ಬಸವಣ್ಣ ವಿರುದ್ಧ ಅವಹೇಳನಕಾರಿ ಬರಹ ಸಹಿಸಲ್ಲ, ಪುಸ್ತಕ ನಿಷೇಧ; ತಂಗಡಗಿ ಎಚ್ಚರಿಕೆ
x

ಬಸವಣ್ಣ ವಿರುದ್ಧ ಅವಹೇಳನಕಾರಿ ಬರಹ ಸಹಿಸಲ್ಲ, ಪುಸ್ತಕ ನಿಷೇಧ; ತಂಗಡಗಿ ಎಚ್ಚರಿಕೆ

ಬಸವಣ್ಣ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರ ಹಾಗೂ ಬರೆಯುವವರ ವಿರುದ್ಧ ಕಠಿಣ ಕ್ರಮ ಕೈಗೊಳ್ಳುವುದಲ್ಲದೇ, ಪುಸ್ತಕ ನಿಷೇಧಕ್ಕೆ ತೀರ್ಮಾನಿಸಲಾಗಿದೆ ಎಂದು ಸಚಿವ ಶಿವರಾಜ್‌ ತಂಗಡಗಿ ಹೇಳಿದ್ದಾರೆ.


Click the Play button to hear this message in audio format

ವಿಶ್ವಗುರು ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಬರೆದಿರುವ ವ್ಯಕ್ತಿಯನ್ನು ಶೀಘ್ರವೇ ಬಂಧಿಸಿ ಕಠಿಣ ಕಾನೂನು ಕ್ರಮ ಕೈಗೊಳ್ಳಲಾಗುವುದು ಎಂದು ಕನ್ನಡ ಮತ್ತು ಸಂಸ್ಕೃತಿ ಸಚಿವ ಶಿವರಾಜ್ ಎಸ್. ತಂಗಡಗಿ ಸ್ಪಷ್ಟಪಡಿಸಿದ್ದಾರೆ.

ಕನಕಗಿರಿಯಲ್ಲಿ ಸುದ್ದಿಗಾರರೊಂದಿಗೆ ಮಾತನಾಡಿದ ಸಚಿವರು, ಬಸವಣ್ಣನವರ ಕುರಿತು ಅವಹೇಳನಕಾರಿ ವಿಚಾರಗಳನ್ನು ಒಳಗೊಂಡಿರುವ ಪುಸ್ತಕವನ್ನು ನಿಷೇಧಿಸಲು ಸಚಿವ ಸಂಪುಟ ಸಭೆಯಲ್ಲಿ ಮಹತ್ವದ ತೀರ್ಮಾನ ಕೈಗೊಳ್ಳಲಾಗಿದೆ. ಜೊತೆಗೆ, ತುಂಗಭದ್ರಾ ಜಲಾಶಯದಿಂದ ನೀರು ಹರಿಸುವ ವಿಚಾರದಲ್ಲಿ ವಿರೋಧ ಪಕ್ಷ ಬಿಜೆಪಿ ಅನಗತ್ಯ ರಾಜಕೀಯ ಮಾಡುತ್ತಿದೆ ಎಂದು ತೀವ್ರ ವಾಗ್ದಾಳಿ ನಡೆಸಿದರು.

