ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ದುಡಿಯುವ ಶಾಲೆಗೆ ರಸ್ತೆಗೆ ಡಾಂಬರೀಕರಣವೇ ಇಲ್ಲ..!
x

ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ದುಡಿಯುವ ಶಾಲೆಗೆ ರಸ್ತೆಗೆ ಡಾಂಬರೀಕರಣವೇ ಇಲ್ಲ..!

ಸ್ವಾತಂತ್ರ್ಯದ ನಂತರವೂ ಸಮಟಗಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಂದಿಗೂ ಡಾಂಬರೀಕರಣಗೊಂಡಿಲ್ಲ. ಒಂದೂವರೆ ಎರಡು ಕಿಲೋಮೀಟರ್ ದೂರದ ಕಚ್ಚಾ ರಸ್ತೆಯಲ್ಲೇ ಸಂಚರಿಸಬೇಕಾದ ಪರಿಸ್ಥಿತಿ ಇದೆ.


Click the Play button to hear this message in audio format

ದೇಶಕ್ಕೆ ಸ್ವಾತಂತ್ರ್ಯ ಸಿಕ್ಕು ಏಳು ದಶಕಗಳು ಕಳೆದರೂ, ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಸಮಟಗಾರು ಎಂಬ ಪುಟ್ಟ ಹಳ್ಳಿ ಇಂದಿಗೂ ಮೂಲಭೂತ ಸೌಕರ್ಯಗಳಿಗಾಗಿ ಪರಿತಪಿಸುತ್ತಿದೆ. ರಾಜ್ಯಕ್ಕೆ ಕೀರ್ತಿ ತಂದ ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿಯೊಬ್ಬರು ಕೆಲಸ ನಿರ್ವಹಿಸುವ ಈ ಗ್ರಾಮದ ರಸ್ತೆಗಳು ಇಂದಿಗೂ ಕಚ್ಚಾ ರಸ್ತೆಯಾಗಿಯೇ ಉಳಿದಿದ್ದು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರು ಪ್ರತಿದಿನ ಮಣ್ಣಿನ ರಸ್ತೆಯಲ್ಲೇ ಹರಸಾಹಸ ಪಡುವಂತಾಗಿದೆ. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿ ದುಡಿಯುವ ಸಮಟಗಾರು ಗ್ರಾಮಕ್ಕೆ ಬೇಕಿದೆ ರಸ್ತೆ ಭಾಗ್ಯ.. ಈ ಕುರಿತು ನೈಜ ಹೋರಾಟಗಾರರ ವೇದಿಕೆ ಅಧ್ಯಕ್ಷ ಎಚ್.ಎಂ. ವೆಂಕಟೇಶ್ ಅವರು ಗ್ರಾಮೀಣಾಭಿವೃದ್ಧಿ ಸಚಿವ ಈಶ್ವರ್ ಖಂಡ್ರೆ ಅವರಿಗೆ ಮನವಿ ಸಲ್ಲಿಸಿ, ತುರ್ತು ಕ್ರಮಕ್ಕೆ ಆಗ್ರಹಿಸಿದ್ದಾರೆ.

ಶಿವಮೊಗ್ಗ ಜಿಲ್ಲೆಯ ಹೊಸನಗರ ತಾಲೂಕಿನ ಹುಂಚ ಹೋಬಳಿಯ ಸಮಟಗಾರು ಗ್ರಾಮವು ಇಂದು ಕರ್ನಾಟಕ ರಾಜ್ಯದ ಹೆಮ್ಮೆಯ ಪ್ರತೀಕವಾಗಿದೆ. ಈ ಗ್ರಾಮದ ಹಿರಿಯ ಪ್ರಾಥಮಿಕ ಶಾಲೆಯ ಮುಖ್ಯ ಶಿಕ್ಷಕಿ ರತ್ನಕುಮಾರಿ ಅವರು ರಾಷ್ಟ್ರೀಯ ಶಿಕ್ಷಕ ಪ್ರಶಸ್ತಿಗೆ ಭಾಜನರಾಗುವ ಮೂಲಕ ರಾಜ್ಯಕ್ಕೆ ಗೌರವ ತಂದಿದ್ದಾರೆ. ಒಂದು ಸಣ್ಣ ಹಳ್ಳಿಯ ಪ್ರತಿಭೆಯನ್ನು ರಾಷ್ಟ್ರ ಮಟ್ಟಕ್ಕೆ ಕೊಂಡೊಯ್ದ ರತ್ನಕುಮಾರಿ ಅವರ ಸಾಧನೆಗೆ ಇಂದು ಅಭಿನಂದನೆಗಳ ಮಹಾಪೂರವೇ ಹರಿದುಬರುತ್ತಿದೆ. ಆದರೆ, ಅವರ ಈ ಸಾಧನೆಯ ಹಿಂದೆ ಅವರು ಪ್ರತಿದಿನ ಎದುರಿಸುತ್ತಿರುವ ಕಷ್ಟಗಳು ಮಾತ್ರ ಯಾರಿಗೂ ಕಾಣುತ್ತಿಲ್ಲ.

