ರೌಡಿಶೀಟರ್ ಕಿರಣ್ ಹತ್ಯೆ ಪ್ರಕರಣ: ಆರೋಪಿಯ ಕಾಲಿಗೆ ಗುಂಡೇಟು, ಬಂಧನ
x

ರೌಡಿಶೀಟರ್ ಕಿರಣ್ ಹತ್ಯೆ ಪ್ರಕರಣ: ಆರೋಪಿಯ ಕಾಲಿಗೆ ಗುಂಡೇಟು, ಬಂಧನ

ಬಂಧಿತ ಆರೋಪಿ ಉಮೇಶ್‌ನನ್ನು ಪೊಲೀಸ್ ಜೀಪಿನಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಕಾನ್ಸ್‌ಟೇಬಲ್ ಮೇಲೆ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ.


Click the Play button to hear this message in audio format

ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಗ್ರಾಮದಲ್ಲಿ ಸಂಭವಿಸಿದ್ದ ರೌಡಿಶೀಟರ್ ಕುಳ್ಳಿ ಕಿರಣ್‌ನ ಭೀಕರ ಹತ್ಯೆ ಪ್ರಕರಣಕ್ಕೆ ಸಂಬಂಧಿಸಿದಂತೆ, ಪೊಲೀಸರು ಭರ್ಜರಿ ಕಾರ್ಯಾಚರಣೆ ನಡೆಸಿದ್ದಾರೆ. ಪ್ರಕರಣದ ಪ್ರಮುಖ ಆರೋಪಿಯನ್ನು ಬಂಧಿಸಲು ತೆರಳಿದಾಗ ಆತ ಪೊಲೀಸರ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ ಹಿನ್ನೆಲೆಯಲ್ಲಿ, ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿ ಬಂಧಿಸಿದ್ದಾರೆ.

ಭಾನುವಾರ ತಡರಾತ್ರಿ ಶಿವಮೊಗ್ಗದ ತುಂಗಾನಗರ ಪೊಲೀಸ್ ಠಾಣಾ ವ್ಯಾಪ್ತಿಯ ರಾಮಿನಕೊಪ್ಪ ಗ್ರಾಮದಲ್ಲಿ ರೌಡಿಶೀಟರ್ ಕುಳ್ಳಿ ಕಿರಣ್‌ನನ್ನು ತಂಡವೊಂದು ಭೀಕರವಾಗಿ ಹತ್ಯೆ ಮಾಡಿತ್ತು. ಕಿರಣ್ ಮೇಲೆ ಮಾರಕಾಸ್ತ್ರಗಳಿಂದ ದಾಳಿ ನಡೆಸಿ ಬರ್ಬರವಾಗಿ ಕೊಲೆ ಮಾಡಲಾಗಿತ್ತು. ಈ ಘಟನೆಯು ಜಿಲ್ಲೆಯಲ್ಲಿ ಆತಂಕವನ್ನು ಸೃಷ್ಟಿಸಿತ್ತು. ಪ್ರಕರಣದ ತನಿಖೆಯನ್ನು ಕೈಗೆತ್ತಿಕೊಂಡ ಪೊಲೀಸರು, ಕಿರಣ್‌ನ ಹತ್ಯೆಯಲ್ಲಿ ಭಾಗಿಯಾದವರ ಪತ್ತೆಗಾಗಿ ವಿಶೇಷ ತಂಡಗಳನ್ನು ರಚಿಸಿದ್ದರು.

ಹತ್ಯೆಯಾದ ಕೆಲವೇ ಗಂಟೆಗಳಲ್ಲಿ, ಪ್ರಕರಣದ ಪ್ರಮುಖ ಆರೋಪಿ ಡಿಯೋ ಉಮೇಶ್ ಅಲಿಯಾಸ್ ಉಮೇಶ್ ನಾಯ್ಕ್ ಶಿವಮೊಗ್ಗ ನಗರದ ಹೊರವಲಯದ ಎನ್.ಆರ್. ಪುರ ಪ್ರದೇಶದಲ್ಲಿ ಅಡಗಿರುವ ಬಗ್ಗೆ ಖಚಿತ ಮಾಹಿತಿ ತುಂಗಾನಗರ ಪೊಲೀಸರಿಗೆ ಸಿಕ್ಕಿತ್ತು. ತಕ್ಷಣವೇ ಕಾರ್ಯಪ್ರವೃತ್ತರಾದ ತುಂಗಾನಗರ ಇನ್‌ಸ್ಪೆಕ್ಟರ್ ಗುರುರಾಜ್ ನೇತೃತ್ವದ ತಂಡ ಅಲ್ಲಿಗೆ ತೆರಳಿ ಉಮೇಶನನ್ನು ವಶಕ್ಕೆ ಪಡೆದುಕೊಂಡಿತು. ಆದರೆ, ಬಂಧಿತ ಆರೋಪಿಯನ್ನು ಪೊಲೀಸ್ ಜೀಪಿನಲ್ಲಿ ಠಾಣೆಗೆ ಕರೆತರುತ್ತಿದ್ದಾಗ ಅನಿರೀಕ್ಷಿತ ಘಟನೆ ನಡೆಯಿತು. ಮಾರ್ಗಮಧ್ಯೆ ಶೌಚಾಲಯಕ್ಕೆ ಹೋಗುವುದಾಗಿ ನಾಟಕವಾಡಿದ ಉಮೇಶ್, ಜೀಪಿನಿಂದ ಇಳಿದ ತಕ್ಷಣ ಪೊಲೀಸ್ ಕಾನ್ಸ್‌ಟೇಬಲ್ ತಮ್ಮಣ್ಣ ಅವರ ಮೇಲೆ ಏಕಾಏಕಿ ಹಲ್ಲೆ ನಡೆಸಿದ್ದಾನೆ. ಅಲ್ಲದೆ, ಪೊಲೀಸರಿಂದ ತಪ್ಪಿಸಿಕೊಂಡು ಓಡಲು ಪ್ರಯತ್ನಿಸಿದ್ದಾನೆ.