ಕ್ರಾಂತಿಕಾರಿ ಬಸವಣ್ಣ ಅವರ ಬಗ್ಗೆ ಮಾತನಾಡುವ ಯೋಗ್ಯತೆ ತಮಗೆ ಇದೆಯೇ ಎಂಬುದನ್ನು ಇಂತಹವರು ಮೊದಲು ಆತ್ಮಾವಲೋಕನ ಮಾಡಿಕೊಳ್ಳಬೇಕು. ಬಸವಣ್ಣನವರ ಕುರಿತು ಅವಹೇಳನಕಾರಿಯಾಗಿ ಮಾತನಾಡುವವರ ಹಾಗೂ ಬರೆಯುವವರ ವಿರುದ್ಧ ಸರ್ಕಾರ ಕಠಿಣ ಕ್ರಮ ಕೈಗೊಳ್ಳುವುದರ ಜೊತೆಗೆ, ಅಂತಹ ವಿವಾದಾತ್ಮಕ ವಿಚಾರಗಳನ್ನು ಒಳಗೊಂಡಿರುವ ಪುಸ್ತಕವನ್ನು ನಿಷೇಧಿಸಲು ಈಗಾಗಲೇ ಸಚಿವ ಸಂಪುಟ ಸಭೆಯಲ್ಲಿ ತೀರ್ಮಾನ ತೆಗೆದುಕೊಳ್ಳಲಾಗಿದೆ. ಇಂತಹ ಹೇಳಿಕೆಗಳು ಸಮಾಜದ ಸಾಮರಸ್ಯಕ್ಕೆ ಧಕ್ಕೆ ತರುವುದಲ್ಲದೆ, ಮಹನೀಯರು ನಾಡಿಗೆ ನೀಡಿದ ಉದಾತ್ತ ಆದರ್ಶಗಳಿಗೆ ಅಪಮಾನ ಮಾಡಿದಂತಾಗುತ್ತದೆ ಎಂದು ತಂಗಡಗಿ ಅಭಿಪ್ರಾಯಪಟ್ಟರು. ಅಭಿವ್ಯಕ್ತಿ ಸ್ವಾತಂತ್ರ್ಯದ ಹೆಸರಿನಲ್ಲಿ ಯಾರೂ ಸಹ ಇತಿಹಾಸ ಪುರುಷರು ಹಾಗೂ ಸಮಾಜ ಸುಧಾರಕರ ಗೌರವಕ್ಕೆ ಧಕ್ಕೆ ತರುವುದನ್ನು ಸರ್ಕಾರ ಎಂದಿಗೂ ಸಹಿಸಲು ಸಾಧ್ಯವಿಲ್ಲ ಎಂದು ಎಚ್ಚರಿಸಿದ ಅವರು, ಇಂತಹವರ ವಿರುದ್ಧ ಸರ್ಕಾರವು ಕಾನೂನುಬದ್ಧವಾಗಿ ಸೂಕ್ತ ಮತ್ತು ಕಠಿಣ ಕ್ರಮ ಜರುಗಿಸಲಿದೆ ಎಂದು ಪುನರುಚ್ಚರಿಸಿದರು. ನಾಡಿನ ಶಾಂತಿ, ಸೌಹಾರ್ದತೆ ಹಾಗೂ ಮಹನೀಯರ ಘನತೆಯನ್ನು ಕಾಪಾಡುವುದು ಸರ್ಕಾರದ ಆದ್ಯ ಕರ್ತವ್ಯವಾಗಿದೆ ಎಂಬ ಸಂದೇಶವನ್ನು ನೀಡಿದರು.