ಕಚ್ಚಾ ರಸ್ತೆಯಲ್ಲೇ ವಿದ್ಯಾರ್ಥಿಗಳ ಸಂಚಾರ

ಸುಮಾರು 78 ವರ್ಷಗಳ ಸ್ವಾತಂತ್ರ್ಯದ ನಂತರವೂ ಸಮಟಗಾರು ಗ್ರಾಮಕ್ಕೆ ಸಂಪರ್ಕ ಕಲ್ಪಿಸುವ ರಸ್ತೆ ಇಂದಿಗೂ ಡಾಂಬರೀಕರಣಗೊಂಡಿಲ್ಲ. ಸುಮಾರು ಒಂದೂವರೆ ಎರಡು ಕಿಲೋಮೀಟರ್ ದೂರದ ಈ ಕಚ್ಚಾ ರಸ್ತೆಯಲ್ಲೇ ಮಕ್ಕಳು, ಮಹಿಳೆಯರು ಮತ್ತು ವೃದ್ಧರು ಪ್ರತಿನಿತ್ಯ ಸಂಚರಿಸಬೇಕಾದ ಪರಿಸ್ಥಿತಿ ಇದೆ. ರತ್ನಕುಮಾರಿ ಅವರು ಮುಖ್ಯಶಿಕ್ಷಕಿಯಾಗಿ ಕರ್ತವ್ಯಕ್ಕೆ ಹಾಜರಾದಾಗಿನಿಂದ, ಬಿಸಿಲು, ಮಳೆ, ಗಾಳಿ ಯಾವುದನ್ನೂ ಲೆಕ್ಕಿಸದೆ ಇದೇ ಕಚ್ಚಾ ರಸ್ತೆಯ ಮೂಲಕ ಮಕ್ಕಳಿಗೆ ದಾರಿ ದೀಪವಾಗಿ ಕೆಲಸ ಮಾಡುತ್ತಿದ್ದಾರೆ. ಕಡಸೂರು ಕಡೆಯಿಂದ ಬರುವ ರಸ್ತೆ ಗೇಟ್‌ವರೆಗೆ ಮಾತ್ರ ಡಾಂಬರೀಕರಣವಾಗಿದ್ದು, ಅಲ್ಲಿಂದ ಗ್ರಾಮದವರೆಗೆ ರಸ್ತೆ ಸಂಪೂರ್ಣವಾಗಿ ಹದಗೆಟ್ಟಿದೆ.

ಈ ಕುರಿತು ಸಚಿವ ಈಶ್ವರ್ ಖಂಡ್ರೆ ಅವರಿಗೆ ಪತ್ರ ಬರೆದಿರುವ ಎಚ್.ಎಂ. ವೆಂಕಟೇಶ್, ಗ್ರಾಮದ ದುಸ್ಥಿತಿಯನ್ನು ಎಳೆಎಳೆಯಾಗಿ ವಿವರಿಸಿದ್ದಾರೆ. ಗ್ರಾಮದ ಶಿಕ್ಷಕರು, ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸಂಕಷ್ಟವನ್ನು ಸರ್ಕಾರ ಗಂಭೀರವಾಗಿ ಪರಿಗಣಿಸಬೇಕು. ರಾಷ್ಟ್ರಪ್ರಶಸ್ತಿ ವಿಜೇತ ಶಿಕ್ಷಕಿಗೆ ಗೌರವ ಸಲ್ಲಿಸುವ ನಿಟ್ಟಿನಲ್ಲಿ, ಮೊದಲ ಬಾರಿಗೆ ಈ ಹಳ್ಳಿಯ ರಸ್ತೆಯನ್ನು ಡಾಂಬರೀಕರಣಗೊಳಿಸುವುದು ಸರ್ಕಾರ ನೀಡಬಹುದಾದ ದೊಡ್ಡ ಕಾಣಿಕೆಯಾಗಿದೆ ಎಂದು ಒತ್ತಾಯಿಸಿದ್ದಾರೆ.