ಪೊಲೀಸರಿಂದ ಫೈರಿಂಗ್

ಪೊಲೀಸರು ತಕ್ಷಣ ಎಚ್ಚೆತ್ತುಕೊಂಡು, ಆತನನ್ನು ನಿಲ್ಲುವಂತೆ ಸೂಚಿಸಿದ್ದಾರೆ. ಇನ್‌ಸ್ಪೆಕ್ಟರ್ ಗುರುರಾಜ್ ಅವರು ಗಾಳಿಯಲ್ಲಿ ಗುಂಡು ಹಾರಿಸಿ ಶರಣಾಗುವಂತೆ ಎಚ್ಚರಿಕೆ ನೀಡಿದ್ದಾರೆ. ಆದರೆ, ಆರೋಪಿಯು ಯಾವುದಕ್ಕೂ ಜಗ್ಗದೆ ಪೊಲೀಸ್ ತಂಡದ ಹಿಡಿತದಿಂದ ತಪ್ಪಿಸಿಕೊಂಡು ಪರಾರಿಯಾಗಲು ಓಡತೊಡಗಿದನು. ಅನಿವಾರ್ಯ ಪರಿಸ್ಥಿತಿಯಲ್ಲಿ, ಕಾನೂನು ಸುವ್ಯವಸ್ಥೆಯನ್ನು ಕಾಪಾಡಲು ಮತ್ತು ಆತನನ್ನು ಬಂಧಿಸಲು ಇನ್‌ಸ್ಪೆಕ್ಟರ್ ಗುರುರಾಜ್ ಅವರು ಉಮೇಶನ ಎಡಗಾಲಿಗೆ ಗುಂಡು ಹಾರಿಸಿದ್ದಾರೆ. ಗುಂಡೇಟು ತಗುಲಿದ ತಕ್ಷಣ ಆರೋಪಿಯು ಧರೆಗುರುಳಿದನು. ನಂತರ ಆತನನ್ನು ಕೂಡಲೇ ಶಿವಮೊಗ್ಗದ ಮೆಗ್ಗಾನ್ ಆಸ್ಪತ್ರೆಗೆ ದಾಖಲಿಸಿ ಚಿಕಿತ್ಸೆ ನೀಡಲಾಗುತ್ತಿದೆ.

ಘಟನಾ ಸ್ಥಳಕ್ಕೆ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ನಿಖಿಲ್ ಭೇಟಿ ನೀಡಿ ಪರಿಶೀಲನೆ ನಡೆಸಿದ್ದಾರೆ. ನಂತರ ಮಾತನಾಡಿದ ಅವರು, ಪ್ರಕರಣದ ತನಿಖೆ ಚುರುಕಾಗಿ ಸಾಗಿದೆ. ಆರೋಪಿ ಉಮೇಶ್‌ನನ್ನು ಬಂಧಿಸಿ ಕರೆತರುವ ವೇಳೆ ಆತ ಸಿಬ್ಬಂದಿಯ ಮೇಲೆ ಹಲ್ಲೆ ನಡೆಸಿ ಪರಾರಿಯಾಗಲು ಯತ್ನಿಸಿದ್ದಾನೆ. ಇನ್‌ಸ್ಪೆಕ್ಟರ್ ಗುರುರಾಜ್ ಅವರು ಹಲವು ಬಾರಿ ಎಚ್ಚರಿಕೆ ನೀಡಿ, ಗಾಳಿಯಲ್ಲಿ ಗುಂಡು ಹಾರಿಸಿದರೂ ಪ್ರಯೋಜನವಾಗಲಿಲ್ಲ. ಆತ ಅಟಹಾಸ ಮೆರೆದ ಹಿನ್ನೆಲೆಯಲ್ಲಿ ಆತ್ಮರಕ್ಷಣೆ ಮತ್ತು ಕರ್ತವ್ಯದ ಭಾಗವಾಗಿ ಕಾಲಿಗೆ ಗುಂಡು ಹಾರಿಸಲಾಗಿದೆ ಎಂದು ಸ್ಪಷ್ಟಪಡಿಸಿದ್ದಾರೆ.