ಬಸವಣ್ಣನವರ ತತ್ವಾದರ್ಶ ಮತ್ತು ಸಾಂಸ್ಕೃತಿಕ ನಾಯಕ ಘೋಷಣೆ

ಬಸವಣ್ಣನವರ ವ್ಯಕ್ತಿತ್ವ ಹಾಗೂ ಅವರು ಸಮಾಜಕ್ಕೆ ನೀಡಿದ ಕೊಡುಗೆಯನ್ನು ಸ್ಮರಿಸಿದ ಸಚಿವ ತಂಗಡಗಿ, "ಬಸವಣ್ಣ ಅವರು ಕೇವಲ ಒಂದು ಜಾತಿ ಅಥವಾ ಒಂದು ಸಮುದಾಯಕ್ಕೆ ಸೀಮಿತರಾದವರಲ್ಲ. ಅವರು ಇಡೀ ಸಮಾಜಕ್ಕೆ ಸಮಾನತೆ, ಕಾಯಕ ಮತ್ತು ಮಾನವೀಯತೆಯ ಶ್ರೇಷ್ಠ ಸಂದೇಶವನ್ನು ಸಾರಿದ ಮಹಾನ್ ಚೇತನ" ಎಂದು ಬಣ್ಣಿಸಿದರು. 12ನೇ ಶತಮಾನದ ಶರಣರ ಹಾಗೂ ಬಸವಣ್ಣನವರ ವಿಚಾರಧಾರೆಗಳು ಇಂದಿಗೂ ಸಹ ಸಮಾಜಕ್ಕೆ ದಾರಿದೀಪವಾಗಿ ಮುನ್ನಡೆಸುತ್ತಿವೆ. ಅವರ ತತ್ವಾದರ್ಶಗಳ ಮಹತ್ವವನ್ನು ಮನಗಂಡಿರುವ ಕಾರಣಕ್ಕಾಗಿಯೇ, ರಾಜ್ಯ ಸರ್ಕಾರವು ವಿಶ್ವಗುರು ಬಸವಣ್ಣನವರನ್ನು ಕರ್ನಾಟಕದ 'ಸಾಂಸ್ಕೃತಿಕ ನಾಯಕ' ಎಂದು ಅಧಿಕೃತವಾಗಿ ಘೋಷಣೆ ಮಾಡಿದೆ ಎಂದು ತಿಳಿಸಿದರು. ಹೀಗಾಗಿ, ನಾಡಿನ ಸಾಂಸ್ಕೃತಿಕ ನಾಯಕನ ಗೌರವಕ್ಕೆ ಚ್ಯುತಿ ತರುವಂತಹ ಯಾವುದೇ ಪ್ರಯತ್ನಗಳನ್ನು ಸರ್ಕಾರ ಹಗುರವಾಗಿ ಪರಿಗಣಿಸುವುದಿಲ್ಲ ಎಂಬ ಸ್ಪಷ್ಟ ಸಂದೇಶವನ್ನು ರವಾನಿಸಿದರು.

ತುಂಗಭದ್ರಾ ಜಲಾಶಯದ ನೀರು

ರೈತರ ಬೆಳೆಗಳ ರಕ್ಷಣೆ ಹಾಗೂ ಕೃಷಿ ಚಟುವಟಿಕೆಗಳ ಅನುಕೂಲಕ್ಕಾಗಿ ತುಂಗಭದ್ರಾ ಜಲಾಶಯದಿಂದ ನವೆಂಬರ್ 28ರವರೆಗೆ ನೀರು ಹರಿಸಲು ತೀರ್ಮಾನಿಸಲಾಗಿದೆ. ನೀರು ಸ್ಥಗಿತಗೊಂಡ ನಂತರ ರೈತರಿಗೆ ಎದುರಾಗಬಹುದಾದ ಬೆಳೆ ಹಾನಿಯ ಬಗ್ಗೆ ಸರ್ಕಾರ ಸಂಪೂರ್ಣ ಕಾಳಜಿ ವಹಿಸಿದೆ. ನವೆಂಬರ್ 30ರ ನಂತರ ಎಷ್ಟು ಪ್ರಮಾಣದಲ್ಲಿ ಬೆಳೆ ಹಾನಿಯಾಗಲಿದೆ ಎಂಬುದರ ಕುರಿತು ಅಧಿಕೃತ ಸಮೀಕ್ಷೆ ನಡೆಸಿ ಸಮಗ್ರ ಮಾಹಿತಿಯನ್ನು ಸಂಗ್ರಹಿಸಲಾಗುವುದು ಎಂದು ಭರವಸೆ ನೀಡಿದರು. ಸಮೀಕ್ಷೆಯಿಂದ ಲಭ್ಯವಾಗುವ ವರದಿಯನ್ನು ಆಧರಿಸಿ, ಎನ್‌ಡಿಆರ್‌ಎಫ್ ಮಾರ್ಗಸೂಚಿ ಹಾಗೂ ನಿಗದಿತ ಮಾನದಂಡಗಳ ಅನ್ವಯ ಅರ್ಹ ರೈತರಿಗೆ ಬೆಳೆ ಹಾನಿ ಪರಿಹಾರವನ್ನು ಒದಗಿಸಲಾಗುವುದು. ಈ ಪ್ರಕ್ರಿಯೆಯಲ್ಲಿ ರೈತರಿಗೆ ಯಾವುದೇ ರೀತಿಯ ಅನ್ಯಾಯವಾಗದಂತೆ ಸರ್ಕಾರವು ಎಲ್ಲಾ ಅಗತ್ಯ ಕ್ರಮಗಳನ್ನು ಕೈಗೊಳ್ಳಲಿದೆ ಎಂದು ಸಚಿವರು ರೈತರಿಗೆ ಧೈರ್ಯ ತುಂಬಿದರು.