ಮೂಲಸೌಕರ್ಯ ಕಲ್ಪಿಸಲು ಆಗ್ರಹ

ಸಮಟಗಾರು ಗ್ರಾಮದ ಮುಖ್ಯ ರಸ್ತೆಯನ್ನು ಆದ್ಯತೆಯ ಮೇರೆಗೆ ಡಾಂಬರೀಕರಣ ಮಾಡಬೇಕು. ವಿದ್ಯಾರ್ಥಿಗಳು ಮತ್ತು ಗ್ರಾಮಸ್ಥರ ಸುರಕ್ಷತೆಗಾಗಿ ರಸ್ತೆಯ ಉದ್ದಕ್ಕೂ ಬೀದಿ ದೀಪಗಳನ್ನು ಅಳವಡಿಸಬೇಕು. ಯಾವುದೇ ಅಡೆತಡೆಯಿಲ್ಲದೆ ಶಾಲಾ ಮಕ್ಕಳು ಮತ್ತು ವೃದ್ಧರು ಸಂಚರಿಸಲು ದಾರಿ ಮಾಡಿಕೊಡಬೇಕು. ರಾಷ್ಟ್ರಮಟ್ಟದಲ್ಲಿ ಗುರುತಿಸಿಕೊಂಡ ಗ್ರಾಮವೊಂದಕ್ಕೆ ಮೂಲಭೂತ ಸೌಕರ್ಯಗಳನ್ನು ನೀಡಲು ವಿಫಲವಾಗಿರುವುದು ವ್ಯವಸ್ಥೆಯ ದೌರ್ಬಲ್ಯ. ನಾಗರಿಕ ಸರ್ಕಾರವು ತನ್ನ ಜವಾಬ್ದಾರಿಯನ್ನು ಅರಿತು, ತಕ್ಷಣವೇ ಈ ರಸ್ತೆಯನ್ನು ನಿರ್ಮಿಸಿಕೊಡಬೇಕು ಎಂದು ಆಗ್ರಹಿಸಿದ್ದಾರೆ.

ಸಚಿವರು ಈ ವಿಷಯವನ್ನು ಅತ್ಯಂತ ಗಂಭೀರವಾಗಿ ಪರಿಗಣಿಸಿ, ಕೂಡಲೇ ಅನುದಾನ ಬಿಡುಗಡೆ ಮಾಡಿ ಕಾಮಗಾರಿ ಆರಂಭಿಸಬೇಕು ಎಂದು ಗ್ರಾಮಸ್ಥರು ಒತ್ತಾಯಿಸುತ್ತಿದ್ದಾರೆ. ದೇಶಕ್ಕೆ ಉತ್ತಮ ಪ್ರಜೆಗಳನ್ನು ನೀಡುವ ಶಿಕ್ಷಕಿಯೊಬ್ಬರು ಕೆಲಸ ಮಾಡುವ ಶಾಲೆಗೆ ಹೋಗಲು ಸೂಕ್ತ ರಸ್ತೆಯೇ ಇಲ್ಲದಿರುವುದು ನಾಡಿಗೆ ಅವಮಾನಕಾರಿ. ಈ ವರದಿಯ ಬಳಿಕವಾದರೂ ಸರ್ಕಾರ ಎಚ್ಚೆತ್ತುಕೊಂಡು, ಸಮಟಗಾರು ಗ್ರಾಮದ ರಸ್ತೆಗೆ ಹೊಸ ರೂಪ ನೀಡಲಿದೆಯೇ ಎಂದು ಕಾದು ನೋಡಬೇಕಿದೆ.

Read More
Next Story