ಹತ್ಯೆಯಾದ ಕುಳ್ಳಿ ಕಿರಣ್‌ನ ಹಿನ್ನೆಲೆ

ಹತ್ಯೆಯಾದ ಕುಳ್ಳಿ ಕಿರಣ್ ಮೇಲೆ ಈ ಹಿಂದೆ ಕೊಲೆ ಮತ್ತು ಕೊಲೆ ಯತ್ನ ಸೇರಿದಂತೆ ಸುಮಾರು ಆರು ಪ್ರಕರಣಗಳು ವಿವಿಧ ಪೊಲೀಸ್ ಠಾಣೆಗಳಲ್ಲಿ ದಾಖಲಾಗಿದ್ದವು. ಕಳೆದ ಕೆಲವು ದಿನಗಳಿಂದ ಆತ ಶಿವಮೊಗ್ಗದಲ್ಲಿ ಕಾಣಿಸಿಕೊಳ್ಳುತ್ತಿರಲಿಲ್ಲ. ಊರು ಬಿಟ್ಟು ಹೋಗುವುದು, ಮತ್ತೆ ಬರುವುದು ಮಾಡುತ್ತಿದ್ದ. ಈ ಹಿನ್ನೆಲೆಯಲ್ಲಿ ಕಿರಣ್‌ನನ್ನು ಗಡಿಪಾರು ಮಾಡಲು ಪೊಲೀಸರು ಸಿದ್ಧತೆ ನಡೆಸುತ್ತಿದ್ದರು. ಆತನ ಮೇಲೆ ರೌಡಿ ನಿಗ್ರಹ ದಳ ನಿರಂತರ ನಿಗಾ ಇಟ್ಟಿತ್ತು. ಕಿರಣ್‌ನ ಸಹಚರರೇ ಈ ಕೃತ್ಯದಲ್ಲಿ ಭಾಗಿಯಾಗಿರುವ ಶಂಕೆ ಇದೆ ಎಂದು ಪೊಲೀಸರು ಮಾಹಿತಿ ನೀಡಿದ್ದಾರೆ.

ಜಿಲ್ಲೆಯಲ್ಲಿ ಭದ್ರತೆ ಹೆಚ್ಚಳ

ರೌಡಿಶೀಟರ್ ಹತ್ಯೆ ಮತ್ತು ಪೊಲೀಸರು ಆರೋಪಿಯ ಕಾಲಿಗೆ ಗುಂಡು ಹಾರಿಸಿದ ಘಟನೆಯಿಂದಾಗಿ ಶಿವಮೊಗ್ಗ ನಗರದಲ್ಲಿ ಬಿಗುವಿನ ವಾತಾವರಣ ನಿರ್ಮಾಣವಾಗಿದೆ. ಕಾನೂನು ಸುವ್ಯವಸ್ಥೆ ಕಾಪಾಡಲು ಆಯಕಟ್ಟಿನ ಸ್ಥಳಗಳಲ್ಲಿ ಹೆಚ್ಚಿನ ಪೊಲೀಸ್ ಬಂದೋಬಸ್ತ್ ನಿಯೋಜಿಸಲಾಗಿದೆ. ಕಿರಣ್ ಹತ್ಯೆಗೆ ನಿಖರ ಕಾರಣವೇನು? ಇದರ ಹಿಂದೆ ಇನ್ನೆಷ್ಟು ಜನರ ಕೈವಾಡವಿದೆ? ಎಂಬಿತ್ಯಾದಿ ಅಂಶಗಳ ಕುರಿತು ಪೊಲೀಸ್ ತನಿಖೆ ಮುಂದುವರಿದಿದೆ. ಆರೋಪಿ ಉಮೇಶ್ ಚೇತರಿಸಿಕೊಂಡ ಬಳಿಕ ಆತನನ್ನು ವಿಚಾರಣೆಗೆ ಒಳಪಡಿಸಿದರೆ ಹತ್ಯೆಯ ಹಲವು ಕೊಂಡಿಗಳು ಅನಾವರಣಗೊಳ್ಳಲಿವೆ ಎಂದು ಅಧಿಕಾರಿಗಳು ವಿಶ್ವಾಸ ವ್ಯಕ್ತಪಡಿಸಿದ್ದಾರೆ.

Read More
Next Story