ನೀರಿನ ವಿಚಾರದಲ್ಲಿ ರಾಜಕೀಯ ಬೇಡ

ತುಂಗಭದ್ರಾ ಜಲಾಶಯದ ನೀರು ಹರಿಸುವ ವಿಚಾರದಲ್ಲಿ ವಿರೋಧ ಪಕ್ಷದ ನಡವಳಿಕೆಯನ್ನು ತೀವ್ರವಾಗಿ ಟೀಕಿಸಿದ ಸಚಿವ ಶಿವರಾಜ್ ತಂಗಡಗಿ, ನೀರು ಹರಿಸುವಂತಹ ಸೂಕ್ಷ್ಮ ವಿಚಾರದಲ್ಲಿ ರಾಜಕೀಯ ಮಾಡುವುದು ಸರಿಯಲ್ಲ, ಸರ್ಕಾರಕ್ಕೆ ರೈತರ ಹಿತವೇ ಮುಖ್ಯವಾಗಿದೆ ಎಂದು ಹೇಳಿದರು. "ತುಂಗಭದ್ರಾ ಜಲಾಶಯದಿಂದ ನವೆಂಬರ್ 28ರವರೆಗೆ ನೀರು ಹರಿಸುವ ಸರ್ಕಾರದ ನಿರ್ಧಾರವನ್ನೇ ಬಿಜೆಪಿಯವರು ದೊಡ್ಡ ಸಮಸ್ಯೆಯನ್ನಾಗಿ ಬಿಂಬಿಸಲು ಹೊರಟಿದ್ದಾರೆ. ಈ ವಿಚಾರವನ್ನು ಮುಂದಿಟ್ಟುಕೊಂಡು ರಾಜಕೀಯ ಮಾಡಬೇಕು ಎಂದುಕೊಂಡಿದ್ದರು. ಆದರೆ, ಅವರ ಈ ರಾಜಕೀಯ ಪ್ರಯತ್ನ ಕೈಗೂಡಲಿಲ್ಲ" ಎಂದು ಸಚಿವರು ಟೀಕಿಸಿದರು. ಜಲಾಶಯದಲ್ಲಿರುವ ನೀರಿನ ಪ್ರಮಾಣ ಹಾಗೂ ರೈತರ ನೈಜ ಪರಿಸ್ಥಿತಿಯನ್ನು ಅರಿಯದೆ ವಿಪಕ್ಷ ನಾಯಕರು ಟೀಕೆ ಮಾಡುತ್ತಿದ್ದಾರೆ ಎಂದು ಆರೋಪಿಸಿದ ಅವರು, "ಜಲಾಶಯದ ನೀರಿನ ಲಭ್ಯತೆ ಹಾಗೂ ರೈತರ ಅಗತ್ಯಗಳ ಬಗ್ಗೆ ಸರಿಯಾಗಿ ತಿಳಿದುಕೊಳ್ಳದೆ ಬಿಜೆಪಿ ನಾಯಕರು ಅನಗತ್ಯವಾಗಿ ಮಾತನಾಡುತ್ತಿದ್ದಾರೆ. ಅವರಿಗೆ ಜಲಾಶಯದ ನಿರ್ವಹಣೆ ಮತ್ತು ನೀರಿನ ಲಭ್ಯತೆಯ ವಾಸ್ತವ ಸ್ಥಿತಿಯ ಅರಿವೇ ಇಲ್ಲ" ಎಂದು ವಾಗ್ದಾಳಿ ನಡೆಸಿದರು.

Read More
Next Story