ಶಿವಮೊಗ್ಗದಲ್ಲಿ ಹೈಕೋರ್ಟ್‌ ಪೀಠ;  ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ
x

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಸಚಿವ ಮಧು ಬಂಗಾರಪ್ಪ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದಾರೆ. 

ಶಿವಮೊಗ್ಗದಲ್ಲಿ ಹೈಕೋರ್ಟ್‌ ಪೀಠ; ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ಮುಖ್ಯಮಂತ್ರಿಗೆ ಮನವಿ

ಶಿವಮೊಗ್ಗದಲ್ಲಿ ಹೈಕೋರ್ಟ್ ಸಂಚಾರಿ ಪೀಠ ಸ್ಥಾಪಿಸುವಂತೆ ಸಚಿವ ಮಧು ಬಂಗಾರಪ್ಪ ಸಿಎಂ ಸಿದ್ದರಾಮಯ್ಯಗೆ ಮನವಿ ಸಲ್ಲಿಸಿದ್ದು, ವಕೀಲರು ಹಾಗೂ ವಿವಿಧ ಸಂಘಟನೆಗಳು ಬೆಂಬಲ ಸೂಚಿಸಿವೆ.


ಮಧ್ಯ ಕರ್ನಾಟಕದ ಕೇಂದ್ರ ಸ್ಥಾನವಾದ ಶಿವಮೊಗ್ಗದಲ್ಲಿ ರಾಜ್ಯ ಹೈಕೋರ್ಟ್‌ ಸಂಚಾರಿ ಪೀಠ ಸ್ಥಾಪಿಸಬೇಕೆಂದು ಪ್ರಾಥಮಿಕ ಶಿಕ್ಷಣ ಹಾಗೂ ಸಾಕ್ಷರತಾ ಇಲಾಖೆ ಸಚಿವ ಮಧುಬಂಗಾರಪ್ಪ ನೇತೃತ್ವದಲ್ಲಿ ಬುಧವಾರ ಮುಖ್ಯಮಂತ್ರಿ ಸಿದ್ದರಾಮಯ್ಯ ಅವರಿಗೆ ಮನವಿ ಸಲ್ಲಿಸಲಾಯಿತು.

ಕಲ್ಬುರ್ಗಿ ಹಾಗೂ ಧಾರವಾಡದಲ್ಲಿ ಸಂಚಾರಿ ಪೀಠ ಆರಂಭಿಸಿರುವುದು ಆ ಭಾಗದ ಜನರಿಗೆ ಅನುಕೂಲವಾಗಿದೆ. ಅದೇ ರೀತಿ ಶಿವಮೊಗ್ಗದಲ್ಲಿ ಹೈಕೋರ್ಟ್‌ ಸಂಚಾರಿ ಪೀಠ ಆರಂಭಿಸಿದರೆ, ಶಿವಮೊಗ್ಗ, ಚಿಕ್ಕಮಗಳೂರು, ದಾವಣಗೆರೆ ಮತ್ತು ಚಿತ್ರದುರ್ಗ ಜಿಲ್ಲೆಯ ಜನರಿಗೆ ಅನುಕೂಲವಾಗಲಿದೆ. ಇಲ್ಲಿನ ಜನರು ಹೈಕೋರ್ಟ್‌ಗೆ ಬರಬೇಕೆಂದರೆ 450 ರಿಂದು 400 ಕಿ.ಮೀ ದೂರವಿರುವ ಬೆಂಗಳೂರಿಗೆ ಬರಬೇಕಿದೆ. ಈ ತೊಂದರೆ ತಪ್ಪಿಸಲು ಶಿವಮೊಗ್ಗದಲ್ಲಿ ನ್ಯಾಯಪೀಠದ ಅಗತ್ಯವಿದೆ ಎಂದು ಸಿಎಂ ಗೆ ನೀಡಿರುವ ಮನವಿಯಲ್ಲಿ ಕೋರಲಾಗಿದೆ.

