತಹ ಹಿರಿಯ ನಾಯಕರು ಯಾತ್ರೆಯಿಂದ ಅಂತರ ಕಾಯ್ದುಕೊಂಡಿರುವುದು, ಕೇಂದ್ರ ಸಚಿವೆ ಶೋಭಾ ಕರಂದ್ಲಾಜೆ, ಮಾಜಿ ಸಚಿವ ಜೆ.ಸಿ. ಮಾಧುಸ್ವಾಮಿ, ಕೇಂದ್ರ ಸಚಿವ ವಿ. ಸೋಮಣ್ಣನವರ ಮೌನವು ಈ ಯಾತ್ರೆಗೆ ಪಕ್ಷದ ಒಳಗೆ ಸಿಗುತ್ತಿರುವ ಸ್ವಾಗತವನ್ನು ಎತ್ತಿ ತೋರಿಸುತ್ತದೆ. ವಾಸ್ತವದಲ್ಲಿ, ಇದು ಬಿಜೆಪಿ ವಿರೋಧಿಗಳ ಗುಂಪು ಎಂಬ ಅನುಮಾನವನ್ನು ಕಾರ್ಯಕರ್ತರೇ ವ್ಯಕ್ತಪಡಿಸುತ್ತಿದ್ದಾರೆ. ತಮ್ಮ ಸ್ವಂತ ಪಕ್ಷಗಳನ್ನು ಸೋಲಿಸಿದ ಇತಿಹಾಸವಿರುವವರು, ಬೇರೆಯವರನ್ನು ಗೆಲ್ಲಿಸುತ್ತಾರೆ ಎಂಬುದು ನಂಬಲು ಸಾಧ್ಯವೇ? ಇವರಿಗೆ ಬೇರೆ ಕ್ಷೇತ್ರಗಳಿಗೆ ಹೋಗಿ ಅಭ್ಯರ್ಥಿಗಳನ್ನು ಗೆಲ್ಲಿಸುವ ಸಾಮರ್ಥ್ಯ ಇಲ್ಲ, ಬದಲಿಗೆ ಇರುವ ಪಕ್ಷದ ವರ್ಚಸ್ಸನ್ನು ಹಾಳು ಮಾಡುವ ಚಾಳಿ ಮಾತ್ರ ಇದೆ ಎಂದು ವ್ಯಂಗ್ಯವಾಡಿದ್ದಾರೆ.
ಜನಸಾಮಾನ್ಯರ ದೃಷ್ಟಿಯಲ್ಲಿ ಈ ಪಾದಯಾತ್ರೆಯು ಒಂದು ನಿರ್ದಿಷ್ಟ ಗುರಿ ಇಲ್ಲದ ಯಾತ್ರೆ. ದಿನಕ್ಕೊಂದು ಮಾರ್ಗ, ದಿನಕ್ಕೊಂದು ಹೇಳಿಕೆ, ಬಣ್ಣ ಬದಲಿಸುವ ರಾಜಕಾರಣ ನೋಡಿದರೆ, ಇದು ಬಿಜೆಪಿ ಪರವಾದ ಪಾದಯಾತ್ರೆಯೋ ಅಥವಾ ಹಳೆಯ ವೈಷಮ್ಯದಿಂದ ಬಿಜೆಪಿಯನ್ನು ಸಂಪೂರ್ಣವಾಗಿ ಮುಗಿಸಲು ಹೊರಟಿರುವ ‘ಉಪಸಂಹಾರ ಯಾತ್ರೆ’ಯೋ ಎಂಬ ಗುಮಾನಿ ಕಾಡುತ್ತಿದೆ. ಬಿಜೆಪಿಯ ಮೂಲ ಕಾರ್ಯಕರ್ತರಿಗೆ ಇಂದು ಅರಿವಾಗಿದೆ – ಈ ಮೂವರು ತ್ರಿಮೂರ್ತಿಗಳಿಗೆ ಪಕ್ಷದ ಮೇಲೆ ಪ್ರೀತಿಯಿಲ್ಲ, ಬದಲಾಗಿ ತಮ್ಮ ಹಾಗೂ ತಮ್ಮ ಕುಟುಂಬದ ಸದಸ್ಯರ ಮೇಲಿರುವ ಪ್ರಕರಣಗಳ ಭಯವಿದೆ. ಅಧಿಪತ್ಯವನ್ನು ಉಳಿಸಿಕೊಳ್ಳಲು ಮತ್ತು ಹಳೆಯ ಹಗೆತನವನ್ನು ಮುಂದುವರಿಸಲು ಬಿಜೆಪಿ ಎಂಬ ವೇದಿಕೆಯನ್ನು ಅವರು ದುರ್ಬಳಕೆ ಮಾಡಿಕೊಳ್ಳುತ್ತಿದ್ದಾರೆ ಎಂದು ಆಕ್ರೋಶ ವ್ಯಕ್ತಪಡಿಸಿದ್ದಾರೆ.