ಸಂಚಾರಿ ಪೀಠ ಪ್ರಾರಂಭಿಸಲು ನ್ಯಾಯಮೂರ್ತಿ ಜಸ್ವಂತ್‌ ಸಿಂಗ್‌ ಸಮಿತಿಯ ಮಾರ್ಗಸೂಚಿಗಳಿಗೆ ಪೂರಕವಾದ ವ್ಯವಸ್ಥೆ ಶಿವಮೊಗ್ಗದಲ್ಲಿದೆ. ಭೌಗೋಳಿಕವಾಗಿ ನಾಲ್ಕು ಜಿಲ್ಲೆಗಳಿಗೆ ಹತ್ತಿರವಿದೆ. ಈ ಜಿಲ್ಲೆಗಳ ವ್ಯಾಪ್ತಿಯಲ್ಲಿರುವ ಪ್ರಕರಣಗಳ ಸಂಖ್ಯೆಯೂ ಪೂರಕವಾಗಿದೆ. ಜನರಿಗೆ ಅತಿ ಶೀಘ್ರವಾಗಿ ನ್ಯಾಯ ಒದಗಿಸಲು ಶಿವಮೊಗ್ಗದಲ್ಲಿ ಪೀಠ ಸ್ಥಾಪನೆ ಆಗಬೇಕಿದೆ. ಶಿವಮೊಗ್ಗದಲ್ಲಿ ವಕೀಲರು, ಸಾರ್ವಜನಿಕ ಸಂಘ ಸಂಸ್ಥೆಗಳು, ಜನಪ್ರತಿನಿಧಿಗಳು ಹಾಗೂ ಸಾರ್ವಜನಿಕರು ಈಗಾಗಲೇ ಹೋರಾಟ ಆರಂಭಿಸಿದ್ದಾರೆ. ಇದಕ್ಕೆ ಎಲ್ಲರಿಂದ ಸರ್ವಾನುಮತದ ಬೆಂಬಲ ಇದೆ. ಆದ್ದರಿಂದ ಮನವಿಯಲ್ಲಿ ಪರಿಶೀಲಿಸಿ ನ್ಯಾಯ ಒದಗಿಸಬೇಕೆಂದು ಕೋರಲಾಗಿದೆ. ಈ ಸಂದರ್ಭ ಹಿರಿಯ ವಕೀಲರೂ ಹಾಗೂ ಕುವೆಂಪು ವಿವಿ ಸಿಂಡಿಕೇಟ್‌ ಸದಸ್ಯರೂ ಆದ ಕೆ.ಪಿ.ಶ್ರೀಪಾಲ್‌, ಲಕ್ಷ್ಮೀಕಾಂತ ಚಿಮಣೂರು ಸೇರಿದಂತೆ ಜನಪ್ರತಿನಿಧಿಗಳು, ವಕೀಲರ ಸಂಘದ ಪ್ರತಿನಿಧಿಗಳು ಹಾಜರಿದ್ದರು.

ಹೈಕೋರ್ಟ್‌ ಸಂಚಾರಿ ಪೀಠವನ್ನು ಮಂಗಳೂರಿನಲ್ಲಿ ಸ್ಥಾಪಿಸಬೇಕೆಂದು ಅಲ್ಲಿನ ಜನರು ಹೋರಾಟ ಮಾಡುತ್ತಿದ್ದು, ಶಿವಮೊಗ್ಗ ಜಿಲ್ಲೆಯನ್ನು ಅದರ ವ್ಯಾಪ್ತಿಗೆ ತರಲಾಗುತ್ತಿದೆ ಎಂಬ ವಿಷಯ ಚರ್ಚೆಯಾಗುತ್ತಿದೆ. ಯಾವುದೇ ಕಾರಣಕ್ಕೂ ಮಂಗಳೂರು ಸಂಚಾರಿ ಪೀಠದ ವ್ಯಾಪ್ತಿಗೆ ಶಿವಮೊಗ್ಗ ಸೇರಿಸಬಾರದು. ಶಿವಮೊಗ್ಗದಲ್ಲಿಯೇ ಪೀಠ ಸ್ಥಾಪನೆಯಾಗಬೇಕು. ಇಲ್ಲವಾದಲ್ಲಿ ಬೆಂಗಳೂರಿನಲ್ಲಿಯೇ ಶಿವಮೊಗ್ಗವನ್ನು ಉಳಿಸಬೇಕೆಂದು ಆಗ್ರಹಿಸಿ ಶಿವಮೊಗ್ಗದಲ್ಲಿ ಅನಿರ್ಧಿಷ್ಟಾವಧಿ ಹೋರಾಟ ಆರಂಭವಾಗಿದೆ.

ವಕೀಲರ ಸಂಘ ಹಮ್ಮಿಕೊಂಡಿರುವ ಈ ಹೋರಾಟಕ್ಕೆ ಶಿವಮೊಗ್ಗ ನಾಗರೀಕ ಹಿತರಕ್ಷಣಾ ವೇದಿಕೆಗಳ ಒಕ್ಕೂಟ, ರೈತ ಸಂಘ, ವರ್ತಕರ ಸಂಘ ಸೇರಿದಂತೆ ಅನೇಕ ಸಂಘಟನೆಗಳು ಬೆಂಬಲ ವ್ಯಕ್ತಪಡಿಸಿವೆ. ಈ ಹಿನ್ನೆಲೆಯಲ್ಲಿ ಸಚಿವ ಮಧುಬಂಗಾರಪ್ಪ ಅವರು, ಶಿವಮೊಗ್ಗದಲ್ಲಿಯೇ ಪೀಠ ಸ್ಥಾಪಿಸಿ ಎಂದು ಮುಖ್ಯಮಂತ್ರಿಗೆ ಮನವಿ ಮಾಡಿರುವುದು ಮಹತ್ವಪಡೆದುಕೊಂಡಿದೆ.

Read More
Next Story